More

    ಸರ್ಕಾರಿ ಶಾಲೆಗಳಲ್ಲಿ ಕಂಪ್ಯೂಟರ್ ನಿಷ್ಕ್ರಿಯ!

    ಸೋಮು ಲದ್ದಿಮಠ ರೋಣ

    ಮಕ್ಕಳಲ್ಲಿ ಪ್ರಾಥಮಿಕ ಹಂತದಿಂದಲೇ ಕಂಪ್ಯೂಟರ್ ಜ್ಞಾನ ನೀಡುವ ಉದ್ದೇಶದಿಂದ ಪಠ್ಯದಲ್ಲಿ ‘ಕಂಪ್ಯೂಟರ್ ಪಾಠ’ ಅಳವಡಿಸಲಾಗಿದೆ. ಆದರೆ, ಬಹುತೇಕ ಶಾಲೆಗಳಲ್ಲಿ ಉಪಕರಣಗಳೇ ಇಲ್ಲ. ಕೆಲವೆಡೆ ಉಪಕರಣಗಳಿದ್ದರೂ ಶಿಕ್ಷಕರೇ ಇಲ್ಲ.! ಮತ್ತೆ ಕೆಲವೆಡೆ ಶಿಕ್ಷಕರು ಹಾಗೂ ಕಂಪ್ಯೂಟರ್​ಗಳಿದ್ದರೂ ಸುಸಜ್ಜಿತ ಕೊಠಡಿ, ವಿದ್ಯುತ್ ಸೌಲಭ್ಯ ಇಲ್ಲ..! ಇದು ತಾಲೂಕಿನ ಸರ್ಕಾರಿ ಶಾಲೆಗಳ ದುಃಸ್ಥಿತಿ!

    ರಾಜ್ಯ ಸರ್ಕಾರ ಮಾಹಿತಿ ಸಿಂಧು ಯೋಜನೆಯಡಿ ಹಲವು ಶಾಲೆಗಳಿಗೆ ಕಂಪ್ಯೂಟರ್​ಗಳನ್ನು ನೀಡಿ ಗುತ್ತಿಗೆ ಆಧಾರದಲ್ಲಿ ಶಿಕ್ಷಕರನ್ನು ಕೂಡ ನೇಮಿಸಿತ್ತು. ಆದರೆ, ಯೋಜನೆಯ ಅವಧಿ ಪೂರ್ಣಗೊಂಡ ನಂತರ ಗುತ್ತಿಗೆ ಆಧಾರದ ಶಿಕ್ಷಕರು ಕೆಲಸಕ್ಕೆ ಹಾಜರಾಗಿಲ್ಲ. ಸರ್ಕಾರ ಕೂಡ ಅವರನ್ನು ಮತ್ತೆ ನೇಮಿಸಿ ಮುಂದುವರಿಸುವ ಪ್ರಯತ್ನ ಮಾಡಿಲ್ಲ. ಪರಿಣಾಮ ಶಾಲೆಗಳಲ್ಲಿ ಕಂಪ್ಯೂಟರ್​ಗಳು ಪಳೆಯುಳಿಕೆಯಂತಾಗಿ ಧೂಳು ಹಿಡಿದು ಒಂದೊಂದಾಗಿ ಮೂಲೆ ಸೇರುತ್ತಿವೆ.

    ಇನ್ಪೋಸಿಸ್, ಅಜೀಂ ಪ್ರೇಮ್ ಫೌಂಡೇಷನ್, ಡೆಲ್ ಸೇರಿದಂತೆ ಹಲವಾರು ಕಂಪನಿಗಳು ಸರ್ಕಾರಿ ಶಾಲೆಗಳಿಗೆ ಗಣಕ ಯಂತ್ರಗಳನ್ನು ದೇಣಿಗೆ ನೀಡಿವೆ. ಆದರೆ, ಅವುಗಳ ಸದುಪಯೋಗವಾಗುತ್ತಿಲ್ಲ. ಹೀಗಾಗಿ ಕಂಪ್ಯೂಟರ್ ಜ್ಞಾನದಿಂದ ಮಕ್ಕಳು ವಂಚಿತರಾಗುತ್ತಿದ್ದಾರೆ. ಕೆಲವು ಶಾಲೆಗಳಲ್ಲಿ ಉತ್ಸಾಹಿ ಶಿಕ್ಷಕರು ಕಂಪ್ಯೂಟರ್​ಗಳನ್ನು ಸದ್ಬಳಕೆ ಮಾಡಿಕೊಂಡು ತಾವು ಕಲಿತು ಮಕ್ಕಳಿಗೂ ಕಲಿಸುತ್ತಿದ್ದಾರೆ.

    ರೋಣ ತಾಲೂಕಿನ 147 ಸರ್ಕಾರಿ ಪ್ರಾಥಮಿಕ ಹಾಗೂ 31 ಪ್ರೌಢ ಶಾಲೆ, ಅನುದಾನಿತ 11 ಪ್ರೌಢ 31 ಪ್ರಾಥಮಿಕ, ಅನುದಾನ ರಹಿತ 36 ಪ್ರಾಥಮಿಕ ಹಾಗೂ 14 ಪ್ರೌಢ ಶಾಲೆಗಳ ಪೈಕಿ ಬಹುತೇಕ ಶಾಲೆಗಳಲ್ಲಿ ಸರ್ಕಾರ ಹಾಗೂ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಕಂಪ್ಯೂಟರ್​ಗಳನ್ನು ನೀಡಲಾಗಿದೆ. 2011-12 ನೇ ಸಾಲೀನಲ್ಲಿ ಮಾಹಿತಿ ಸಿಂಧು ಯೋಜನೆಯಡಿ ತಾಲೂಕಿನ ಬಹುತೇಕ ಸರ್ಕಾರಿ ಶಾಲೆಗಳಿಗೆ ಕಂಪ್ಯೂಟರ್ ಹಾಗೂ ಗುತ್ತಿಗೆ ಆಧಾರದ ಮೇಲೆ ಕಂಪ್ಯೂಟರ್ ಶಿಕ್ಷಕರನ್ನು ನೇಮಿಸಲಾಗಿತ್ತು. ಆದರೆ, ಯೋಜನೆಯ ಅವಧಿ ಪೂರ್ಣಗೊಂಡಿದ್ದರಿಂದ ಶಿಕ್ಷಕರನ್ನು ಮುಂದುವರಿಸಿಲ್ಲ. ಹೀಗಾಗಿ ಬಹುತೇಕ ಕಂಪ್ಯೂಟರ್​ಗಳು ನಿಷ್ಕ್ರಿಯಗೊಂಡಿವೆ.
    | ಬಿ.ಎಫ್. ಫಣಿಬಂದ, ರೋಣ ಬಿ.ಆರ್.ಸಿ. ಸಮನ್ವಯ ಅಧಿಕಾರಿ

    ನಮ್ಮ ಶಾಲೆಗೆ 15 ಕಂಪ್ಯೂಟರ್​ಗಳನ್ನು ನೀಡಲಾಗಿತ್ತು. ನೆರೆ ಹಾವಳಿಯಲ್ಲಿ ಶಾಲೆ ಸಂಪೂರ್ಣ ಜಲಾವೃತ್ತಗೊಂಡಿದ್ದರಿಂದ ಎಲ್ಲ ಕಂಪ್ಯೂಟರ್​ಗಳು ನೀರು ಪಾಲಾಗಿವೆ.
    | ಎಂ. ಎನ್. ಮುಶೀಗೇರಿ, ಬಿ.ಎಸ್. ಬೇಲೇರಿ ಸರ್ಕಾರಿ ಪ್ರೌಢ ಶಾಲೆಯ ಮುಖ್ಯೋಪಾದ್ಯಾಯ

    ದಿಟ್ಟ ಕ್ರಮ ಅಗತ್ಯ: ಇದು ಕಂಪ್ಯೂಟರ್ ಕಾಲ. ಮಕ್ಕಳಿಗೆ ಆರಂಭದಲ್ಲೇ ಕಂಪ್ಯೂಟರ್ ಜ್ಞಾನ ನೀಡುವ ಮೂಲಕ ಅವರಲ್ಲಿ ಕೌಶಲ ವೃದ್ಧಿಸುವ ಉದ್ದೇಶ ಸರ್ಕಾರ ಹೊಂದಿದೆ. ವಿಶಿಷ್ಟ ಕೌಶಲ ಮೂಲಕ ಉದ್ಯೋಗವಕಾಶ ಹೆಚ್ಚಿಸುವ ಸಂಕಲ್ಪದಿಂದಲೇ ದೇಶದಲ್ಲಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸಲಾಗುತ್ತಿದೆ. ಅದೆಲ್ಲದಕ್ಕೂ ಮುಖ್ಯವಾದದ್ದು ಕಂಪ್ಯೂಟರ್ ಜ್ಞಾನ. ಆದರೆ, ಸರ್ಕಾರ ಶಾಲಾ ಹಂತದಲ್ಲಿಯೇ ಗಣಕ ಯಂತ್ರ ಕುರಿತಾದ ಪಠ್ಯ ಸೇರ್ಪಡೆ ಮಾಡಿ ಕೈ ತೊಳೆದುಕೊಂಡಿದೆ ಹೊರತು ಅದರ ಪರಿಣಾಮಕಾರಿ ಅನುಷ್ಠಾನದ ಬಗ್ಗೆ ಅಷ್ಟಾಗಿ ಗಮನ ಹರಿಸಿಲ್ಲ. ಹೀಗಾಗಿ ಗ್ರಾಮೀಣ ಭಾಗದ ಮಕ್ಕಳು ತಂತ್ರಜ್ಞಾನದಲ್ಲಿ ಹಿಂದೆ ಬೀಳುತ್ತಿದ್ದಾರೆ. ಉಳ್ಳವರು ಖಾಸಗಿ ಸಂಸ್ಥೆಗಳಿಂದ ತಮ್ಮ ಮಕ್ಕಳಿಗೆ ಕಂಪ್ಯೂಟರ್ ಶಿಕ್ಷಣ ಕೊಡಿಸುತ್ತಾರೆ. ಆದರೆ, ಬಡವರ ಪಾಡೇನು..? ಈ ಬಗ್ಗೆ ಸರ್ಕಾರ ಕ್ರಮ ಕೈಗೊಂಡು ಸರ್ಕಾರಿ ಶಾಲೆಗಳಲ್ಲಿನ ಸಮಸ್ಯೆ ಬಗೆಹರಿಸಬೇಕು ಎನ್ನುವುದು ಪಾಲಕರ ಒತ್ತಾಸೆಯಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts