More

    ಸಹಾಯಕ ಪ್ರಾಧ್ಯಾಪಕರಿಗೆ ಡಾಕ್ಟರೆಟ್ ಕಡ್ಡಾಯ

    ಶ್ರವಣ್ ಕುಮಾರ್ ನಾಳ, ಪುತ್ತೂರು
    ದೇಶದ 800 ವಿಶ್ವವಿದ್ಯಾಲಯಗಳು ಹಾಗೂ 40 ಸಾವಿರ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕ, ಸಹ ಪ್ರಾಧ್ಯಾಪಕ ಹಾಗೂ ಪ್ರಾಧ್ಯಾಪಕರ ನೇಮಕಕ್ಕೆ ಏಕರೂಪದ ನಿಯಮಾವಳಿಗಳನ್ನು ರೂಪಿಸಿ ಯುಜಿಸಿ ಕರಡು ನಿಯಮ ಪ್ರಕಟಿಸಿದೆ. ಇದರನ್ವಯ ರಾಜ್ಯದಲ್ಲಿ 2021ರ ಜುಲೈನಿಂದ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಪಿಎಚ್‌ಡಿ ಕಡ್ಡಾಯ.

    ಹಳೇ ಯುಜಿಸಿ ನಿಯಮದ ಪ್ರಕಾರ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ನ್ಯಾಷನಲ್ ಎಲಿಜಿಬಿಲಿಟಿ ಟೆಸ್ಟ್(ನೆಟ್)ಹಾಗೂ ರಾಜ್ಯ ಪ್ರವೇಶ ಪರೀಕ್ಷೆ(ಸೆಟ್)ಪಾಸಾಗಿದ್ದರೆ ಸಾಕಾಗುತ್ತಿತ್ತು. ಆದರೆ, 2021ರ ಜುಲೈನಿಂದ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಪಿಎಚ್‌ಡಿ ಪ್ರಮುಖ ಮಾನದಂಡವಾಗಿದೆ.

    ವಿಶ್ವವಿದ್ಯಾಲಯಗಳಲ್ಲಿ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಕೆ.ಸೆಟ್, ಎನ್‌ಇಟಿ, ಸಹ ಪ್ರಾಧ್ಯಾಪಕ ಹುದ್ದೆಗೆ ಪಿಎಚ್‌ಡಿ ಸಹಿತ 8 ವರ್ಷ ಬೋಧನಾ ಸೇವೆ, 7 ಸಂಶೋಧನಾ ವರದಿ ಪ್ರಕಟವಾಗಿರಬೇಕು. ಪ್ರಾಧ್ಯಾಪಕ ಹುದ್ದೆಗೆ ಪಿಎಚ್‌ಡಿ ಸಹಿತ 10 ವರ್ಷ ಬೋಧನಾ ಸೇವೆ, 10 ಸಂಶೋಧನಾ ವರದಿ ಪ್ರಕಟವಾಗಿರಬೇಕು ಎಂಬ ನಿಯಮವಿತ್ತು. ಆದರೆ ಸಹಾಯಕ ಪ್ರಾಧ್ಯಾಪಕ ಹುದ್ದೆ ಹೊರತುಪಡಿಸಿ ಬೇರಾವುದೇ ಹುದ್ದೆಗಳಲ್ಲಿ ಬದಲಾವಣೆಯಾಗಿಲ್ಲ.

    ಇದರ ಜತೆಯಲ್ಲೇ ಸಹಾಯಕ ಪ್ರಾಧ್ಯಾಪಕ, ಸಹ ಪ್ರಾಧ್ಯಾಪಕ ಹಾಗೂ ಪ್ರಾಧ್ಯಾಪಕರು ಪಿಎಚ್‌ಡಿ ಮಾರ್ಗದರ್ಶಕರಾಗಲು ಕೆಲವು ನಿಯಮ ಜಾರಿಗೊಳಿಸಿದೆ. ಈ ಹಿಂದೆ ವಿವಿಗಳಲ್ಲಿ ಪಿಎಚ್‌ಡಿ ಮಾರ್ಗದರ್ಶಕ ಬೇಕಾಬಿಟ್ಟಿ ಸಂಶೋಧನಾರ್ಥಿಗಳನ್ನು ಹೊಂದಬಹುದಿತ್ತು. ಹೊಸ ಯುಜಿಸಿ ನಿಯಮದ ಪ್ರಕಾರ ಒಬ್ಬ ಸಹಾಯಕ ಪ್ರಾಧ್ಯಾಪಕ 4 ಸಂಶೋಧನಾರ್ಥಿಗಳಿಗೆ, ಸಹ ಪ್ರಾಧ್ಯಾಪಕ 6 ಸಂಶೋಧನಾರ್ಥಿಗಳಿಗೆ, ಪ್ರಾಧ್ಯಾಪಕರು 8 ಸಂಶೋಧನಾರ್ಥಿಗಳಿಗೆ ಪಿಎಚ್‌ಡಿ ಮಾರ್ಗದರ್ಶನ ನೀಡಬಹುದಾಗಿದೆ.

    ಈಗಾಗಲೇ ಕೆ.ಸೆಟ್, ಎನ್‌ಇಟಿ ಮೂಲಕ ಸಹಾಯಕ ಪ್ರಾಧ್ಯಾಪಕ ಹುದ್ದೆ ಪಡೆದಿದ್ದರೆ ಅಂಥವರು ಸಹ ಪ್ರಾಧ್ಯಾಪಕ ಅಥವಾ ಹೆಚ್ಚಿನ ವೇತನ ಶ್ರೇಣಿಗೆ ಬಡ್ತಿ ಬೇಕು ಎಂದರೆ ಕಡ್ಡಾಯವಾಗಿ ಪಿಎಚ್‌ಡಿ ಪಡೆಯಬೇಕು. ಜತೆಗೆ ಈಗಿರುವ ಸಹಾಯಕ ಪ್ರಾಧ್ಯಾಪಕರು ಪಿಎಚ್‌ಡಿ ಪಡೆದ 4 ವರ್ಷ ಬಳಿಕ ಸಂಶೋಧನಾರ್ಥಿಗಳಿಗೆ ಪಿಎಚ್‌ಡಿ ಮಾರ್ಗದರ್ಶನ ನೀಡಬಹುದಾಗಿದೆ.

    ಪಿಎಚ್‌ಡಿ ಪ್ರವೇಶ ಪರೀಕ್ಷೆ ಸಂದರ್ಭ ಕೆ.ಸೆಟ್, ಎನ್‌ಇಟಿ ಪಾಸಾಗಿರುವ ಅಭ್ಯರ್ಥಿಗಳಿಗೆ ಈವರೆಗೆ ಪ್ರವೇಶ ಪರೀಕ್ಷೆ ಅಗತ್ಯವಿರಲಿಲ್ಲ. ಹೊಸ ಯುಜಿಸಿ ನಿಯಮದ ಪ್ರಕಾರ 2021ರ ಶೈಕ್ಷ್ಷಣಿಕ ವರ್ಷದಿಂದ ಕೆ.ಸೆಟ್, ಎನ್‌ಇಟಿ ಪಾಸಾದವರು ಮಾತ್ರ ಪಿಎಚ್‌ಡಿ ಪ್ರವೇಶ ಪಡೆಯಲು ಅರ್ಹರು. ಇದರ ಜಾರಿ ಅಧಿಕಾರ ಆಯಾ ವಿವಿಗಳಿಗೆ ನೀಡಲಾಗಿದೆ.

     ವಿಶ್ವವಿದ್ಯಾಲಯ ಸೇರಿದಂತೆ ಉನ್ನತ ಶಿಕ್ಷಣ ಸಂಸ್ಥೆಗಳಲ್ಲ್ಲಿ ಯುಸಿಜಿ ನಿಯಮದಂತೆ ಕಾರ್ಯಯೋಜನೆ ಜಾರಿಗೊಳಿಸಲಾಗುವುದು. ಸಂಶೋಧನೆ, ನೇಮಕಾತಿ ಸೇರಿದಂತೆ ವಿವಿಧ ಕಾರ್ಯಗಳನ್ನು ಯುಜಿಸಿ ನಿರ್ದೇಶನದಂತೆ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದೆ.
    ಸಿ.ಎನ್ ಅಶ್ವತ್ಥನಾರಾಯಣ್ ರಾಜ್ಯ ಉನ್ನತ ಶಿಕ್ಷಣ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts