More

    ಮೀಸಲು ಕ್ಷೇತ್ರದಲ್ಲಿ ಹೊಂದಾಣಿಕೆ ರಾಜಕಾರಣ, ಸತತ ಸೋಲಿಗೆ ಒಳವೊಪ್ಪಂದವೇ ಕಾರಣ, ಎನ್‌ಸಿಪಿಗೆ ಅವಕಾಶ ಕೊಟ್ಟರೆ ನಿಶ್ಚಿತ ಗೆಲುವು

    ವಿಜಯಪುರ: ಲೋಕಸಭೆ ಚುನಾವಣೆಯಲ್ಲಿ ಸತತವಾಗಿ ಬಿಜೆಪಿಯೇ ಗೆಲ್ಲುತ್ತಿರುವುದು ನೋಡಿದರೆ ವಿಜಯಪುರ ಲೋಕಸಭೆ ಚುನಾವಣೆಯಲ್ಲಿ ಒಳವೊಪ್ಪಂದ, ಹೊಂದಾಣಿಕೆ ರಾಜಕಾರಣ ಎಂಥದ್ದು ಎಂಬುದು ಗೊತ್ತಾಗಲಿದೆ. ಹೀಗಾಗಿ ಈ ಬಾರಿ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷಕ್ಕೆ ಕ್ಷೇತ್ರ ಬಿಟ್ಟುಕೊಟ್ಟಿದ್ದೇ ಆದಲ್ಲಿ ಹೊಂದಾಣಿಕೆಗೆ ಬ್ರೇಕ್ ಹಾಕಿ ಇಂಡಿಯಾ ಮೈತ್ರಿಕೂಟದ ಭಾಗವಾಗಿ ಎನ್‌ಸಿಪಿ ಅಭ್ಯರ್ಥಿ ಆಯ್ಕೆಯಾಗುವುದರಲ್ಲಿ ಅನುಮಾನವೇ ಇಲ್ಲ ಎಂದು ಎನ್‌ಸಿಪಿ ಜಿಲ್ಲಾಧ್ಯಕ್ಷ ಡಾ.ಬಿ.ಎಂ. ಬಿರಾದಾರ ಹೇಳಿದರು.

    ಹೊಂದಾಣಿಕೆ ರಾಜಕಾರಣದಿಂದಾಗಿಯೇ ವಿಜಯಪುರ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ಸತತವಾಗಿ ಗೆಲುವು ಸಾಧಿಸುತ್ತಿದೆ. ಜಿಲ್ಲೆಯ ಜನವೂ ಈ ಹೊಂದಾಣಿಕೆಯನ್ನು ಒಪ್ಪಿಕೊಂಡಂತಿದೆ. ಹೀಗಾಗಿ ಈ ಬಾರಿ ಒಳವೊಪ್ಪಂದ ಮತ್ತು ಹೊಂದಾಣಿಕೆ ರಾಜಕಾರಣಕ್ಕೆ ಬ್ರೇಕ್ ಹಾಕಬೇಕಾದರೆ ವಿಜಯಪುರ ಎಸ್‌ಸಿ ಮೀಸಲು ಲೋಕಸಭೆ ಕ್ಷೇತ್ರವನ್ನು ಎನ್‌ಸಿಪಿಗೆ ಬಿಟ್ಟುಕೊಡಬೇಕೆಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

    ಈಗಾಗಲೇ ರಾಜ್ಯಮಟ್ಟದ ನಾಯಕರೊಂದಿಗೆ ಮಾತುಕತೆ ನಡೆಸಲಾಗಿದೆ. ರಾಜ್ಯದಲ್ಲಿ ಕನಿಷ್ಠ 5 ಸ್ಥಾನಗಳನ್ನಾದರೂ ಎನ್‌ಸಿಪಿಗೆ ಬಿಟ್ಟುಕೊಡಬೇಕೆಂದು ಚರ್ಚಿಸಲಾಗಿದ್ದು, ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ. ಕನಿಷ್ಠ ಮೂರು ಕ್ಷೇತ್ರಗಳಾದರೂ ಎನ್‌ಸಿಪಿ ಪಾಲಾಗುವ ವಿಶ್ವಾಸವಿದೆ. ಅದರಲ್ಲಿ ವಿಜಯಪುರ ಕ್ಷೇತ್ರ ಕೂಡ ಒಂದಾಗಿದೆ ಎಂದರು.

    ಈಗಾಗಲೇ ಆಕಾಂಕ್ಷಿಗಳು ಕೂಡ ಸಾಕಷ್ಟು ಜನ ಮುಂದೆ ಬಂದಿದ್ದಾರೆ. ಈ ಬಾರಿ ಕಾಂಗ್ರೆಸ್ ಬದಲಿಗೆ ಎನ್‌ಸಿಪಿಗೆ ಅವಕಾಶ ಸಿಗುವ ಕಾರಣ ಬೇರೆ ಬೇರೆ ಪಕ್ಷಗಳನ್ನು ತೊರೆದು ಎನ್‌ಸಿಪಿಗೆ ಸೇರ್ಪಡೆಗೊಳ್ಳುತ್ತಿದ್ದಾರೆ. ಟಿಕೆಟ್‌ಗಾಗಿ ಅರ್ಜಿ ಸಲ್ಲಿಸುತ್ತಿದ್ದಾರೆ. ಆ ಎಲ್ಲ ಅರ್ಜಿಗಳನ್ನು ಸ್ವೀಕರಿಸಿ ಬರುವ ಜ.30 ರಂದು ನಡೆಯಲಿರುವ ರಾಜ್ಯ ಮಟ್ಟದ ಸಭೆಯಲ್ಲಿ ಚರ್ಚಿಸಲಾಗುವುದು. ವರಿಷ್ಠರ ಆದೇಶದಂತೆ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

    ಜಿಲ್ಲೆಯ ಜನ ಹೊಂದಾಣಿಕೆ ರಾಜಕಾರಣಕ್ಕೆ ಬೇಸತ್ತಿದ್ದಾರೆ. ಈ ಬಾರಿಯೂ ಕಾಂಗ್ರೆಸ್‌ಗೆ ಟಿಕೆಟ್ ನೀಡಿದರೆ ಬಿಜೆಪಿಯೇ ಗೆಲ್ಲಲಿದೆ ಎಂಬ ಲೆಕ್ಕಾಚಾರ ದಟ್ಟವಾಗಿದ್ದರಿಂದ ಹೊಸ ಪಕ್ಷ, ಹೊಸ ಅಭ್ಯರ್ಥಿಗೆ ಅವಕಾಶ ಕೊಡಬೇಕೆಂಬ ಕೂಗು ಬಲಗೊಂಡಿದೆ. ಹಾಗಾದಲ್ಲಿ ಮೈತ್ರಿಕೂಟದ ಅಭ್ಯರ್ಥಿಗೆ ಗೆಲುವಾಗಲಿದ್ದು, ಹೆಚ್ಚಿನ ಬಲ ಕೂಡ ಬರಲಿದೆ. ಈ ಬಗ್ಗೆ ಕಾಂಗ್ರೆಸ್ ನಾಯಕರೊಂದಿಗೂ ಚರ್ಚಿಸಲಾಗುವುದು ಎಂದು ಬಿರಾದಾರ ತಿಳಿಸಿದರು.
    ರಾಜ್ಯ ಯುವ ಕಾರ್ಯದರ್ಶಿ ತಯಾಬ್ ಅಥಣಿ, ಅಜ್ಞಾನ ಸಿಂದಗಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts