More

    ಅಂಗನವಾಡಿಗಳಿಗೆ ಕಾಂಪೌಂಡ್, ನರೇಗಾ ಯೋಜನೆಯಡಿ ಸರ್ಕಾರದ ಸಮ್ಮತಿ

    ಉಳ್ಳಾಲ: ಅಂಗನವಾಡಿಗಳಿಗೆ ನರೇಗಾ ಯೋಜನೆಯಡಿ ಆವರಣ ಗೋಡೆ ಕಟ್ಟಲು ಅವಕಾಶ ನೀಡಬೇಕು ಎಂಬ ಜನಶಿಕ್ಷಣ ಟ್ರಸ್ಟ್ ಬೇಡಿಕೆ ಈಡೇರಿದೆ. ಈ ಬಗ್ಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಆವರಣ ಗೋಡೆರಹಿತ ಅಂಗನವಾಡಿ ಕೇಂದ್ರಗಳಿಗೆ ನರೇಗಾದಡಿ ಆವರಣ ಗೋಡೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಪತ್ರ ಬರೆದಿದ್ದು, ಉಚಿತವಾಗಿ ಹೂವು ಮತ್ತು ಹಣ್ಣಿನ ಗಿಡಗಳನ್ನು ನೀಡುವಂತೆ ತೋಟಗಾರಿಕೆ ಮತ್ತು ಅರಣ್ಯ ಇಲಾಖೆಗೂ ಪತ್ರ ರವಾನಿಸಿದೆ.

    ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 2104 ಅಂಗನವಾಡಿ ಕೇಂದ್ರಗಳಿದ್ದು, 1876 ಕೇಂದ್ರಗಳಿಗೆ ಸ್ವಂತ ಕಟ್ಟಡವಿದ್ದರೂ 670 ಕೇಂದ್ರಗಳಿಗೆ ಮಾತ್ರ ಆವರಣ ಗೋಡೆಯಿದೆ. ಉಡುಪಿಯಲ್ಲಿ 1190 ಅಂಗನವಾಡಿ ಕೇಂದ್ರಗಳ ಪೈಕಿ 1029 ಸ್ವಂತ ಕಟ್ಟಡ ಹೊಂದಿದ್ದು 415 ಕೇಂದ್ರಗಳಿಗೆ ಆವರಣ ಗೋಡೆಗಳಿವೆ.

    ಸಂಬಂಧಪಟ್ಟ ಇಲಾಖೆಯಲ್ಲಿ ಹಣಕಾಸಿನ ಕೊರತೆಯಿದ್ದರೂ ದಾನಿಗಳ ನೆರವಿನಿಂದ ಆವರಣ ಗೋಡೆ ನಿರ್ಮಿಸಲಾಗಿದೆ. ಉದ್ಯೋಗ ಖಾತ್ರಿ ಯೋಜನೆಯಡಿ ಆವರಣ ಗೋಡೆ ನಿರ್ಮಾಣಕ್ಕೆ ಅವಕಾಶ ಇಲ್ಲದ ಕಾರಣ ಹೆಚ್ಚಿನ ಕೇಂದ್ರಗಳಿಗೆ ಭದ್ರತೆಯೇ ಇಲ್ಲ. ಕೆಲವು ಕೇಂದ್ರಗಳು ಶಾಲಾ ಆವರಣದೊಳಗೆ ಇರುವ ಕಾರಣ ಭದ್ರತೆ ಕಂಡುಕೊಂಡಿದೆ. ಗ್ರಾಮೀಣ ಭಾಗದಲ್ಲಿರುವ ಅಂಗನವಾಡಿ ಕೇಂದ್ರಗಳು ಗುಡ್ಡಗಾಡು ಪ್ರದೇಶದಲ್ಲಿ ಹಾಗೂ ನಗರ ಪ್ರದೇಶಗಳಲ್ಲಿ ರಸ್ತೆಬದಿ ಇರುವುದರಿಂದ ಆವರಣ ಗೋಡೆ ಇಲ್ಲದ ಕೇಂದ್ರಗಳಲ್ಲಿ ಮಕ್ಕಳನ್ನು ಕಾಯುವುದೇ ಕಾರ್ಯಕರ್ತೆ ಮತ್ತು ಸಹಾಯಕಿಗೆ ಸವಾಲಿನ ವಿಷಯವಾಗಿದೆ. ಈ ಆತಂಕದಿಂದ ಮಕ್ಕಳನ್ನು ಅಂಗನವಾಡಿಗೆ ಕಳುಹಿಸಲು ಪಾಲಕರು ಹಿಂದೇಟು ಹಾಕುತ್ತಿರುವ ಪರಿಸ್ಥಿತಿಯೂ ಇದೆ.

    ಮಹಿಳಾ, ಮಕ್ಕಳ ಅಭಿವೃದ್ಧಿ, ಅರಣ್ಯ ಇಲಾಖೆಗೆ ಪತ್ರ: ಈ ಹಿನ್ನೆಲೆಯಲ್ಲಿ ಅಂಗನವಾಡಿಗಳಿಗೆ ಉದ್ಯೋಗ ಖಾತ್ರಿ ಯೋಜನೆಯಡಿ ಆವರಣ ಗೋಡೆ ನಿರ್ಮಾಣಕ್ಕೆ ಅವಕಾಶ ನೀಡಬೇಕು ಎನ್ನುವ ಬೇಡಿಕೆ ಇತ್ತು. ಈ ವಿಷಯದಲ್ಲಿ ನಿರಂತರ ಬೇಡಿಕೆ ಸಲ್ಲಿಸುತ್ತಾ ಬಂದಿದ್ದ ಜನಶಿಕ್ಷಣ ಟ್ರಸ್ಟ್ ವತಿಯಿಂದ ಈ ವರ್ಷದ ಜನವರಿಯಲ್ಲಿ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಪತ್ರ ಬರೆಯಲಾಗಿತ್ತು. ಈ ಬಗ್ಗೆ ವಿಜಯವಾಣಿ ಫೆ.13ರ ಸಂಚಿಕೆಯಲ್ಲಿ ವಿಶೇಷ ವರದಿ ಪ್ರಕಟಿಸಲಾಗಿತ್ತು. ಅದರಂತೆ ಬೇಡಿಕೆಗೆ ಸ್ಪಂದಿಸಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ನರೇಗಾದಡಿ ಆವರಣ ಗೋಡೆ ನಿರ್ಮಾಣಕ್ಕೆ ಅವಕಾಶ ನೀಡಿ ಹಾಗೂ ಅಂಗನವಾಡಿಗಳಿಗೆ ಉಚಿತವಾಗಿ ಹೂವು, ಹಣ್ಣಿನ ಗಿಡ ನೀಡುವಂತೆ ಆದೇಶ ಹೊರಡಿಸಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಅರಣ್ಯ ಇಲಾಖೆಗೆ ಪತ್ರ ಬರೆದಿದೆ. ಈ ಆದೇಶ ರಾಜ್ಯದಲ್ಲಿರುವ 44,009 ಅಂಗನವಾಡಿ ಕೇಂದ್ರಗಳ ಪೈಕಿ ಸ್ವಂತ ಕಟ್ಟಡ ಹೊಂದಿರುವ 12,138 ಕೇಂದ್ರಗಳಿಗೂ ಅನ್ವಯವಾಗಲಿದೆ.

    ಮಕ್ಕಳ ಭದ್ರತೆಗಾಗಿ ಅಂಗನವಾಡಿಗಳಿಗೆ ಆವರಣ ಗೋಡೆ ಅಗತ್ಯ, ನರೇಗಾದಡಿ ಅವಕಾಶ ನೀಡಿದರೆ ಈ ಕೆಲಸ ಸುಲಭವಾಗುತ್ತದೆ. ಜನಶಿಕ್ಷಣ ಟ್ರಸ್ಟ್ ಪತ್ರಕ್ಕೆ ಸರ್ಕಾರ ಸ್ಪಂದಿಸಿರುವುದರಿಂದ ನಮ್ಮ ಬೇಡಿಕೆ ರಾಜ್ಯದ ಎಲ್ಲ ಅಂಗನವಾಡಿಗಳಿಗೂ ಪ್ರಯೋಜನ ಆಗಲಿದೆ.

    -ಶೀನ ಶೆಟ್ಟಿ, ನರೇಗಾ ಮಾಜಿ ಒಂಬುಡ್ಸ್‌ಮೆನ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts