More

    ದೂರು ನೀಡಲು ಇ ಲಾಸ್ಟ್ ರಿಪೋರ್ಟ್ ಆಪ್

    ಪರಶುರಾಮ ಕೆರಿ ಹಾವೇರಿ

    ಪೊಲೀಸ್ ಇಲಾಖೆ ತಂತ್ರಜ್ಞಾನ ಅಳವಡಿಸಿಕೊಂಡು ಜನಸ್ನೇಹಿಯಾಗುತ್ತಿದೆ. ಸಾರ್ವಜನಿಕರು ಇನ್ನುಮುಂದೆ ಯಾವುದೇ ದಾಖಲೆ, ವಸ್ತು ಕಳೆದು ಹೋಗಿದ್ದರೆ ಪೊಲೀಸ್ ಠಾಣೆಗೆ ಹೋಗಿ ದೂರು ನೀಡುವ ಅಗತ್ಯವಿಲ್ಲ. ಮೊಬೈಲ್​ನಿಂದ ಆಪ್ ಮೂಲಕ ದೂರು ದಾಖಲಿಸಿ ಪೊಲೀಸ್ ಠಾಣೆಯಿಂದ ಸ್ವೀಕೃತಿ ಪಡೆಯಬಹುದು.

    ಈಗಾಗಲೇ ಬೆಂಗಳೂರು ಸಿಟಿ ಪೊಲೀಸರು ಅಳವಡಿಸಿಕೊಂಡಿರುವ ಇ ಲಾಸ್ಟ್ ಆಪ್ ಮೂಲಕ ಈ ರೀತಿ ದೂರು ದಾಖಲಿಸುವ ಅವಕಾಶವನ್ನು ಜಿಲ್ಲಾ ಪೊಲೀಸ್ ಇಲಾಖೆ ನೀಡುತ್ತಿದೆ. ಇದರಿಂದ ಸಾರ್ವಜನಿಕರು ಸಣ್ಣಪುಟ್ಟ ಕೆಲಸಗಳಿಗೆ ಠಾಣೆಗೆ ಬರುವುದು ತಪ್ಪಲಿದೆ. ಇದರಿಂದ ಜನರ ಸಮಯ, ಹಣ ವ್ಯಯವಾಗುವುದು ತಪ್ಪಲಿದೆ. ಆದರೆ, ಇದು ಕಳವಾದ ಎಲ್ಲ ವಸ್ತುವಿಗೆ ಸಂಬಂಧಪಡುವುದಿಲ್ಲ. ಕೆಲವೇ ಕೆಲವು ದಾಖಲೆ ಹಾಗೂ ವಸ್ತುವಿಗೆ ಸಂಬಂಧಪಟ್ಟಂತೆ ಮಾತ್ರ ಆಪ್ ಮುಖೇನ ದೂರು ದಾಖಲಿಸಿ ಸ್ವೀಕೃತಿ ಪಡೆಯಬಹುದಾಗಿದೆ.

    ಯಾವ್ಯಾವ ವಸ್ತುಗಳಿಗೆ ದೂರು ಸಲ್ಲಿಸಬಹುದು?: ಕ್ರೆಡಿಟ್ ಕಾರ್ಡ್, ಡೆಬಿಟ್​ಕಾರ್ಡ್, ಚೆಕ್, ಡಿಡಿ, ಐಡಿಕಾರ್ಡ್, ಐಪ್ಯಾಡ್, ಟ್ಯಾಬ್ಲೆಟ್, ಲ್ಯಾಪ್​ಟಾಪ್, ಮೊಬೈಲ್, ಪ್ಯಾನ್​ಕಾರ್ಡ್, ಪಾಸ್​ಪೋರ್ಟ್, ಪಾಸ್​ಬುಕ್, ಅಂಕಪಟ್ಟಿ, ರೇಶನ್​ಕಾರ್ಡ್, ಡ್ರೖೆವಿಂಗ್ ಲೈಸನ್ಸ್, ವೋಟರ್​ಕಾರ್ಡ್, ವಿಡಿಯೋ ಕ್ಯಾಮರಾಗಳನ್ನು ಕಳೆದುಕೊಂಡರೆ ಆಪ್​ನಲ್ಲಿ ದೂರು ದಾಖಲಿಸಬಹುದು.

    ಕಾರ್ಯನಿರ್ವಹಣೆ ಹೇಗೆ?: ನಿಗದಿಪಡಿಸಿದ ದಾಖಲೆಗಳು ಹಾಗೂ ಇನ್ನಿತರ ಯಾವುದೇ ವಸ್ತುಗಳು ಕಳೆದುಹೋದ ಸಂದರ್ಭದಲ್ಲಿ ಠಾಣೆಗೆ ದೂರು ನೀಡಿ ಸ್ವೀಕೃತಿ ಪಡೆಯಬೇಕಾಗುತ್ತಿತ್ತು. ಠಾಣೆಯಿಂದ ದೂರಿನ ಪ್ರತಿ ನೀಡಿದರೆ ಮಾತ್ರ ದಾಖಲೆಗಳ ನಕಲು ಪ್ರತಿಯನ್ನು ಪಡೆಯಬಹುದಿತ್ತು. ಬಹುತೇಕ ಸಂದರ್ಭಗಳಲ್ಲಿ ಸಿಮ್ಾರ್ಡ್ ಕಳೆದುಹೋಗಿ ಅದೇ ನಂಬರ್ ಪಡೆಯಬೇಕಾದಾಗ ಪೊಲೀಸ್ ಠಾಣೆಯಲ್ಲಿ ನೀಡಿದ ದೂರು ಸ್ವೀಕೃತಿ ಪತ್ರ ಅಗತ್ಯವಾಗುತ್ತಿತ್ತು. ಇದಕ್ಕಾಗಿ ಸಾರ್ವಜನಿಕರು ಠಾಣೆಗೆ ಬಂದು ದೂರು ನೀಡಬೇಕಾಗುತ್ತಿತ್ತು. ಹೀಗೆ ಜನರಿಗೆ ಸಣ್ಣಪುಟ್ಟ ಪ್ರಕರಣದಲ್ಲೂ ಠಾಣೆಗೆ ಅಲೆದಾಡುವುದನ್ನು ತಪ್ಪಿಸಲು ಆಪ್ ಮೂಲಕ ದೂರು ದಾಖಲಿಸುವ ಅವಕಾಶವನ್ನು ಪರಿಚಯಿಸಲಾಗಿದೆ. ಪ್ಲೇ ಸ್ಟೋರ್​ನಲ್ಲಿರುವ ಇ ಲಾಸ್ಟ್ ರಿಪೋರ್ಟ್ ಆಪ್ ಡೌನ್​ಲೋಡ್ ಮಾಡಿಕೊಳ್ಳಬೇಕು. ಇಲ್ಲವೇ ಕರ್ನಾಟಕ ಸ್ಟೇಟ್ ಪೊಲೀಸ್ ಆಪ್​ಗೆ ಲಾಗಿನ್ ಆಗಿ ಈ ಲಾಸ್ಟ್ ರಿಪೋರ್ಟ್ ಆಪ್​ನಲ್ಲಿ ಮಾಹಿತಿ ಭರ್ತಿ ಮಾಡಬೇಕು. ದೂರು ದಾಖಲಿಸುವ ಮುನ್ನ ದೂರುದಾರ ತನ್ನ ಪ್ರಾಥಮಿಕ ವಿವರ ಸಲ್ಲಿಸಿ ನೋಂದಾಯಿಸಿಕೊಳ್ಳಬೇಕು. ಕಳೆದುಹೋದ ವಸ್ತು ಅಥವಾ ದಾಖಲೆಯ ವಿವರ, ಯಾವ ಸ್ಥಳದಲ್ಲಿ, ಯಾವ ಠಾಣೆ ವ್ಯಾಪ್ತಿ, ಕಳೆದುಹೋದ ಸಮಯ ಇತ್ಯಾದಿ ಮಾಹಿತಿ ದಾಖಲಿಸಬೇಕು. ಬಳಿಕ ಸಂಬಂಧಪಟ್ಟ ಪೊಲೀಸ್ ಠಾಣೆಯಿಂದ ದೂರುದಾರನ ಮೊಬೈಲ್ ಹಾಗೂ ಇ ಮೇಲ್​ಗೆ ಡಿಜಿಟಲ್ ವರದಿ ಕಳಿಸಲಾಗುತ್ತದೆ. ಈ ಡಿಜಿಟಲ್ ಸ್ವೀಕೃತಿಯ ಆಧಾರದ ಮೇಲೆ ಕಳೆದುಹೋದ ಕೆಲ ದಾಖಲೆಗಳ ನಕಲು ಪಡೆಯಲು ಅನುಕೂಲವಾಗಲಿದೆ. ಇದು ಪೊಲೀಸ್ ಇಲಾಖೆಯಲ್ಲಿ ತೀವ್ರತರವಲ್ಲದ ಪ್ರಕರಣವಾಗಿ ದಾಖಲಾಗಲಿದ್ದು, ಪೊಲೀಸರು ಘಟನಾ ಸ್ಥಳಕ್ಕೆ ತೆರಳಬೇಕಿಲ್ಲ. ತನಿಖೆ ನಡೆಸುವ ಅಗತ್ಯವೂ ಇರುವುದಿಲ್ಲ.

    ಸಾರ್ವಜನಿಕರಿಗೆ ಅನುಕೂಲ: ಪೊಲೀಸ್ ಠಾಣೆ ಮೆಟ್ಟಿಲೇರಲು ಅನೇಕರು ಹಿಂಜರಿಯುತ್ತಾರೆ. ಆದರೆ, ದಾಖಲೆ ಅಥವಾ ವಸ್ತು ಕಳೆದುಹೋದಾಗ ಅನಿವಾರ್ಯವಾಗಿ ದೂರು ನೀಡಬೇಕಾದ ಪರಿಸ್ಥಿತಿ ಬರುತ್ತದೆ. ಬಹುತೇಕ ಸಂದರ್ಭಗಳಲ್ಲಿ ದಾಖಲೆಗಾಗಿ ಮಾತ್ರ ಠಾಣೆಯಲ್ಲಿ ದೂರು ಸಲ್ಲಿಸುವ ಸಂದರ್ಭಗಳೂ ಬರುತ್ತವೆ. ಇದರಿಂದ ಒಂದಿಡೀ ದಿನ ಅದಕ್ಕಾಗಿಯೇ ಠಾಣೆ ಬಂದು ದೂರು ನೀಡಿ ಸ್ವೀಕೃತಿ ಪಡೆಯಬೇಕಾಗುತ್ತದೆ. ಇನ್ನು ಮುಂದೆ ಸ್ಮಾರ್ಟ್ ಪೋನ್ ಇದ್ದವರು ಕೂತಲ್ಲಿಯೇ ಆಪ್ ಮೂಲಕ ದೂರು ದಾಖಲಿಸಬಹುದು. ತಂತ್ರಜ್ಞಾನ ಬಳಸಿಕೊಂಡು ಪೊಲೀಸ್ ಇಲಾಖೆ ಜನಸ್ನೇಹಿಯಾಗುತ್ತಿದೆ. ಅದಕ್ಕಾಗಿ ಜಿಲ್ಲೆಯಲ್ಲಿ ಆಪ್ ಬಗ್ಗೆ ಹೆಚ್ಚು ಅರಿವು ಮೂಡಿಸಲು ಇಲಾಖೆ ಮುಂದಾಗುತ್ತಿದೆ.

    ಇ ಲಾಸ್ಟ್ ಆಪ್ ಮೂಲಕ ಕಳೆದುಹೋದ ವಸ್ತುವಿನ ಬಗ್ಗೆ ದೂರು ದಾಖಲಿಸಿ ಸ್ವೀಕೃತಿ ಪಡೆಯುವ ವ್ಯವಸ್ಥೆ ರೂಪಿಸಲಾಗುತ್ತಿದೆ. ಇದರಿಂದ ಜನರು ಠಾಣೆಗೆ ಅಲೆದಾಡುವುದನ್ನು ತಪ್ಪಿಸಬಹುದು. ಶೀಘ್ರದಲ್ಲಿಯೇ ಆಪ್​ನ್ನು ಜಿಲ್ಲೆಯಲ್ಲಿ ಸಾರ್ವಜನಿಕರ ಬಳಕೆಗೆ ಚಾಲನೆ ನೀಡಲಾಗುವುದು.

    | ಕೆ.ಜಿ. ದೇವರಾಜ್ ಎಸ್​ಪಿ ಹಾವೇರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts