More

    12.10 ಲಕ್ಷ ರೂ. ಮೌಲ್ಯದ 100 ಮೊಬೈಲ್ ಹಸ್ತಾಂತರ

    ಶಿವಮೊಗ್ಗ: ಬೆಲೆಬಾಳುವ ಮೊಬೈಲ್ ಕಳೆದುಕೊಂಡಿದ್ದವರಿಗೆ ಖಾಕಿ ಪಡೆ ಏ.1ರಂದೇ ಶುಭ ಸುದ್ದಿ ಕೊಟ್ಟಿದೆ. ಹಲವು ದಿನ, ತಿಂಗಳು, ವರ್ಷದ ಹಿಂದೆ ಕಳೆದುಕೊಂಡಿದ್ದ ಸಾವಿರಾರು ರೂ. ಮೌಲ್ಯದ ನೂರು ಮೊಬೈಲ್‌ಗಳನ್ನು ಪತ್ತೆಹಚ್ಚಿ ಮಾಲೀಕರಿಗೆ ಹಸ್ತಾಂತರಿಸಿದೆ.

    ಮೊಬೈಲ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಒಳಗಾಗಿದ್ದ ಜನರಿಗೆ ಕೇಂದ್ರದ ದೂರು ಸಂಪರ್ಕ ಇಲಾಖೆಯು ಸಿಇಐಆರ್ (ಕೇಂದ್ರ ಸಲಕರಣೆ ಗುರುತಿನ ನೋಂದಣಿ) ಪೋರ್ಟಲ್ ನೆರವಾಗಿದ್ದು ಪೋರ್ಟಲ್ ಸಹಾಯದಿಂದ ಇದುವರೆಗೆ 500 ಮೊಬೈಲ್‌ಗಳನ್ನು ಪತ್ತೆ ಮಾಡಿ ಮಾಲೀಕರಿಗೆ ಹಸ್ತಾಂತರ ಮಾಡಿದ್ದೇವೆ ಎಂದು ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
    ಸಭೆ, ಸಮಾರಂಭ, ಮನೆ, ಕಚೇರಿಗಳು, ಸಾರ್ವಜನಿಕ ಸ್ಥಳಗಳಲ್ಲಿ ಮೊಬೈಲ್ ಕಳೆದುಕೊಂಡು ಪರಿತಪಿಸುತ್ತಿದ್ದ ಹಲವರು ಸಿಇಐಆರ್ ಪೋರ್ಟಲ್‌ನಿಂದಾಗಿ ನಿಟ್ಟುಸಿರು ಬಿಟ್ಟಿದ್ದಾರೆ. ಕೊನೆಗೂ ಮೊಬೈಲ್ ಸಿಕ್ಕಿತ್ತಲ್ಲ ಎಂಬ ಸಮಾಧಾನ ಮಾಡಿಕೊಂಡಿದ್ದಾರೆ ಎಂದು ಹೇಳಿದರು.
    ಎಎಸ್ಪಿಗಳಾದ ಅನಿಲ್‌ಕುಮಾರ್ ಭೂಮರಡ್ಡಿ, ಕಾರಿಯಪ್ಪ ಮಾರ್ಗದರ್ಶನದಲ್ಲಿ ಸಿಇಎನ್ ಠಾಣೆ ಇನ್‌ಸ್ಪೆಕ್ಟರ್ ತಿಪ್ಪೇಸ್ವಾಮಿ ಮತ್ತು ಅವರ ತಂಡ ಕಾರ್ಯಾಚರಣೆ ನಡೆಸಿ ಕಳೆದ ಮೂರು ತಿಂಗಳಲ್ಲಿ ಸಾರ್ವಜನಿಕರು ಕಳೆದುಕೊಂಡಿದ್ದ 12.10 ಲಕ್ಷ ರೂ. ಮೌಲ್ಯದ ಮೊಬೈಲ್‌ಗಳನ್ನು ಪತ್ತೆ ಮಾಡಿಕೊಡಲಾಗಿದೆ ಎಂದರು. ಎಎಸ್ಪಿಗಳಾದ ಅನಿಲ್‌ಕುಮಾರ್ ಭೂಮರಡ್ಡಿ, ಕಾರಿಯಪ್ಪ ಸುದ್ದಿಗೋಷ್ಠಿಯಲ್ಲಿದ್ದರು.

    24 ತಾಸಿನಲ್ಲೇ ಫೋನ್ ಬ್ಲಾಕ್
    ಸಾರ್ವಜನಿಕರ ಮೊಬೈಲ್ ಫೋನ್‌ಗಳು ಕಳವು, ದರೋಡೆ, ಸುಲಿಗೆ, ಕಳೆದುಹೋದ ಸಂದರ್ಭದಲ್ಲಿ ಶೀಘ್ರವಾಗಿ ಮೊಬೈಲ್ ಫೋನ್‌ಗಳನ್ನು ಪತ್ತೆಹಚ್ಚಿ ಸಾರ್ವಜನಿಕರಿಗೆ ಹಿಂದಿರುಗಿಸಲು ಅನುಕೂಲವಾಗುವ ನಿಟ್ಟಿನಲ್ಲಿ ಕೇಂದ್ರದ ದೂರು ಸಂಪರ್ಕ ಇಲಾಖೆಯು ಸಿಇಐಆರ್ (ಕೇಂದ್ರ ಸಲಕರಣೆ ಗುರುತಿನ ನೋಂದಣಿ) ಪೋರ್ಟಲ್ ಅಭಿವೃದ್ಧಿಪಡಿಸಿದೆ. ಕೆಎಸ್‌ಪಿ ಅಪ್ಲಿಕೇಶನ್‌ನ ಇ-ಲಾಸ್ಟ್ ಆ್ಯಪ್(e-lost app) ಮೂಲಕ ದೂರು ದಾಖಲಿಸಿ ಸ್ವೀಕೃತಿ ಪಡೆದು https://www.ceir.gov.in ವೆಬ್ ಪೋರ್ಟಲ್‌ಗೆ ಭೇಟಿ ನೀಡಿ ಬ್ಲಾಕ್ ಸ್ಟೋಲನ್ ಅಥವಾ ಲಾಸ್ಟ್ ಮೊಬೈಲ್ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು. ನಂತರ ಅದೇ ಅರ್ಜಿಯಲ್ಲಿ ಕಳೆದುಹೋದ ಮೊಬೈಲ್‌ನ ಐಎಂಇಐ ನಂಬರ್, ಮೊಬೈಲ್ ನಂಬರ್ ಸೇರಿ ಅಗತ್ಯ ದಾಖಲೆ ನೀಡಿ ಅಪ್‌ಲೋಡ್ ಮಾಡಬಹುದು. ದೂರು ನೀಡಿದ 24 ಗಂಟೆಯಲ್ಲೇ ಮೊಬೈಲ್ ಫೋನ್ ಬ್ಲಾಕ್ ಆಗಲಿದ್ದು ಮೊಬೈಲ್ ದುರ್ಬಳಕೆ ಆಗುವುದು ತಪ್ಪಲಿದೆ. ಜತೆಗೆ ಕಳವಾದ ಮೊಬೈಲ್ ಯಾರಾದರೂ ಬಳಕೆ ಮಾಡುತ್ತಿದ್ದಲ್ಲಿ ಆ್ಯಪ್ ಮೂಲಕ ಪೊಲೀಸರಿಗೆ ಅಲರ್ಟ್ ಸಂದೇಶ ರವಾನೆಯಾಗಲಿದೆ ಎನ್ನುತ್ತಾರೆ ಎಸ್ಪಿ ಮಿಥುನ್‌ಕುಮಾರ್.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts