More

    ಮಾದೇಶ್ವರ ದಯೆಬಾರದೇ..!

    ಚಾಮರಾಜನಗರ: ದೇಶಕ್ಕೆ ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳೇ ಕಳೆದಿದ್ದರೂ ಕನಿಷ್ಠ ಮೂಲಸೌಕರ್ಯಗಳಿಲ್ಲದ ಗ್ರಾಮಗಳ ಅಭಿವೃದ್ಧಿಗೆ ಶ್ರೀಮಲೆ ಮಹದೇಶ್ವರ ಸ್ವಾಮಿಯೇ ದಯೆ ತೋರಬೇಕಾಗಿದೆ.
    ಚಾಮರಾಜನಗರ ಲೋಕಸಭಾ ಚುನಾವಣೆಯ ಮತದಾನದ ದಿನ ಇಂಡಿಗನತ್ತ ಗ್ರಾಮದಲ್ಲಿ ನಡೆದ ಗಲಭೆ ಪ್ರಕರಣ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಅಣಕಿಸಿತು. ಆದರೆ ಇವರ ಸಹನೆಯ ಕಟ್ಟೆ ಒಡೆಯಲು ಹಲವು ವರ್ಷಗಳ ಹೋರಾಟದ ಕಿಚ್ಚು ಅಡಗಿದೆ.
    ಮಹದೇಶ್ವರ ಬೆಟ್ಟದ ಗೋಲಕದಲ್ಲಿ ದಿನ ಕೋಟಿ ರೂ. ಸಂಗ್ರಹವಾಗುತ್ತಿದೆ. ಆದರೆ ಮಾದಪ್ಪನ ನೆಲೆಯಲ್ಲೇ ವಾಸ ಮಾಡುತ್ತಿವವರು ಊಟಕ್ಕೂ ಗತಿ ಇಲ್ಲದಂತೆ ಬದುಕುತ್ತಿದಾರೆ. ಸೌಕರ್ಯಗಳಿಲ್ಲದೆ ಕೊರಗುತ್ತಿದ್ದಾರೆ. ಪ್ರತಿ ಚುನಾವಣೆಯಲ್ಲೂ ಮೂಲಸೌರ್ಕಗಳಿಗಾಗಿ ಮತದಾನ ಬಹಿಷ್ಕಾರ ಮಾಡುವುದು, ಈ ವಿಷಯ ತಿಳಿಯುತ್ತಿದ್ದಂತೆಯೇ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಮನವೊಲಿಸುವುದು ಸಹಜ ಪ್ರಕ್ರಿಯೆಯಾಗಿತ್ತು. ಆದರೆ ಈ ಲೋಕಸಭೆ ಚುನಾವಣೆಯಲ್ಲಿ ಗ್ರಾಮಸ್ಥರು ಆಕ್ರೋಶಗೊಂಡು ಗಲಭೆ ಸೃಷ್ಟಿಸಿದರು. ಈ ರೀತಿ ತಪ್ಪು ಹಾದಿ ತುಳಿದು ಗ್ರಾಮಕ್ಕೆ ಮೂಲಸೌಕರ್ಯಗಳನ್ನು ನೀಡಬೇಕೆಂದು ಒತ್ತಾಯಿಸುವುದು ಸರಿಯಲ್ಲ. ಹಾಗೆಯೇ ಹಲವು ವರ್ಷಗಳಿಂದ ಈ ಹೋರಾಟ ಮಾಡುತ್ತಿರುವ ಗ್ರಾಮಸ್ಥರಿಗೆ ಸೌಕರ್ಯ ನೀಡದೆ ಇರುವುದೂ ಸರಿಯಲ್ಲ. ಇಂದಿಗೂ ಸಮಸ್ಯೆಗಳ ಕೂಪದಲ್ಲೇ ಇಲ್ಲಿನ ಜನರು ಬದುಕುತ್ತಿದ್ದಾರೆ. ಈ ಕುರಿತು ಲೌಡ್ ಸ್ಪೀಕರ್‌ನಲ್ಲಿ ಅಭಿಪ್ರಾಯ ಸಂಗ್ರಹಿಸಲಾಗಿದೆ.

    ಗರ್ಭಿಣಿಯರಿಗೆ ಚಿಕಿತ್ಸೆ ಕೊಡಿಸುವುದೇ ಸವಾಲು
    ಕುಡಿಯಲು ನೀರಿನ ಸೌಲಭ್ಯ ನೀಡಿಲ್ಲ. ಇತರ ಮೂಲಸೌಕರ್ಯಗಳನ್ನೂ ಕೊಟ್ಟಿಲ್ಲ. ಹಾಗಾಗಿ ಮತದಾನ ಮಾಡಲ್ಲ ಎಂದೆವು. ಇದರ ಬಗ್ಗೆ ಹೆಚ್ಚು ಮಾತನಾಡಲು ಸಾಧ್ಯವಿಲ್ಲ. ಸೌದೆ ತಂದು ಅಡುಗೆ ಮಾಡಬೇಕು. ಉರಿಬಿಸಿಲಿನಲ್ಲಿ ಹೋಗಿ ಹೇಗೆ ಸೌದೆ ತರುವುದು ಹೇಳಿ? ಆರೋಗ್ಯ ಹದಗೆಟ್ಟರೆ ಜೀಪ್ ಇಲ್ಲದಿದ್ದರೆ ನೇನೆ ಕಟ್ಟಿಕೊಂಡು ಹೋಗುತ್ತಾರೆ. ಈಗಲೂ ನಮ್ಮ ಮನೆಯಲ್ಲಿ ಗರ್ಭಿಣಿ ಇದ್ದಾಳೆ. ಅವಳಿಗೆ ಹೊಟ್ಟೆ ನೋವು ಬಂದರೆ ತೊಟ್ಟಿಲು ರೀತಿ ಬಟ್ಟೆ ಕಟ್ಟಿ ಅದರಲ್ಲಿ ಎತ್ತಿಕೊಂಡು ಹೋಗಬೇಕು.
    ಶಿವಮ್ಮ, ಇಂಡಿಗನತ್ತ ನಿವಾಸಿ, ಮಹದೇಶ್ವರ ಬೆಟ್ಟ

    ಹಳ್ಳದ ನೀರೇ ಗತಿ
    ಇಂಡಿಗನತ್ತ ಗ್ರಾಮದಲ್ಲಿ ನಮ್ಮ ತಾತ ಹಾಕಿಸಿದ ಬಾವಿ ಇದೆ. ಮಳೆ ಬಿದ್ದಾಗ ಇದರಲ್ಲಿ ಸ್ವಲ್ಪ ನೀರು ತುಂಬಿಕೊಳ್ಳುತ್ತದೆ. ಬೇಸಿಗೆಯಲ್ಲಿ ನೀರು ಸಿಗುವುದಿಲ್ಲ. ಆಗ ಹಳ್ಳ ತೋಡಿ ನೀರು ತೆಗೆದುಕೊಳ್ಳುತ್ತೇವೆ. ಇತ್ತೀಚಿನ ದಿನಗಳಲ್ಲಿ ಕುಡಿಯುವ ನೀರಿನ ತೊಂದರೆಯಾಗಿದೆ. ಆಡು, ಕುರಿ, ದನ ಮೇಯಿಸಿಕೊಂಡು ಕಾವೇರಿ ನದಿ ತೀರದಿಂದ ಕುಡಿಯಲು ನೀರು ತರುತ್ತಿದ್ದೇವೆ.
    ಲಿಂಗರಾಜು, ಪಡಸಲನತ್ತ ನಿವಾಸಿ, ಮಹದೇಶ್ವರ ಬೆಟ್ಟ

    ರಸ್ತೆಗಳು ಸರಿಯಾಗಿಲ್ಲ
    ಮಹದೇಶ್ವರ ಬೆಟ್ಟದ ಸುತ್ತಮುತ್ತಲಿನ ಗ್ರಾಮಗಳ ರಸ್ತೆ ಸರಿ ಇಲ್ಲ. ಜೀಪ್‌ಗಳನ್ನು ಓಡಿಸಲು ಆಗುವುದಿಲ್ಲ. ಆಗಾಗ ಗಾಡಿಗಳು ಕೆಟ್ಟು ಹೋಗುತ್ತವೆ. ಗರ್ಭಿಣಿಯರನ್ನು ಜೀಪ್‌ಗಳಲ್ಲಿ ಕರೆದುಕೊಂದು ಹೋಗುವುದು ಕಷ್ಟ. ಅವರ ಆರೋಗ್ಯದ ಮೇಲೆ ಗ್ಯಾರಂಟಿ ಇಲ್ಲ.
    ಮಾದೇಶ್, ನಾಗಮಲೆ, ಮಹದೇಶ್ವರ ಬೆಟ್ಟ

    ಇಲ್ಲೇ ಪ್ರಾಣ ಬಿಟ್ರಾಯ್ತು ಅನ್ಸುತ್ತೆ..
    ನನಗೆ ಅಸ್ತಮಾ ಇದೆ. ನಮ್ಮ ಗ್ರಾಮದಲ್ಲಿ ವಾಹನ ಸಂಚಾರ ಸೌಲಭ್ಯ ಇಲ್ಲ, ಜೀಪ್‌ಗಳು ಓಡಾಟನ್ನೂ ನಿಲ್ಲಿಸಿರುವುದರಿಂದ ಆಸ್ಪತ್ರೆಗೆ ನಡೆದುಕೊಂಡೇ ಹೋಗಬೇಕು. ಅನಾರೋಗ್ಯದ ನೋವಿಗಿಂತಲೂ ನಡೆದುಕೊಂಡು ಹೋಗಿ ಚಿಕಿತ್ಸೆ ಪಡೆಯುವ ನೋವೇ ತುಂಬ ದೊಡ್ಡರದು. ಇದರ ಬದಲು ಇಲ್ಲೇ ಮನೆಯ ಹತ್ತಿರವೇ ಪ್ರಾಣ ಬಿಟ್ಟರಾಯ್ತು ಅನ್ನಿಸುತ್ತದೆ.
    ಬೊಮ್ಮಮ್ಮ ಇಂಡಿಗನತ್ತ, ಮಹದೇಶ್ವರ ಬೆಟ್ಟ

    ಕತ್ತಲಿನಲ್ಲೇ ಸಾಗುತ್ತಿದೆ ಜೀವನ
    ಇಂಡಿಗನತ್ತ ಗ್ರಾಮದಲ್ಲಿ ಮೂಲಸೌಕರ್ಯಗಳ ಸಮಸ್ಯೆ ಇದೆ. ರಸ್ತೆ, ಕುಡಿಯುವ ನೀರು, ವಿದ್ಯುತ್ ಸೌಲಭ್ಯವಿಲ್ಲ. ಜೀಪ್‌ಗಳ ಸಂಚಾರ ನಿಲ್ಲಿಸಿರುವುದರಿಂದ ಎಲ್ಲೇ ಹೋದರೂ ನಡೆದುಕೊಂಡೇ ಹೋಗಬೇಕು. ಬೆಳಕಿನ ಸೌಲಭ್ಯವಿಲ್ಲದ ಕಾರಣ ರಾತ್ರಿ ವೇಳೆ ಒಂದು ಕಡೆ ಬೆಂಕಿ ಹಾಕಿ ಬೆಳಕು ಪಡೆಯುತ್ತಿದ್ದೇವೆ. ಹಗಲು ಹೊತ್ತಲ್ಲಿ ಮಾಡಿದ ಅಡುಗೆಯನ್ನು ರಾತ್ರಿ ತಿಂದು ಮಲಗುತ್ತಿದ್ದೇವೆ.
    ಪವಿತ್ರಾ
    ಇಂಡಿಗನತ್ತ, ಮಹದೇಶ್ವರ ಬೆಟ್ಟ

    ಆದಾಯಕ್ಕೆ ಬಿತ್ತು ಹೊಡೆತ
    ನಾಗಮಲೆಗೆ ಮಾದಪ್ಪನ ಭಕ್ತರು ಬರುವುದಕ್ಕೆ ನಿರ್ಬಂಧ ವಿಧಿಸಿದ ಬಳಿಕ ನಮ್ಮ ಆದಾಯ ಕ್ಷೀಣಿಸಿದೆ. ನಾನು ಹೋಟೇಲ್ ಇಟ್ಟುಕೊಂಡಿದ್ದೆ. ಭಕ್ತರು ಬರೋದು ಸ್ಥಗಿತವಾದ ಬಳಿಕ ಜೀವನ ನಿರ್ವಹಣೆ ಕಷ್ಟವಾಗಿದೆ. ಬರಗಾಲದ ಹಿನ್ನೆಲೆಯಲ್ಲಿ ಕೃಷಿ ಮಾಡಲೂ ಸಾಧ್ಯವಾಗುತ್ತಿಲ್ಲ. ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಇರುವ ಒಂದೇ ಬೋರ್‌ವೆಲ್‌ನಲ್ಲೂ ಸರಿಯಾಗಿ ನೀರು ಬರುತ್ತಿಲ್ಲ.
    ಬೊಮ್ಮಮ್ಮ
    ಇಂಡಿಗನತ್ತ, ಮಹದೇಶ್ವರ ಬೆಟ್ಟ

    • ದಾರಿ ಮಧ್ಯೆ ಆನೆ ಕಾಟ
      ಗ್ರಾಮದಿಂದ ಎಲ್ಲಿಗೇ ಹೋದರೂ ನಡೆದುಕೊಂಡು ಹೋಗಬೇಕು. ರಸ್ತೆಗಳು ಸರಿ ಇಲ್ಲ, ಜೀಪ್ ಸೌಲಭ್ಯವೂ ಇಲ್ಲ. ಹೀಗಾಗಿ ಊರಿಗೆ ಊರಿಗೆ ಹೋಗಲು ನಡೆದುಕೊಂಡೇ ಹೋಗಬೇಕು. ಬೆಟ್ಟ, ಗುಡ್ಡ ಹತ್ತಿ ಸಾಗಬೇಕು. ಈ ಸಂದರ್ಭದಲ್ಲಿ ದಾರಿ ಮಧ್ಯೆ ಆನೆಗಳು ಎದುರು ಬಂದರೆ ಜೀವ ಕಳೆದುಕೊಳ್ಳುತ್ತೇವೆ.
      ಪಳನಿಸ್ವಾಮಿ, ನಾಗಮಲೆ, ಮಹದೇಶ್ವರ ಬೆಟ್ಟ

    ಪಡಿತರ ಬಿಟ್ಟರೆ ಊಟಕ್ಕೆ ಗತಿ ಇಲ್ಲ
    ನಾನು ಮಜ್ಜಿಗೆ ಮಾರಾಟ ಮಾಡುವವಳು. ನಾಗಮಲೆ ರಸ್ತೆಯಲ್ಲಿ ಜೀಪ್‌ಗಳ ಸಂಚಾರವಿದ್ದಾಗ ಉತ್ತಮ ವ್ಯಾಪಾರವಾಗುತ್ತಿತ್ತು. ಈಗ ಊಟಕ್ಕೂ ತೊಂದರೆಯಾಗುತ್ತಿದೆ. ಪಡಿತರ ಧಾನ್ಯದಲ್ಲಿ ಕೊಡುವ ಆಹಾರ ಬಿಟ್ಟರೆ ನಮ್ಮ ಬಳಿ ತಿನ್ನಲು ಏನೂ ಇಲ್ಲ.
    ಬೊಮ್ಮಮ್ಮ, ಪಡಸಲನತ್ತ, ಮಹದೇಶ್ವರ ಬೆಟ್ಟ

    ಸಂಚಾರ ಆರೋಗ್ಯ ಸೇವೆ ನೀಡಿ
    ಸಣ್ಣ ಜ್ವರ, ತಲೆನೋವು ಬಂದರೂ ಚಿಕಿತ್ಸೆ ಪಡೆಯುವುದಕ್ಕಾಗಿ ಮಲೆ ಮಹದೇಶ್ವರ ಬೆಟ್ಟ, ಹನೂರು ಆಸ್ಪತ್ರೆಗಳಿಗೆ ಹೋಗಬೇಕು. ಹೆರಿಗೆಗಾಗಿ ಪಕ್ಕದಲ್ಲೇ ತಮಿಳುನಾಡು ಇರುವುದರಿಂದ ಅಲ್ಲಿಗೆ ಹೋಗಿ ಚಿಕಿತ್ಸೆ ಪಡೆಯುತ್ತಾರೆ. ಜೀಪ್ ಸೌಲಭ್ಯ ಸಿಗದೆ ಇದ್ದಾಗ ನೇನೆ ಕಟ್ಟಿಕೊಂಡು ಗರ್ಭಿಣಿಯರನ್ನು ಹೊತ್ತು ಹೋಗುತ್ತೇವೆ. ಈ ಸಮಸ್ಯೆ ಬಗೆಹರಿಸಬೇಕಾದರೆ ಗ್ರಾಮಗಳಿಗೆ ಸಂಚಾರ ಆರೋಗ್ಯ ಸೇವೆ ಒದಗಿಸಬೇಕು.

    ಮುರುಗೇಶ್, ಮಹದೇಶ್ವರ ಬೆಟ್ಟದ ನಿವಾಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts