More

    ಸ್ವಚ್ಛ ಸಮಾಜ ನಿರ್ಮಾಣಕ್ಕೆ ಸಮುದಾಯದ ಸಹಕಾರ ಅಗತ್ಯ

    ಚಿಕ್ಕಮಗಳೂರು: ಸ್ವಚ್ಛ ಸಮಾಜ ನಿರ್ಮಾಣಕ್ಕೆ ಸಮುದಾಯದ ಸಹಕಾರ ಅಗತ್ಯ. ಪ್ರತಿಯೊಬ್ಬರೂ ಕಸವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕು. ವಾಹನಗಳು ಮನೆಗಳ ಬಳಿಗೆ ಬಂದಾಗ ಕಸವನ್ನು ವಿಂಗಡಿಸಿ ನೀಡುವಂತೆ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು ಎಂದು ಜಿಪಂ ಸಿಇಒ ಡಾ. ಬಿ.ಗೋಪಾಲಕೃಷ್ಣ ಹೇಳಿದರು.

    ಯೂನಿಯನ್ ಗ್ರಾಮೀಣ ಸ್ವಉದ್ಯೋಗ ತರಬೇತಿ ಸಂಸ್ಥೆ, ಜಿಪಂ ಸಹಯೋಗದಲ್ಲಿ ಸ್ವಚ್ಛ ಭಾರತ ಯೋಜನೆಯಡಿ ಸ್ವಚ್ಛವಾಹಿನಿ ವಾಹನ ಚಾಲನಾ ಹಾಗೂ ಸ್ವಸಹಾಯ ಗುಂಪುಗಳ ಸದಸ್ಯರಿಗೆ ಗುರುವಾರ ಏರ್ಪಡಿಸಿದ್ದ ಉದ್ಯಮಶೀಲತಾಭಿವೃದ್ಧಿ ತರಬೇತಿ ಕಾರ್ಯಕ್ರಮಗಳ ಸಮಾರೋಪದಲ್ಲಿ ಮಾತನಾಡಿದರು.
    ಗ್ರಾಮೀಣ ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಗ್ರಾಪಂ ಸೌಲಭ್ಯಗಳನ್ನು ಪಡೆಯಲು ಮಹಿಳೆಯರು ಮುಂದಾಗಬೇಕು. ಜಿಪಂನಲ್ಲಿ ಮಹಿಳೆಯರಿಗೆ ಆರ್ಥಿಕ ಅಭಿವೃದ್ಧಿಗಾಗಿ ಅನೇಕ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ. ಮಹಿಳೆಯರು ಸಂಜೀವಿನಿ ಒಕ್ಕೂಟಗಳ ಮೂಲಕ ಸ್ವಸಹಾಯ ಸಂಘ ರಚನೆ ಮಾಡಿಕೊಳ್ಳಬೇಕು. ಆ ಮೂಲಕ ಅವರಿಗೆ ಆಸಕ್ತಿ ಇರುವ ಚಟುವಟಿಕೆಗಳಲ್ಲಿ ತರಬೇತಿ ನೀಡಲಾಗುವುದು ಎಂದು ಹೇಳಿದರು.
    ತರಬೇತಿ ಪಡೆದ ಸಂಘಗಳ ಸದಸ್ಯರಿಗೆ ಆಯ್ದ ಬ್ಯಾಂಕ್‌ಗಳಿಂದ ಸಾಲ ಸೌಲಭ್ಯ ಕಲ್ಪಿಸಲಾಗುವುದು. ಸಾಲವನ್ನು ಉದ್ದೇಶಿತ ಕಾರ್ಯಕ್ಕೆ ಉಪಯೋಗಿಸಿದಾಗ ಆರ್ಥಿಕವಾಗಿ ಸಬಲರಾಗಬಹುದು. ಆದಾಯೋತ್ಪನ್ನ ಚಟುವಟಿಕೆ ಕೈಗೊಳ್ಳುವುದರಿಂದ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡಬಹುದು. ನಂತರ ಇನ್ನೂ ಹೆಚ್ಚಿನ ಸಾಲ ಪಡೆದುಕೊಳ್ಳಬಹುದು ಎಂದು ತಿಳಿಸಿದರು.
    ಜಿಲ್ಲೆಯ 226 ಗ್ರಾಪಂಗಳಲ್ಲಿ ಒಕ್ಕೂಟ ರಚನೆ ಮಾಡಲಾಗಿದೆ. ಸಂಘಗಳ ಮೂಲಕ ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡಿ ಕುಟುಂಬವನ್ನು ಸಶಕ್ತಗೊಳಿಸುವುದು ಮೂಲ ಉದ್ದೇಶವಾಗಿದೆ. ಇದರಿಂದ ಸಮುದಾಯ ಅಭಿವೃದ್ಧಿ ಕಾಣಲು ಸಾಧ್ಯ ಎಂದರು.
    ಹಣ ಸಂಪಾದನೆಗೆ ಸರ್ಕಾರ ಹಲವು ಯೋಜನೆಗಳನ್ನು ವಿವಿಧ ಇಲಾಖೆಗಳ ಮೂಲಕ ಜಾರಿಗೆ ತಂದಿದೆ. ಸಂಜೀವಿನಿ ಒಕ್ಕೂಟದ ಮಹಿಳೆಯರನ್ನು ಆಯ್ಕೆ ಮಾಡಿ ತರಬೇತಿ ನೀಡಲಾಗುವುದು. ಮಹಿಳೆಯರೇ ವಾಹನ ಚಲಾಯಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ಮಹಿಳೆಯರು ಕೀಳರಿಮೆ ಬಿಟ್ಟು ಮುಂದೆ ಬರಬೇಕು ಎಂದು ಸಲಹೆ ನೀಡಿದರು. ಶಿಬಿರಾರ್ಥಿಗಳಾದ ಶ್ವೇತಾ, ರಮ್ಯಾ, ಕುಮುದಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts