More

    ನೋಂದಣಿ, ಮುದ್ರಾಂಕ ಇಲಾಖೆ ಪುನಾರಚನೆಗೆ ಸಮಿತಿ ಶಿಫಾರಸು

    ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು
    ಸರ್ಕಾರದ ಬೊಕ್ಕಸ ತುಂಬಿಸುವ 3ನೇ ಅತಿದೊಡ್ಡ ‘ನೋಂದಣಿ ಮತ್ತು ಮುದ್ರಾಂಕ ಇಲಾಖೆ’ಯನ್ನು ಪುನಾರಚಿಸಲು ಸಿದ್ಧತೆ ನಡೆದಿದೆ. ಹೆಚ್ಚುವರಿ ಉಪ ನೋಂದಣಿ ಮಹಾಪರಿವೀಕ್ಷಕ (ಡಿಐಜಿಆರ್) 5 ಹಾಗೂ ಸಹಾಯಕ ನೋಂದಣಿ ಮಹಾಪರಿವೀಕ್ಷಕ/ಜಿಲ್ಲಾ ನೋಂದಣಾಧಿಕಾರಿ (ಎಐಜಿಆರ್/ಡಿಆರ್) ಮೂರು ಹುದ್ದೆಗಳನ್ನು ಸೃಜಿಸುವಂತೆ ಸರ್ಕಾರಕ್ಕೆ ಉಪ ಸಮಿತಿ ವರದಿ ಸಲ್ಲಿಸಿದೆ.

    ಪುನಾರಚನೆಗೆ ಹಿರಿಯ ಅಧಿಕಾರಿಗಳನ್ನು ಒಳಗೊಂಡ ಉಪ ಸಮಿತಿಯನ್ನು ಕಂದಾಯ ಇಲಾಖೆ ರಚಿಸಿತ್ತು. ಸಬ್ ರಿಜಿಸ್ಟ್ರಾರ್ ಮತ್ತು ಪ್ರಧಾನ ಕಚೇರಿ ಕೆಲಸದ ಒತ್ತಡ ಸಮಾಲೋಚನೆ ಹಾಗೂ ನೆರೆ ರಾಜ್ಯದ ದಸ್ತಾವೇಜು ನೋಂದಣಿ ಮತ್ತು ಆದಾಯ ಸಂಗ್ರಹ ವಿಶ್ಲೇಷಣೆ ಮಾಡಿದ ಸಮಿತಿಯು ಇಲಾಖೆ ಮುಖ್ಯಸ್ಥರಿಗೆ ವರದಿ ಸಲ್ಲಿಸಿದೆ. ಕಂದಾಯ ಮತ್ತು ಹಣಕಾಸು ಇಲಾಖೆಯಿಂದ ಅನುಮತಿ ಸಿಕ್ಕ ನಂತರ ಪುನಾರಚನೆ ಆಗಲಿವೆ.

    2010ರ ನಂತರ ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ದಸ್ತಾವೇಜುಗಳ ನೋಂದಣಿ ಮತ್ತು ಆದಾಯ ಸಂಗ್ರಹದಲ್ಲಿ ಶೇ.100 ಹೆಚ್ಚಾಗಿದೆ. ಇದು ವರ್ಷದಿಂದ ವರ್ಷಕ್ಕೆ ದುಪ್ಪಟ್ಟಾಗುತ್ತಿದೆ. ತಮಿಳುನಾಡು, ಆಂಧ್ರ, ತೆಲಂಗಾಣ ಮತ್ತು ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ ಅತಿಹೆಚ್ಚು ಸಾಧನೆ ಮಾಡಿದೆ. ಹುದ್ದೆ ಸೃಜನೆ ಹಾಗೂ ವೇತನ ಹೆಚ್ಚಿಸುವುದರಿಂದ ಅಧಿಕಾರಿ, ಸಿಬ್ಬಂದಿ ಉತ್ಸುಕವಾಗಿ ಮತ್ತಷ್ಟು ಆದಾಯ ಸಂಗ್ರಹಿಸಲಿದ್ದಾರೆ ಎಂದು ಉಪ ಸಮಿತಿ ವರದಿಯಲ್ಲಿ ಉಲ್ಲೇಖಿಸಿದೆ.

    ಪ್ರಧಾನ ಕಚೇರಿಯಲ್ಲಿ ಹೊಸದಾಗಿ ಮಾಹಿತಿ ತಂತ್ರಜ್ಞಾನ ಮತ್ತು ಕಂಪ್ಯೂಟರ್ ಘಟಕ ಹಾಗೂ 4 ವಲಯಕ್ಕೆ ಐದು ಡಿಐಜಿಆರ್ ಹುದ್ದೆಗಳನ್ನು ಸೃಜಿಸಬೇಕು. ಸಿವಿಸಿ, ವಿಚಕ್ಷಣ ಮತ್ತು ಜಾರಿ ವಿಭಾಗಕ್ಕೆ ಎಐಜಿಆರ್/ ಡಿಆರ್‌ಗಳ ಅಗತ್ಯ ಇದೆ. ಸಬ್ ರಿಜಿಸ್ಟ್ರಾರ್ ಕಚೇರಿಗಳಿಗೆ 88 ಪ್ರಥಮ ದರ್ಜೆ ಸಹಾಯಕರ ಹುದ್ದೆ ಮಂಜೂರಾಗಿದ್ದು, ಬಹುತೇಕ ಹುದ್ದೆಗಳು ಖಾಲಿ ಇವೆ. ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳೂ ಖಾಲಿ ಇದ್ದು, ಭರ್ತಿ ಮಾಡಬೇಕೆಂದು ಸಮಿತಿ ತಿಳಿಸಿದೆ.

    ಎಚ್‌ಕ್ಯೂಎಗಳಿಗೆ ಅಧಿಕಾರ ವಹಿಸಿ

    ಹೆಡ್ ಕ್ವಾರ್ಟರ್ಸ್ ಅಸಿಸ್ಟೆಂಟ್ (ಎಚ್‌ಕ್ಯೂಎ) 33 ಹುದ್ದೆಗಳು ಮಂಜೂರಾಗಿವೆ. ಆದರೆ, ಇವರ ಕಾರ್ಯ ವ್ಯಾಪ್ತಿಯ ಮರುವಿಂಗಡಣೆ ಅಗತ್ಯವಾಗಿದೆ. ಬಹುರಾಷ್ಟ್ರೀಯ ಕಂಪನಿಗಳು ಮತ್ತು ಜಾಗತಿಕ ಹೂಡಿಕೆದಾರರು ರಿಯಲ್ ಎಸ್ಟೇಟ್ ವಲಯಕ್ಕೆ ಕಾಲಿಟ್ಟಿದ್ದು, ಕಾರ್ಪೋರೇಟ್ ವಕೀಲರ ಸಹಾಯದಿಂದ ದಸ್ತಾವೇಜು ಸಿದ್ಧಪಡಿಸುತ್ತಿದ್ದಾರೆ. ಆದ್ದರಿಂದ ಅನುಭವಿ ಮತ್ತು ಹಿರಿಯ ಅಧಿಕಾರಿಗಳು ಜಿಲ್ಲಾ ನೋಂದಣಾಧಿಕಾರಿಗೆ ಸಹಾಯಕರು ಬೇಕಾಗಿದೆ. ದೇಶದ ಮಹಾನಗರಗಳಲ್ಲಿ ಈಗಾಗಲೆ ಇಂತಹ ಹುದ್ದೆಗಳಿವೆ. ಈ ಹುದ್ದೆಗಳನ್ನು 300 ಕೋಟಿ ರೂ. ಗೂ ಅಧಿಕ ಆದಾಯ ಸಂಗ್ರಹವಾಗುವ ನೋಂದಣಿ ಕಚೇರಿಗಳಿಗೆ ನೇಮಕ ಮಾಡಬೇಕೆಂಬ ಸಲಹೆ ಉತ್ತಮವಾಗಿದೆ. ಕರ್ನಾಟಕ ನೋಂದಣಿ ಕಾಯ್ದೆ 1957ರ ಸೆಕ್ಷನ್ 67ಬಿ ಅನ್ವಯ ಡಿಆರ್ ಅಧೀನ ಅಧಿಕಾರಿಯಾಗಿ ನೇಮಕ ಮಾಡಿ ಸಬ್ ರಿಜಿಸ್ಟ್ರಾರ್ ಕಚೇರಿಗಳಿಗೆ ಭೇಟಿ ಕೊಟ್ಟು ಪರಿಶೀಲಿಸುವ ಅಧಿಕಾರ ವಹಿಸುವುದು ಉತ್ತಮವೆಂದು ಸಮಿತಿ ಅಭಿಪ್ರಾಯ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts