More

    ಸಂಕಷ್ಟದಲ್ಲಿರುವವರ ನೆರವಿಗೆ ಬದ್ಧ

    ಹಾವೇರಿ: ಜಿಲ್ಲೆಯಲ್ಲಿ ಮಾರಕ ಕರೊನಾ ವೈರಸ್ ನಿಯಂತ್ರಣಗೊಂಡು ರಾಜ್ಯದಲ್ಲಿ ಹಾವೇರಿ ಹೆಸರಾಗಿ, ಹಸಿರಾಗಿ ಉಳಿಯುವ ಕಾರ್ಯದಲ್ಲಿ ಜನರಿಗೆ ನೆರವು ಒದಗಿಸಲು ಜಿಲ್ಲಾಡಳಿತದೊಂದಿಗೆ ನಾವೆಲ್ಲರೂ ಭಾಗಿಗಳಾಗುತ್ತೇವೆ ಎಂದು ವಿವಿಧ ಮಠಾಧೀಶರು ಹಾಗೂ ಸಂಘ, ಸಂಸ್ಥೆಗಳ ಮುಖ್ಯಸ್ಥರು ಭರವಸೆ ನೀಡಿದರು.

    ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಸಂಜೆ ಆಯೋಜಿಸಿದ್ದ ಜಿಲ್ಲೆಯ ವಿವಿಧ ಮಠಗಳ ಮಠಾಧೀಶರು, ರೋಟರಿ, ಲಯನ್ಸ್, ರೆಡ್​ಕ್ರಾಸ್ ಸೇರಿ ವಿವಿಧ ಸ್ವಯಂ ಸೇವಾ ಸಂಘಗಳ ಮುಖ್ಯಸ್ಥರ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಯಿತು.

    ಜಿಲ್ಲಾಧಿಕಾರಿ ಕೃಷ್ಣ ಬಾಜಪೈ ಮಾತನಾಡಿ, ಕರೊನಾ ಸಂಕಷ್ಟ ಕಾಲದಲ್ಲಿ ಬಡವರಿಗೆ, ಕಾರ್ವಿುಕರಿಗೆ, ನಿರ್ಗತಿಕರು ಹಸಿವಿನಿಂದ ಬಳಲದಂತೆ ನೆರವು ಒದಗಿಸಲು ವೈಯಕ್ತಿಕ ಹಂತದಲ್ಲಿ ತಾವೆಲ್ಲ ಈಗಾಗಲೇ ಕಾರ್ಯನಿರ್ವಹಿಸುತ್ತಿದ್ದೀರಿ. ಎಲ್ಲರೂ ಒಟ್ಟಾಗಿ ವ್ಯವಸ್ಥಿತವಾಗಿ ಅತ್ಯಗತ್ಯವಿರುವ ಜನರಿಗೆ ಆಹಾರ ಸಾಮಗ್ರಿ, ಔಷಧ ಇತರ ನೆರವು ಒದಗಿಸಲು ಜಿಲ್ಲಾಡಳಿತದೊಂದಿಗೆ ಕೈಜೋಡಿಸಬೇಕು ಎಂದರು.

    ಸರ್ಕಾರದ ಜೊತೆಗೆ ಹಲವು ಮಠಾಧೀಶರು, ಸಂಘ, ಸಂಸ್ಥೆಗಳು ಬಡವರಿಗೆ ಆಹಾರ ಸಾಮಗ್ರಿಗಳನ್ನು ವಿತರಿಸುತ್ತಿವೆ. ಕೆಲವು ಸಂದರ್ಭದಲ್ಲಿ ಒಬ್ಬನೇ ಫಲಾನುಭವಿಗಳಿಗೆ ಪುನರಾವರ್ತನೆಯಾಗುತ್ತಿರುವ ಮಾಹಿತಿ ಬಂದಿದೆ. ಈ ಹಿನ್ನಲೆಯಲ್ಲಿ ಎಲ್ಲ ತಾಲೂಕಿನ ತಹಸೀಲ್ದಾರ್​ಗಳು ನೆರವಿನ ಅಗತ್ಯವಿರುವ ಜನರ ಪಟ್ಟಿ ಮಾಡಿದ್ದಾರೆ. ಎಲ್ಲ ಸಂಘ, ಸಂಸ್ಥೆಗಳು ಮಠಾಧೀಶರು, ಆಯಾ ತಾಲೂಕಿನ ತಹಸೀಲ್ದಾರ್​ಗಳ ಪಟ್ಟಿಯಂತೆ ಆಹಾರ ಪದಾರ್ಥ ಇತರ ನೆರವನ್ನು ಒದಗಿಸಿದರೆ ಅಗತ್ಯವಾಗಿ ಯಾರಿಗೆ ತಲುಪಬೇಕೋ ಅವರಿಗೆ ತಲುಪುತ್ತದೆ ಎಂದರು.

    ಸಭೆಯಲ್ಲಿ ಭಾಗವಹಿಸಿದ್ದ ವಿವಿಧ ಸಂಘ, ಸಂಸ್ಥೆಗಳ ಮುಖಂಡರು, ಮಠಾಧೀಶರುಗಳು, ಸಂಕಷ್ಟದಲ್ಲಿರುವ ಜನರಿಗೆ ನೀಡಿರುವ ನೆರವು ಕುರಿತು ಮಾಹಿತಿ ಒದಗಿಸಿ, ಜಿಲ್ಲಾಡಳಿತದ ಪರಿಹಾರ ಕಾರ್ಯದಲ್ಲಿ ನಾವೆಲ್ಲ ಭಾಗಿಗಳಾಗುತ್ತೇವೆ. ಆಹಾರ ಧಾನ್ಯಗಳು ಉಳ್ಳವರ ಪಾಲಾಗುತ್ತಿವೆ. ಸಣ್ಣಪುಟ್ಟ ಕೆಲಸ ಮಾಡಿಕೊಂಡು ಅಂದಿನ ದುಡಿಮೆಯಲ್ಲಿ ಅಂದೇ ಊಟ ಮಾಡುವ ಜನರ ಬದುಕು ಬಹಳ ಕಷ್ಟದಲ್ಲಿದೆ. ಇಂತವರ ಪಟ್ಟಿಮಾಡಿ ಆಹಾರ ಪದಾರ್ಥಗಳನ್ನು ತಲುಪಿಸುವ ಕೆಲಸವಾಗಬೇಕು. ಬಹಳ ಕಡೆ ಎಲ್ಲ ಸಂಘ, ಸಂಸ್ಥೆಗಳು ಕೊಳಚೆ ಪ್ರದೇಶಗಳಿಗೆ ಪದೇಪದೆ ಆಹಾರ ಸಾಮಗ್ರಿಗಳನ್ನು ನೀಡುವುದು ಕಂಡುಬಂದಿದೆ. ಅವರಲ್ಲದೇ ಬಹಳಷ್ಟು ಜನ ಬಡವರು ಬೇರೆಡೆ ವಾಸಮಾಡುತ್ತಿದ್ದಾರೆ. ಇಂಥವರಿಗೆ ತಲುಪಬೇಕಾಗಿದೆ ಎಂದರು.

    ಆಹಾರ ಪೊಟ್ಟಣದ ಬದಲು ಮಸಾಲೆ ಪೊಟ್ಟಣಗಳನ್ನು ವಿತರಿಸಬೇಕು. ಎಲ್ಲರನ್ನು ಒಂದೆಡೆ ಸೇರಿಸಿ ಆಹಾರ ಪೊಟ್ಟಣ ವಿತರಿಸಿ ಫೋಟೋ ತೆಗೆಸಿಕೊಳ್ಳುವ ಬದಲು ಊಟಕ್ಕೆ ಅಗತ್ಯವಿರುವ ಆಹಾರ ಪೊಟ್ಟಣಗಳನ್ನು ಮನೆ ಮನೆಗೆ ತಲುಪಿಸುವ ಕೆಲಸವಾಗಬೇಕು. ಅಸಹಾಯಕರು, ಬುದ್ಧಿಮಾಂದ್ಯರಿಗೂ ಊಟದ ವ್ಯವಸ್ಥೆಯಾಗಬೇಕು. ಸರ್ಕಾರದ ಸೌಲಭ್ಯಗಳ ಕುರಿತಂತೆ ಮಾಹಿತಿಯನ್ನು ಮಠಾಧೀಶರಿಗೆ ತಿಳಿಸಿದರೆ ಭಕ್ತಾದಿಗಳಿಗೆ ಮಾಹಿತಿ ನೀಡಲು ಅನುಕೂಲವಾಗುತ್ತದೆ ಎಂದರು.

    ಸಭೆಯಲ್ಲಿ ಜಿಪಂ ಸಿಇಒ ರಮೇಶ ದೇಸಾಯಿ, ಅಪರ ಜಿಲ್ಲಾಧಿಕಾರಿ ಎಂ. ಯೋಗೇಶ್ವರ, ಎಸಿ ಡಾ. ದಿಲೀಪ ಶಶಿ, ವಿವಿಧ ಮಠಾಧೀಶರು, ಸಂಘ, ಸಂಸ್ಥೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.

    ಚೆಕ್ ಪೋಸ್ಟ್ ಬಿಗಿಗೊಳಿಸಿ: ಕೆಲ ಮಠಾಧೀಶರು ಮಾತನಾಡಿ, ಕರೊನಾ ಲಾಕ್​ಡೌನ್ ನಿಯಮಗಳನ್ನು ಕಠಿಣವಾಗಿ ಅನುಷ್ಠಾನಕ್ಕೆ ತರಬೇಕು. ಗಡಿ ಭಾಗದಲ್ಲಿ ಸ್ಥಾಪಿಸಿರುವ ಚೆಕ್​ಪೋಸ್ಟ್​ಗಳನ್ನು ಬಿಗಿಗೊಳಿಸಬೇಕು. ಅನಗತ್ಯವಾಗಿ ಬೀದಿಯಲ್ಲಿ ತಿರುಗಾಡುವವರ ಮೇಲೆ ಕಠಿಣ ಕ್ರಮಕೈಗೊಳ್ಳಬೇಕು. ಧಾರ್ವಿುಕ ಸಭೆ, ಸಮಾರಂಭ ಆಚರಣೆಗಳ ನೆಪದಲ್ಲಿ ಜನ ಗುಂಪು ಸೇರುವುದನ್ನು ತಡೆಯಬೇಕು. ಗ್ರಾಮೀಣ ಪ್ರದೇಶದಲ್ಲಿ ಕರೊನಾ ಸೋಂಕಿನ ಬಗ್ಗೆ ನಿರ್ಲಕ್ಷ್ಯವಿದೆ. ಜಿಲ್ಲಾಡಳಿತದಿಂದ ನಮಗೆ ಪಾಸ್ ನೀಡಿದರೆ ಹಳ್ಳಿ ಹಳ್ಳಿಗೆ ಹೋಗಿ ಜಾಗೃತಿ ಮೂಡಿಸುವುದಾಗಿ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts