More

    ಚಿನ್ನ ಸ್ಮಗ್ಲಿಂಗ್​ಗೆ ಕಮಿಷನ್!; ವಿದೇಶದಿಂದ ತರಲು ಕೆಜಿಗೆ 5 ಲಕ್ಷ ರೂ, ಕಸ್ಟಮ್ಸ್ ಅಧಿಕಾರಿಗಳಿಗೂ ಲಂಚ

    ಕೀರ್ತಿನಾರಾಯಣ ಸಿ., ಬೆಂಗಳೂರು

    ಚಿನ್ನಕ್ಕೆ ಸದಾ ಬೇಡಿಕೆ ಇದ್ದದ್ದೇ. ಅದರಲ್ಲೂ ಬಂಗಾರದ ಮೇಲಿನ ಆಮದು ಸುಂಕವನ್ನು ಶೇ.10.75 ರಿಂದ ಶೇ.15ಕ್ಕೆ ಹೆಚ್ಚಿಸಿದ ನಂತರ ಬೆಲೆ ಏರಿಕೆಯಾಗಿದೆ. ಪರಿಣಾಮ ‘ಗೋಲ್ಡ್ ಸ್ಮಗ್ಲಿಂಗ್’ ಹೆಚ್ಚಿದೆ. ವಿದೇಶಗಳಿಂದ ಚಿನ್ನ ಕಳ್ಳಸಾಗಾಣಿಕೆಗಾಗಿಯೇ ಸಿಂಡಿಕೇಟ್​ಗಳು ರೂಪುಗೊಂಡಿದ್ದು, ವಾಮಮಾರ್ಗದಲ್ಲಿ 1 ಕೆಜಿ ಚಿನ್ನ ತಂದರೆ 5 ಲಕ್ಷ ರೂ. ಕಮಿಷನ್ ನೀಡುತ್ತಿವೆ. ಅಲ್ಲದೆ, ವಿದೇಶಗಳಿಂದ ಬರುವ ಸಾಮಾನ್ಯ ಪ್ರಯಾಣಿಕರಿಗೂ ಕಮಿಷನ್ ಆಮಿಷವೊಡ್ಡಿ ಬಳಸಿಕೊಳ್ಳುವುದು ಮತ್ತು ಚಿನ್ನ ಕಳ್ಳಸಾಗಾಟಕ್ಕೆ ಕುಮ್ಮಕ್ಕು ಕೊಡುವ ಕಸ್ಟಮ್್ಸ ಅಧಿಕಾರಿಗಳಿಗೆ ಬೇರೆಬೇರೆ ಪ್ಯಾಕೇಜ್​ಗಳ ರೂಪದಲ್ಲಿ ಲಂಚ ಕೊಡುತ್ತಿರುವ ವಿಚಾರವೂ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

    2022ರ ಜುಲೈನಿಂದ ದೇಶದಲ್ಲಿ ಹೊಸ ಆಮದು ಸುಂಕ ಜಾರಿಗೆ ಬಂದಿದೆ. ಅದಕ್ಕೂ ಮುನ್ನ ಚಿನ್ನದ ಮೇಲಿನ ಮೂಲ ಆಮದು ಸುಂಕ ಶೇ.7.5ರಷ್ಟಿತ್ತು. ಜುಲೈ ನಂತರ ಶೇ.12.5 ಆಗಿದೆ. ಇದರ ಜತೆಗೆ ಶೇ.2.5 ಕೃಷಿ ಮೂಲಸೌಕರ್ಯ ಅಭಿವೃದ್ಧಿ ಸೆಸ್​ನೊಂದಿಗೆ ಸುಂಕ ಶೇ.15ಕ್ಕೆ ತಲುಪಿದೆ. ಹೀಗಾಗಿ ಕಳ್ಳಮಾರ್ಗದಲ್ಲಿ ಚಿನ್ನ ಆಮದಾಗುವುದು ಹೆಚ್ಚಿದ್ದು, ವಾರ್ಷಿಕ ಸಾವಿರಾರು ಕೋಟಿ ರೂ. ತೆರಿಗೆ ನಷ್ಟವಾಗುತ್ತಿದೆ.

    ರಾಜ್ಯದ ವಿಮಾನ ನಿಲ್ದಾಣಗಳಲ್ಲಿ 2017ರಿಂದ 2022ರ ಜೂನ್​ವರೆಗೆ 922 ಗೋಲ್ಡ್ ಸ್ಮಗ್ಲಿಂಗ್ ಪ್ರಕರಣ ಪತ್ತೆಯಾಗಿವೆ. ಪ್ರತಿವರ್ಷ ಸರಾಸರಿ 167 ಕೇಸ್ ವರದಿಯಾಗುತ್ತಿದ್ದು, ಅಂದಾಜು 15 ಕೋಟಿ ರೂ. ಮೌಲ್ಯದ ಚಿನ್ನ ಜಪ್ತಿ ಮಾಡಲಾಗುತ್ತಿದೆ. ಇಂಡಿಯಾ ಗೋಲ್ಡ್ ಪಾಲಿಸಿ ಸೆಂಟರ್​ನ ಮಾಹಿತಿ ಪ್ರಕಾರ ಹೊರಗಿನಿಂದ ಭಾರತ ಪ್ರವೇಶಿಸುವ ಒಟ್ಟು ಆಮದು ಚಿನ್ನದಲ್ಲಿ 4ನೇ ಒಂದು ಭಾಗದಷ್ಟು ಅಕ್ರಮವಾಗಿ ಬರುತ್ತಿದೆ.

    ಅರಬ್ ದೇಶಗಳಿಂದಲೇ ಅತಿಹೆಚ್ಚು ಚಿನ್ನ ಕಳ್ಳಸಾಗಾಣಿಕೆ ಯಾಗುತ್ತಿದೆ. ಚಿನ್ನ ಕಳ್ಳಸಾಗಣೆಯಲ್ಲಿ ದೊಡ್ಡದೊಡ್ಡ ಜ್ಯುವೆಲ್ಲರಿ ಉದ್ಯಮ ಸಂಸ್ಥೆಗಳೂ ಭಾಗಿಯಾಗಿವೆ. ಮಧ್ಯವರ್ತಿಗಳ ಮೂಲಕ ಚಿನ್ನ ಕಳ್ಳಸಾಗಣೆ ಮಾಡಲಾಗುತ್ತದೆ. ಭಾರತೀಯ ಮಾರುಕಟ್ಟೆ ಬೆಲೆಯ ಅನ್ವಯ 1 ಕೆಜಿಗೆ 3 ರಿಂದ 5 ಲಕ್ಷ ರೂ. ಕಮಿಷನ್ ನೀಡಲಾಗುತ್ತದೆ. ಕೆಲ ಪ್ರಕರಣಗಳಲ್ಲಿ ಭಾರತಕ್ಕೆ ಹೊರಟಿರುವ ಸಾಮಾನ್ಯ ಪ್ರಯಾಣಿಕರಿಗೂ ಕಮಿಷನ್ ಆಮಿಷವೊಡ್ಡಿ ಅವರನ್ನೂ ಚಿನ್ನ ಕಳ್ಳಸಾಗಾಣಿಕೆಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ.

    ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಮಂಗಳೂರು ವಿಮಾನ ನಿಲ್ದಾಣಗಳಲ್ಲಿ ಹೆಚ್ಚು ಚಿನ್ನ ಕಳ್ಳಸಾಗಣೆ ಪ್ರಕರಣಗಳು ವರದಿಯಾಗಿವೆ. ಏರ್​ಪೋರ್ಟ್​​ಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ಹೊರತಾಗಿಯೂ ರಾಜ್ಯಕ್ಕೆ ಅರಬ್ ದೇಶಗಳು, ಮಲೇಷ್ಯಾ, ಶ್ರೀಲಂಕಾ ಹಾಗೂ ಮಧ್ಯಪ್ರಾಚ್ಯ ದೇಶಗಳಿಂದ ಚಿನ್ನ ಕಳ್ಳಸಾಗಣೆಯಾಗುತ್ತಿದೆ. ಇಂಡಿಯಾ ಗೋಲ್ಡ್ ಪಾಲಿಸಿ ಸೆಂಟರ್ ಹೇಳುವಂತೆ ಶೇ.5ರಷ್ಟು ಪ್ರಕರಣಗಳಲ್ಲಿ ಮಾತ್ರ ಈ ಕಳ್ಳಸಾಗಣೆದಾರರು ಸಿಕ್ಕಿಬೀಳುತ್ತಾರೆ.

    ಜಪ್ತಿ ಚಿನ್ನ ಏನಾಗುತ್ತೆ?

    ದಾಖಲೆಗಳಿಲ್ಲದ ಅಪಾರ ಪ್ರಮಾಣದ ಚಿನ್ನವನ್ನು ವಿದೇಶಗಳಿಂದ ವಿಮಾನ ಮಾರ್ಗದಲ್ಲಿ ಕಳ್ಳಸಾಗಣೆ ಮಾಡಲಾಗುತ್ತಿದೆ. ಸ್ಮಗ್ಲಿಂಗ್ ತಡೆಗಟ್ಟಲು ಎಲ್ಲ ಏರ್​ಪೋರ್ಟ್​ಗಳಲ್ಲೂ ಕಸ್ಟಮ್ಸ್ ವಿಭಾಗ ಸ್ಥಾಪಿಸಲಾಗಿದ್ದು, ಪ್ರತಿ ಪ್ರಯಾಣಿಕರನ್ನು ಪರಿಶೀಲಿಸಲಾಗುತ್ತದೆ. ಜಪ್ತಿ ಮಾಡಿದ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ಏರ್​ಪೋರ್ಟ್​ಗಳಲ್ಲಿರುವ ಎಂಎಚ್​ಬಿ ಗೋದಾಮಿನಲ್ಲಿ ಇಡುತ್ತಾರೆ. ಚಿನ್ನಕ್ಕೆ ಸೂಕ್ತ ದಾಖಲೆ ಒದಗಿಸಿದರೆ ಮಾಲೀಕರಿಗೆ ಹಿಂದಿರುಗಿಸಲಾಗುತ್ತದೆ. ಇಲ್ಲವಾದರೆ ಮುಟ್ಟುಗೋಲು ಹಾಕಿಕೊಂಡು ಕೋರ್ಟ್ ಅನುಮತಿ ಪಡೆದು ಹರಾಜು ಹಾಕಲಾಗುತ್ತದೆ. ಬಹುತೇಕ ಪ್ರಕರಣಗಳಲ್ಲಿ ಜಪ್ತಿಯಾದ ಚಿನ್ನ ಹಿಂಪಡೆಯಲ್ಲ ಎನ್ನುತ್ತಾರೆ ಅಧಿಕಾರಿಗಳು.

    ಏರ್​ಪೋರ್ಟ್​ನಲ್ಲಿ ಪತ್ತೆಯಾಗುವ ಚಿನ್ನ ಕಳ್ಳಸಾಗಣೆ ಪ್ರಕರಣಗಳನ್ನು ಕಸ್ಟಮ್ಸ್ ಅಧಿಕಾರಿಗಳೇ ನಿರ್ವಹಿಸುತ್ತಾರೆ. ಕಸ್ಟಮ್ಸ್ ಜತೆಗೆ ಎನ್​ಸಿಬಿ ಹಾಗೂ ಡಿಆರ್​ಐ ಅಧಿಕಾರಿಗಳೂ ಚಿನ್ನ ಸ್ಮಗ್ಲಿಂಗ್ ಕೇಸ್​ಗಳ ತನಿಖೆ ನಡೆಸುತ್ತಾರೆ. ಇಮಿಗ್ರೇಷನ್ ವಿಚಾರ, ನಕಲಿ ವೀಸಾ, ಪಾಸ್​ಪೋರ್ಟ್ ಪ್ರಕರಣ ಅಥವಾ ಗಲಾಟೆ ಪ್ರಕರಣಗಳನ್ನು ಮಾತ್ರ ಪೊಲೀಸರಿಗೆ ವರ್ಗಾಯಿಸಲಾಗುತ್ತದೆ.

    |ಅನೂಪ್ ಶೆಟ್ಟಿ ಈಶಾನ್ಯ ವಿಭಾಗ ಡಿಸಿಪಿ

    ಯಾವಾಗ ಸ್ಮಗ್ಲಿಂಗ್ ಜಾಸ್ತಿ?

    ಪ್ರತಿ ಶುಕ್ರವಾರ ಅತಿಹೆಚ್ಚು ಚಿನ್ನ ಕಳ್ಳಸಾಗಣೆ ಪ್ರಕರಣ ವರದಿಯಾಗುತ್ತವೆ. ಅಂತೆಯೇ, ಅಕ್ಟೋಬರ್, ನವೆಂಬರ್, ಡಿಸೆಂಬರ್​ನಲ್ಲಿ ಜಾಸ್ತಿ ಎನ್ನುತ್ತದೆ ಇಂಡಿಯಾ ಗೋಲ್ಡ್ ಪಾಲಿಸಿ ಕೇಂದ್ರದ ಅಧ್ಯಯನದ ವರದಿ.

    ಎಷ್ಟು ಚಿನ್ನ ತರಬಹುದು?

    ಚಿನ್ನದ ಮೇಲಿನ ಸುಂಕರಹಿತ ಮಿತಿ ನಿಯಮದ ಪ್ರಕಾರ ದುಬೈ ಅಥವಾ ಬೇರೆ ದೇಶಗಳಿಂದ ಭಾರತಕ್ಕೆ ಪ್ರಯಾಣಿಸುವ ವ್ಯಕ್ತಿಯೊಬ್ಬ 50 ಸಾವಿರ ರೂ. ಮೀರದಂತೆ ಗರಿಷ್ಠ 20 ಗ್ರಾಂ ಚಿನ್ನ ತರಬಹುದು. ಅದೇ ರೀತಿ ಮಹಿಳೆಯೊಬ್ಬಳು 1 ಲಕ್ಷ ರೂ. ಮೀರದಂತೆ ಗರಿಷ್ಠ 40 ಗ್ರಾಂ ಚಿನ್ನ ಕೊಂಡೊಯ್ಯಲು ಅವಕಾಶ ಇದೆ.

    ಹೇಗೆಲ್ಲ ಸಾಗಾಟ?
    • ಒಳಉಡುಪು, ಗುದದ್ವಾರದಲ್ಲಿ ಬಚ್ಚಿಟ್ಟುಕೊಂಡು ಸಾಗಾಟ
    • ಚಿನ್ನದ ತಂತಿಗಳಿಗೆ ಬೆಳ್ಳಿಯ ಪೇಂಟ್ ಬಳಿದು ಸರಬರಾಜು
    • ಟ್ರಾಲಿ ಬ್ಯಾಗ್​ನಲ್ಲಿ ಚಕ್ರ ಹಾಗೂ ರಾಡ್​ಗಳಲ್ಲಿಟ್ಟು ಪೂರೈಕೆ
    • ಚಿನ್ನವನ್ನು ಪ್ಲೇಟ್​ಗಳ ಮಾದರಿ ತಯಾರಿಸಿ ಸಾಗಾಟ
    • ಲೇಡಿಸ್ ಬ್ಯಾಗ್ ಬಕಲ್ಸ್, ಜೀನ್ಸ್ ಪ್ಯಾಂಟ್ ಬಟನ್​ಗೆ ಬಣ್ಣ ಬಳಿದು ಸಾಗಾಟ
    • ಚಾಕೋಲೇಟ್ ಕವರ್, ಬಾಟಲ್ ಒಳಗೆ ಚಿನ್ನ ತುಂಬುವುದು
    • ತಲೆಕೂದಲಿಗೆ ವಿಗ್ ಬಳಸಿ ಒಳಭಾಗದಲ್ಲಿ ಚಿನ್ನ ಅಡಗಿಸಿಡುವುದು
    • ಸೋಪು, ಟೂತ್​ಬ್ರಷ್, ಪುಸ್ತಕದ ಒಳಗೆ ಚಿನ್ನ ಇಟ್ಟುಕೊಂಡು ಪ್ರಯಾಣ
    • ಚಿನ್ನವನ್ನು ಮಾತ್ರೆ ರೂಪದಲ್ಲಿರಿಸಿ ನುಂಗಿ ಪ್ರಯಾಣಿಸುವುದು
    ಅಧಿಕಾರಿಗಳಿಗೂ ಪಾಲು

    2019ರಲ್ಲಿ ಸಿಬಿಐ ದಾಖಲಿಸಿಕೊಂಡಿದ್ದ ಪ್ರಕರಣದಲ್ಲಿ ಕಳ್ಳಸಾಗಣೆಯಾಗುವ ಚಿನ್ನಕ್ಕೆ ಕೆ.ಜಿ.ಗೆ ಇಷ್ಟೆಂದು ಏರ್​ಪೋರ್ಟ್​ನ ಕಸ್ಟಮ್ಸ್ ಅಧಿಕಾರಿಗಳೇ ಕಮಿಷನ್ ನಿಗದಿಪಡಿಸಿ ಸ್ಮಗ್ಲರ್ಸ್ ಜತೆ ಸಖ್ಯ ಬೆಳೆಸಿರುವುದು ಪತ್ತೆಯಾಗಿತ್ತು. ಬೆಂಗಳೂರು ಏರ್​ಪೋರ್ಟ್​ನ ಕಸ್ಟಮ್ಸ್ ವಿಭಾಗದ ಎಸ್ಪಿ ಡಿ. ಅಶೋಕ್ ಹಾಗೂ ಚಿನ್ನ ಕಳ್ಳಸಾಗಣೆದಾರರಾದ ಇಂದಿರಾನಗರದ ಚಂದ್ರಶೇಖರ್ ಮತ್ತು ಥಣಿಸಂದ್ರದ ವತಲ್ಲೋರೆ ಜಾನ್ ವಿಲ್ಸ್​ನ್ ಎಂಬುವರ ವಿರುದ್ಧ ಆಗಿನ ಕಸ್ಟಮ್ಸ್ ಇಲಾಖೆ ಹೆಚ್ಚುವರಿ ಆಯುಕ್ತ ಎಸ್. ನಾಸಿರ್ ಖಾನ್ ಸಿಬಿಐನಲ್ಲಿ ದೂರು ದಾಖಲಿಸಿದ್ದರು. 1 ಕೆ.ಜಿ. ಸ್ಮಗ್ಲಿಂಗ್ ಚಿನ್ನಕ್ಕೆ 40ರಿಂದ 60 ಸಾವಿರ ರೂ. ಕಮಿಷನ್ ನಿಗದಿಪಡಿಸಿದ್ದರು. ಅಲ್ಲದೆ, ವಿದೇಶಿ ಟ್ರಿಪ್​ಗೂ ಒಪ್ಪಂದ ಆಗಿದ್ದ ಸಂಗತಿ ಸಿಬಿಐ ತನಿಖೆಯಲ್ಲಿ ಬಹಿರಂಗವಾಗಿತ್ತು.

    ರಾಜ್ಯದಲ್ಲಿ ವಾರಕ್ಕೆ 3-4 ಕೇಸ್ ಪತ್ತೆ
    • 2022 ಅ.20- ಒಳಉಡುಪಿನಲ್ಲಿಟ್ಟು ದುಬೈನಿಂದ ತಂದಿದ್ದ 17 ಲಕ್ಷ ರೂ. ಮೌಲ್ಯದ ಚಿನ್ನ ಬೆಂಗಳೂರು ಏರ್​ಪೋರ್ಟ್​ನಲ್ಲಿ ಜಪ್ತಿ.
    • 2022 ಜೂ.23- ಮಹಿಳೆಯರ ಒಳಉಡುಪಿನಲ್ಲಿ ಬಚ್ಚಿಟ್ಟು ಸಾಗಿಸುತ್ತಿದ್ದ 18 ಲಕ್ಷ ರೂ. ಮೌಲ್ಯದ 364 ಗ್ರಾಂ ಚಿನ್ನ ಮಂಗಳೂರು ಏರ್​ಪೋರ್ಟ್​ನಲ್ಲಿ ಜಪ್ತಿ.
    • 2022 ಜೂ.5- ದುಬೈನಿಂದ ಕಳ್ಳಸಾಗಣೆಗೆ ಯತ್ನಿಸಿದ 32 ಲಕ್ಷ ರೂ. ಮೌಲ್ಯದ 624 ಗ್ರಾಂ ಚಿನ್ನ ಮಂಗಳೂರು ಏರ್​ಪೋರ್ಟ್​ನಲ್ಲಿ ಜಪ್ತಿ.
    • 2022 ಆ.31- ಬ್ಯಾಂಕಾಕ್​ನಿಂದ ಬಂದ ವ್ಯಕ್ತಿಯೊಬ್ಬ ಗುದನಾಳದಲ್ಲಿಟ್ಟುಕೊಂಡಿದ್ದ 22 ಲಕ್ಷ ರೂ. ಮೌಲ್ಯದ 442 ಗ್ರಾಂ ಚಿನ್ನ ಬೆಂಗಳೂರು ಏರ್​ಪೋರ್ಟ್​ನಲ್ಲಿ ಜಪ್ತಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts