More

    ಸುಸೂತ್ರ ನಡೆಯುವುದೇ ಬಹಿರಂಗ ಹರಾಜು

    ಕುಷ್ಟಗಿ: ಪಟ್ಟಣದ ಜೆಸ್ಕಾಂ ಉಪ ವಿಭಾಗ ಕಚೇರಿಗೆ ಹೊಂದಿಕೊಂಡಿರುವ ಪುರಸಭೆಯ ವಾಣಿಜ್ಯ ಮಳಿಗೆಗಳಿಗೆ ಡಿ.14ರಂದು ಟೆಂಡರ್ ನಡೆಯಲಿದೆ. ವಿವಿಧ ಕಾರಣಗಳಿಂದ ನನೆಗುದಿಗೆ ಬಿದ್ದಿದ್ದ ಬಹಿರಂಗ ಹರಾಜು ಈ ಬಾರಿಯಾದರೂ ಸುಸೂತ್ರವಾಗಿ ನಡೆಯುವುದೇ ಎಂಬ ಚರ್ಚೆ ನಡೆಯುತ್ತಿದೆ.

    ಕಾಲ ಕಾಲಕ್ಕೆ ಟೆಂಡರ್ ಪ್ರಕ್ರಿಯೆ ನಡೆಸಿ ಬಾಡಿಗೆ ಪರಿಷ್ಕರಣೆ ಮಾಡಿರಲಿಲ್ಲ. ಆರಂಭದಲ್ಲಿ ಬಾಡಿಗೆ ಪಡೆದವರೇ ಹಲವು ವರ್ಷ ಮುಂದುವರಿದಿದ್ದಕ್ಕೆ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿ ಟೆಂಡರ್ ನಡೆಸುವಂತೆ ಪುರಸಭೆಗೆ ಒತ್ತಾಯಿಸಿದ್ದರು. ಟೆಂಡರ್ ಕರೆಯಲು ವ್ಯಾಪಾರಿಗಳನ್ನು ತೆರವುಗೊಳಿಸಲು ಮುಂದಾದಾಗ ಕೆಲ ಬಾಡಿಗೆದಾರರು ಕೋರ್ಟ್ ಮೊರೆ ಹೋಗಿದ್ದರು. ವ್ಯಾಜ್ಯ ಕೋರ್ಟ್‌ನಲ್ಲಿದೆ ಎಂಬ ನೆಪ ಹೇಳುತ್ತಲೇ ಟೆಂಡರ್ ನಡೆಸಲಿಲ್ಲ. ಈ ಕುರಿತು 2022 ಜ.23ರಂದು ‘ವಾಣಿಜ್ಯ ಮಳಿಗೆಗಳ ಟೆಂಡರ್ ಮರೆತ ಪುರಸಭೆ’ ಶೀರ್ಷಿಕೆಯಡಿ ವಿಜಯವಾಣಿ ಪ್ರಕಟಿಸಿದ್ದ ವರದಿ ಬಳಿಕ ಎಚ್ಚೆತ್ತ ಪುರಸಭೆ ಅಧಿಕಾರಿಗಳು ಪೊಲೀಸರೊಂದಿಗೆ ವ್ಯಾಪಾರಿಗಳನ್ನು ತೆರವುಗೊಳಿಸಿದರು.

    ವಾಣಿಜ್ಯ ಮಳಿಗೆ ನಿರ್ಮಿಸಿರುವ ಜಾಗ ಈಗಲೂ ನಮ್ಮ ಹೆಸರಿನಲ್ಲಿಯೇ ಇದೆ. ಮಳಿಗೆಗಳನ್ನು ತೆರವುಗೊಳಿಸಿ ಜಮೀನು ಉಳಿಸಿಕೊಡಿ ಎಂದು ಹನುಮಂತರಾವ್ ಕೋರ್ಟ್ ಮೆಟ್ಟಿಲೇರಿದ್ದರು. ಡಿಸಿ ಆದೇಶದಂತೆ ನಡೆದ ಟೆಂಡರ್ ಪ್ರಕ್ರಿಯೆಯಲ್ಲಿ ಅವ್ಯವಹಾರ ನಡೆದಿದೆ. ಟೆಂಡರ್‌ನಲ್ಲಿ ಪಾಲ್ಗೊಂಡಿದ್ದವರಿಗೆ ಹರಾಜು ಕೂಗದಿರಲು ಪ್ರಭಾವಿಗಳು ಹಣ ನೀಡಿದ್ದಾರೆಂದು ಪಟ್ಟಣದ ಸಾಮಾಜಿಕ ಕಾರ್ಯಕರ್ತ ವಜೀರ್ ಅಲಿ ಗೋನಾಳ ಜಿಲ್ಲಾಧಿಕಾರಿಗೆ ದೂರು ನೀಡಿ ಮರು ಟೆಂಡರ್‌ಗೆ ಆಗ್ರಹಿಸಿದ್ದರು. ಸದ್ಯ ಟೆಂಡರ್ ದಿನಾಂಕ ನಿಗದಿಯಾಗಿದೆ. ಎಸ್ಸಿ, ಎಸ್ಟಿಗೆ ಮೀಸಲಿಟ್ಟ ಮಳಿಗೆಗಳಿಗೂ ಠೇವಣಿ ಹಣ, ಬಾಡಿಗೆ ದರ ಸಾಮಾನ್ಯ ವರ್ಗದವರಿಗಿರುವಷ್ಟೆ ನಿಗದಿ ಮಾಡಲಾಗಿದೆ. 4 ಮಳಿಗೆಗಳನ್ನು ಹೊರತುಪಡಿಸಿ ಟೆಂಡರ್ ನಡೆಸುವಂತೆ ಪುರಸಭೆ ಸದಸ್ಯೆ ವಿಜಯಲಕ್ಷ್ಮೀ ಕಟ್ಟಿಮನಿ ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿಗೆ ಪತ್ರ ಬರೆದಿದ್ದಾರೆ.

    ನಿರ್ವಹಣೆ ಇಲ್ಲ!: ಮೂವತ್ತು ವರ್ಷಗಳ ಹಿಂದೆ ನಿರ್ಮಿಸಿರುವ ಮಳಿಗೆಗಳು ಅಭದ್ರವಾಗಿವೆ. ಬಾಡಿಗೆದಾರರು ಕೋರ್ಟ್ ಮೆಟ್ಟಿಲೇರಿದ್ದ ವೇಳೆ ವ್ಯಾಜ್ಯಕ್ಕೆ 2 ಲಕ್ಷ ರೂ.ಗೂ ಅಧಿಕ ಖರ್ಚು ಮಾಡಿರುವುದಾಗಿ ಹೇಳುತ್ತಿರುವ ಪುರಸಭೆ ಅಧಿಕಾರಿಗಳು, ಕಟ್ಟಡ ನಿರ್ವಹಣೆಗೆ ನಯಾ ಪೈಸೆ ಖರ್ಚು ಮಾಡಿಲ್ಲ. ಕೆಲ ಮಳಿಗೆಗಳ ಛಾವಣಿ ಕಾಂಕ್ರಿಟ್ ಉದುರಿ ಬೀಳುತ್ತಿದ್ದು, ಕಟ್ಟಡ ದುರಸ್ತಿ ಮಾಡಿದ ನಂತರವೇ ಬಾಡಿಗೆ ನೀಡಬೇಕು ಎಂಬ ಒತ್ತಾಯವೂ ಕೇಳಿಬರುತ್ತಿದೆ.

    ಕಡಿಮೆಯಾದ ಆಸಕ್ತರ ಸಂಖ್ಯೆ: ಜೆಸ್ಕಾಂ ಉಪ ವಿಭಾಗ ಕಚೇರಿಗೆ ಹೊಂದಿಕೊಂಡು ನೆಲಮಹಡಿ 9 ಸೇರಿ ಒಟ್ಟು 16 ಮಳಿಗೆಗಳಿದ್ದು, ಅಳತೆಗನುಸಾರ 93 ಸಾವಿರ ರೂ.ಗಳಿಂದ 1.17ಲಕ್ಷ ರೂ.ವರೆಗೆ ಠೇವಣಿ ಹಣ ನಿಗದಿ ಮಾಡಲಾಗಿದೆ. ಡಿ.13ರೊಳಗೆ ಡಿಡಿ ಮುಖಾಂತರ ಠೇವಣ ಹಣ ಪಾವತಿಸುವಂತೆ ಸೂಚಿಸಲಾಗಿದೆ. ಕಳೆದ ಬಾರಿ ಟೆಂಡರ್ ಕರೆದ ವೇಳೆ ನೂರಕ್ಕೂ ಅಧಿಕ ಡಿಡಿ ಸಲ್ಲಿಕೆಯಾಗಿದ್ದವು. ನಾನಾ ಕಾರಣಗಳಿಂದ ಟೆಂಡರ್ ಪ್ರಕ್ರಿಯೆಗೆ ಅಡ್ಡಿಯಾಗುತ್ತಿದೆ ಎಂಬ ಕಾರಣಕ್ಕೆ ಈ ಬಾರಿ ಆಸಕ್ತರ ಸಂಖ್ಯೆ ತೀರಾ ಕಡಿಮೆಯಾಗಿದ್ದು, ಮಂಗಳವಾರದವರೆಗೆ ಕೇವಲ 20 ಡಿಡಿಗಳು ಸಲ್ಲಿಕೆಯಾಗಿವೆ.

    ಎಸ್ಸಿ, ಎಸ್ಟಿಗೆ ಮೀಸಲಿಟ್ಟ ಮಳಿಗೆಗಳ ಠೇವಣಿ ಹಣ ಹಾಗೂ ಬಾಡಿಗೆ ದರ ಸಾಮಾನ್ಯ ವರ್ಗದವರಿಗಿರುವಷ್ಟೆ ನಿಗದಿ ಮಾಡಲಾಗಿದೆ. ದರ ಪರಿಷ್ಕರಣೆ ಜತೆಗೆ ಮಳಿಗೆಗಳ ದುರಸ್ತಿ ಕಾರ್ಯ ನಡೆಸಬೇಕು. ಕೇವಲ ರಾಷ್ಟ್ರೀಕೃತ ಬ್ಯಾಂಕ್ ಮಾತ್ರವಲ್ಲದೆ ಯಾವುದೇ ಬ್ಯಾಂಕಿನಿಂದ ಪಡೆದ ಡಿಡಿಗೆ ಅನುಮತಿ ನೀಡಬೇಕು. ಟೆಂಡರ್ ಪ್ರಕ್ರಿಯೆ ಪಾರದರ್ಶಕವಾಗಿ ನಡೆಯಬೇಕು.
    ವಜೀರ್ ಅಲಿ ಗೋನಾಳ, ಸಾಮಾಜಿಕ ಕಾರ್ಯಕರ್ತ, ಕುಷ್ಟಗಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts