More

    “ಮೇಲ್​ ನೋಡ್​ ಗುರು ಟ್ರಯಾಂಗಲ್​..” ಗುರು-ಶನಿ-ಚಂದ್ರ ಮಿಂಗಲ್​..!

    ಉಡುಪಿ: “ಮೇಲ್​ ನೋಡ್ ಗುರು ಟ್ರಯಾಂಗಲ್​..!”
    – ಹೀಗಂತ ನಾಡಿದ್ದು ರಾತ್ರಿ ಆಕಾಶ ನೋಡಿದ ಯಾರಾದರೂ ಉದ್ಗರಿಸಿದರೆ ಅದು ಸುಳ್ಳೇನಲ್ಲ. ಏಕೆಂದರೆ ಅಂದು ರಾತ್ರಿಯಿಡೀ ಯಾವ ಆ್ಯಂಗಲ್​ನಿಂದ ನೋಡಿದರೂ ಒಂದು ಟ್ರಯಾಂಗಲ್ ಕಾಣಿಸಲಿದೆ. ಗುರುವಾರ ಹಾಗೂ ಶನಿವಾರದ ನಡುವಿನ ಈ ರಾತ್ರಿಯಲ್ಲಿ ಗುರು ಮತ್ತು ಶನಿ ಗ್ರಹಗಳ ಮಧ್ಯೆ ಚಂದ್ರ ಹಾದು ಹೋಗುವುದರಿಂದ ಇಂಥದ್ದೊಂದು ತ್ರಿಕೋನವನ್ನು ನೋಡುವ ಅಪರೂಪದ ಅವಕಾಶ ಒದಗಿ ಬರಲಿದೆ. ವಿಶೇಷವೆಂದರೆ ಅಂದು ಒಂದಲ್ಲ ಎರಡು ತ್ರಿಕೋನಗಳು ಕಾಣಿಸಲಿವೆ. ಇವು ಆಕಾಶದ ಸೌಂದರ್ಯವನ್ನೂ ಹೆಚ್ಚಿಸಲಿವೆ.

    ಒಂದು ಸೆಕೆಂಡಿಗೆ 2.99 ಲಕ್ಷ ಕಿ.ಮೀ. ದೂರ ಚಲಿಸುವ ಬೆಳಕಿಗೆ ಗುರು ಗ್ರಹದಿಂದ ಭೂಮಿ ತಲುಪಲು ಸಾಮಾನ್ಯವಾಗಿ 39 ನಿಮಿಷಗಳು ಬೇಕು. ಶನಿ ಗ್ರಹದಿಂದ ಹೊರಟ ಬೆಳಕು ಭೂಮಿಗೆ ತಲುಪಲು 78 ನಿಮಿಷಗಳು ಬೇಕು. ಭೂಮಿಯಿಂದ ಗ್ರಹಗಳ ಗತಿ ದೂರದಲ್ಲಿದ್ದರೂ ಇವುಗಳ ನಡುವೆ ಕಡಿಮೆ ಅಂತರದಲ್ಲಿ ಹಾದುಹೋಗುವ ಚಂದ್ರ ಎರಡು ಗ್ರಹಗಳ ಮಧ್ಯೆ ಸ್ವಲ್ಪ ಕೆಳಗಡೆ ಕಾಣುತ್ತಾನೆ. ಆಗ ಈ ಪುಟ್ಟ ತ್ರಿಕೋನ ಕಾಣುವುದು ಕೌತುಕ.

    ಮತ್ತೊಂದೆಡೆ ಗುರು- ಚಂದ್ರ-ಶನಿ ಗ್ರಹಗಳ ತ್ರಿಕೋನಾಕಾರ ಜತೆಗೆ ತಾರೆಗಳ ತ್ರಿಕೋನ ವೀಕ್ಷಕರ ಮನ ಸೆಳೆಯಲಿದೆ. ವೀಣಾ ನಕ್ಷತ್ರಪುಂಜದ ಅಭಿಜಿತ್ (ವೇಗಾ), ರಾಜಹಂಸದ ಹಂಸಾಕ್ಷಿ (ಡೇನೆಬ್) ಮತ್ತು ಗರುಡ ನಕ್ಷತ್ರ ಪುಂಜದ ಶ್ರವಣ (ಆಲ್ಟೇರ್) ನಕ್ಷತ್ರಗಳಿಂದ ಆಕಾಶದಲ್ಲಿ ತ್ರಿಕೋನಾಕಾರ ಮೂಡಲಿದೆ. ಬೇರೆ ಬೇರೆ ನಕ್ಷತ್ರ ಪುಂಜಗಳ, ಅತಿ ಪ್ರಕಾಶಮಾನವಾದ ಈ ನಕ್ಷತ್ರಗಳ ಗುಂಪನ್ನು ಬೇಸಿಗೆ ತ್ರಿಕೋನ ಎಂದು ಗುರುತಿಸುತ್ತಾರೆ. ಆಗಸ್ಟ್ ತಿಂಗಳ ಕೆಲವು ದಿನಗಳಲ್ಲಿ ಸೂರ್ಯಾಸ್ತದ ನಂತರ ಪೂರ್ವ ಆಕಾಶದಲ್ಲಿ ಕಾಣುವ ಈ ತ್ರಿಕೋನ ಡಿಸೆಂಬರ್ ವೇಳೆಗೆ ಪಶ್ಚಿಮ ಆಕಾಶದಲ್ಲಿ ಕಾಣುತ್ತದೆ.

    ಸೂರ್ಯಾಸ್ತದ ನಂತರ ಪೂರ್ವ ಆಕಾಶದಿಂದ ಪಶ್ಚಿಮದ ಕಡೆ ನೋಡುವಾಗ ಸಿಗುವ ಪ್ರಕಾಶಮಾನವಾದ ನಕ್ಷತ್ರವೇ ಶ್ರವಣ. ಈ ನಕ್ಷತ್ರದ ಉತ್ತರಕ್ಕೆ ಸಿಗುವುದು ಅತಿ ಪ್ರಕಾಶಮಾನ ನಕ್ಷತ್ರ ಅಭಿಜಿತ್. ಇದರ ಈಶಾನ್ಯಕ್ಕೆ ಹಂಸಾಕ್ಷಿಯನ್ನು ಕಾಣಬಹುದು. “ಸಾಮಾನ್ಯವಾಗಿ ಆಗಸ್ಟ್‌ನಿಂದ ಡಿಸೆಂಬರ್‌ವರೆಗೆ ಪ್ರತಿ ವರ್ಷ ನಕ್ಷತ್ರಗಳ ಹಾಗೂ ಗ್ರಹಗಳ ತ್ರಿಕೋನ ಚಲನೆ ಕಾಣಬಹುದು. ಈ ವರ್ಷ ಗುರು-ಶನಿ-ಚಂದ್ರ ಗ್ರಹಗಳು ಸೆ.25 ಮತ್ತು ನ.19ರಂದು ತ್ರಿಕೋನ ಆಕೃತಿಯಲ್ಲಿ ಗೋಚರಿಸಲಿವೆ. ವರ್ಷದಲ್ಲಿ 2 ಬಾರಿ ಕಾಣಸಿಗುತ್ತಿರುವುದು ವಿಶೇಷ” ಎನ್ನುತ್ತಾರೆ ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ ಭೌತಶಾಸ್ತ್ರ ವಿಭಾಗದ ಉಪನ್ಯಾಸಕ ಅತುಲ್ ಭಟ್.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts