More

    ರಸ್ತೆಗಳಲ್ಲಿ ವಸ್ತುಗಳ ಮಾರಾಟಕ್ಕೆ ಮಕ್ಕಳ ಬಳಕೆ; ಹೈಕೋರ್ಟ್ ಹೇಳಿದ್ದೇನು?

    ಬೆಂಗಳೂರು: ನಗರದ ರಸ್ತೆಗಳು ಹಾಗೂ ಸಿಗ್ನಲ್‌ಗಳಲ್ಲಿ ಪೆನ್, ಆಟಿಕೆಗಳು, ಹೂ ಮತ್ತಿತರ ವಸ್ತುಗಳನ್ನು ಮಾರಾಟ ಮಾಡಲು ಅಪ್ರಾಪ್ತ ಮಕ್ಕಳನ್ನು ಬಳಸಿಕೊಳ್ಳುತ್ತಿರುವುದು ಗಂಭೀರ ವಿಚಾರವಾಗಿದೆ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಅಂಥ ಮಕ್ಕಳನ್ನು ಗುರುತಿಸಿ ಸೂಕ್ತ ವ್ಯವಸ್ಥೆ ಕಲ್ಪಿಸಲು ಯೋಜನೆ ರೂಪಿಸುವಂತೆ ಸರ್ಕಾರ ಹಾಗೂ ಬಿಬಿಎಂಪಿಗೆ ನಿರ್ದೇಶಿಸಿದೆ.

    ಬೆಂಗಳೂರಿನ ‘ಲೆಟ್ಜ್‌ಕಿಟ್ ಫೌಂಡೇಷನ್’ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಬುಧವಾರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ್ ನೇತೃತ್ವದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿತು.

    ರಸ್ತೆಗಳಲ್ಲಿ ವ್ಯಾಪಾರ ಮಾಡಲು ಮಕ್ಕಳನ್ನು ಬಳಸಿಕೊಳ್ಳುತ್ತಿರುವುದು ಅತ್ಯಂತ ಗಂಭೀರ ವಿಚಾರವಾಗಿದ್ದು, ಸಂವಿಧಾನದ 21ನೇ ಪರಿಚ್ಛೇದದ ಉಲ್ಲಂಘನೆಯೂ ಆಗಿದೆ. ಆದ್ದರಿಂದ, ಎಲ್ಲೆಲ್ಲಿ, ಎಷ್ಟು ಮಕ್ಕಳನ್ನು ಈ ರೀತಿ ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂಬ ಬಗ್ಗೆ ನಿಖರ ಮಾಹಿತಿ ಸಂಗ್ರಹಿಸಿ ಅವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಯೋಜನೆ ರೂಪಿಸಿ, ವರದಿ ಸಲ್ಲಿಸಬೇಕು. ಈ ಕಾರ್ಯಕ್ಕೆ ಎನ್‌ಜಿಒಗಳ ನೆರವು ಪಡೆಯಬಹುದು ಎಂದು ಸೂಚಿಸಿದ ಪೀಠ, ವಿಚಾರಣೆಯನ್ನು ನ.30ಕ್ಕೆ ಮುಂದೂಡಿತು.

    ಅರ್ಜಿದಾರರ ಮನವಿ ಏನು?: ಬೆಂಗಳೂರಿನ ಬೀದಿಗಳಲ್ಲಿ ಅದರಲ್ಲೂ ಪ್ರಮುಖವಾಗಿ ಸಿಗ್ನಲ್‌ಗಳಲ್ಲಿ ಪೆನ್, ಆಟಿಕೆಗಳು, ಇಯರ್ ಬಡ್ ಮತ್ತಿತರ ವಸ್ತುಗಳನ್ನು ಮಾರಾಟ ಮಾಡಲು ಹಾಗೂ ಭಿಕ್ಷಾಟನೆಗೆ ಚಿಕ್ಕ ವಯಸ್ಸಿನ ಮಕ್ಕಳನ್ನು ಬಳಸಿಕೊಳ್ಳಲಾಗುತ್ತಿದೆ. ಇದು ಬಾಲನ್ಯಾಯ ಕಾಯ್ದೆ ಹಾಗೂ ಸಂವಿಧಾನದ 21ನೇ ಪರಿಚ್ಛೇದದ ಉಲ್ಲಂಘನೆಯಾಗಿದೆ. ಆದ್ದರಿಂದ, ಮಕ್ಕಳನ್ನು ಮಾರಾಟ ಮಾಡುವ ಕೆಲಸಕ್ಕೆ ಬಳಸಿಕೊಳ್ಳದಂತೆ ಹಾಗೂ ಅವರನ್ನು ಶಾಲೆಗಳಿಗೆ ದಾಖಲಿಸಲು ಅಗತ್ಯ ಕ್ರಮ ಜರುಗಿಸುವಂತೆ ಸರ್ಕಾರ, ಬಿಬಿಎಂಪಿ ಮತ್ತು ಶಿಕ್ಷಣ ಸಂಸ್ಥೆಗಳಿಗೆ ನಿರ್ದೇಶಿಸಬೇಕೆಂದು ಅರ್ಜಿದಾರರು ಕೋರಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts