More

    ಗೋಶಾಲೆ ಸಹಾಯಕ್ಕೆ ಮುಂದಾಗಿ…!

    ಇಂಡಿ: ತಾಲೂಕಿನಾದ್ಯಂತ ಭೀಕರ ಬರ ಆವರಿಸಿದ್ದು, ಹಲವೆಡೆ ದನ-ಕರುಗಳಿಗೆ ಮೇವು ಲಭ್ಯವಾಗದ ಹಿನ್ನೆಲೆ ಅನ್ನದಾತರು ಅನಿವಾರ್ಯವಾಗಿ ಕೈಗೆ ಸಿಕ್ಕ ದರದಲ್ಲಿ ದನ-ಕರುಗಳ ಮಾರಾಟ ಮಾಡಲಾಗುತ್ತಿದ್ದರೆ, ಇನ್ನು ಕೆಲವರು ಗೋವುಗಳನ್ನು ಗೋಶಾಲೆಗಳಿಗೆ ತಂದು ಬಿಡುತ್ತಿದ್ದಾರೆ.

    ಇಂಡಿ ತಾಲೂಕಿನ ಸಾಲೋಟಗಿ ಗ್ರಾಮದ ಶ್ರೀ ಶಿವಯೋಗೀಶ್ವರ ದೇವಸ್ಥಾನ ಸಮಿತಿ ವತಿಯಿಂದ ಗೋಶಾಲೆ ನಡೆಸಲಾಗುತ್ತಿದ್ದು, ಇಲ್ಲಿ ಸುಮಾರು 50 ಗೋವು ಹಾಗೂ ದನಗಳಿದ್ದವು. ಆದರೆ ತಾಲೂಕಿನಲ್ಲಿ ಬರ ಅಧಿಕವಾಗಿರುವುದರಿಂದ ರೈತರು ಮೇವಿನ ವ್ಯವಸ್ಥೆ ಇಲ್ಲದೆ ಗೋಶಾಲೆಗಳಿಗೆ ದನಕರುಗಳನ್ನು ತಂದು ಬಿಡುತ್ತಿದ್ದು ಈಗ ಸರಿ ಸುಮಾರು ಐದು ನೂರಕ್ಕೂ ಅಧಿಕ ಜಾನುವಾರುಗಳಿವೆ.

    ಗೋ ಶಾಲೆಯಲ್ಲಿ ನಿರ್ವಹಣೆ ವೆಚ್ಚ ಒಂದು ಗೋವಿಗೆ ಕನಿಷ್ಠ 70 ರೂ.ಗಳಿದ್ದು, ನಿತ್ಯ 500ಕ್ಕೂ ಹೆಚ್ಚು ಗೋವುಗಳನ್ನು ನೋಡಿಕೊಳ್ಳಬೇಕಾದ ಅನಿವಾರ್ಯತೆ ಉಂಟಾಗಿರುವುದರಿಂದ ನಿರ್ವಹಣೆ ವೆಚ್ಚ ಭರಿಸುವುದು ದೇವಸ್ಥಾನ ಸಮಿತಿಗೂ ಕಷ್ಟಸಾಧ್ಯವಾಗಿದೆ.

    ಕಳೆದ ವರ್ಷ ದನ-ಕರುಗಳಿಗೆ ಚರ್ಮಗಂಟು ರೋಗ ಬಂದ ಹಿನ್ನೆಲೆಯಲ್ಲಿ ಇದ್ದ ಜಾನುವಾರುಗಳನ್ನು ಉಳಿಸಿಕೊಳ್ಳುವುದೇ ಕಠಿಣವಾಗಿತ್ತು. ಆದರೆ ಈ ವರ್ಷ ತೀವ್ರ ಬರ ಬಂದಿರುವುದರಿಂದ ಹಸಿ ಮೇವು ಸಿಗುತ್ತಿಲ್ಲ. ಮಳೆಗಾಲವಾದರೂ ಅನಿವಾರ್ಯವಾಗಿ ಜಾನುವಾರುಗಳಿಗೆ ಒಣ ಮೇವು ಕೊಡಲಾಗುತ್ತಿದೆ. ಹೀಗಾಗಿ ಮೇವಿನ ಸಂಗ್ರಹವೂ ಕಡಿಮೆಯಾಗುತ್ತಿರುವುದು ಗೋ ಶಾಲೆ ಆಡಳಿತ ಮಂಡಳಿಯ ಅಸಹಾಯಕತೆಗೆ ಕಾರಣವಾಗಿದೆ.

    ಈ ಹಿಂದಿನ ಸರ್ಕಾರವಿದ್ದಾಗ ‘ಪುಣ್ಯಕೋಟಿ’ ಯೋಜನೆ ಅಡಿಯಲ್ಲಿ ಹಾಗೂ ಗೋವುಗಳ ಆಹಾರ ಮತ್ತು ಆರೈಕೆಗಾಗಿ ವಿವಿಧ ಮಾನದಂಡಗಳನ್ನು ಆಧರಿಸಿ ಎರಡು ಪ್ರತ್ಯೇಕ ಅನುದಾನಗಳನ್ನು ನೀಡಲಾಗುತ್ತಿತ್ತು. ಆದರೆ ಸದ್ಯದ ಸರ್ಕಾರದಿಂದ ಯಾವುದೇ ಅನುದಾನ ಬಾರದ ಹಿನ್ನೆಲೆಯಲ್ಲಿ ಗೋ ಶಾಲೆ ನಿರ್ವಹಣೆಯೂ ಸವಾಲಾಗಿ ಪರಿಣಮಿಸಿದೆ.

    ಈಗಾಗಲೇ ಸರ್ಕಾರ ಇಂಡಿ ಸೇರಿದಂತೆ ರಾಜ್ಯದ ಬಹುತೇಕ ಎಲ್ಲ ತಾಲೂಕುಗಳನ್ನು ಬರಗಾಲ ತಾಲೂಕು ಎಂದು ಘೋಷಿಸಿದೆ. ಆದರೆ ಬರಗಾಲ ಕಾಮಗಾರಿಗಳು ಸೇರಿದಂತೆ ಬರಗಾಲ ಎದುರಿಸಲು ಅವಶ್ಯವಿರುವ ಅನುದಾನ ಮಾತ್ರ ಬಿಡುಗಡೆ ಮಾಡುತ್ತಿಲ್ಲ. ಇನ್ನಾದರೂ ತಾಲೂಕಾಡಳಿತ ಶೀಘ್ರವೇ ಗೋಶಾಲೆ ತೆರೆದು ರೈತರಿಗೆ ಅನುಕೂಲ ಕಲ್ಪಿಸಬೇಕು ಎಂದು ರೈತಾಪಿ ವರ್ಗ ಆಗ್ರಹಪಡಿಸಿದ್ದಾರೆ.

    ಗೋವುಗಳ ರಕ್ಷಣೆಗೆ ಸಾಮಾಜಿಕ ಸಂಘಟನೆಗಳು ಹಾಗೂ ಸ್ಥಳೀಯ ಸಂಸ್ಥೆಗಳೂ ತಮ್ಮ ಕೈಲಾದಷ್ಟು ನೆರವನ್ನು ನೀಡುತ್ತಿದ್ದಾರೆ. ಕೆಲವು ರೈತರು ಒಣ ಮೇವು ತಂದು ಗೋಶಾಲೆಗೆ ನೀಡುವ ಮೂಲಕ ಜಾನುವಾರುಗಳ ಪಾಲನೆಗೆ ತಮ್ಮ ಕೊಡುಗೆ ಕೊಡುತ್ತಿದ್ದಾರೆ. ಆದರೆ ಜಾನುವಾರುಗಳ ಸಂಖ್ಯೆ ಅಧಿಕವಾಗಿರುವುದರಿಂದ ಮೇವು ಮೂರು-ನಾಲ್ಕು ದಿನಕ್ಕೆ ಖಾಲಿಯಾಗುತ್ತಿದೆ.

    ಸಾರ್ವಜನಿಕರು, ಗೋಶಾಲೆ ನಿರ್ವಹಣೆಗೆ ಸಹಕರಿಸುವವರು ಶ್ರೀ ಶಿವಯೋಗೀಶ್ವರ ದೇವಸ್ಥಾನ ಸೇವಾ ಸಮಿತಿ ಸಾಲೋಟಗಿ ಶಾಖೆ ಸೆಂಟ್ರಲ್ ಬ್ಯಾಂಕಿನ 3368513854 ಆಯ್‌ಎಫ್‌ಎಸ್‌ಸಿ ಸಿಬಿಐ ನಂ 281653 ಗೆ ಕಳುಹಿಸಲು ಇಲ್ಲವೆ ಹೆಚ್ಚಿನ ಮಾಹಿತಿಗೆ ಸೋಮಯ್ಯ ಚಿಕ್ಕಪಟ್ಟ 9900345244 ಸಂಪರ್ಕಿಸಲು ಕೋರಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts