More

    ಜನನಿ, ಜನ್ಮಭೂಮಿ ಮತ್ತು ಸ್ವಧರ್ಮದ ನಿರ್ಲಕ್ಷ್ಯವೇಕೆ?

    ಜನನಿ, ಜನ್ಮಭೂಮಿ ಮತ್ತು ಸ್ವಧರ್ಮದ ನಿರ್ಲಕ್ಷ್ಯವೇಕೆ?

    ಜಗತ್ತಿನ ಧರ್ಮ ಮತ್ತು ಆಧ್ಯಾತ್ಮಿಕ ಇತಿಹಾಸಗಳನ್ನು ಸಾಕ್ಷೀಪ್ರಜ್ಞೆಯಿಂದ ಪರಾಂಬರಿಸಿದಾಗ ಇತರ ಮತ-ಧರ್ಮಗಳಿಗೆ ಹೋಲಿಸಿದರೆ ಹಿಂದೂಧರ್ಮದ ವ್ಯಾಪ್ತತೆ ವಿಶಾಲವೂ ಗಹನವೂ ಆದದ್ದು. ಕಾರಣಗಳು ಹಲವು. ಒಂದೆಡೆ ಕೆಲವು ಮತಗಳು ಸಂಸ್ಥಾಪಕರನ್ನು ಅವಲಂಬಿಸಿ ವ್ಯಕ್ತಿಕೇಂದ್ರಿತವಾಗಿವೆ. ಹಿಂದೂಧರ್ಮವು ತತ್ತಾ್ವಧಾರಿತವಾಗಿದ್ದು ಅದು ವ್ಯಕ್ತಿಗಳನ್ನು, ಆಚರಣೆಗಳನ್ನು ಅಗೌರವಿಸದೆ, ಚ್ಯುತಿತರದೆ ಅನುಮೋದಿಸಿದೆ. ಆದರೆ ವ್ಯಕ್ತಿಯಿಂದ ಪ್ರಾರಂಭವಾದ ಕೆಲವು ಧರ್ಮಗಳು ‘ಮೂರ್ತಿಪೂಜೆ’ಯನ್ನು ಕಟುವಾಗಿ ವಿರೋಧಿಸುತ್ತವೆ. ಆ ವ್ಯಕ್ತಿಗೆ ಮೊದಲು ಆ ಧರ್ಮವು ಇರಲಿಲ್ಲ! ಆ ವ್ಯಕ್ತಿಯ ಗುಣಗಳನ್ನಷ್ಟೇ ಆಧರಿಸಿ ‘ಅನಂತಗುಣಗಳ ಗಣಿಯಾಗಿದ್ದನು ಆತ’ ಎಂದು ವ್ಯಾಖ್ಯಾನಿಸುತ್ತದೆ! ಇಲ್ಲಿ ಮತಧರ್ಮವು ಆ ವ್ಯಕ್ತಿಯನ್ನು ಮೀರುವಂತಿಲ್ಲ. ಆದರೆ ಹಿಂದೂಧರ್ಮವು ತತ್ತ್ವಗಳನ್ನೇ ಆಧರಿಸಿದ್ದಾದರೂ ಅದು ಪ್ರತಿಪಾದಿಸುವ ಶ್ರೇಷ್ಠ ಗುಣಾದರ್ಶಗಳನ್ನು ಹೊಂದಿದವನನ್ನಷ್ಟೇ ಅವತಾರ, ಸಂತ, ಮುಕ್ತಪುರುಷ ಎಂದು ಘೊಷಿಸುತ್ತದೆ!

    ಹಿಂದೂಧರ್ಮದಲ್ಲಿ ಅವತಾರ ಪುರುಷರು ಅನಂತ ಸತ್ಯದ ಸಾಂತ ಪ್ರತಿನಿಧಿಗಳಾಗುತ್ತಾರೆಯೇ ಹೊರತು ಅವರೇ ಸರ್ವಸ್ವವಲ್ಲ. ಆದ್ದರಿಂದಲೇ ಸ್ವಾಮಿ ವಿವೇಕಾನಂದರು ಹೇಳಿದ್ದು: ‘ಹಿಂದೂಧರ್ಮ ಒಂದನ್ನುಳಿದು, ಜಗತ್ತಿನ ಪ್ರತಿಯೊಂದು ಧರ್ಮವೂ ಒಬ್ಬೊಬ್ಬ ವ್ಯಕ್ತಿಯನ್ನು ಅವಲಂಬಿಸಿಕೊಂಡಿದೆ. ಆದರೆ ಹಿಂದೂಧರ್ಮವು ಮಾತ್ರವೇ ತತ್ತ್ವವನ್ನಾಧರಿಸಿದೆ, ವ್ಯಕ್ತಿಯನ್ನಲ್ಲ. ಹಿಂದೂಧರ್ಮದಲ್ಲಿ ಯಾಜ್ಞವಲ್ಕ್ಯು, ವಸಿಷ್ಠರೇ ಮೊದಲಾದವರು ಜನಿಸಿದರೇ ಹೊರತು ಅವರುಗಳಿಂದ ಹಿಂದೂಧರ್ಮ ಜನಿಸಿದ್ದಲ್ಲ. ಆದ್ದರಿಂದ ಹಿಂದೂಧರ್ಮ ಮಾತ್ರವೇ ವಿಶ್ವಧರ್ಮವಾಗುವ ಸಾಮರ್ಥ್ಯ, ಅರ್ಹತೆಗಳನ್ನು ಪಡೆದಿದೆ. ಅಲ್ಲದೆ ಹಿಂದೂಗಳಿಗೆ ಅದ್ಭುತ ವೇದಾಂತ ತತ್ತ್ವದ ಹಿನ್ನೆಲೆ ಇದೆ. ಆದಾಗ್ಯೂ ಅವರು ಮೂರ್ತಿಪೂಜಕರೂ ಆಗಿದ್ದಾರೆ! ಏಕೆಂದರೆ ನಮ್ಮ ವೇದಾಂತ ತತ್ತ್ವವು ಹಿಮಾಲಯ ಸ್ವರೂಪದ್ದು. ಹಿಮಾಲಯದಲ್ಲಿ ಹೇಗೆ ಶುಭ್ರ ಹಿಮಾಚ್ಛಾದಿತ ಪರ್ವತ ಶಿಖರಗಳು, ವಿವಿಧ ವನರಾಶಿ, ಜಲಪಾತಗಳ ಭೋರ್ಗರೆತ, ಜುಳುಜುಳು ನಿನಾದಗೈಯುತ್ತ ಹರಿಯುವ ತಿಳಿನೀರ ಝುರಿಗಳು, ಇವುಗಳಿಂದ ಕೂಡಿದ ಪ್ರಕೃತಿದೇವಿಯ ಮಡಿಲಲ್ಲಿರುವವರು ಅದಕ್ಕೆ ನಮಿಸದೇ ಇರಲು ಸಾಧ್ಯವೇ ಇಲ್ಲ… ಅಲ್ಲದೆ ಪ್ರತಿಯೊಂದು ಧಾರ್ವಿುಕ ಭಾವನೆಯೂ ಮನುಷ್ಯನ ಸತ್ಯಶೋಧನೆಯ ಫಲವಾಗಿ ಉದ್ಭವಿಸಿದೆ. ಆದ್ದರಿಂದ ಪ್ರತಿಯೊಂದು ಧರ್ಮ, ನಂಬಿಕೆ ಹಾಗೂ ಪಂಥವೂ ಸತ್ಯ’.

    ಮಾತೆ, ಮಾತೃಭಾಷೆ ಮತ್ತು ಮಾತೃಭೂಮಿ ಹಾಗೂ ಸ್ವಧರ್ಮವನ್ನು ಉಪೇಕ್ಷಿಸಬಾರದು. ಇಂದು ವಿದ್ಯಾವಂತರೆಂಬ ಸೋಗಿನಲ್ಲಿರುವ ಅಕ್ಷರಸ್ಥರು ವಿಕೃತ ಮನೋಭಾವದಿಂದ ತಮ್ಮೆಲ್ಲ ಉದ್ಧಾರಕ್ಕೆ ಮಾತೃಭೂಮಿಯನ್ನೇ ಅವಲಂಬಿಸಿ, ಫಲಾನುಭವಿಗಳಾದ ನಂತರ ತಮ್ಮ ದೇಶವನ್ನೇ ಮೂದಲಿಸುತ್ತಾ, ತಮ್ಮ ಧರ್ಮವನ್ನೇ ಉಡಾಫೆ ಮಾಡುವ ಲಜ್ಜೆಗೆಟ್ಟ ಪ್ರವೃತ್ತಿಯನ್ನು ಕಾಣುತ್ತೇವೆ. ಇಂತಹ ಸಮಯಸಾಧಕ ಅಕ್ಷರ ರಾಕ್ಷಸರಿಗೆ ಒಂದೋ ತಮ್ಮ ದೇಶ, ಧರ್ಮದ ಕನಿಷ್ಠ ತಿಳುವಳಿಕೆ ಇಲ್ಲ, ಇಲ್ಲವೋ ಅವುಗಳನ್ನು ತಿಳಿಯಬೇಕೆಂಬ ಸದಾಪೇಕ್ಷೆಯಂತೂ ಇಲ್ಲವೇ ಇಲ್ಲ, ಕಾರಣಗಳು ಹತ್ತಾರು. ಸ್ವಾಮಿ ವಿವೇಕಾನಂದರೇ ಪ್ರತಿಪಾದಿಸಿದಂತೆ ನಮ್ಮ ದೇಶದ ಬ್ರಹ್ಮತೇಜ ಮತ್ತು ಕ್ಷಾತ್ರವೀರ್ಯದ ವಿಭಾಗಗಳು ದುರ್ಬಲವಾದದ್ದು, ಪರಕೀಯರ ಆಡಳಿತಕ್ಕೆ ನಾವು ಒಳಗಾದದ್ದು, ಅವರ ಆಡಳಿತವು ನಮ್ಮ ದೇಶದ ಸಂಪತ್ತನ್ನು ದೋಚುವುದಕ್ಕಷ್ಟೇ ಸೀಮಿತವಾಗದೆ ನಮ್ಮ ಭವ್ಯ ಸಂಸ್ಕೃತಿ ಪರಂಪರೆಗೂ ಆಘಾತ ನೀಡಿದ್ದು ಸುಳ್ಳಲ್ಲ. ನಮ್ಮ ಶಿಕ್ಷಣವು ಪರಕೀಯರ ಕೈಗೆ ಸೇರಿ ವಿಕೃತವಾಗಿ ತಿರುಚಲ್ಪಟ್ಟು ಅದರಿಂದ ಮೂಡಿಬಂದ ದುರ್ಬಲ ವ್ಯಕ್ತಿತ್ವಗಳೋ ‘Next door neighbours to brutes’ ಆಗಿ ಹೊರಬಂದದ್ದು ದುರಂತ. ಭಾರತದಲ್ಲಿ ಮಾನವನ ಇತಿಹಾಸಕ್ಕೆ ಯುಗಯುಗಗಳ ಹಿನ್ನೆಲೆ ಇದೆ. ಇದು ಕೇವಲ BC ಅಥವಾ AD ಕಥೆಯಲ್ಲ. ನಮ್ಮ ಪ್ರಾಚೀನ ಪರಂಪರೆಯ ಭವ್ಯತೆಯನ್ನು ಸಂಕ್ಷಿಪ್ತವಾಗಿ ತಿಳಿಯೋಣ.

    ರಾವಣನ ವಧೆಯಾದ ನಂತರ ಲಂಕೆಯ ಸೌಂದರ್ಯಕ್ಕೆ ಮಾರುಹೋಗಿದ್ದ ಲಕ್ಷ್ಮಣನು ಲಂಕಾನಗರವನ್ನೇ ರಾಜಧಾನಿ ಆಗಿಸಿಕೊಳ್ಳೋಣವೆಂದು ಶ್ರೀರಾಮನನ್ನು ವಿನಂತಿಸಿದಾಗ ಅವನೆಂದನು: ‘ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸೀ’. ಅಂದರೆ ಹೆತ್ತ ತಾಯಿ, ಹುಟ್ಟಿದ ಊರು ಸ್ವರ್ಗಕ್ಕಿಂತ ಹಿರಿದಾದದ್ದು! ಏನದ್ಭುತ! ಇಲ್ಲಿ ತಾಯಿ, ತಂದೆ ಮತ್ತು ಗುರುವಿನಲ್ಲಿ ದೈವತ್ವ ಕಂಡು ಸೇವೆಗೈಯುವ ಆದರ್ಶವಿದೆ. ಜನ್ಮಭೂಮಿಯ ಹಿರಿಮೆ-ಗರಿಮೆ, ಆಚಾರ- ವಿಚಾರಗಳ ಅರಿವು ಮತ್ತು ಸಂರಕ್ಷಣೆಯ ವಿವೇಕದ ಎಚ್ಚರಿಕೆ ಇದೆ. ಸ್ವಧರ್ಮ, ಸ್ವಾಭಿಮಾನ, ಸ್ವಾವಲಂಬನೆಯ ‘ತಿಳಿಹು-ಹೊಳಹು’ಗಳಿವೆ. ದಶರಥನು ಮಾನವೀಯ ಹೃದಯದ ಸುಶೀಲೆಯಾಗಿದ್ದ ಕೌಸಲ್ಯಳನ್ನು ಮತ್ತು ಸಂಯಮಶೀಲೆಯಾದ ಸುಮಿತ್ರೆಯನ್ನು ಉಪೇಕ್ಷಿಸಿ ಕೇವಲ ಸೌಂದರ್ಯದ ಅಧಿದೇವತೆಯಾದ ಕೈಕೇಯಿಗೆ ಶರಣಾದ. ತದನಂತರ ತನ್ನ ಬದುಕನ್ನೇ ದಾರುಣವಾಗಿಸಿಕೊಂಡ ಅಂಶ ಒಂದೆಡೆಯಾದರೆ, ‘ಶ್ರೀರಾಮನು ಕುಟುಂಬದ ಹಿತಕ್ಕಾಗಿ ತನ್ನ ಸುಖವನ್ನು ತ್ಯಜಿಸುವುದರೊಂದಿಗೆ ಜಗತ್ತಿನ ಸ್ವಾರ್ಥವನ್ನು ನಿಮೂಲನ ಮಾಡಬೇಕಾದ್ದು ಪ್ರತೀಕಾರದಿಂದಲ್ಲ; ಮಹತ್ತರ ತ್ಯಾಗದಿಂದ!’ ಎಂಬ ಮಹಾನ್ ಆದರ್ಶ ನಮ್ಮದಾಗುತ್ತದೆ.

    ನಮ್ಮ ದೇಶ, ಧರ್ಮಗಳಿತ್ತ ಶ್ರೇಷ್ಠ ಜೀವನಾದರ್ಶಗಳೆಂದರೆ, ಮನುಸ್ಮೃತಿ ಹೇಳುತ್ತದೆ: ‘ಕಣ್ಣಿನಿಂದ ನೋಡಿ ಹೆಜ್ಜೆ ಇಡಬೇಕು, ಬಟ್ಟೆಯಿಂದ ಶೋಧಿಸಿ ನೀರನ್ನು ಕುಡಿಯಬೇಕು, ಸತ್ಯವಾದ, ಶುದ್ಧವಾದ ಮಾತನ್ನಾಡಬೇಕು, ಪವಿತ್ರ ಮನಸ್ಸಿನಿಂದ ಕೆಲಸಗಳನ್ನು ನಿರ್ವಹಿಸಬೇಕು. ಮಾಡಬೇಕಾದ ಕೆಲಸವನ್ನು ಮಾಡದೇ, ನಿಂದನೀಯವಾದ ಕೆಲಸಗಳನ್ನೇ ಮಾಡುತ್ತಾ, ಇಂದ್ರಿಯಲೋಲುಪವಾದ ವ್ಯಕ್ತಿಯು ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕಾಗುತ್ತದೆ… ಮನಸ್ಸಿನಿಂದ, ನೆರೆಗೂದಲಿನಿಂದ, ಹಣದಿಂದ, ನೆಂಟಸ್ತಿಕೆಯಿಂದಾಗಲಿ ಯಾರೂ ಹಿರಿಯರೆನಿಸುವುದಿಲ್ಲ. ಋಷಿಗಳು ಧರ್ವನುಷ್ಠಾನದಿಂದ ಹಿರಿಯರಾದರೂ, ಪ್ರತಿಯೊಬ್ಬ ವ್ಯಕ್ತಿಯೂ ಅಧ್ಯಯನದಿಂದ ಉತ್ತಮನಾಗುತ್ತಾನೆ…’

    ಯಾಜ್ಞವಲ್ಕ್ಯ ಸ್ಮೃತಿ ಹೇಳುತ್ತದೆ: ‘ಚಕ್ರವರ್ತಿಯಾದವನು ಪ್ರಜೆಗಳನ್ನು ಮೋಸಗಾರರು, ಕಳ್ಳರು, ಜೂಜುಕೋರರು, ದರೋಡೆಕೋರರಿಂದ ಕಾಪಾಡಬೇಕು. ಅಲ್ಲದೆ ಪ್ರಜೆಗಳು ಗುಮಾಸ್ತರಿಂದ ತೊಂದರೆಗೀಡಾಗದಂತೆ ಎಚ್ಚರಿಕೆ ವಹಿಸಲೇಬೇಕು’.

    ಪ್ರಾಚೀನ ಭಾರತ ಹೇಳುತ್ತದೆ: ‘ಸಾವಿರ ಅಶ್ವಮೇಧ ಯಾಗಗಳನ್ನು ಮತ್ತು ಸತ್ಯವನ್ನು ತಕ್ಕಡಿಯಲ್ಲಿ ತೂಗಿದಾಗ, ಸತ್ಯವೇ ಹೆಚ್ಚು ತೂಗುತ್ತದೆ! ಧರ್ಮಕಾರ್ಯಗಳಿಗೆ ಆಶ್ರಮವಾಗಲಿ, ದಂಡಕಮಂಡಲ ಗಳಾಗಲೀ ಕಾರಣವಲ್ಲ. ಆಚರಣೆಯಿಂದಷ್ಟೇ ಧರ್ಮ ಸಾಧ್ಯವಾಗುತ್ತದೆ. ಆದ್ದರಿಂದ ವಿವೇಕಿಯಾದವನು ತನಗೆ ಅಪಥ್ಯವಾದುದನ್ನು ಎಂದಿಗೂ ಇನ್ನೊಬ್ಬರಿಗೆ ಮಾಡಬಾರದು…’

    ಮಹಾಭಾರತ ಹೇಳುತ್ತದೆ: ‘ಪ್ರತಿದಿನವೂ ಹಿರಿಯರನ್ನು ಗೌರವಿಸಿ ಸೇವೆಗೈಯ್ಯುವುದರಿಂದ ಕೀರ್ತಿ, ಆಯಸ್ಸು, ಬಲ ಪ್ರಾಪ್ತವಾಗುತ್ತದೆ. ದೇವ, ದ್ವಿಜ, ಗುರು ಮತ್ತು ಜ್ಞಾನಿಗಳನ್ನು ಪೂಜಿಸುವುದು ಹಾಗೂ ಶುಚಿತ್ವ, ಸರಳತೆ, ಬ್ರಹ್ಮಚರ್ಯ ಮತ್ತು ಅಹಿಂಸೆಯನ್ನು ಅನುಸರಿಸುವುದನ್ನು ಕಾಯಕ ತಪಸ್ಸೆಂದು, ಮನಸ್ಸಿಗೆ ಉದ್ವೇಗ ಉಂಟುಮಾಡದ ಮತ್ತು ಸತ್ಯವೂ, ಪ್ರಿಯವೂ ಹಿತಕರವೂ ಆದ ನುಡಿ, ವೇದಾಭ್ಯಾಸವು ವಾಙ್ಮಯ ತಪಸ್ಸೆಂದು ಮತ್ತು ಮನಸ್ಸಿನ ಪ್ರಸನ್ನತೆ, ಸೌಮ್ಯತೆ, ಮಿತಭಾಷಣ ಮತ್ತು ಮನಃಶುದ್ಧಿಗಳು ಮಾನಸ ತಪಸ್ಸೆಂದು ಪರಿಗಣಿತವಾಗುತ್ತವೆ’.

    ಭಗವದ್ಗೀತೆಯ ಭವ್ಯ ಸಂದೇಶಗಳಲ್ಲಿ ಒಂದೆಂದರೆ:

    ಶ್ರೇಯಾನ್ ಸ್ವಧಮೇ ವಿಗುಣಃ ಪರಧರ್ವನ್ ಸ್ವನುಷ್ಠಿತಾತ್|

    ಸ್ವಧಮೇ ನಿಧನಂ ಶ್ರೇಯಃ ಪರಧಮೋ ಭಯಾವಹಃ||

    ‘ಪರಧರ್ಮವನ್ನು ಚೆನ್ನಾಗಿ ಆಚರಿಸಬಹುದಾಗಿದ್ದರೂ ಸ್ವಧರ್ಮವೇ ಉತ್ತಮವಾದದ್ದು. ಸ್ವಧರ್ಮ ವಿಗುಣವಾಗಿದ್ದರೂ ದೋಷಯುಕ್ತವಾಗಿದ್ದರೂ ಚಿಂತೆಯಿಲ್ಲ, ಸ್ವಧರ್ಮದಲ್ಲಿ ನಡೆಯುವಾಗ ಮರಣ ಒದಗಿದರೂ ಅದು ಶ್ರೇಯಸ್ಕರವೇ.’ ಪರಧರ್ಮವು ಭಯ ಉಂಟುಮಾಡುತ್ತದೆ. ಜಗತ್ತಿನಲ್ಲಿ ಪ್ರತಿಯೊಬ್ಬರಿಗೂ ತಮ್ಮದೇ ಆದ Thumb impression ಇದೆ. ತಮ್ಮ ಮನೋವಿನ್ಯಾಸದ ಪಾತಳಿಯ ಮೇಲೆಯೇ ತಮ್ಮ ಧರ್ಮವನ್ನು ಕಂಡುಕೊಳ್ಳಬೇಕು. ನಮ್ಮ ವ್ಯಕ್ತಿತ್ವವನ್ನು ಉತ್ತಮಪಡಿಸಿಕೊಳ್ಳಬೇಕಾದರೆ ಇನ್ನೊಬ್ಬರ ಅಚ್ಚಿನಲ್ಲಿ ನಮ್ಮನ್ನು ನಾವು ಒತ್ತಿಕೊಳ್ಳಬಾರದು. ಇಂತಹ ದಿವ್ಯವೂ ಹಾಗೂ ಪ್ರಾಯೋಗಿಕವೂ ಆದ ಧರ್ವದರ್ಶಗಳ ಬಗ್ಗೆ ಸರಿಯಾದ ತಿಳುವಳಿಕೆ ಮೂಡಿಸಿಕೊಂಡರಷ್ಟೇ ನಮ್ಮ ಭವ್ಯ ಸಂಸ್ಕೃತಿ ಹೆಮ್ಮೆಯ ವಿಷಯವಾಗುತ್ತದೆ. ಇದಕ್ಕಿಂತಲೂ ಮಾನವೀಯತೆಯನ್ನು ಎತ್ತಿಹಿಡಿಯುವ ಶಿಕ್ಷಣ ಮತ್ತು ಧರ್ಮ ಜಗತ್ತಿನಲ್ಲಿದೆಯೇ?

    ‘ಮಾನವೀಯತೆ’ ಎಂದಾಕ್ಷಣ ಪಾಶ್ಚಾತ್ಯರೆಡೆಗೆ ನೋಡಬಯಸುವ ನಮ್ಮ ವಿಚಾರವ್ಯಾಧಿಗಳು ಸ್ವಲ್ಪ ಗಮನಿಸಿ. ಗ್ರೀಕ್ ಮತ್ತು ರೋಮನ್ ನಾಗರಿಕತೆಗಳು ಯುದ್ಧದ ಒತ್ತೆಯಾಳುಗಳನ್ನು ಮೃಗಗಳಂತೆ ಪರಿಗಣಿಸಿ ಅವರೊಂದಿಗೆ ಅಮಾನವೀಯವಾಗಿ ನಡೆದುಕೊಂಡದ್ದು ಇತಿಹಾಸಸತ್ಯವಲ್ಲವೇ? ಇನ್ನು ಕ್ರೈಸ್ತರು ತಾವು ಪ್ರತಿಪಾದಿಸುವ ‘ದೈವತ್ವ’ವನ್ನಷ್ಟೇ ಗೌರವಿಸುವವರನ್ನು ತಮ್ಮ ವ್ಯಾಪ್ತತೆಯಲ್ಲಿ ಪೋಷಿಸಿ, ಒಪ್ಪದವರನ್ನು ಹೊರಗಿಟ್ಟರು. ಈ ಎರಡೂ ಗುಂಪುಗಳ ನಡುವಿನ ಹೋರಾಟವು ಜರ್ಮನಿಯ ಶೇ.75ರಷ್ಟು ಜನಸಂಖ್ಯೆಯನ್ನೇ ಬಲಿ ತೆಗೆದುಕೊಂಡಿದ್ದು ಸುಳ್ಳೇ? ನಂತರದ್ದು, ‘ಸ್ವರ್ಗದಲ್ಲಿರುವ ತಂದೆ ಮತ್ತು ಭೂಮಿಯ ಮೇಲಿರುವ ಮಾನವ’ ಇವರ ನಡುವಿನ ಘರ್ಷಣೆ. ಭೌತಿಕ ಜೀವನದ ಅಭ್ಯುದಯ ಮತ್ತು ಮಾನವ ಜೀವನದ ಭರವಸೆಯ ವೃದ್ಧಿ – ಇದರ ಸೋಗಿನಲ್ಲಿ ಜಗತ್ತು ಕಂಡದ್ದು ಎರಡು ವಿಶ್ವಯುದ್ಧಗಳನ್ನು! ತತ್ಪರಿಣಾಮವೇ ನಾಜಿಗಳಿಂದ ಲಕ್ಷಾಂತರ ಯಹೂದಿಗಳ ಕಗ್ಗೊಲೆ! ಅದಾಗಲೇ ‘ದೇವರ’ಲ್ಲಿ ನಂಬಿಕೆ ಕಳೆದುಕೊಂಡಿದ್ದ ಪಾಶ್ಚಾತ್ಯರಿಗೆ ‘ಮನುಷ್ಯ’ನಲ್ಲೂ ನಂಬಿಕೆ ಜಾರುತ್ತಾ ಹೋಗಿ ‘ಮಾನವೀಯತೆ’ಯೂ ಅರ್ಥಹೀನವೋ ಎಂಬಂತಾಯ್ತು!

    ಜೀವಿತದ ಅಲ್ಪ ಅವಧಿಯಲ್ಲಿ ಹೇಗಾದರೂ ಸರಿಯೇ ಸುಖವನ್ನು ಅನುಭವಿಸಲೇಬೇಕು ಎಂಬ ಹಠಕ್ಕೆ ಜಾರಿದ ‘ದ್ರವ್ಯಸತ್ತಾವಾದ’ವು ಜನರಿಗೆ ತಮ್ಮ ನಂಬಿಕೆ-ಶ್ರದ್ಧೆಗಳನ್ನಿರಿಸಲು ಇದ್ದ ‘ಕೇಂದ್ರಬಿಂದು’ವನ್ನೇ ಕಸಿಯಿತು. ನೈತಿಕತೆಯು ನಗೆಪಾಟಲಿನ ವಿಚಾರವಾಗಿ, ಮೌಲ್ಯಾದರ್ಶಗಳು ಕುಸಿದು ಜೀವನವು ಅರ್ಥವನ್ನೇ ಕಳೆದುಕೊಂಡಿತು! ಮಾರ್ಕ್ಸಿಸ್ಟ್ ಸಿದ್ಧಾಂತ ಮತ್ತು ಬೋಲ್ಷೆವಿಕ್ ಕ್ರಾಂತಿಗಳು ಮಾನವೀಯತೆಯ ಸಫಲತೆ ಸಾಧಿಸದೆ ಮಣ್ಣುಮುಕ್ಕಿದವು. ಆಗ ಪಾಶ್ಚಾತ್ಯರ ಲೌಕಿಕ ಸಿದ್ಧಾಂತಕ್ಕೆ ಅನಿವಾರ್ಯ ಆಶ್ರಯ ನೀಡಿದ್ದು ಭಾರತದ ವೇದಾಂತ ತತ್ತ್ವ. ವಿಜ್ಞಾನಿ ಐನ್​ಸ್ಟೀನ್ ಹೇಳುತ್ತಾನೆ: “Overemphasis on the competitive system kills the spirit on which cultural life depends”.

    ವಿವೇಕಾನಂದರೆನ್ನುತ್ತಾರೆ: ‘ಭಾರತೀಯರೇ, ನಾನೂ ನಿಮ್ಮ ನೆಲದವನೇ, ಇದೇ ಗಾಳಿ, ನೀರನ್ನು ಆಸ್ವಾದಿಸಿದವನು. ಯಾವ ಬ್ರಿಟಿಷರು ನಿಮ್ಮನ್ನು ಬೂಟುಕಾಲಿನಿಂದ ಒದೆಯುತ್ತಿದ್ದಾರೆ, ಅವರು ನನ್ನ ಪದತಲದಲ್ಲಿ ಕುಳಿತು, ಮೈಯೆಲ್ಲಾ ಕಿವಿಯಾಗಿಸಿಕೊಂಡು, ಮಂತ್ರಮುಗ್ಧರಂತೆ ನನ್ನ ಮಾತುಗಳನ್ನು ಕೇಳುತ್ತಿದ್ದಾರೆ. ಕಾರಣ ಏನಿರಬಹುದು? ನೀವು ವೇದೋಪನಿಷತ್ತುಗಳನ್ನು ಕೇವಲ ಗಿಳಿಪಾಠದಂತೆ ಓದಿದ್ದೀರಿ! ನಾನೋ ಅವುಗಳನ್ನು ಅಧ್ಯಯನ ಮಾಡಿ ಅದರಂತೆ ಜೀವಿಸಿದ್ದೇನೆ, ಜೀವನವಿಡೀ ಉಪನಿಷತ್ತುಗಳ ಶಕ್ತಿಸಂದೇಶವನ್ನೇ ಬೋಧಿಸಿದ್ದೇನೆ. ನಿಮ್ಮ ಉದ್ಧಾರವಾಗಬೇಕೋ? ‘Go back to Upanishads’.

    ಪಾಶ್ಚಾತ್ಯ ರಾಷ್ಟ್ರಗಳಲ್ಲಿ ದಿಗ್ವಿಜಯ ಸಾಧಿಸಿ ಭಾರತಕ್ಕೆ ಮರಳಿದ ವಿವೇಕಾನಂದರನ್ನು ಆಂಗ್ಲ ಸ್ನೇಹಿತನೊಬ್ಬ ಕೇಳಿದ: ‘ಸಂಪದ್ಭರಿತ, ಶಕ್ತಿಯುತ ಹಾಗೂ ವಿಲಾಸಪೂರ್ಣ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ನಾಲ್ಕಾರು ವರ್ಷಗಳನ್ನು ಕಳೆದ ಮೇಲೆ ಈಗ ನಿಮ್ಮ ಮಾತೃಭೂಮಿಯ ಬಗ್ಗೆ ಏನನ್ನಿಸುತ್ತದೆ?’ ಸ್ವಾಮೀಜಿಯಿತ್ತ ಉತ್ತರ ಚಾರಿತ್ರ್ಯಾರ್ಹ: ‘ನಾನು ಭಾರತದಿಂದ ಹೊರಟಾಗಲೂ ಭಾರತವನ್ನು ಪ್ರೀತಿಸುತ್ತಿದ್ದೆ, ನಿಜ. ಆದರೆ ಈಗಲಾದರೋ, ನನಗೆ ಭಾರತದ ಕಣಕಣವೂ ಪವಿತ್ರ, ಭಾರತದಲ್ಲಿ ಬೀಸುವ ಗಾಳಿಯೆಲ್ಲವೂ ಪವಿತ್ರ, ಈಗ ನನಗದು ಪುಣ್ಯಭೂಮಿ, ಯಾತ್ರಾಸ್ಥಳ, ತೀರ್ಥಕ್ಷೇತ್ರ!’.

    ‘…ವಿವೇಕಾನಂದರು ಬಾರದೇ ಇದ್ದಿದ್ದರೆ ನಮ್ಮ ಧರ್ಮ ಉಳಿಯುತ್ತಿರಲಿಲ್ಲ. ಸ್ವಾತಂತ್ರ್ಯ ದೊರೆಯುತ್ತಿರಲಿಲ್ಲ’ ಎಂದಿದ್ದಾರೆ ಸಿ. ರಾಜಗೋಪಾಲಾಚಾರಿ.

    ಹುಟ್ಟೂರು, ಹೆತ್ತಮ್ಮ ಮತ್ತು ಸ್ವಧರ್ಮವನ್ನು ಗೌರವಿಸುತ್ತಾ ಬಾಳಿದರೆ ಉದ್ಧಾರ ಶತಃಸಿದ್ಧ. ಕಣ್ಣಿದ್ದೂ ಕುರುಡಾಗುವುದು, ಕಿವಿಯಿದ್ದೂ ಕಿವುಡಾಗುವುದು ಬೇಡ, ಅಲ್ಲವೇ?

    (ಲೇಖಕರು ತುಮಕೂರು ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts