More

    ಸನಾತನ ಧರ್ಮದಲ್ಲಿ ಪರಮಾತ್ಮನ ಪರಿಕಲ್ಪನೆ

    ಸನಾತನ ಧರ್ಮದಲ್ಲಿ ಪರಮಾತ್ಮನ ಪರಿಕಲ್ಪನೆಯಾವ ರೀತಿಯಲ್ಲಿ ಎಲ್ಲ ಆಭರಣಗಳೂ ಒಂದೇ ಸುವರ್ಣದ ವಿವಿಧ ರೂಪಗಳಾಗಿವೆಯೋ, ಅದೇ ರೀತಿಯಲ್ಲಿ ವಿಶ್ವದಲ್ಲಿರುವ ಎಲ್ಲ ಸಜೀವ-ನಿರ್ಜೀವ ವಸ್ತುಗಳೂ ಒಂದೇ ಬ್ರಹ್ಮವಸ್ತುವಿನ ನಾನಾ ರೂಪಗಳಾಗಿವೆ. ಇದು ಸನಾತನ ಧರ್ಮದ ಮೂಲ ಬೋಧನೆ. ಈ ಮೂಲ ‘ಬ್ರಹ್ಮ’ವೇ ಸನಾತನ ಧರ್ಮದಲ್ಲಿ ‘ಪರಮಾತ್ಮ’ ಅಥವಾ ‘ಭಗವಂತ’ ಎಂಬುದಾಗಿ ಕರೆಯಲ್ಪಟ್ಟಿದೆ.

    ಸನಾತನ ಧರ್ಮ ಒಂದು ಮತವಲ್ಲ; ಅದು ಇಡೀ ವಿಶ್ವವನ್ನು ಆಳುವ ಒಂದು ಸವೋಚ್ಚ ಶಾಶ್ವತ ನಿಯಮ (Supreme Eternal Law). ‘ಸರ್ವ ಅಸ್ತಿತ್ವದ ಏಕತೆ ಹಾಗೂ ದಿವ್ಯತೆ’ಯೇ (Unity and Divinity of All Exisistence) ಸನಾತನ ಧರ್ಮದ ಮೂಲಭೂತ ಸಿದ್ಧಾಂತ; ಇದರ ಆಧಾರದಲ್ಲಿ ರೂಪಿತವಾದ ಬಹು ಪ್ರಾಚೀನ ಜೀವನ ವಿಧಾನವನ್ನು ಜನರು ಭರತವರ್ಷದಲ್ಲಿ, ದಾಖಲಾಗಿರುವ ಆಧುನಿಕ ಇತಿಹಾಸಕ್ಕಿಂತ ಎಷ್ಟೋ ಸಾವಿರಾರು ವರ್ಷಗಳಿಗಿಂತ ಮೊದಲಿನಿಂದಲೂ ಆಚರಿಸುತ್ತಿದ್ದರು. ವೇದಗಳು ಸನಾತನ ಧರ್ಮದ ಮೂಲಭೂತ ಗ್ರಂಥಗಳು ಹಾಗೂ ವೇದಾಂತ ಇದರ ಆಧಾರಭೂತ ತತ್ತ್ವ. ಸನಾತನ ಧರ್ಮದಿಂದ ಹರಿದು ಬಂದಿರುವ ಎರಡು ಮುಖ್ಯ ನಿಯಮಗಳೆಂದರೆ ಕರ್ಮ ಸಿದ್ಧಾಂತ ಹಾಗೂ ಪುನರ್ಜನ್ಮ ಸಿದ್ಧಾಂತ.

    ಸನಾತನ ಧರ್ಮದಲ್ಲಿ ಅಡಕವಾದ ‘ಪರಮಾತ್ಮ’ ಅಥವಾ ‘ಭಗವಂತ’ನ ಪರಿಕಲ್ಪನೆಯನ್ನು ಅರ್ಥ ಮಾಡಿಕೊಳ್ಳೋಣ. ನಾಸ್ತಿಕರಿಗೆ ಇಲ್ಲವಾದ, ಅನ್ವೇಷಕರಿಗೆ ರಹಸ್ಯವಾದ ಹಾಗೂ ಆಸ್ತಿಕರಿಗೆ ಜೀವಂತ ಅನುಭವವಾದ ಸೃಷ್ಟಿಮೂಲ ತತ್ತ್ವವೇ ಪರಮಾತ್ಮ. ಭೂಮಿಯಲ್ಲಿ ಉದಯವಾದ ಮೊದಲನೆಯ ಮಾನವನು ಕಣ್ಣು ತೆರೆದು ಸುತ್ತಮುತ್ತಲೂ ನೋಡಿದಾಗ, ಅವನಿಗೆ ಗೋಚರವಾದ ಅದ್ಭುತಗಳು ಅನೇಕ; ಅನಂತ ಆಕಾಶದಲ್ಲಿ ನಿಶೆಯಲ್ಲಿ ಅವ್ಯಾಹತವಾಗಿ ಮಿನುಗುವ ಲಕ್ಷ ಲಕ್ಷ ನಕ್ಷತ್ರಗಳು; ಉಷಃಕಾಲದಲ್ಲಿ ಪ್ರತಿದಿನವೂ ತಪ್ಪದೆ ಪೂರ್ವದಿಶೆಯಲ್ಲಿ ಉದಯವಾಗುವ ಪ್ರಜ್ವಲ ಸುವರ್ಣ ವರ್ತಲ ಮಂಡಲ; ರಾತ್ರಿಯಲ್ಲಿ ಲಯಬದ್ಧವಾಗಿ ವೃದ್ಧಿ-ಕ್ಷಯಗಳನ್ನು ಹೊಂದುವ ರಜತವರ್ಣದ ಚಂದಿರ; ಸೋಜಿಗಮಯವಾದ ಅಣೋರಣೀಯ ಹಾಗೂ ಮಹತೋಮಹೀಯ ಅಸಂಖ್ಯಾತ ಸಜೀವ-ನಿರ್ಜೀವ ವಸ್ತುಗಳು, ಆಶ್ಚರ್ಯಕರವಾದ ಸಸ್ಯ ಹಾಗೂ ಪ್ರಾಣಿರಾಶಿಗಳು- ಇವುಗಳೆಲ್ಲವನ್ನೂ ಹೊತ್ತು ನಿಂತಿರುವ ಈ ಭೂಮಾತೆ. ಇವುಗಳನೆಲ್ಲ ನೋಡಿದ ಮಾನವನಲ್ಲಿ ಅನೇಕ ಪ್ರಶ್ನೆಗಳು ಸಹಜವಲ್ಲವೇ? ಇವೆಲ್ಲವೂ ಎಲ್ಲಿಂದ ಬಂದವು? ಇದನ್ನು ಸೃಷ್ಟಿಸಿ ನಡೆಸುತ್ತಿರುವ ಶಕ್ತಿ ಅದಾವುದು? ಇವುಗಳಿಗೆಲ್ಲ ಎಲ್ಲಿ ಅಂತ್ಯ? ಇನ್ನೂ ಇಂತಹ ಹಲವಾರು ಪ್ರಶ್ನೆಗಳು!

    ಇಂತಹ ಎಲ್ಲ ಪ್ರಶ್ನೆಗಳಿಗೆ ಮಾನವನು ಉತ್ತರವನ್ನು ಹುಡುಕಿದ್ದು ಮೊದಲು ಹೊರ ಜಗತ್ತಿನಲ್ಲಿ. ಸೃಷ್ಟಿಯ ಕುರಿತಾದ ಪ್ರಶ್ನೆಗಳಿಗೆ ಬಹಿಮುಖ ಅನ್ವೇಷಣೆಯಿಂದ ಉತ್ತರಗಳು ಸಿಕ್ಕುವುದಿಲ್ಲವೆಂದು ಮನಗಂಡ ಮಾನವನು ತನ್ನ ದೃಷ್ಟಿಯನ್ನು ಅಂತಮುಖಗೊಳಿಸಿ ಆಳವಾದ ಚಿಂತನೆಯಲ್ಲಿ ತೊಡಗಿದ. ಈ ರೀತಿಯಲ್ಲಿ ಸಾಮಾನ್ಯ ಮಾನವ ಜೀವಿಗಳಿಂದ, ಭೂಮಿಯಮೇಲೆ ಹರಿದಾಡುವ ಹುಳುಗಳಿಂದ ಉತ್ಪತ್ತಿಯಾಗುವ ಹಾರುವ ಪತಂಗಗಳಂತೆ, ಸಾಧಕರು ಹಾಗೂ ಋಷಿಪುಂಗವರು ಉಗಮವಾದರು. ಅವರು ಕಂಡುಕೊಂಡ ಉತ್ತರಗಳು ಪ್ರಾಯೋಗಿಕ ವಿದ್ಯಮಾನಗಳಾಗಿರದೇ, ಅಂತಃಸ್ಪುರಣದಿಂದ ಹೊರಹೊಮ್ಮಿದ ಸತ್ಯಗಳಾಗಿದ್ದವು; ಇವುಗಳನ್ನು ಆಕಸ್ಮಿಕ ಯೋಗದಿಂದ ಲಭ್ಯವಾದ ಮಹೋನ್ನತ ಫಲಗಳೆಂದಾದರೂ ಕರೆಯಬಹುದು.

    ಅಂತರಂಗದಲ್ಲಿ ಆಳವಾದ ಸಂಶೋಧನೆಯಿಂದ ಕಂಡುಕೊಂಡ ಮೊದಲನೆಯ ಸತ್ಯ- ಖಂಡಿತವಾಗಿ ಸೃಷ್ಟಿಮೂಲದಲ್ಲಿ ಒಂದು ಮಹಾದ್ಭುತ ಶಕ್ತಿ ಇರಲೇ ಬೇಕು, ಎಂಬುದು. ಎರಡನೆಯ ಸತ್ಯವೆಂದರೆ, ಈ ಶಕ್ತಿ ಪ್ರಜ್ಞಾರಹಿತವಾದದ್ದಲ್ಲ; ಏಕೆಂದರೆ ಇಂತಹ ನಿಯಮ-ಲಯಬದ್ಧ ಅತ್ಯದ್ಭುತ ಸೃಷ್ಟಿ ಒಂದು ಪ್ರಜ್ಞಾರಹಿತ ಚೈತನ್ಯದಿಂದ ಸಾಧ್ಯವಿಲ್ಲ; ಅದು ಪ್ರಜ್ಞಾಪೂರ್ಣ ಸೃಜನಾತ್ಮಕ ಚೈತನ್ಯವಾಗಿರಲೇಬೇಕು. ಋಷಿಗಳಿಗೆ ಗೋಚರವಾದ ಮೂರನೇ ಸತ್ಯ- ಈ ಚೈತನ್ಯಕ್ಕೆ ಆದಿ ಅಂತ್ಯಗಳಿಲ್ಲ; ಸೃಷ್ಟಿಯಲ್ಲಿ ಎಲ್ಲ ವಿದ್ಯಮಾನಗಳು ಚಕ್ರಗತಿಯಲ್ಲಿ ಪುನರಾವರ್ತನೆಯಾಗುತ್ತವೆ; ಅವು ದಿನ-ರಾತ್ರಿ, ಋತುಗಳು ಅಥವಾ ಜೀವನ-ಮರಣಗಳೇ ಆಗಿರಬಹುದು. ಇವುಗಳ ಆವರ್ತನೆಯ ಕಾಲ ಅಲ್ಪ ಅಥವಾ ದೀರ್ಘವಾಗಿರಬಹುದು, ಅಷ್ಟೆ. ಸೂಕ್ಷ್ಮವಾಗಿ ಅವಲೋಕಿಸಿದಾಗ ಒಬ್ಬ ವಿಜ್ಞಾನದ ವಿದ್ಯಾರ್ಥಿ, ಪ್ರಾಚೀನ ಕಾಲದ ಋಷಿಗಳು ಕಂಡುಕೊಂಡ ಅಂತಃಸ್ಪುರಣದ ಸತ್ಯಗಳು ಹಾಗೂ ಆಧುನಿಕ ವಿಜ್ಞಾನಿಗಳ ವೈಜ್ಞಾನಿಕ ವಿದ್ಯಮಾನಗಳ ಮಧ್ಯೆ ಇರುವ ಸಾಮ್ಯತೆಗಳನ್ನು ಕಂಡುಕೊಳ್ಳಬಹುದು. ಇದಕ್ಕೆ ನಿದರ್ಶನವಾಗಿ, ಆಧುನಿಕ ವಿಜ್ಞಾನಿಗಳು ಸೃಷ್ಟಿಯಲ್ಲಿ ಕಾಣುವ ವಸ್ತುಗಳು ಕೇವಲ ವಸ್ತುಗಳಾಗಿರದೆ, ಅವು ಚೈತನ್ಯರೂಪಗಳೇ ಎಂದು ಕಂಡುಕೊಂಡಿರುತ್ತಾರೆ; ವಸ್ತುವನ್ನು ಚೈತನ್ಯವಾಗಿ ಪರಿವರ್ತಿಸಬಹುದು (E=mc2 ನಿಯಮದಂತೆ); ಆದರೆ ಈ ಚೈತನ್ಯವನ್ನು ಒಂದು ರೂಪದಿಂದ ಇನ್ನೊಂದು ರೂಪಕ್ಕೆ ಪರಿವರ್ತಿಸಬಹುದೇ ಹೊರತು ಅದನ್ನು ಸೃಷ್ಟಿಸಲೂ ಸಾಧ್ಯವಿಲ್ಲ, ನಾಶಮಾಡಲೂ ಸಾಧ್ಯವಿಲ್ಲ. ಇದನ್ನೇ ಪ್ರಾಚೀನ ಋಷಿಗಳು ಕೂಡ, ಸೃಷ್ಟಿ ಸಂಪೂರ್ಣ ಚೈತನ್ಯಮಯವೆಂದು ಸ್ವಂತ ಅನುಭವದಿಂದ ಕಂಡುಕೊಂಡರು! ಆಧುನಿಕ ವೈಜ್ಞಾನಿಕ ಅಧ್ಯಯನ-ಸಂಶೋಧನೆಗಳಿಗಿಂತ ಎಷ್ಟೋ ಸಾವಿರಾರು ವರ್ಷಗಳ ಮೊದಲೇ ತೈತ್ತರೀಯ ಉಪನಿಷತ್ತು ಮೂಲಾಧಾರ ಪರಮೋಚ್ಚ ಚೈತನ್ಯಶಕ್ತಿಯನ್ನು ‘ಸತ್ಯಂ ಜ್ಞಾನಂ ಅನಂತಂ’ ಎಂದು ಉದ್ಘೋಷಿಸಿದೆ. ಎಂದರೆ ಈ ಚೈತನ್ಯಶಕ್ತಿಯ ಮೂರು ಲಕ್ಷಣಗಳು- ಅನಂತ ಅಸ್ತಿತ್ವ, ಪರಿಪೂರ್ಣ ಪ್ರಜ್ಞೆ ಹಾಗೂ ಶಾಶ್ವತ ಸತ್ಯಗಳು. ಆಧುನಿಕ ವಿಜ್ಞಾನಿಗಳು ಒಪ್ಪಿಕೊಳ್ಳುವಂತೆ, ಈ ಸೃಷ್ಟಿಯ ಮೂಲದಲ್ಲಿ ಒಂದು ಅದ್ಭುತ ಚೈತನ್ಯಶಕ್ತಿಯಿದೆ. ಆದರೆ ಈ ಶಕ್ತಿ ಪ್ರಜ್ಞಾಪೂರ್ಣವೋ ಅಥವಾ ಪ್ರಜ್ಞಾರಹಿತವೋ ಎಂಬುದರ ಬಗ್ಗೆ ವಿಜ್ಞಾನಿಗಳ ಮಧ್ಯೆ ಚರ್ಚೆ ಈಗಲೂ ಮುಂದುವರಿಯುತ್ತಿದೆ.

    ಆಧುನಿಕ ವಿಜ್ಞಾನದಲ್ಲಿ ಕಳೆದ ಶತಮಾನದಲ್ಲಿ ಉಗಮವಾದ ಕಣಚಲನ ಶಾಸ್ತ್ರ (Quantum Mechanics), ಸಾಪೇಕ್ಷ ಸಿದ್ಧಾಂತ (Theory of Relativity) ಹಾಗೂ ಏಕೀಕೃತ ಕ್ಷೇತ್ರ ಸಿದ್ಧಾಂತ (Unified Field Theory)ಗಳ ಆಧಾರದಲ್ಲಿ ವಿಶ್ವಕ್ಕೆ ಅಸ್ತಿಭಾರವಾಗಿರುವ ಒಂದು ‘ಕ್ಷೇತ್ರ’ದ (Field) ಇರುವಿಕೆಯಲ್ಲಿ ಹೆಚ್ಚು ಹೆಚ್ಚು ವಿಜ್ಞಾನಿಗಳು ಒಲವು ತೋರುತ್ತಿದ್ದಾರೆ. ಈ ಕ್ಷೇತ್ರವು ಗುರುತ್ವಾಕರ್ಷಣ, ವಿದ್ಯುತ್-ಕಾಂತೀಯ(Electromagnetic), ದುರ್ಬಲ ಅಣುಶಕ್ತಿ (Weak Nuclear Force) ಹಾಗೂ ಪ್ರಬಲ ಅಣುಶಕ್ತಿ (Strong Nuclear Force) ಎಂಬ ನಾಲ್ಕು ಶಕ್ತಿಗಳನ್ನು ಒಳಗೊಂಡಿದ್ದು, ಅಸಾಧಾರಣ ಬುದ್ಧಿಮತ್ತೆಯನ್ನು ಹೊಂದಿರುವುದು ವಿಜ್ಞಾನಿಗಳಿಗೆ ಗೋಚರವಾಗಿದೆ; ಈ ಕ್ಷೇತ್ರ ವಿಶ್ವದಲ್ಲಿರುವ ಎಲ್ಲ ವಸ್ತುಗಳ ಸೃಷ್ಟಿ, ಸ್ಥಿತಿ, ಲಯಗಳಿಗೆ ಕಾರಣವಾಗಿದೆ.

    ಈ ಸಂದರ್ಭದಲ್ಲಿ ನಾವು ನೆನಪಿಸಿಕೊಳ್ಳಬೇಕಾದ ಒಂದು ಸತ್ಯವಿದೆ. ಕೆಲವು ಶತಮಾನಗಳ ಹಿಂದೆ, ವಿಜ್ಞಾನಿಗಳು ಭೂಮಿ ಚಪ್ಪಟೆಯಾಗಿ ಇರುವುದೆಂದು ನಂಬಿದ್ದರು; ನಂತರವೇ ಸಂಶೋಧನೆಯಿಂದ ಭೂಮಿ ಗೋಳಾಕಾರವಾಗಿದೆಯೆಂದು ಕಂಡುಕೊಂಡರು. ವಿಜ್ಞಾನಿಗಳ ತಿಳಿವಳಿಕೆ ಕಾಲಕ್ರಮೇಣ ಬದಲಾಗುತ್ತಿರುವುದು ಎಲ್ಲರೂ ಒಪ್ಪಿಕೊಳ್ಳಬೇಕಾದ ವಿಷಯ. ಆದ್ದರಿಂದ ಸಹಸ್ರಾರು ವರ್ಷಗಳ ಹಿಂದೆ ನಮ್ಮ ಋಷಿಗಳು ದರ್ಶಿಸಿದ ಸತ್ಯವನ್ನು ಮುಂದೆ ವಿಜ್ಞಾನಿಗಳು ಕಂಡುಕೊಳ್ಳಬಹುದು. ಸನಾತನ ಧರ್ಮದಲ್ಲಿ ಈ ಸತ್ಯ, ನಿತ್ಯ ಹಾಗೂ ಪ್ರಜ್ಞಾಪೂರ್ಣ ಮೂಲ ಚೈತನ್ಯಶಕ್ತಿಯನ್ನು ‘ಬ್ರಹ್ಮ’ವೆಂದು ಕರೆಯುತ್ತಾರೆ. ಈ ಬ್ರಹ್ಮವಸ್ತುವಿಗೆ ಯಾವುದೇ ನಾಮ-ರೂಪಗಳಿಲ್ಲ, ಯಾವುದೇ ಗುಣ-ಲಕ್ಷಣಗಳು ಹಾಗೂ ದ್ವಂದ್ವ-ವ್ಯತ್ಯಾಸಗಳೂ ಇಲ್ಲ. ಇಂತಹ ಬ್ರಹ್ಮವಸ್ತುವಿನಿಂದ ಆವಿರ್ಭವಿಸಿದ ಈ ವಿಶ್ವದಲ್ಲಿ ಅತ್ಯದ್ಭುತವಾದ ನಾಮ-ರೂಪಗಳೂ, ಗುಣ-ಲಕ್ಷಣಗಳೂ ಹಾಗೂ ದ್ವಂದ್ವ-ವ್ಯತ್ಯಾಸಗಳೂ ಹೇಗೆ ಬಂದವು?

    ಇದನ್ನು ಅರ್ಥಮಾಡಿಕೊಳ್ಳಲು ಒಂದು ನಿದರ್ಶನವನ್ನು ತೆಗೆದುಕೊಳ್ಳೋಣ. ವಿದ್ಯುತ್ ಶಕ್ತಿ ಒಂದು ತಂತಿಯಲ್ಲಿ ಇಲೆಕ್ಟ್ರಾನ್​ಗಳ ಚಲನೆಯಿಂದ ಉಂಟಾಗುವ ಶಕ್ತಿಯಷ್ಟೆ. ಈ ಶಕ್ತಿಯನ್ನು ಒಂದು ವಿದ್ಯುತ್ ಬಲ್ಬ್​ನಲ್ಲಿ ಹಾಯಿಸಿದಾಗ ಬೆಳಕು ಬರುತ್ತದೆ; ಇದನ್ನು ಒಂದು ತಾಪಕ (Heater)ದಲ್ಲಿ ಹಾಯಿಸಿದಾಗ ಉಷ್ಣವುಂಟಾಗುತ್ತದೆ; ಇದೇ ವಿದ್ಯುತ್ ಶಕ್ತಿ ಒಂದು ಪಂಖದ ಮೂಲಕ ತಂಪಾದ ಗಾಳಿಯನ್ನು ಕೊಡುತ್ತದೆ. ಹೀಗೆ ಇಂತಹ ಅನೇಕ ಕಾರ್ಯಗಳನ್ನು ವಿದ್ಯುತ್ ಶಕ್ತಿ ಮಾಡುತ್ತದೆ. ಮೂಲ ವಿದ್ಯುತ್ ಶಕ್ತಿಯಲ್ಲಿ ಇಂತಹ ಯಾವುದೇ ಗುಣ-ಲಕ್ಷಣಗಳು ಇಲ್ಲವಷ್ಟೇ. ಇದೇ ರೀತಿಯಲ್ಲಿ ನಾಮ-ರೂಪರಹಿತ, ಗುಣ-ಲಕ್ಷಣರಹಿತ ಬ್ರಹ್ಮಶಕ್ತಿ ವಿಶ್ವದಲ್ಲಿ ಸೋಜಿಗಮಯವಾದ ವಿದ್ಯಮಾನಗಳಿಗೆ ಕಾರಣವಾಗಿದೆ, ಹಾಗೂ ಎಲ್ಲ ನಿರ್ಜೀವ-ಸಜೀವ ವಸ್ತುಗಳ ಸೃಷ್ಟಿ-ಸ್ಥಿತಿ-ಲಯಗಳಿಗೆ ಮೂಲವಾಗಿದೆ. ಈ ಸೃಷ್ಟಿಯಲ್ಲಿ ಉಪಪರಮಾಣು ಕಣ (Subatomic Particles))ಗಳ ಸಂಯೋಗದಿಂದ ಪರಮಾಣುಗಳೂ ಅವುಗಳಿಂದ ಅಣುಗಳೂ, ಮೂಲವಸ್ತುಗಳೂ, ಸಂಯುಕ್ತವಸ್ತುಗಳೂ ಉಂಟಾಗುತ್ತವೆ; ಇವುಗಳ ಸಂಯೋಗದಿಂದಲೇ ಎಲ್ಲ ಸಸ್ಯಗಳೂ ಜೀವರಾಶಿಗಳೂ ಉದ್ಭವವಾಗುತ್ತವೆ; ಮಾನವನೂ ಇಂತಹ ಒಂದು ಜೀವಿಯೇ. ಜೀವಿಗಳ ಮರಣದ ನಂತರ ಅವುಗಳ ಶರೀರ ವಿಯೋಜನೆ ಹೊಂದಿ (Disintegrate) ಪುನಃ ಉಪಪರಮಾಣುಗಳಾಗಿ ತದನಂತರ ಶಕ್ತಿರೂಪವನ್ನು ಪಡೆಯುತ್ತದೆ. ಈ ಆವರ್ತ ವಿದ್ಯಮಾನವು ವಿಶ್ವದಲ್ಲಿ ಪುನಃ ಪುನಃ ನಡೆಯುತ್ತಲೇ ಇದೆ. ಈ ಅಖಂಡ ಆವರ್ತನಕ್ರಿಯೆಯ ಕಾರಣದಿಂದಾಗಿ ಮೂಲ ಬ್ರಹ್ಮವಸ್ತುವಿಗೆ ಸೃಷ್ಟಿ-ಸ್ಥಿತಿ-ಲಯಗಳ ಲಕ್ಷಣವನ್ನು ಆರೋಪಿಸಲಾಗಿದೆ. ಈ ರೀತಿಯಲ್ಲಿ ನಾಮ-ರೂಪ-ಗುಣರಹಿತ ಬ್ರಹ್ಮವು ಈ ವೈವಿಧ್ಯಮಯವಾದ ವಿಶ್ವದ ರೂಪದಲ್ಲಿ ಅಭಿವ್ಯಕ್ತವಾಗಿದೆ. ಯಾವ ರೀತಿಯಲ್ಲಿ ಎಲ್ಲ ಆಭರಣಗಳೂ ಒಂದೇ ಸುವರ್ಣದ ವಿವಿಧ ರೂಪಗಳಾಗಿವೆಯೋ, ಅದೇ ರೀತಿಯಲ್ಲಿ ವಿಶ್ವದಲ್ಲಿರುವ ಎಲ್ಲ ಸಜೀವ-ನಿರ್ಜೀವ ವಸ್ತುಗಳು ಒಂದೇ ಬ್ರಹ್ಮವಸ್ತುವಿನ ನಾನಾ ರೂಪಗಳಾಗಿವೆ. ಇದು ಸನಾತನ ಧರ್ಮದ ಮೂಲ ಬೋಧನೆ. ಈ ಮೂಲ ‘ಬ್ರಹ್ಮ’ವೇ ಸನಾತನ ಧರ್ಮದಲ್ಲಿ ‘ಪರಮಾತ್ಮ’ ಅಥವಾ ‘ಭಗವಂತ’ ಎಂಬುದಾಗಿ ಕರೆಯಲ್ಪಟ್ಟಿದೆ. ಈ ಬ್ರಹ್ಮ ಲಿಂಗಾತೀತವೂ ಅಹುದು; ಬ್ರಹ್ಮವೂ ‘ಅವನೂ’ ಅಲ್ಲ; ‘ಅವಳೂ’ ಅಲ್ಲ; ಕೊನೆಗೆ ‘ಅದೂ’ ಅಲ್ಲ! ಬ್ರಹ್ಮವೆಂದರೆ ಬ್ರಹ್ಮವೇ!

    ಹಾಗಾದರೆ, ನಾವು ಆರಾಧಿಸುವ ದೇವ-ದೇವಿಯರು ಎಲ್ಲಿಂದ ಬಂದರು? ನಾವು ಪೂಜಿಸುವ ಪುರುಷ ದೇವತೆಗಳು, ಸ್ತ್ರೀ ದೇವತೆಗಳು, ಅರ್ಧನಾರೀಶ್ವರ ದೇವತೆಗಳು ಹಾಗೂ ಅರ್ಧನರ-ಅರ್ಧಪ್ರಾಣಿ ದೇವತೆಗಳು ಎಲ್ಲಿಂದ ಬಂದರು? ಇವರೆಲ್ಲರೂ ಹೇಗೆ ಬ್ರಹ್ಮವಾದಾರು? ಹಿಂದಿನ ಋಷಿಗಳಂತೆ ನಾವೂ ಬ್ರಹ್ಮವನ್ನು ಸಾಕ್ಷಾತ್ಕರಿಸಿಕೊಳ್ಳಲು ಸಾಧ್ಯವಿದೆಯೇ? ಉತ್ತರಗಳನ್ನು ಇದೇ ಅಂಕಣದಲ್ಲಿ ಮುಂದೆ ತಿಳಿಯೋಣ.

    (ಲೇಖಕರು ವಿದ್ವಾಂಸರು, ಸಂಸ್ಕೃತಿ ಚಿಂತಕರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts