More

    ಮಹಾಭಾಗ್ಯವಿದು ಮಾನವ ಜನ್ಮ…; ಅಮೃತ ಸಿಂಚನ ಅಂಕಣ

    ಮಹಾಭಾಗ್ಯವಿದು ಮಾನವ ಜನ್ಮ...; ಅಮೃತ ಸಿಂಚನ ಅಂಕಣನಮ್ಮ ಶಾಸ್ತ್ರಗಳು ಮಾನವ ಜನ್ಮದ ಉತ್ತುಂಗತೆಯನ್ನು ಕೊಂಡಾಡುವುದು ದೈಹಿಕ, ಮಾನಸಿಕ ಹಾಗೂ ಬೌದ್ಧಿಕ ಸಾಮರ್ಥ್ಯಗಳಿಗಾಗಿ ಮಾತ್ರ ಅಲ್ಲ; ತನ್ನ ದಿವ್ಯತೆಯನ್ನು ಸಾಕ್ಷಾತ್ಕರಿಸಿಕೊಳ್ಳಲು ಮಾನವನಲ್ಲಿ ಮಾತ್ರವಿರುವ ಆಧ್ಯಾತ್ಮಿಕ ಸಾಮರ್ಥ್ಯ ಮಾನವಜನ್ಮದ ಮಹೋನ್ನತ ಭಾಗ್ಯ.

    ಆತ್ಮಜ್ಞಾನಿಯಾದ ಗುರು ಪರಿಪೂರ್ಣ ನಿಸ್ವಾರ್ಥ ಹಾಗೂ ಅಪಾರ ಕರುಣೆಯ ಸಾಕಾರಮೂರ್ತಿ. ಆತ ಶಿಷ್ಯನನ್ನು ಸತ್ಯಸಾಕ್ಷಾತ್ಕಾರದೆಡೆಗೆ ಮುನ್ನಡೆಸಲು ಸದಾ ಸಿದ್ಧನಾಗಿರುತ್ತಾನೆ. ಆದ್ದರಿಂದಲೇ ಕಣ್ಣಿಗೆ ಕಾಣುವ ಇಂತಹ ಗುರುವನ್ನು, ಕಾಣದ ಭಗವಂತನಿಗಿಂತ ಮೇಲು ಎಂದು ಸ್ತುತಿಸುತ್ತಾರೆ. ಆದರೆ ಉತ್ತಮ ಗುರುವಿನ ಜೀವನ ಉತ್ತಮ ಶಿಷ್ಯರಿಲ್ಲದೆ ಸಂಪೂರ್ಣವಾಗುವುದಿಲ್ಲ. ಗುರುವಿನ ಜ್ಞಾನ ಶ್ರದ್ಧಾವಂತ ಶಿಷ್ಯನ ಅವಿರತ ಸಾಧನೆಯಲ್ಲಿ ಸಾಫಲ್ಯ ಪಡೆಯುತ್ತದೆ. ಶ್ರದ್ಧಾವಂತ ಶಿಷ್ಯನೆಂದರೆ ಯಾರು? ಇಂತಹ ಶಿಷ್ಯನ ಲಕ್ಷಣಗಳೇನು? ಯಾವ ಶಿಷ್ಯೋೕತ್ತಮನ ಜೀವನದಲ್ಲಿ ದಿವ್ಯತೆಯ ಸಾಕ್ಷಾತ್ಕಾರವಾಗುತ್ತದೆ? ಈ ಪ್ರಶ್ನೆಗಳಿಗೆ ಉತ್ತರವನ್ನು ಈ ಲೇಖನದಲ್ಲಿ ಕಂಡುಕೊಳ್ಳೋಣ.

    ಭೂಮಿ ಮೇಲಿರುವ ಸಕಲ ಜೀವರಾಶಿಗಳ ಪೈಕಿ ಮಾನವ ಜನ್ಮ ಅತ್ಯಂತ ಪವಿತ್ರ ಹಾಗೂ ದುರ್ಲಭವೆಂದು ಸನಾತನ ಧರ್ಮ ಸಾರುತ್ತದೆ. ಏಕೆಂದರೆ ಮಾನವಜೀವನದಲ್ಲಿ ಮಾತ್ರ ದೈವಸಾಕ್ಷಾತ್ಕಾರ ಪಡೆಯಲು ಸಾಧ್ಯವಿದೆ. ಇದನ್ನೇ ಶ್ರೀ ಆದಿಶಂಕರಾಚಾರ್ಯರು ವಿವೇಕಚೂಡಾಮಣಿಯಲ್ಲಿ ‘ಜಂತೂನಾಂ ನರಜನ್ಮ ದುರ್ಲಭಂ’ ಎಂದು ಹೇಳಿದ್ದಾರೆ. ಇಂತಹ ದುರ್ಲಭವಾದ ಮಾನವ ಜನ್ಮದಲ್ಲಿ ಮೋಕ್ಷದ ತೃಷೆ ಅಥವಾ ಮುಮುಕ್ಷತ್ವವು ಮತ್ತಷ್ಟು ದುರ್ಲಭ; ಇದಕ್ಕಿಂತ ಹೆಚ್ಚು ದುರ್ಲಭವೆಂದರೆ, ಆತ್ಮಜ್ಞಾನಿಗಳಾದ ಮಹಾಪುರುಷರ ಸಾನ್ನಿಧ್ಯ ಹಾಗೂ ಆಶ್ರಯ. ಸಸ್ಯಗಳಿಗೆ ಹಾಗೂ ಇತರ ಜೀವರಾಶಿಗಳಿಗೆ ಹೋಲಿಸಿದಾಗ ಮಾನವ ಜನ್ಮ ಶ್ರೇಷ್ಠ ಎಂಬುದರಲ್ಲಿ ಆಶ್ಚರ್ಯವೇನೂ ಇಲ್ಲ. ಆದರೆ ಹೆಚ್ಚಿನವರ ಗ್ರಹಿಕೆಯಲ್ಲಿ ಮಾನವ ಜನ್ಮದ ವೈಶಿಷ್ಟ್ಯ ಕೇವಲ ಮಾನವನ ಹಲವು ದೈಹಿಕ, ಮಾನಸಿಕ ಹಾಗೂ ಬೌದ್ಧಿಕ ಸಾಮರ್ಥ್ಯಗಳಿಗೆ ಸೀಮಿತವಾಗಿರುತ್ತದೆ. ಉದಾಹರಣೆಗೆ, ತನ್ನ ಎರಡು ಪಾದಗಳ ಮೇಲೆ ನಿಂತು ನಡೆದಾಡುವ ಸಾಮರ್ಥ್ಯ, ಹಲವು ಭಾಷೆಗಳನ್ನು ಮಾತನಾಡುವ ಶಕ್ತಿ, ಅಸಾಧಾರಣವಾದ ಬುದ್ಧಿಮತ್ತೆ ಹಾಗೂ ಹೊಸ ವಸ್ತು-ವಿಷಯ-ಸಾಧನೆಗಳ ಆವಿಷ್ಕಾರ, ಇತ್ಯಾದಿ. ಆದರೆ ನಮ್ಮ ಶಾಸ್ತ್ರಗಳು ಮಾನವ ಜನ್ಮದ ಉತ್ತುಂಗತೆಯನ್ನು ಕೊಂಡಾಡುವುದು ದೈಹಿಕ, ಮಾನಸಿಕ ಹಾಗೂ ಬೌದ್ಧಿಕ ಸಾಮರ್ಥ್ಯಗಳಿಗಾಗಿ ಮಾತ್ರ ಅಲ್ಲ; ತನ್ನ ದಿವ್ಯತೆಯನ್ನು ಸಾಕ್ಷಾತ್ಕರಿಸಿಕೊಳ್ಳಲು ಮಾನವನಲ್ಲಿ ಮಾತ್ರವಿರುವ ಆಧ್ಯಾತ್ಮಿಕ ಸಾಮರ್ಥ್ಯ ಮಾನವಜನ್ಮದ ಮಹೋನ್ನತ ಭಾಗ್ಯ.

    ವಿಶ್ವದಲ್ಲಿರುವ ಸಕಲ ನಿರ್ಜೀವ ಹಾಗೂ ಸಜೀವ ವಸ್ತುಗಳು ಭಗವಂತನ ಪ್ರತಿರೂಪಗಳೇ- ಎಂಬುದು ಸನಾತನಧರ್ಮದ ಸಾರಸರ್ವಸ್ವ. ಆದರೆ ತಾನು ಭಗವಂತನೇ ಎಂದು ಅರಿಯುವ ಸಾಮರ್ಥ್ಯ ಹಾಗೂ ಅವಕಾಶಗಳಿರುವುದು ಮಾನವರಿಗೆ ಮಾತ್ರ; ಈ ಭಾಗ್ಯ ಯಾವುದೇ ಇತರ ಲಕ್ಷೋಪಲಕ್ಷ ಜೀವಿಗಳಿಗೆ ಇಲ್ಲ. ಯೋಗಸಾಧನೆಗಳನ್ನು ಮಾಡಿ ಅಂತರಂಗದಲ್ಲಿರುವ ದಿವ್ಯತೆಯನ್ನು ಸಾಕ್ಷಾತ್ಕಾರ ಮಾಡಿಕೊಂಡು ಅದನ್ನು ಅನುಭವಿಸಲು ಅನಿವಾರ್ಯವಾದ ನೇರವಾದ ಬೆನ್ನುಮೂಳೆ (Erect Spine) ಇರುವುದು ಮಾನವರಲ್ಲಿ ಮಾತ್ರ. ಇದಕ್ಕಿಂತಲೂ ಮುಖ್ಯವಾಗಿ ಆತ್ಮಾನ್ವೇಷಣೆ ಮಾಡಲು ಪ್ರಜ್ಞಾಪೂರ್ವಕ ಸತತ ಸಾಧನೆಗಳಲ್ಲಿ ತೊಡಗುವ ಸಾಮರ್ಥ್ಯ ಮಾನವನ ಅಂತರಂಗದಲ್ಲಿ ಮಾತ್ರ ಹುದುಗಿದೆ.

    ‘ಇಂದು ನಮ್ಮ ಭೂಮಿಯಲ್ಲಿ 780 ಕೋಟಿ ಮಾನವರಿದ್ದಾರೆ ಮತ್ತು ವರ್ಷದಿಂದ ವರ್ಷಕ್ಕೆ ಮಾನವ ಜನಸಂಖ್ಯೆ ಬೆಳೆಯುತ್ತಲೇ ಇದೆ. ಹೀಗಿರುವಾಗ ಮಾನವಜನ್ಮ ದುರ್ಲಭವೆಂದು ಹೇಳುವುದರಲ್ಲಿ ಏನು ಅರ್ಥವಿದೆ?’ ಎಂದು ಕೆಲವರು ವಾದಿಸಬಹುದು. ಆದರೆ ಕೇವಲ ನೇರವಾದ ಬೆನ್ನುಮೂಳೆ ಮಾನವನ ವಿಶಿಷ್ಟತೆಯಲ್ಲ; ಅದಕ್ಕಿಂತಲೂ ಮುಖ್ಯವಾಗಿ ದೈವಸಾಕ್ಷಾತ್ಕಾರ ಮಾಡಿಕೊಳ್ಳಲೇಬೇಕೆಂಬ ಮುಮುಕ್ಷತ್ವ ಅತ್ಯಂತ ದುರ್ಲಭ. ಕೇವಲ ಆಹಾರ, ನಿದ್ರೆ, ಭಯ, ಮೈಥುನಗಳಲ್ಲೇ ಮುಳುಗಿ ಹೋದ ಮಾನವರು ಇತರ ಪಶುಗಳಿಗಿಂತ ಯಾವುದೇ ರೀತಿಯಲ್ಲಿ ಉತ್ತಮರಲ್ಲ. ನಮ್ಮ ಶಾಸ್ತ್ರಗಳು ಇಂತಹ ಮಾನವರನ್ನು ‘ನರಪಶು’ಗಳೆಂದು ಕರೆಯುತ್ತವೆ. ಜಗತ್ತಿನಲ್ಲಿ ಮುಮುಕ್ಷತ್ವ ಹೊಂದಿದ ಮಾನವರು ಬಹಳ ದುರ್ಲಭ. ಇದನ್ನೇ ಭಗವದ್ಗೀತೆಯಲ್ಲಿ ಶ್ರೀ ಕೃಷ್ಣನು, ‘ಮನುಷ್ಯಾಣಾಂ ಸಹಸ್ರೇಷು ಕಶ್ಚಿದ್ಯತತಿ ಸಿದ್ಧಯೇ, ಯತತಾಮಪಿ ಸಿದ್ಧಾನಾಂ ಕಶ್ಚಿನ್ಮಾಂ ಚೇತ್ತಿ ತತ್ವತಃ’ ಎಂದು ಘೊಷಿಸಿದ್ದಾನೆ. ಅಂದರೆ ಸಹಸ್ರ ಸಹಸ್ರ ಮಾನವರಲ್ಲಿ ಯಾರೋ ಒಬ್ಬರು ಮಾತ್ರ ಆತ್ಮಸಿದ್ಧಿಗಾಗಿ ಪ್ರಯತ್ನಿಸುತ್ತಾರೆ. ಇಂತಹ ಸಹಸ್ರಾರು ಸಾಧಕರ ಪೈಕಿ ಯಾರೋ ಒಬ್ಬರು ಮಾತ್ರ ಸಿದ್ಧಿಯನ್ನು ಪಡೆಯುತ್ತಾರೆ. ಇಂತಹ ಸಾವಿರಾರು ಸಿದ್ಧರ ಪೈಕಿ ಯಾರೋ ಒಬ್ಬರು ಮಾತ್ರ ಭಗವಂತನನ್ನು ಸತ್ಯವಾಗಿ ಅರಿಯುತ್ತಾರೆ. ಆದ್ದರಿಂದ ಕೇವಲ ಮಾನವಜನ್ಮ ಪಡೆಯುವುದು ವಿರಳವಲ್ಲ; ಮಾನವನಾಗಿ ಜನಿಸಿ ಸತ್ಯಾನ್ವೇಷಣೆ ಹಂಬಲವನ್ನು ಬೆಳೆಸಿಕೊಳ್ಳುವುದು ವಿರಳ; ಅದಕ್ಕಿಂತ ಸತ್ಯಸಾಕ್ಷಾತ್ಕಾರ ಮಾಡಿಕೊಳ್ಳುವುದು ವಿರಳಾತಿವಿರಳ. ‘ಮಹಾಭಾಗ್ಯವಿದು ಮಾನವಜನ್ಮ’ ಎಂಬ ಮಾತು ಆತ್ಮಜ್ಞಾನಿಗಳ ಜೀವನದಲ್ಲಿ ಸಂಪೂರ್ಣ ಸಾರ್ಥಕತೆ ಪಡೆಯುತ್ತದೆ. ಮಾನವಜನ್ಮ ಪಡೆದು, ಆತ್ಮಜ್ಞಾನದ ತೃಷೆಯನ್ನು ಒಮ್ಮೆಯಾದರೂ ಅನುಭವಿಸದಿದ್ದರೆ ಅದು ಮಹಾದೌರ್ಭಾಗ್ಯವಲ್ಲವೇ?

    ಆತ್ಮಸಾಕ್ಷಾತ್ಕಾರಕ್ಕಾಗಿ ಹಂಬಲಿಸುವ ವ್ಯಕ್ತಿಗೆ ಆತ್ಮಜ್ಞಾನಿಯಾದ ಮಹಾಪುರುಷನ ಸಾನ್ನಿಧ್ಯ ಹಾಗೂ ಮಾರ್ಗದರ್ಶನ ಅಗತ್ಯ. ಆದಿಶಂಕರಾಚಾರ್ಯರು ವಿವೇಕಚೂಡಾಮಣಿಯಲ್ಲಿ ವರ್ಣಿಸಿದ ಗುರುವಿನ ಲಕ್ಷಣಗಳನ್ನು ಹಿಂದಿನ ಲೇಖನದಲ್ಲಿ ತಿಳಿದುಕೊಂಡಿದ್ದೇವೆ. ಅದೇ ರೀತಿಯಲ್ಲಿ, ಗುರುವಿನ ಸಾನ್ನಿಧ್ಯದ ಸಂಪೂರ್ಣ ಲಾಭ ಪದೆದುಕೊಳ್ಳಲು ಶಿಷ್ಯನಲ್ಲಿಯೂ ಕೆಲವು ಲಕ್ಷಣಗಳಿರಬೇಕು. ಶ್ರೀ ಆದಿಶಂಕರರು ಹೇಳಿರುವಂತೆ ಒಬ್ಬ ಉತ್ತಮ ಶಿಷ್ಯನ ಲಕ್ಷಣಗಳು ಹೀಗಿವೆ. 1. ವಿವೇಕ- ಯಾವುದು ಶಾಶ್ವತ ಯಾವುದು ಅಶಾಶ್ವತ ಎಂಬುದರ ಬಗ್ಗೆ ವಿವೇಚನೆ ಅಥವಾ ಲೌಕಿಕ ಜೀವನದ ಅನಿತ್ಯತೆ ಹಾಗೂ ಭಗವಂತನ ನಿತ್ಯತೆಗಳ ಬಗ್ಗೆ ತಿಳಿವಳಿಕೆ. 2. ವೈರಾಗ್ಯ- ಪ್ರಾಪಂಚಿಕ ವಿಷಯಭೋಗಗಳಲ್ಲಿ ಅನಾಸಕ್ತಿ. 3. ಷಟ್-ಸಂಪತ್ತಿ – ಶಮ (ಮನೋನಿಗ್ರಹ), ದಮ (ಇಂದ್ರಿಯ ನಿಗ್ರಹ), ಉಪರತಿ (ಇಂದ್ರಿಯ ಹಾಗೂ ಮನಸ್ಸುಗಳನ್ನು ಅಂತಮುಖ ಮಾಡುವ ಶಕ್ತಿ), ತಿತೀಕ್ಷೆ (ಸಹನಶೀಲತೆ), ಶ್ರದ್ಧೆ (ಗುರು ಹಾಗೂ ಶಾಸ್ತ್ರವಾಕ್ಯಗಳಲ್ಲಿ ಪರಿಪೂರ್ಣ ನಂಬಿಕೆ) ಹಾಗೂ ಸಮಾಧಾನ (ಸಮತ್ವ). 4. ಮುಮುಕ್ಷತ್ವ- ಮೋಕ್ಷವನ್ನು ಪಡೆಯಬೇಕೆಂಬ ತೀವ್ರ ಆಕಾಂಕ್ಷೆ. ಈ ಮೇಲಿನ ಲಕ್ಷಣಗಳನ್ನು ಹೊಂದಿರುವ ಶಿಷ್ಯನು ಮಾತ್ರ ಗುರುವಿನ ಸಂಪೂರ್ಣ ಅನುಗ್ರಹ ಪಡೆದು ಆತ್ಮಸಾಕ್ಷಾತ್ಕಾರ ಹೊಂದುತ್ತಾನೆ.

    ತೀವ್ರ ಲೌಕಿಕ ಹಾಗೂ ಅತಿಯಾದ ಭೋಗಲಾಲಸೆಗಳಲ್ಲಿ ಮುಳುಗಿ ಹೋಗಿರುವ ಇಂದಿನ ಪ್ರಪಂಚದಲ್ಲಿ ಇಂತಹ ಶಿಷ್ಯರು ಅತಿ ವಿರಳ. ಆದರೆ ಕೆಲವು ಸಾವಿರ ವರ್ಷಗಳ ಹಿಂದೆ ಪ್ರಾಚೀನ ಭಾರತದಲ್ಲಿ ಗುರುಕುಲ ಶಿಕ್ಷಣ ವ್ಯವಸ್ಥೆ ಪ್ರಚಲಿತವಾಗಿದ್ದಾಗ ಪರಿಸ್ಥಿತಿ ಇಷ್ಟು ಶೋಚನೀಯವಾಗಿರಲಿಲ್ಲ. ಏಕೆಂದರೆ ಗುರುಕುಲದಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ಬಾಲ್ಯದಲ್ಲಿಯೇ ಆಧ್ಯಾತ್ಮಿಕ ಜೀವನದ ಮೂಲತತ್ತ್ವಗಳನ್ನು ಬೋಧಿಸಲಾಗುತ್ತಿತ್ತು. ಗುರುಕುಲದ ಪ್ರಾಚಾರ್ಯ ಆತ್ಮಜ್ಞಾನಿಯಾಗಿದ್ದು, ಲೌಕಿಕ ವಿಷಯಗಳಲ್ಲಿಯೂ ಪರಿಣಿತನಾಗಿರುತ್ತಿದ್ದ. ಇಂತಹ ಗುರು ತನ್ನ ಶಿಷ್ಯರಿಗೆ ಲೌಕಿಕ ವಿದ್ಯೆ (ಅಪರಾ ವಿದ್ಯೆ) ಹಾಗೂ ಆಧ್ಯಾತ್ಮಿಕ ವಿದ್ಯೆ (ಪರಾ ವಿದ್ಯೆ) ಗಳೆರಡನ್ನೂ ಬೋಧಿಸುತ್ತಿದ್ದ. ಆದ್ದರಿಂದ ಅಂದಿನ ಸಮಾಜದಲ್ಲಿ ಲೌಕಿಕ ಜೀವನ ಆಧ್ಯಾತ್ಮಿಕ ಮೌಲ್ಯಗಳ ಬುನಾದಿಯ ಮೇಲೆ ವ್ಯವಸ್ಥಿತವಾಗಿತ್ತು. ಆಗ ತಂದೆ-ತಾಯಿಯರು ಮಕ್ಕಳಿಗೆ ಏಳೆಂಟು ವರ್ಷ ತುಂಬುತ್ತಿದ್ದಂತೆ ಗುರುಕುಲಗಳಿಗೆ ಸೇರಿಸುತ್ತಿದ್ದರು; ಕನಿಷ್ಠ ಹತ್ತು-ಹನ್ನೆರಡು ವರ್ಷವಾದರೂ ಮಕ್ಕಳು ಗುರುಕುಲಗಳಿಂದ ಹಿಂತಿರುಗುತ್ತಿರಲಿಲ್ಲ. ಹೀಗೆ ತಂದೆ-ತಾಯಿಯರಿಂದ ದೂರವಿದ್ದ ಮಕ್ಕಳ ಮೇಲೆ ಗುರುವಿನ ವ್ಯಕ್ತಿತ್ವದ ಪ್ರಭಾವ ಅಚ್ಚಳಿಯದೆ ಬೀಳುತ್ತಿತ್ತು. ಶಿಷ್ಯರ ಮನೋಭಾವನೆ ಹಾಗೂ ಸಾಮರ್ಥ್ಯಗಳನ್ನು ಅರ್ಥಮಾಡಿಕೊಂಡ ಗುರುವಿಗೆ, ಅವರ ಶಿಕ್ಷಣದಲ್ಲಿ ಸಂಪೂರ್ಣ ಸ್ವಾತಂತ್ರ್ಯತ್ತು. ಪೂರ್ಣ ಸನಿವಾಸ ಶಿಕ್ಷಣಕೇಂದ್ರಗಳಾದ ಗುರುಕುಲಗಳಲ್ಲಿ ತಂದೆ-ತಾಯಿಯರು ಯಾವುದೇ ಶುಲ್ಕ ನೀಡಬೇಕಾಗಿರಲಿಲ್ಲ; ಶಿಕ್ಷಣ ವ್ಯವಸ್ಥೆ ಸಂಪೂರ್ಣ ಉಚಿತವಾಗಿತ್ತು. ಆದ್ದರಿಂದ ಸಮಾಜದಲ್ಲಿ ಹುಟ್ಟಿದ ಪ್ರತಿ ಮಗುವಿಗೂ ಸಮಾನವಾದ ಶಿಕ್ಷಣ ಲಭ್ಯವಾಗುತ್ತಿತ್ತು. ಕಾಲಾನುಕ್ರಮೇಣ, ದೌರ್ಭಾಗ್ಯವಶಾತ್ ಇಂತಹ ಸಂಸ್ಕೃತಿ ಸ್ವಾರ್ಥ ಹಾಗೂ ಲೌಕಿಕತೆಗಳಿಂದಾಗಿ ಕಳೆದುಹೋಯಿತು.

    ಶಿಕ್ಷಣದ ಸಮಾನಾವಕಾಶಗಳ ಆಧಾರದ ಮೇಲೆ ನಿಂತಿದ್ದ ಮಾನವ ಸಮಾಜದಲ್ಲಿ ಸುವ್ಯವಸ್ಥಿತ ಸಮಾನತೆ ಸಹಜವಾಗಿತ್ತು. ಶಿಕ್ಷಣದ ವ್ಯವಸ್ಥೆಯಲ್ಲಿ ಹಣವನ್ನು ಕೊಟ್ಟು-ತೆಗೆದುಕೊಳ್ಳುವ ವ್ಯಾಪಾರೀ ಮನೋಭಾವ ಪ್ರವೇಶಿಸಿದ್ದರಿಂದ, ಹಲವು ದುರ್ಬಲ ವರ್ಗಗಳ ಜನರು ಇಂತಹ ಲೌಕಿಕ ಹಾಗೂ ಆಧ್ಯಾತ್ಮಿಕ ವಿದ್ಯೆಗಳ ಸುಂದರ ಸಮನ್ವಯವಾಗಿದ್ದ ಶಿಕ್ಷಣದಿಂದ ವಂಚಿತರಾದರು. ಇದರಿಂದಾಗಿ ಸಾಮಾಜಿಕ ಸಮಾನತೆ ಕಳೆದುಹೋಯಿತು.

    ಇಂದಿನ ಪ್ರಪಂಚದ ಎಲ್ಲ ಸಮಸ್ಯೆಗಳಿಗೆ ಶಾಶ್ವತ ಪರಿಹಾರವು ಸನಾತನಧರ್ಮದ ಬೋಧನೆಗಳಲ್ಲಿದೆ. ಸೃಷ್ಟಿಯಲ್ಲಿ ಎಲ್ಲ ಜನರು ಭಗವಂತನ ಪ್ರತಿರೂಪಗಳೇ ಆಗಿರುವಾಗ ಎಲ್ಲರಿಗೂ ಸಮಾನವಾದ ಅವಕಾಶಗಳು ಲಭ್ಯವಾಗಬೇಕು. ಆಧ್ಯಾತ್ಮಿಕ ಮೌಲ್ಯಗಳ ಆಧಾರದಲ್ಲಿ, ಎಲ್ಲರೂ ಜೀವನವನ್ನು ನಡೆಸಿದಾಗ ಅವರ ಅಂತರಂಗಗಳಲ್ಲಿ ನಿಜವಾದ ಶಾಂತಿ-ನೆಮ್ಮದಿ ನೆಲೆಸುತ್ತವೆ. ಇಂತಹ ಸಮಾಜದಲ್ಲಿ ಶಾಂತಿ, ಸಮರಸ, ಭದ್ರತೆಗಳು ಸಹಜವಲ್ಲವೇ? ಸರ್ವಸೃಷ್ಟಿಯನ್ನು ಪರಮಾತ್ಮನ ಪ್ರತಿರೂಪವೇ ಎಂದು ನೋಡುವ ಅರಿವಿನಿಂದ ಎಲ್ಲರಲ್ಲಿಯೂ ಪ್ರೀತಿ-ಗೌರವಗಳು ಸ್ವಯಂಸಿದ್ಧವಾಗುತ್ತವೆ. ಇಂತಹ ಸಾರ್ಥಕ ಜೀವನ ನಡೆಸಿ ಎಲ್ಲರೂ ಸುಖವಾಗಿ ಬಾಳಬೇಕೆಂಬುದೇ ಸನಾತನ ಧರ್ಮದ ಆಶಯವಾಗಿದೆ.

    ಜೀವನದಲ್ಲಿ ಆಧ್ಯಾತ್ಮಿಕ ಮೌಲ್ಯಗಳ ಆಚರಣೆಯಿಂದ ಎಲ್ಲರಿಗೂ ಸುಖ-ಸಂತೃಪ್ತಿ ಸಹಜವಾಗಿ ಸಿದ್ಧಿಸುತ್ತವೆ. ಹೀಗಿರುವಾಗ, ಏಕೆ ಎಲ್ಲರಲ್ಲಿಯೂ ಆಧ್ಯಾತ್ಮಿಕ ತೃಷೆ ಸಹಜವಾಗಿ ಬರುವುದಿಲ್ಲ? ಸನಾತನಧರ್ಮದ ಇಂತಹ ಉನ್ನತ ಬೋಧನೆಗಳನ್ನು ಆಚರಿಸಲು ಹೇಗೆ ಹಾಗೂ ಎಲ್ಲಿಂದ ತಡೆಯುಂಟಾಗುತ್ತಿದೆ? ಇದನ್ನು ಮುಂದಿನ ಲೇಖನದಲ್ಲಿ ತಿಳಿಯೋಣ.

    (ಲೇಖಕರು ವಿದ್ವಾಂಸರು, ಸಂಸ್ಕೃತಿ ಚಿಂತಕರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts