More

    ಪ್ರಶ್ನೆ- ಕಿಂ ಕಾರಣಂ? ಉತ್ತರ- ಕಿಂ ಕಾರಣಂ!

    ಪ್ರಶ್ನೆ- ಕಿಂ ಕಾರಣಂ? ಉತ್ತರ- ಕಿಂ ಕಾರಣಂ!ನೆರೆಯ ದಕ್ಷಿಣ ಕೊರಿಯಾ ಅಗಾಧ ಆರ್ಥಿಕ ಅಭ್ಯುದಯ ಸಾಧಿಸಿ, ಪೂರ್ವ ಏಷ್ಯಾದ ನಾಲ್ಕು ಮರಿಹುಲಿಗಳಲ್ಲೊಂದು ಎಂಬ ಹೆಗ್ಗಳಿಕೆಗೆ ದಶಕಗಳ ಹಿಂದೆಯೇ ಪಾತ್ರವಾದರೆ, ಉತ್ತರ ಕೊರಿಯಾದ್ದು ಈ ದುಸ್ಥಿತಿಯೇಕೆ? ಉತ್ತರ ಕೊರಿಯಾ ಈ ಸ್ಥಿತಿಗೆ ತಲುಪಲು ಸರ್ವಾಧಿಕಾರಿ ಕಿಂನ ತಲೆಕೆಟ್ಟ ಯೋಜನೆಗಳು ಪ್ರಮುಖ ಕಾರಣ.

    ಕೆಲವು ವ್ಯಕ್ತಿಗಳ ರೂಪ-ಆಕಾರಕ್ಕೂ, ಅವರ ಹೆಸರುಗಳಿಗೂ ಹೊಂದಿಕೆಯೇ ಆಗದಿರುವುದನ್ನು ನೀವು ಗಮನಿಸಿರಬಹುದು. ಭೀಮ ಎಂದು ಹೆಸರಿಟ್ಟುಕೊಂಡವನು ನರಪೇತಲನಾಗಿರಬಹುದು, ರಾಮ ಎಂಬ ನಾಮಾಂಕಿತ ರಾವಣನ ಅಪರಾವತಾರವಾಗಿರಬಹುದು. ಈ ವೈರುಧ್ಯವನ್ನು ಕೆಲವು ದೇಶಗಳಲ್ಲೂ ಕಾಣಬಹುದು. ಪ್ರಜಾಪ್ರಭುತ್ವವಾದಿ ಎಂದು ಕರೆದುಕೊಳ್ಳುವ ದೇಶಗಳಲ್ಲಿ ಪ್ರಜಾಪ್ರಭುತ್ವದ ಲವಲೇಶವೂ ಇಲ್ಲದೆ ಅಲ್ಲಿನ ಜನತೆ ಕಟು ನಿರಂಕುಶಾಧಿಕಾರದಲ್ಲಿ ನರಳುತ್ತಿರುತ್ತಾರೆ, ಜನತಾ ಗಣರಾಜ್ಯ ಹೆಸರಿನ ದೇಶಗಳಲ್ಲಿನ ಜನತೆಗೆ ತಮ್ಮ ಸರ್ಕಾರವನ್ನು ತಾವೇ ಆಯ್ಕೆ ಮಾಡುವ ಸ್ವಾತಂತ್ರ್ಯವೇ ಇರುವುದಿಲ್ಲ. ಇನ್ನು ಪ್ರಜಾಪ್ರಭುತ್ವವಾದಿ, ಜನತಾ ಗಣರಾಜ್ಯ ಎಂದು ಹೆಸರಿಟ್ಟುಕೊಂಡವುಗಳಲ್ಲಿ ಪ್ರಜಾಪ್ರಭುತ್ವವೂ ಇರುವುದಿಲ್ಲ ಮತ್ತು ಜನತೆಯನ್ನು ಕೇಳುವವರೇ ಇರುವುದಿಲ್ಲ. ಇದಕ್ಕೆ ಅತ್ಯುತ್ತಮ ಉದಾಹರಣೆ ‘ಡೆಮೋಕ್ರಾಟಿಕ್ ಪೀಪಲ್ಸ್ ರಿಪಬ್ಲಿಕ್ ಆಫ್ ಕೊರಿಯಾ’ ಎಂದು ಹೆಸರಿಟ್ಟುಕೊಂಡಿರುವ ಉತ್ತರ ಕೊರಿಯಾ. ಇಲ್ಲಿನ ಜನಕ್ಕೆ ಆಸ್ತಿಯಿರಲಿ ತಮಗೆ ಬೇಕಾದಂತೆ ಕೇಶವಿನ್ಯಾಸ ಮಾಡಿಕೊಳ್ಳಲೂ ಸ್ವಾತಂತ್ರ್ಯವಿಲ್ಲ. ಸರ್ಕಾರ ಹೇಳುವ ಹದಿನಾಲ್ಕು ಕೇಶವಿನ್ಯಾಸಗಳನ್ನಷ್ಟೇ ಮಹಿಳೆಯರು ಆಯ್ಕೆ ಮಾಡಿಕೊಳ್ಳಬಹುದಾದರೆ ಪುರುಷರು ತಲೆಗೂದಲನ್ನು ಐದು ಸೆಂಟಿಮೀಟರ್​ಗಿಂತ ಹೆಚ್ಚು ಬೆಳೆಸಕೂಡದು. ಈ ನಿಯಮಗಳನ್ನು ಮೀರಿದರೆ ಶಿಕ್ಷೆ ಖಂಡಿತ! ಇದು ಇಷ್ಟಕ್ಕೇ ನಿಲ್ಲುವುದಿಲ್ಲ. ಜನ ವಿದೇಶಗಳಿಗೆ ಪಯಣಿಸುವಂತಿಲ್ಲ, ಅಂತಾರಾಷ್ಟ್ರೀಯ ಕರೆ ಮಾಡುವಂತಿಲ್ಲ, ಇಂಟರ್​ನೆಟ್ ಬಳಸುವಂತಿಲ್ಲ, ಬಿಸಿನೀರಿನ ಸ್ನಾನ ಮಾಡುವಂತಿಲ್ಲ! ಎರಡೂವರೆ ಕೋಟಿ ಜನಸಂಖ್ಯೆಯ ಆ ಪೂರ್ವ ಏಷ್ಯನ್ ದೇಶದಲ್ಲಿ ಒಂದು ಕೋಟಿ ಜನರು ಪೌಷ್ಟಿಕಾಂಶಗಳ ಆಹಾರದ ಕೊರತೆಯಿಂದ ಬಳಲುತ್ತಿದ್ದಾರೆ, ಉಳಿದವರಲ್ಲಿ ಬಹುತೇಕರಿಗೆ ದಿನಕ್ಕೆ ಎರಡು ಊಟಗಳಷ್ಟೇ ದೊರೆಯುತ್ತಿವೆ. ಅಲ್ಲಿನ ಸರ್ವಾಧಿಕಾರಿಯ ಬದುಕು ಹೇಗಿದೆ? ಆತ ತಾನು ತಿನ್ನಲು ಇರಾನ್​ನಿಂದ ಕೆವಿಯರ್ ಮೀನುಮೊಟ್ಟೆಗಳನ್ನೂ, ಕುಡಿಯಲು ಬ್ರೆಝಿಲ್​ನಿಂದ ಕಾಫಿಯನ್ನೂ, ಅಮೆರಿಕ ಮತ್ತು ಜರ್ಮನಿಯಿಂದ ವಿವಿಧ ಬಗೆಯ ಮದ್ಯಗಳನ್ನೂ ತರಿಸಿಕೊಳ್ಳುತ್ತಾನೆ! ಕೇವಲ 724 ಕಿಲೋಮೀಟರ್ ಉದ್ದದ ಟಾರ್ ರಸ್ತೆಗಳಿರುವ ದೇಶದಲ್ಲಿ ಸ್ವಂತ ಉಪಯೋಗಕ್ಕೆಂದು ನೂರು ಕಾರುಗಳನ್ನು ಇಟ್ಟುಕೊಂಡಿದ್ದಾನೆ! ಉಪಗ್ರಹಗಳು ರಾತ್ರಿ ಹೊತ್ತಿನಲ್ಲಿ ತೆಗೆದ ಚಿತ್ರಗಳಲ್ಲಿ ಉತ್ತರ ಕೊರಿಯಾ ಕಡುಗಪ್ಪಾಗಿ ಕಾಣುತ್ತದೆ. ಯಾಕೆಂದರೆ ಅಲ್ಲಿ ವಿದ್ಯುಚ್ಛಕ್ತಿಯ ಉತ್ಪಾದನೆ ಹಾಗೂ ಬಳಕೆ ಅತ್ಯಲ್ಪ.

    ನೆರೆಯ ದಕ್ಷಿಣ ಕೊರಿಯಾ ಅಗಾಧ ಆರ್ಥಿಕ ಅಭ್ಯುದಯ ಸಾಧಿಸಿ, ಪೂರ್ವ ಏಷ್ಯಾದ ನಾಲ್ಕು ಮರಿಹುಲಿಗಳಲ್ಲೊಂದು ಎಂಬ ಹೆಗ್ಗಳಿಕೆಗೆ ದಶಕಗಳ ಹಿಂದೆಯೇ ಪಾತ್ರವಾದರೆ, ಉತ್ತರ ಕೊರಿಯಾದ್ದು ಈ ದುಸ್ಥಿತಿಯೇಕೆ? ಇದಕ್ಕೇನು ಕಾರಣ? ‘ಕಿಂ ಕಾರಣಂ?’ ಉತ್ತರವೂ ಅದೇ- ‘ಕಿಂ ಕಾರಣಂ’ ಅಂದರೆ ಎಲ್ಲ ದುಸ್ಥಿತಿಗಳಿಗೂ ಕಾರಣ ‘ಕಿಂ’ ಹೆಸರಿನ ಸರ್ವಾಧಿಕಾರಿ. ಒಂದಲ್ಲ ಸತತವಾಗಿ ಮೂರು ‘ಕಿಂ’ಗಳು! ಎಲ್ಲ ಆರಂಭವಾದದ್ದು 1945ರಲ್ಲಿ ಎರಡನೆಯ ಮಹಾಯುದ್ಧ ಮುಗಿದ ಮರುಗಳಿಗೆಯೇ. ಕಳೆದ ಅರ್ಧ ಶತಮಾನದಿಂದಲೂ ಕೊರಿಯಾ ಪರ್ಯಾಯ ದ್ವೀಪವನ್ನು ಆಕ್ರಮಿಸಿಕೊಂಡಿದ್ದ ಜಪಾನ್ ಮಹಾಯುದ್ಧದಲ್ಲಿ ಸೋತಾಗ ಕೊರಿಯಾದಲ್ಲಿ ಬೀಡುಬಿಟ್ಟಿದ್ದ ಜಪಾನೀ ಸೇನೆಯನ್ನು ನಿಶ್ಶಸ್ತ್ರೀಕಣಗೊಳಿಸುವ ಜವಾಬ್ದಾರಿಯನ್ನು ಅಮೆರಿಕ ಮತ್ತು ಸೋವಿಯೆತ್ ಯೂನಿಯನ್ ತೆಗೆದುಕೊಂಡವು. ಒಪ್ಪಂದದ ಪ್ರಕಾರ 38 ಡಿಗ್ರೀ ಉತ್ತರ ಅಕ್ಷಾಂಶದ ದಕ್ಷಿಣಕ್ಕಿದ್ದ ಪ್ರದೇಶದಲ್ಲಿ ಅಮೆರಿಕನ್ನರೂ, ಉತ್ತರದಲ್ಲಿ ರಷ್ಯನ್ನರೂ ತಂತಮ್ಮ ಜವಾಬ್ದಾರಿಗಳನ್ನು ನಿರ್ವಹಿಸಬೇಕಾಗಿತ್ತು. ನಂತರ ಇಡೀ ಕೊರಿಯಾ ಮತ್ತೆ ಒಂದುಗೂಡಿ ಏಕ ಸರ್ಕಾರದ ಆಡಳಿತಕ್ಕೆ ಒಳಪಡಬೇಕಾಗಿತ್ತು. ಆದರೆ ಸೋವಿಯತ್ ಯೂನಿಯನ್ ತನ್ನ ಹತೋಟಿಯಲ್ಲಿದ್ದ ಪ್ರದೇಶದಲ್ಲಿ ಏಕಪಕ್ಷೀಯವಾಗಿ ಕಿಂ ಇಲ್-ಸುಂಗ್ ನೇತೃತ್ವದ ಕೈಗೊಂಬೆ ಕಮ್ಯೂನಿಸ್ಟ್ ಸರ್ಕಾರವನ್ನು ಸ್ಥಾಪಿಸಿ ಕೊರಿಯಾದ ಐಕ್ಯತೆಗೆ ಧಕ್ಕೆ ತಂದಿತು. ಇದಕ್ಕೆ ಪ್ರತಿಯಾಗಿ ಅಮೆರಿಕ ದಕ್ಷಿಣದಲ್ಲಿ ತನ್ನ ಪರವಾದ ಸಿಂಗ್ಮನ್ ರ್ಹೀ ನೇತೃತ್ವದ ಸರ್ಕಾರಕ್ಕೆ ಮನ್ನಣೆ ನೀಡಿ ಅದರ ಬೆಂಬಲಕ್ಕೆ ನಿಂತಿತು. ಪರಿಣಾಮವಾಗಿ, ಕೊರಿಯಾ ಪರ್ಯಾಯದ್ವೀಪ ಏಕೀಕೃತ ರಾಷ್ಟ್ರವಾಗಿ ವಿಶ್ವಸಮುದಾಯಕ್ಕೆ ಸೇರುವ ಬದಲು ಬೃಹದ್​ರಾಷ್ಟ್ರಗಳ ಶೀತಲಸಮರದ ಆಡಂಬೋಲವಾಗಿ ಬದಲಾಗಿ ಅದರ ವಿಭಜನೆ ಶಾಶ್ವತವಾಯಿತು. ಹಾಗೆ ನೋಡಿದರೆ, ಕೊರಿಯಾದ ಮರುಏಕೀಕರಣ ಎರಡೂ ಕೊರಿಯಾಗಳ ಘೊಷಿತ ನೀತಿ. ಆದರೆ, ಪ್ರಶ್ನೆಯೆಂದರೆ ಆ ಮರುಏಕೀಕರಣವಾಗಬೇಕಾದ್ದು ಉತ್ತರ ಕೊರಿಯಾ ಅನುಸರಿಸುತ್ತಿರುವ ಕಮ್ಯೂನಿಸ್ಟ್ ವ್ಯವಸ್ಥೆಯಡಿಯಲ್ಲೋ ಅಥವಾ ದಕ್ಷಿಣ ಕೊರಿಯಾ ಪ್ರತಿಪಾದಿಸುವ ಬಂಡವಾಳಶಾಹಿ-ಪ್ರಜಾಸತ್ತಾತ್ಮಕ ವ್ಯವಸ್ಥೆಯಡಿಯಲ್ಲೋ ಎನ್ನುವುದು.

    1949ರಲ್ಲಿ ನೆರೆಯ ಚೀನಾದಲ್ಲಿ ಸ್ಥಾಪನೆಯಾದ ಕಮ್ಯೂನಿಸ್ಟ್ ಸರ್ಕಾರ ಉತ್ತರ ಕೊರಿಯಾದ ಕಿಂ ಇಲ್-ಸುಂಗ್ ಸರ್ಕಾರದ ಬೆನ್ನಿಗೆ ಗಟ್ಟಿಯಾಗಿ ನಿಲ್ಲುತ್ತಿದ್ದಂತೇ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿತು. ಉತ್ತರ ಕೊರಿಯಾವು ಚೀನಾ ಮತ್ತು ಸೋವಿಯತ್ ಯೂನಿಯನ್​ಗಳ ಬೆಂಬಲದಿಂದ 1950ರ ಜೂನ್​ನಲ್ಲಿ ದಕ್ಷಿಣ ಕೊರಿಯಾ ಮೇಲೆ ದಾಳಿಯೆಸಗಿ ಸರಿಸುಮಾರು ಇಡಿಯಾಗಿ ಆಕ್ರಮಿಸಿಕೊಂಡೂಬಿಟ್ಟಿತು. ಆದರೆ, ಅಮೆರಿಕ ದಕ್ಷಿಣ ಕೊರಿಯಾದ ಪರವಾಗಿ ಅಂತಾರಾಷ್ಟ್ರೀಯ ಸೇನೆಯೊಂದನ್ನು ವ್ಯವಸ್ಥೆಗೊಳಿಸುವ ತನ್ನ ಯೋಜನೆಗೆ ವಿಶ್ವಸಂಸ್ಥೆಯ ಅಂಗೀಕಾರ ಪಡೆದುಕೊಂಡು ಯುದ್ಧದಲ್ಲಿ ಮಧ್ಯಪ್ರವೇಶಿಸಿತು. ಅಮೆರಿಕ ನೇತೃತ್ವದ ಅಂತಾರಾಷ್ಟ್ರೀಯ ಸೇನೆ ದಕ್ಷಿಣ ಕೊರಿಯಾವನ್ನು ವಿಮೋಚನೆಗೊಳಿಸಿದ್ದಲ್ಲದೆ ಉತ್ತರ ಕೊರಿಯಾದೊಳಗೇ ಪ್ರವೇಶಿಸಿತು. ಕೊನೆಗೂ ಉತ್ತರ ಕೊರಿಯಾವನ್ನು ಬಚಾವು ಮಾಡಿದ್ದು ಅದರ ಪರವಾಗಿ ಯುದ್ಧರಂಗಕ್ಕೆ ಧುಮುಕಿದ ಚೀನೀ ಸೇನೆ. ಹೀಗೆ, ದಕ್ಷಿಣ ಕೊರಿಯಾವನ್ನು ನುಂಗಿ ನೊಣೆದು ಇಡೀ ಕೊರಿಯಾ ಪರ್ಯಾಯದ್ವೀಪದಲ್ಲಿ ತನ್ನ ಕಮ್ಯೂನಿಸ್ಟ್ ಶಾಸನವನ್ನು ಸ್ಥಾಪಿಸುವ ಬಯಕೆಗೆ ಮುಳ್ಳಾಗಿ ನಿಂತಿರುವ ಅಮೆರಿಕವನ್ನು ಪರಮಶತ್ರು ಎಂದು ಉತ್ತರ ಕೊರಿಯಾ ಬಗೆಯುತ್ತದೆ. ಅಮೆರಿಕದ ವಿರೋಧೀ ಸಂಘಟನೆಗಳಿಗೆ ಬೆಂಬಲ ನೀಡುವುದು, ಅಮೆರಿಕದ ಮಿತ್ರದೇಶಗಳಾದ ಜಪಾನ್ ಮತ್ತು ದಕ್ಷಿಣ ಕೊರಿಯಾಗಳ ಭದ್ರತೆಗೆ ಧಕ್ಕೆಯೊದಗುವ ನೀತಿಗಳನ್ನು ಅನುಸರಿಸುತ್ತ ಅಮೆರಿಕಕ್ಕೆ ಶಾಶ್ವತ ತಲೆನೋವಾಗುವುದು ಉತ್ತರ ಕೊರಿಯಾದ ವಿದೇಶ ಮತ್ತು ರಕ್ಷಣಾ ನೀತಿಗಳ ಮೂಲತತ್ತ್ವವೇ ಆಗಿಹೋಗಿದೆ.

    ಆಂತರಿಕವಾಗಿ ಕಿಂ ಇಲ್-ಸುಂಗ್ ಅನುಸರಿಸಿದ ‘ಜೂಷ್’ ಅಂದರೆ ‘ಸ್ವಾವಲಂಬನೆ ನೀತಿ’ ಪ್ರಾರಂಭದಲ್ಲಿ ತ್ವರಿತ ಆರ್ಥಿಕ ಪ್ರಗತಿ ತಂದರೂ ಅದು ತಾತ್ಕಾಲಿಕವಾಗಿತ್ತು. ಆದಾಯದ ಹೆಚ್ಚಿನ ಭಾಗವನ್ನು ಕ್ಷಿಪಣಿಗಳನ್ನೂ, ಅಣ್ವಸ್ತ್ರಗಳನ್ನೂ ಗಳಿಸಿಕೊಳ್ಳುವುದಕ್ಕಾಗಿ ದುರುಪಯೋಗ ಪಡಿಸಿಕೊಳ್ಳತೊಡಗಿದಾಗ ಆರ್ಥಿಕ ಪ್ರಗತಿ ಹಿನ್ನೆಲೆಗೆ ಸರಿಯಿತು. ಕಿಂ ಇದನ್ನು ಮಾಡಿದ್ದು ‘ಅಣ್ವಸ್ತ್ರ-ನಿಷೇಧ ಒಪ್ಪಂದ’ಕ್ಕೆ ಸಹಿ ಹಾಕಿಯೇ. ಮೊದಲಿಗೆ ಸೋವಿಯತ್ ಯೂನಿಯನ್​ನಿಂದ ಪಡೆದುಕೊಂಡಿದ್ದ ಸ್ಕಡ್ ಕ್ಷಿಪಣಿಗಳನ್ನು ಪರಿಷ್ಕರಿಸಿದ ಕಿಂ ಕ್ಷಿಪಣಿ ತಂತ್ರಜ್ಞಾನವನ್ನು ಪಾಕಿಸ್ತಾನಕ್ಕೆ ನೀಡಿ ಆ ದೇಶದಿಂದ ಅಣ್ವಸ್ತ್ರ ತಂತ್ರಜ್ಞಾನವನ್ನು ಪಡೆದುಕೊಂಡ. ಪ್ರಧಾನಮಂತ್ರಿ ಬೇನಜಿರ್ ಭುಟ್ಟೋ 1993ರಲ್ಲಿ ಉತ್ತರ ಕೊರಿಯಾಗೆ ಅಧಿಕೃತ ಭೇಟಿ ನೀಡಿದಾಗ ಅಣ್ವಸ್ತ್ರ ತಂತ್ರಜ್ಞಾನವಿದ್ದ ಸಿಡಿಯನ್ನು ತನ್ನ ಕೋಟಿನ ಒಳಜೇಬಿನಲ್ಲಿಟ್ಟುಕೊಂಡು ಹೋದರು. ಹಿಂತಿರುಗುವಾಗ ಉತ್ತರ ಕೊರಿಯಾ ನೀಡಿದ ಕ್ಷಿಪಣಿ ತಂತ್ರಜ್ಞಾನದ ವಿವರಗಳು ಅವರ ಕೋಟಿನ ಒಳಜೇಬಿನಲ್ಲಿದ್ದವು. ಹೀಗೆ ಒಂದು ದೇಶದ ಪ್ರಧಾನಮಂತ್ರಿಯಾಗಿ, ನಿಷೇಧಿತ ಅಣ್ವಸ್ತ್ರ ಮತ್ತು ಕ್ಷಿಪಣಿ ತಂತ್ರಜ್ಞಾನದ ಕಳ್ಳಸಾಗಾಣಿಕೆದಾರಳ ಪಾತ್ರವನ್ನು ಬೇನಜಿರ್ ಭುಟ್ಟೋ ನಿರ್ವಹಿಸಿದರು. 1994ಲ್ಲಿ ಕಿಂ ಇಲ್-ಸುಂಗ್ ಮರಣಹೊಂದಿ ಮಗ ಕಿಂ ಜೋಂಗ್-ಇಲ್ ಅಧಿಕಾರಕ್ಕೆ ಬಂದು ತಂದೆಯ ಯೋಜನೆಗಳನ್ನು ಮತ್ತಷ್ಟು ಉಗ್ರವಾಗಿ ಜಾರಿಗೊಳಿಸಿದ. ‘ಸೋಂಗುನ್ ಚೋಂಗ್ ಚಿ’ ಅಂದರೆ ‘ಸೇನೆಗೆ ಪ್ರಥಮ ಆದ್ಯತೆ’ ಎಂಬ ನೀತಿ ಆರಂಭಿಸಿದ ಎರಡನೆಯ ಕಿಂ 2006ರಲ್ಲಿ ಅಣ್ವಸ್ತ್ರ ಗಳಿಸಿಕೊಂಡದ್ದಲ್ಲದೇ, ಮುಂದಿನ ಮೂರು ವರ್ಷಗಳಲ್ಲಿ ದಕ್ಷಿಣ ಕೊರಿಯಾ ಮತ್ತು ಜಪಾನ್​ನ ಯಾವುದೇ ಭಾಗವನ್ನು ತಲುಪಬಲ್ಲ ಕ್ಷಿಪಣಿಗಳನ್ನು ಸಿದ್ಧಪಡಿಸುವುದರಲ್ಲಿ ಯಶಸ್ವಿಯಾದ. ಹೀಗೆ ಸೀಮಿತ ಆದಾಯವನ್ನು ಕ್ಷಿಪಣಿಗಳು ಹಾಗೂ ಅಣ್ವಸ್ತ್ರಗಳ ತಯಾರಿಕೆ ಬಳಸತೊಡಗಿದ್ದರಿಂದ ಆರ್ಥಿಕ ಪ್ರಗತಿ ಸರಿಸುಮಾರು ನಿಂತೇಹೋಗಿ ದೇಶವನ್ನು ಬಡತನ ಅಮರಿಕೊಂಡಿತು.

    ಪರಿಸ್ಥಿತಿ ಬದಲಾಗಬಹುದು ಎಂಬ ಆಶಾಭಾವನೆ ಮೂಡಿದ್ದು, 2011ರಲ್ಲಿ ಕಿಂ ಜೋಂಗ್-ಇಲ್ ಮರಣಹೊಂದಿದಾಗ. ಆತನ ಮಗ ಹಾಗೂ ಉತ್ತರಾಧಿಕಾರಿ ಇಪ್ಪತ್ತೇಳು ವರ್ಷದ ಕಿಂ ಜೋಂಗ್-ಉನ್ ಸ್ವಿಜರ್​ಲ್ಯಾಂಡ್​ನಲ್ಲಿ ಶಿಕ್ಷಣ ಪಡೆದಿದ್ದ. ಪ್ರಜಾಪ್ರಭುತ್ವ ಹಾಗೂ ಶಾಂತಿಯ ಉತ್ಕ ೃ್ಟ ಮಾದರಿಯಾದ ಆ ಪುಟ್ಟ ಯುರೋಪಿಯನ್ ರಾಷ್ಟ್ರ ಉತ್ತರ ಕೊರಿಯಾದ ನವನಾಯಕನ ಎದೆಯಲ್ಲಿ ಈ ಎರಡು ಮೌಲ್ಯಗಳನ್ನು ಬಿತ್ತಿರಬಹುದೆಂದು ಜಗತ್ತು ನಿರೀಕ್ಷಿಸಿದ್ದು ಸಹಜವೇ ಆಗಿತ್ತು.

    ಮೂರನೆಯ ಕಿಂ ಅಧಿಕಾರಕ್ಕೆ ಬಂದದ್ದೇ, ತನ್ನ ಚಿಕ್ಕಪ್ಪ ಮತ್ತು ಮಲಸಹೋದರನನ್ನು ಕೊಲ್ಲಿಸುವುದರ ಮೂಲಕ. ಅವನ ಆಡಳಿತದಲ್ಲಿ ಉತ್ತರ ಕೊರಿಯಾ ಜಗತ್ತಿನ ಶಾಂತಿಗೆ ಕಂಟಕಸಾಲಿಯಾಗಿ ಬೆಳೆಯುವುದರ ಜೊತೆಗೆ ಆಂತರಿಕ ಸ್ಥಿತಿಯನ್ನು ಸರಿಪಡಿಸಲಾಗದ ಮಟ್ಟಿಗೆ ಹದಗೆಡಿಸಿಕೊಂಡಿದೆ. 2016-17 ರಲ್ಲಿ ಉತ್ತರ ಕೊರಿಯಾ ಮತ್ತಷ್ಟು ಅಣ್ವಸ್ತ್ರಗಳ ಜತೆಗೆ ಹೈಡ್ರೋಜನ್ ಬಾಂಬ್ ಅನ್ನು ಗಳಿಸಿಕೊಂಡಿತು ಹಾಗೂ ಅಮೆರಿಕ ನೆಲಕ್ಕೂ ಅಣ್ವಸ್ತ್ರಗಳನ್ನು ಕೊಂಡೊಯ್ಯಬಲ್ಲ ಖಂಡಾಂತರ ಕ್ಷಿಪಣಿಗಳನ್ನು ಯಶಸ್ವಿಯಾಗಿ ಪರೀಕ್ಷಿಸಿತು. ಅದೇ ಸಮಯದಲ್ಲಿ ಆಹಾರಧಾನ್ಯಗಳ ಹಾಗೂ ಅಗತ್ಯ ವಸ್ತುಗಳ ಕೊರತೆ ತೀವ್ರತರವಾಗಿ ಏರಿ ಕೋವಿಡ್ ಸಂಕ್ರಮಣದ ಕಾಲದಲ್ಲಿ ಅದು ಗಾಬರಿಗೊಳಿಸುವ ಮಟ್ಟ ತಲುಪಿದೆ.

    ಉತ್ತರ ಕೊರಿಯಾ ಈ ಸ್ಥಿತಿಗೆ ತಲುಪಲು ಸರ್ವಾಧಿಕಾರಿ ಕಿಂನ ತಲೆಕೆಟ್ಟ ಯೋಜನೆಗಳು ಪ್ರಮುಖ ಕಾರಣವಾಗಿವೆ. 2019ರವರೆಗೆ ಅದು ತನ್ನ ಅಗತ್ಯದ ಶೇಕಡ 75ರಷ್ಟನ್ನು ಚೀನಾದಿಂದ ಆಮದು ಮಾಡಿಕೊಳ್ಳುತ್ತಿತ್ತು. ಆದರೆ, ಜನವರಿ 2020ರಲ್ಲಿ ಚೀನಾದಿಂದ ಕರೊನಾವೈರಸ್ ಹರಡಬಹುದೆಂಬ ಕಾರಣವೊಡ್ಡಿ ಕಿಂ ಚೀನಾದೊಂದಿಗಿನ ಗಡಿಯನ್ನು ಮುಚ್ಚಿಬಿಟ್ಟ. ಪರಿಣಾಮವಾಗಿ ಆ ದೇಶದಿಂದ ಬರುತ್ತಿದ್ದ ವಸ್ತುಗಳಲ್ಲಿ ಬಹುಪಾಲು ಏಕಾಏಕಿ ನಿಂತುಹೋದವು. ಜುಲೈ-ಸೆಪ್ಟೆಂಬರ್​ನಲ್ಲಿ ಉತ್ತರ ಕೊರಿಯಾ ಭೀಕರ ಮಳೆಯ ಹಾವಳಿಗೆ ತುತ್ತಾದ ಕಾರಣ, ಆಂತರಿಕ ಆಹಾರ ಉತ್ಪಾದನೆ ಸಹ ಕುಗ್ಗಿಹೋಯಿತು. ಇದಕ್ಕೆ ಕಿಂ ಹುಡುಕಿಕೊಂಡ ಪರಿಹಾರ ಎಂತಹವರನ್ನೂ ದಂಗುಬಡಿಸುತ್ತದೆ. ಜನರು ಪ್ರೀತಿಯ ಪ್ರಾಣಿಗಳನ್ನು ಸಾಕುವುದನ್ನು ‘ಬೂರ್ಷ್ವಾ ಮನೋಭಾವ’ ಎಂಬ ಕಾರಣವೊಡ್ಡಿ ನಿಷೇಧಿಸಿದ ಕಿಂ ಆ ಪ್ರಾಣಿಗಳನ್ನು ರೆಸ್ಟೋರೆಂಟ್​ಗಳಲ್ಲಿ ಆಹಾರಕ್ಕಾಗಿ ಬಳಸಬೇಕೆಂದು ಆಜ್ಞೆಯಿತ್ತ. ವಿಶ್ವಸಂಸ್ಥೆ ಆಹಾರಧಾನ್ಯಗಳ ಪೂರೈಕೆ ಮಾಡುವುದಾಗಿ ಮುಂದೆಬಂದರೂ ತಿರಸ್ಕರಿಸಿದ.

    ವಿದೇಶಗಳೊಂದಿಗಿನ ಸಂಬಂಧಗಳ ಬಗ್ಗೆ ಹೇಳುವುದಾದರೆ, 2017ರಲ್ಲಿ ಖಂಡಾಂತರ ಕ್ಷಿಪಣಿಗಳನ್ನು ಪಡೆದುಕೊಂಡ ಹುಮ್ಮಸ್ಸಿನಲ್ಲಿ, ಅಮೆರಿಕ ಮೇಲೆ ಅಣ್ವಸ್ತ್ರ ದಾಳಿಯೆಸಗುವುದಾಗಿ ಆತ ಹೇಳಿದಾಗ, ಅಧ್ಯಕ್ಷ ಟ್ರಂಪ್ ಉತ್ತರ ಕೊರಿಯಾದ ಮೇಲೆಯೇ ದಾಳಿಯೆಸಗುವುದಲ್ಲದೆ ಕಿಂನನ್ನೂ ಪದಚ್ಯುತಗೊಳಿಸುವುದಾಗಿ ಅಬ್ಬರಿಸಿದರು. ಮೆತ್ತಗಾದ ಕಿಂ ಮಾತುಕತೆಗೆ ತಯಾರಾಗಿ, ಚೀನಾಗೆ ಭೇಟಿ ನೀಡಿ ಅಧ್ಯಕ್ಷ ಷಿ ಜಿನ್​ಪಿಂಗ್​ರ ಅನುಮತಿಯನ್ನೂ ಪಡೆದುಕೊಂಡ. 2018ರ ಬೇಸಿಗೆಯಲ್ಲಿ ಸಿಂಗಪುರ ಮತ್ತು ವಿಯೆಟ್ನಾಂಗಳಲ್ಲಿ ಜರುಗಿದ ಈ ಮಾತುಕತೆಗಳಲ್ಲಿ ಕೊರಿಯಾ ಪರ್ಯಾಯದ್ವೀಪವನ್ನು ಅಣ್ವಸ್ತ್ರಮುಕ್ತಗೊಳಿಸುವುದು ಅಧ್ಯಕ್ಷ ಟ್ರಂಪ್​ರ ಉದ್ದೇಶವಾದರೆ, ಉತ್ತರ ಕೊರಿಯಾದ ಮೇಲೆ ವಿಧಿಸಿದ್ದ ಆರ್ಥಿಕ ದಿಗ್ಬಂಧನಗಳನ್ನು ತೆರವುಗೊಳಿಸಬೇಕೆನ್ನುವುದು ಕಿಂನ ಹಟವಾಗಿತ್ತು. ಎರಡೂ ಉದ್ದೇಶಗಳು ಸಾರ್ಥಕವಾಗದೇ ಹೋದದ್ದನ್ನು ಕಿಂ ಮರುವರ್ಷದ ಜೂನ್​ನಲ್ಲಿ ‘ಆಚರಿಸಿದ್ದು’ ನವೀನ ಕ್ಷಿಪಣಿಗಳನ್ನು ಪರೀಕ್ಷಿಸುವುದರ ಮೂಲಕ. ಪರಿಣಾಮವಾಗಿ ಇಂದು ವಿಶ್ವಸಂಸ್ಥೆ ಮತ್ತು ಅಮೆರಿಕದ ಜತೆ, ಯುರೋಪಿಯನ್ ಯೂನಿಯನ್, ಜಪಾನ್, ದಕ್ಷಿಣ ಕೊರಿಯಾ ಮತ್ತು ಆಸ್ಟ್ರೇಲಿಯಾ ಸಹ ಆರ್ಥಿಕ ದಿಗ್ಬಂಧನಗಳನ್ನು ಹೇರಿವೆ.

    ಅತ್ತ, ಕಿಂ ತನ್ನ ದೇಶದ ಏಕೈಕ ಮಿತ್ರನಾದ, ಚೀನಾದ ಜತೆಗೂ ಸಂಬಂಧಗಳನ್ನು ಸರಿಯಾಗಿ ಇಟ್ಟುಕೊಂಡಿಲ್ಲ. ಚೀನಾದಿಂದ ಕರೊನಾವೈರಸ್ ಪಕ್ಷಿ-ಪ್ರಾಣಿಗಳ ಮೂಲಕವಲ್ಲದೇ ಹಿಮದ ಮೂಲಕವೂ, ಅಷ್ಟೇಕೆ, ಚೀನಾದ ಕಡೆಯಿಂದ ಬೀಸುವ ಗಾಳಿಯಲ್ಲಿನ ಧೂಳಿನ ಕಣಗಳಿಂದಲೂ ತನ್ನ ದೇಶಕ್ಕೆ ತಲುಪುತ್ತಿದೆ ಎಂದು ಆಪಾದಿಸಿದ. ಈ ಕಾರಣದಿಂದಾಗಿ ಮತ್ತು ಆಮದುಗಳನ್ನು ಸರಿಸುಮಾರು ನಿಲ್ಲಿಸಿದ ಪರಿಣಾಮವಾಗಿ, ಜಿನ್​ಪಿಂಗ್ ಸರ್ಕಾರ ತನ್ನ ಪೂರ್ವದ ನೆರೆನಾಡಿನ ಬಗ್ಗೆ ಹಿಂದಿನ ಪ್ರೀತಿಯನ್ನು ಉಳಿಸಿಕೊಂಡಿಲ್ಲ.

    ಈ ನಡುವೆ ಕಿಂನ ಆರೋಗ್ಯ ಅಡಿಗಡಿಗೆ ಬಿಗಡಾಯಿಸಿ, ಅವನು ಸತ್ತೇ ಹೋದ ಎಂಬ ಸುದ್ದಿಯೂ ಬಂದದ್ದುಂಟು. ಅವನು ಸತ್ತೇಹೋದರೆ ಉತ್ತರಾಧಿಕಾರಿ ಯಾಗಲಿರುವವಳು ಅವನ ಸಹೋದರಿ ಕಿಂ ಯೋ-ಜೋಂಗ್ ಎಂಬುದನ್ನರಿತ ಜಗತ್ತು, ಅವಳಿಗಿಂತ ಇವನೇ ವಾಸಿಯೇನೋ ಎಂದು ಲೆಕ್ಕಹಾಕುತ್ತಿದೆ. ಕಟುನುಡಿಗಳಿಗೆ ಹೆಸರಾದ ಈಕೆ ಅಮೆರಿಕದ ಹೊಸ ಅಧ್ಯಕ್ಷರ ಬಗ್ಗೆ ರಾಜತಂತ್ರಕ್ಕೆ ಸಮ್ಮತವಲ್ಲದ ಮಾತುಗಳನ್ನಾಡಿದ್ದಾಳೆ. ‘ಇನ್ನು ನಾಲ್ಕು ವರ್ಷಗಳು ನೆಮ್ಮದಿಯಾಗಿ ನಿದ್ರಿಸಬೇಕೆಂಬ ಆಸೆಯಿದ್ದರೆ (ಉತ್ತರ ಕೊರಿಯಾಗೆ ಸಂಬಂಧಿಸಿದಂತೆ) ಪರಿಸ್ಥಿತಿಯನ್ನು ಹಾಳುಮಾಡಲು ಹೋಗಬೇಡ’ ಎಂದು ಆಕೆ ಅಧ್ಯಕ್ಷ ಬೈಡನ್​ಗೆ ಎಚ್ಚರಿಕೆ ನೀಡಿದ್ದಾಳೆ. ಉತ್ತರ ಕೊರಿಯಾ ಜತೆ ಸಂಬಂಧವೃದ್ಧಿಗೆ ಮನಸ್ಸು ಮಾಡುತ್ತಿರುವ ದಕ್ಷಿಣ ಕೊರಿಯಾದ ಅಧ್ಯಕ್ಷ ಮೂನ್ ಜಾ-ಇನ್​ರನ್ನು ‘ಗಿಳಿ’ ಎಂದು ಲೇವಡಿ ಮಾಡಿದ್ದಾಳೆ. ಈ ‘ನಾಲ್ಕನೆಯ ಕಿಂ’ ಅಧ್ಯಕ್ಷೆಯಾದಲ್ಲಿ ಉತ್ತರ ಕೊರಿಯಾ ಸುತ್ತಲ ಜಗತ್ತಿನಿಂದ ಮತ್ತಷ್ಟು ದೂರಸರಿದು, ನೇಹಿಗರಿಲ್ಲದ ನತದೃಷ್ಟ ದೇಶ ಎಂಬ ಹಣೆಪಟ್ಟಿ ಅದಕ್ಕೆ ಮತ್ತಷ್ಟು ಗಟ್ಟಿಯಾಗಿ ಅಂಟಿಕೊಳ್ಳುವುದು ನಿಶ್ಚಿತ. ಕಿಂ ಸಂತತಿಯಂತಹವರನ್ನು ನಾಯಕರನ್ನಾಗಿ ಪಡೆಯುವ ಯಾವುದೇ ಜನತೆಗೆ ಬೇರೆ ಶತ್ರುಗಳ ಅಗತ್ಯ ಇರುವುದಿಲ್ಲ ಎನ್ನುವುದನ್ನು ಕಳೆದ ಮುಕ್ಕಾಲು ಶತಮಾನ ಹೀಗೆ ಸಾಬೀತುಗೊಳಿಸಿದೆ.

    (ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts