More

    ಭಾರತವಿರೋಧಿ ಸಂಚಿನ ನಾನಾ ಮುಖಗಳು; ಪ್ರೇಮಶೇಖರ ಅವರ ಅಂಕಣ..

    ಭಾರತವಿರೋಧಿ ಸಂಚಿನ ನಾನಾ ಮುಖಗಳು; ಪ್ರೇಮಶೇಖರ ಅವರ ಅಂಕಣ..2014ರಲ್ಲಿ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್​ಡಿಎ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಒಂದು ಆಸಕ್ತಿಕರ ಸರಪಳಿ ಬೆಳವಣಿಗೆ ನಿರ್ದಿಷ್ಟ ಸಮಯಗಳಲ್ಲಿ ಘಟಿಸುತ್ತಾ ಬಂದಿರುವುದನ್ನು ಗಮನಿಸಬಹುದು. ಪ್ರಮುಖ ರಾಜ್ಯ ವಿಧಾನಸಭಾ ಚುನಾವಣೆಗಳು ಹತ್ತಿರಾಗುತ್ತಿದ್ದಂತೇ ಕಾಂಗ್ರೆಸ್, ತಥಾಕಥಿತ ಪ್ರಗತಿಪರ ವಿಚಾರವಾದಿ ವರ್ಗ ಹಾಗೂ ಕೆಲವು ಪ್ರಭಾವೀ ಪತ್ರಕರ್ತರು ವಿವಾದವೊಂದನ್ನು ಹುಟ್ಟುಹಾಕಿ, ಅದನ್ನು ಬಿಜೆಪಿ ವಿರುದ್ಧ ಅಸ್ತ್ರವಾಗಿ ರಾಷ್ಟ್ರೀಯ-ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಳಸುವುದು, ಚುನಾವಣೆ ಮುಗಿದ ನಂತರ ಆ ವಿವಾದ ಬಂದಂತೇ ಮಾಯವಾಗಿಬಿಡುವುದು ಒಂದು ಕ್ರಮದಂತೆ ನಡೆಯುತ್ತಿದೆ. ಅದು ಆರಂಭವಾದದ್ದು ನವೆಂಬರ್ 2015ರ ಬಿಹಾರ ಚುನಾವಣೆಗೆ ಐದಾರು ತಿಂಗಳುಗಳ ಮೊದಲು. ಕೆಲವು ಬಿಜೆಪಿ-ವಿರೋಧಿ ರಾಜಕೀಯ ನೇತಾರರು, ಅವರೇ ಸಾಕಿದ್ದ ವಿಚಾರವಾದಿಗಳು ಮತ್ತು ಉತ್ತರದ ಮೂರು ಕೇಂದ್ರೀಯ ವಿಶ್ವವಿದ್ಯಾಲಯಗಳ ತಥಾಕಥಿತ ಪ್ರಾಧ್ಯಾಪಕರುಗಳು ಸಭೆ ಸೇರಿ ಬಿಹಾರದಲ್ಲಿ ಬಿಜೆಪಿಯನ್ನು ಮಣ್ಣುಮುಕ್ಕಿಸಿ ಅದರ ಪ್ರಭಾವವನ್ನು ಕುಗ್ಗಿಸುವ, ಆ ಮೂಲಕ 2019ರ ಲೋಕಸಭಾ ಚುನಾವಣೆಗಳಲ್ಲಿ ಆ ಪಕ್ಷವನ್ನು ಸತ್ತೆಯಿಂದ ಕೆಳಗಿಳಿಸುವ ಕೆಲಸಕ್ಕೆ ನಾಂದಿ ಹಾಡುವ ಯೋಜನೆ ರೂಪಿಸಿದರು.

    ಆ ಪ್ರಕಾರ ಮುಂದಿನ ಮೂರುನಾಲ್ಕು ತಿಂಗಳುಗಳಲ್ಲಿ ದೇಶದಲ್ಲಿ ಘಟಿಸುವ ಅಹಿತಕರ ಪ್ರಕರಣಗಳನ್ನು ಬಿಜೆಪಿ ವಿರುದ್ಧದ ಪ್ರಚಾರಕ್ಕೆ ಬಳಸಿಕೊಳ್ಳುವ ನೀಲನಕ್ಷೆಯೂ ತಯಾರಾಯಿತು. ಅದರಂತೆ ಲೇಖಕ ಎಂ. ಎಂ. ಕಲಬುರ್ಗಿ ಮತ್ತು ದನಗಳ್ಳ ಮಹಮದ್ ಅಖ್ಲಾಖ್​ನ ಹತ್ಯೆಗಳ ಹಿಂದಿನ ಕಾರಣಗಳನ್ನು ಮರೆಯಾಗಿಟ್ಟು, ಅವುಗಳು ಹಿಂದೂ ಕೋಮುವಾದಿಗಳು ಧಾರ್ವಿುಕ ಹಾಗೂ ವೈಚಾರಿಕ ಅಸಹಿಷ್ಣುತಾ ಕಾರಣಗಳಿಗಾಗಿ ಎಸಗಿದ ಕೊಲೆಗಳು ಎಂದು ತಿರುಚಿ, ಅಸಹಿಷ್ಣುತೆಯ ಕೂಗೆತ್ತಿ ಹಿಡನ್ ಅಜೆಂಡಾಗೆ ಚಾಲನೆ ನೀಡಿದರು, ಅವಾರ್ಡ್ ವಾಪ್ಸಿ ನೌಟಂಕಿ ಆರಂಭವಾಯಿತು. ಎರಡು ವರ್ಷಗಳ ನಂತರ ಗುಜರಾತ್ ಚುನಾವಣೆ ಸಂದರ್ಭದಲ್ಲಿ ಜಸ್ಟಿಸ್ ಲೋಧಾರ ಸ್ವಾಭಾವಿಕ ಮರಣವನ್ನು ಬಿಜೆಪಿ ಸರ್ಕಾರ ಎಸಗಿದ ಕೊಲೆಯಂತೆ ಬಿಂಬಿಸಲಾಯಿತು. ಮರುವರ್ಷದ ಕರ್ನಾಟಕ ಚುನಾವಣೆಗಳಲ್ಲಿ ಬಳಕೆಯಾದದ್ದು ಕಠುವಾ ಮತ್ತು ಉನ್ನಾವ್ ಅತ್ಯಾಚಾರ ಪ್ರಕರಣಗಳು. ಕಳೆದವರ್ಷದ ದೆಹಲಿ ಚುನಾವಣೆಗಳಿಗೆ ಸಂಚುಗಾರರಿಗೆ ಸಿಕ್ಕಿದ ಅಸ್ತ್ರ ಸಿಎಎ ಮತ್ತು ಎನ್​ಆರ್​ಸಿ.

    ಇಲ್ಲಿ ಕಂಡುಬರುವ ಮೂರು ಕುತೂಹಲಕರ ಸಂಗತಿಗಳೆಂದರೆ- 1. ಬಿಜೆಪಿ ಮತ್ತು ಹಿಂದೂ ಸಮುದಾಯದ ವಿರುದ್ಧದ ಅಪಪ್ರಚಾರಗಳು ನಡೆದ ಪ್ರಮಾಣ ಅವುಗಳ ಹಿಂದೆ ಹಣ ಕೆಲಸ ಮಾಡುತ್ತಿದ್ದುದರ ಸೂಚನೆಯನ್ನು ನೀಡಿತು. ಬಿಜೆಪಿ ಮತ್ತು ಹಿಂದೂ ಸಮುದಾಯದ ಮೇಲೆ ಅಸಹಿಷ್ಣುತೆಯ ಅಪರಾಧ ಹೊರಿಸಿ, ಅವುಗಳನ್ನು ಖಳನಾಯಕನಂತೆ ಬಿಂಬಿಸಲು ದೇಶವಿದೇಶಗಳ ನೂರೈವತ್ತು ಲೇಖಕರು, ಪತ್ರಕರ್ತರು ಹಾಗೂ ಭಾರತದ್ದೇ ಸಿನಿ ಸೆಲೆಬ್ರಿಟಿಗಳನ್ನು ನೇಮಿಸಿಕೊಂಡದ್ದೇ ಹಣದ ಪಾತ್ರವನ್ನು ಬಯಲು ಮಾಡಿತ್ತು. 2. ಇದರ ಹಿಂದೆ ಧನಿಕ ಅಂತಾರಾಷ್ಟ್ರೀಯ ಸಂಘಟನೆಗಳು ಹಾಗೂ ವ್ಯಕ್ತಿಗಳು ಇರುವ ಸೂಚನೆ ಸಿಕ್ಕಿಹೋಯಿತು. ಅಲ್ಲದೇ, ದೇಶೀಯ ಶಕ್ತಿಗಳ ಜತೆ ಅಂತಾರಾಷ್ಟ್ರೀಯ ಶಕ್ತಿಗಳು ಕೈಜೋಡಿಸಿರುವ ಸೂಚನೆಯನ್ನು ಧಾರಾಳವಾಗಿಯೇ ನೀಡಿದವು. 3. ಆಯಾ ರಾಜ್ಯದ ಚುನಾವಣೆ ಮುಗಿಯುತ್ತಿದ್ದಂತೇ ಬಿಜೆಪಿ ವಿರುದ್ಧದ ಅಸ್ತ್ರಗಳು ತಣ್ಣಗೆ ಮೂಲೆ ಸೇರಿಬಿಡುತ್ತವೆ. ಈ ಹಿನ್ನೆಲೆಯಲ್ಲಿ ಅತೀ ಪ್ರಮುಖವೆನಿಸುವ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗಳು ಹತ್ತಿರಾಗುತ್ತಿದ್ದಂತೇ ಬಿಜೆಪಿ ವಿರುದ್ಧ ಭಾರಿ ಪ್ರಮಾಣದ ಆಂದೋಲನವೊಂದು ಆರಂಭವಾಗುವ ಸಾಧ್ಯತೆ ಇದ್ದೇ ಇತ್ತು ಮತ್ತು ಅದೀಗ ರೈತರ ಹೋರಾಟದ ರೂಪದಲ್ಲಿ ನಿಂತಿದೆ. ಈ ಆಂದೋಲನದ ಉದ್ದೇಶ ಮೂರು ಕೃಷಿ ಕಾಯಿದೆಗಳನ್ನು ತೆರವುಗೊಳಿಸುವುದು ಎಂದಾದರೂ ಆಂದೋಲನದ ಮೂಲ ಮತ್ತದು ಸಾಗಿ ಬಂದಿರುವ ಬಗೆ ನೋಡಿದರೆ ಆ ಉದ್ದೇಶ ನಿಜವೆನಿಸುವುದಿಲ್ಲ.

    ರೈತನಾಯಕ ರಾಕೇಶ್ ಟಿಕಾಯತ್ ಸರ್ಕಾರ ತರಹೊರಟಿದ್ದ ಕೃಷಿ ಕಾನೂನುಗಳನ್ನು ಕಳೆದವರ್ಷದ ಜೂನ್​ನಲ್ಲಿ ಹೊಗಳಿದ್ದರೆ ಭಾರತೀಯ ಕಿಸಾನ್ ಯೂನಿಯನ್ 1987ರಿಂದ ಈ ಬಗೆಯ ಕಾಯಿದೆಗಳಿಗಾಗಿ ಬೇಡಿಕೆ ಇಡುತ್ತಲೇ ಬಂದಿತ್ತು! ಪ್ರಸಕ್ತ ರೈತ ಆಂದೋಲನಕ್ಕೆ ದೊಡ್ಡದಾಗಿ ಸಮರ್ಥನೆ ನೀಡುತ್ತಿರುವ ಕಾಂಗ್ರೆಸ್ ಮತ್ತು ಎನ್​ಸಿಪಿಯ ಸಮ್ಮಿಶ್ರ ಸರ್ಕಾರ ಮಹಾರಾಷ್ಟ್ರದಲ್ಲಿ 2008ರಲ್ಲೇ ಪ್ರಸಕ್ತ ಕಾನೂನುಗಳಿಗೆ ಪೂರಕವಾದ ಕಾನೂನುಗಳನ್ನು ಜಾರಿಗೆ ತಂದಿದೆ! ಶರದ್ ಪವಾರ್ ಅಂತೂ ಆ ಕಾನೂನುಗಳನ್ನು ಇಡೀ ದೇಶದಲ್ಲಿ ಜಾರಿಗೆ ತರುವಂತೆ ಸರ್ಕಾರವನ್ನು ಒತ್ತಾಯಿಸುತ್ತಿದ್ದರು. ಕಾಂಗ್ರೆಸ್ ಸಹ ಚುನಾವಣಾ ಪ್ರಚಾರದಲ್ಲಿ ಇದೇ ಕಾಯಿದೆಗಳನ್ನು ತರುವುದಾಗಿ ಹೇಳಿತ್ತು. ಅಕಾಲಿ ದಳವಂತೂ ಈ ಕಾನೂನುಗಳ ಪರವಾಗಿ ಮಾತಾಡುತ್ತಿತ್ತು, ಪಕ್ಷದ ನಾಯಕ, ಕೃಷಿ ದಲಾಲಿ ಸುಖ್​ಬೀರ್ ಸಿಂಗ್ ಬಾದಲ್​ರ ಪತ್ನಿ ಹರ್​ಸಿಮ್ರನ್ ಕೌರ್ ಬಾದಲ್ ಏಕಾಏಕಿ ಪ್ಲೇಟ್ ಬದಲಾಯಿಸಿ ಕೇಂದ್ರ ಮಂತ್ರಿಮಂಡಲಕ್ಕೆ ರಾಜಿನಾಮೆ ನೀಡುವವರೆಗೂ.

    ದೆಹಲಿಯ ಗಡಿಯಲ್ಲಿ ಸೇರಿದ ಆಂದೋಲನಕಾರರಲ್ಲಿ ಬಹುಪಾಲು ಜನ ರೈತರಲ್ಲ ಎನ್ನುವುದು ಹಾಗೂ ಅವರಲ್ಲಿ ಹಲವರಿಗೆ ಯಾಕಾಗಿ ತಾವಲ್ಲಿ ಸೇರಿದ್ದೇವೆಂದು ಅರಿವಿಲ್ಲದಿರುವುದು ಸಾಬೀತಾಗಿದೆ. ಅಲ್ಲದೇ, ರೈತ ಆಂದೋಲನದಲ್ಲಿ ಪ್ರಧಾನಮಂತ್ರಿಯವರ ಹತ್ಯೆಯ ಸಂಚಿನ ಆರೋಪದ ಮೇಲೆ ಬಂಧಿತರಾಗಿರುವ ನಗರ ನಕ್ಸಲರ ಬಿಡುಗಡೆಗಾಗಿ ಒತ್ತಾಯಿಸುವ ಹಾಗೂ ಖಲಿಸ್ತಾನ್ ಪರವಾದ ಪ್ಲಕಾರ್ಡ್​ಗಳು ಕಾಣಿಸಿಕೊಂಡಿವೆ. ಇದಕ್ಕೆ ಕಾರಣ ಮಾವೋವಾದಿ ದರ್ಶನ್ ಪಾಲ್ ರೈತನ ಅವತಾರವೆತ್ತಿ ಆಂದೋಲನದ ನೇತಾ ಆಗಿರುವುದು! ಸವೋಚ್ಚ ನ್ಯಾಯಾಲಯ ನೇಮಿಸಿದ ಸಮಿತಿಯನ್ನು ತಿರಸ್ಕರಿಸಿರುವುದು, ಕಾನೂನುಗಳ ಜಾರಿಯನ್ನು ಒಂದೂವರೆ ವರ್ಷಗಳವರೆಗೆ ಸರ್ಕಾರ ಸ್ಥಗಿತಗೊಳಿಸಿರುವುದನ್ನು ಮಾನ್ಯಮಾಡದೇ ಆಂದೋಲನವನ್ನು ಜಾರಿಯಲ್ಲಿಟ್ಟಿರುವುದು ಬಿಜೆಪಿ ಸರ್ಕಾರದ ವಿರುದ್ಧದ ಅಶಾಂತಿಯನ್ನು ನಿಲುಗಡೆಗೆ ತರಲು ಕಾಲ ಇನ್ನೂ ಸನ್ನಿಹಿತವಾಗಿಲ್ಲ ಎಂದು ರೈತನಾಯಕರು ತಿಳಿದಿರುವ ಸ್ಪಷ್ಟ ಸೂಚನೆ. ಆ ಕಾಲ ಕೂಡಿಬರುವುದು ಮೇ ತಿಂಗಳಲ್ಲಿ ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಗಳು ಮುಕ್ತಾಯಗೊಂಡಾಗಷ್ಟೇ. ಹಿಂದಿನವುಗಳಂತೇ ಈ ಆಂದೋಲನದಲ್ಲೂ ಹಣ ಹಾಗೂ ದೇಶ-ವಿದೇಶದ ಸಂಘಟನೆಗಳ ಪಾತ್ರದ ಬಗ್ಗೆ ಮೊನ್ನೆಯವರೆಗೆ ಸರ್ಕಾರದ ಉನ್ನತವಲಯ ಹಾಗೂ ಕೆಲವೇ ಕೆಲವು ಆಸಕ್ತ ವಿಶ್ಲೇಷಕರಿಗೆ ಮಾತ್ರ ತಿಳಿದಿದ್ದ ರಹಸ್ಯಗಳು ಆಧಾರಸಹಿತವಾಗಿ ಈಗ ಜಗಜ್ಜಾಹೀರಾಗಿವೆ. ಎಲ್ಲ ಬಹಿರಂಗವಾದದ್ದು ಇದೇ ಮಂಗಳವಾರ. ಅದಕ್ಕೆ ಚಾಲನೆ ನೀಡಿದ್ದು ಬಾರ್ಬಡೋಸ್ ಮೂಲದ ಅಮೆರಿಕನ್ ಗಾಯಕಿ ರಿಹಾನಾ. ಭಾರತ ಸರ್ಕಾರ ದೆಹಲಿಯಲ್ಲಿ ಇಂಟರ್ನೆಟ್ ಸಂಪರ್ಕ ಕತ್ತರಿಸಿರುವುದಾಗಿಯೂ, ಅದರಿಂದಾಗಿ ಆಂದೋಲನ ನಿರತ ರೈತರಿಗೆ ತೊಂದರೆಯಾಗುತ್ತಿದೆಯೆಂದೂ ಸಿಎನ್​ಎನ್​ನ ಪ್ರಸಾರ ಮಾಡಿದ ಸುದ್ದಿಯೊಂದರ ಲಿಂಕ್ ನೀಡಿ ಈಕೆ, ನಾವೇಕೆ ಏನೂ ಮಾಡುತ್ತಿಲ್ಲ ಎಂದು ಫೆ. 2ರ ರಾತ್ರಿ 8 ಗಂಟೆಗೆ ಟ್ವೀಟ್ ಮಾಡಿದರು. ಟ್ವಿಟರ್​ನಲ್ಲಿ ಈಕೆಗೆ 1.10 ಕೋಟಿ ಹಿಂಬಾಲಕರಿದ್ದಾರೆ. ಈಕೆಯ

    ಪೋಸ್ಟ್​ಗಳು ಮತ್ತು ಅರೆಬೆತ್ತಲೆ ಫೋಟೋಗಳು ಸಾಮಾನ್ಯವಾಗಿ ಹತ್ತರಿಂದ ಐವತ್ತು ಸಾವಿರ ರಿಟ್ವೀಟ್​ಗಳಾಗುತ್ತವೆ. ಆದರೆ ಭಾರತದ ರೈತರ ಬಗೆಗಿನ ಟ್ವೀಟ್ ಹನ್ನೆರಡು ಗಂಟೆಗಳೊಳಗೆ ಎರಡೂವರೆ ಲಕ್ಷ ರಿಟ್ವೀಟ್ ಆಯಿತು! ಈ ಚಮತ್ಕಾರಕ್ಕೆ ಕಾರಣವೇನಿರಬಹುದೆಂಬ ಸೂಚನೆ ಸಿಕ್ಕಿದ್ದು ಪತ್ರಕರ್ತೆ ಬರ್ಖಾ ದತ್ ಅವರಿಂದ. ರಿಹಾನಾ ಟ್ವೀಟ್ ಮಾಡಿದೊಡನೇ ಕಾರ್ಯಪ್ರವೃತ್ತರಾದ ಬರ್ಖಾ ಲೇಖನವೊಂದನ್ನು ಬರೆಯಲು ಕುಳಿತರು, ‘ಇಂಡಿಯಾ ಈಸ್ ಆಟ್ ವಾರ್ ವಿತ್ ಇಟ್​ಸೆಲ್ಪ್ ಆಂಡ್ ಈವನ್ ರಿಹಾನಾ ಈಸ್ ನೋಟೀಸಿಂಗ್’ ಎಂಬ ಆ ಲೇಖನ ಬೆಳಗಿನ ನಾಲ್ಕೂವರೆಯ ಹೊತ್ತಿಗೆ ವಾಷಿಂಗ್​ಟನ್ ಪೋಸ್ಟ್ ಪತ್ರಿಕೆಯಲ್ಲಿ ಪ್ರಕಟವಾಯಿತು! ಇದು ರಹಸ್ಯದ ಪರದೆಯನ್ನು ತುಸು ಮೇಲೆತ್ತಿತು. ಪರದೆಯನ್ನು ಪೂಣವಾಗಿ ಮೇಲೆತ್ತಿದ್ದು ಸ್ವೀಡನ್​ನ ಪರಿಸರ ಕಾರ್ಯಕರ್ತೆ ಗ್ರೆಟಾ ಥನ್​ಬರ್ಗ್.

    ತಂದೆತಾಯಿಗಳ ದಾಳಕ್ಕೆ ಬಹುಶಃ ಬಲಿಪಶುವಾಗಿ ಕುಣಿಯುವ ಈ ಹದಿನೆಂಟು ವರ್ಷದ ಸ್ಕೂಲ್ ಡ್ರಾಪ್​ಔಟ್, ಬುಧವಾರ ಸಂಜೆ ಐದರ ಹೊತ್ತಿಗೆ ಮಾಡಿದ ಎರಡನೆಯ ಟ್ವೀಟ್​ನಲ್ಲಿ ಭಾರತದ ಆಂದೋಲನನಿರತ ರೈತರಿಗೆ ಸಹಕರಿಸುವವರಿಗೆ ಅನುಕೂಲವಾಗಲೆಂದು ಲಿಂಕ್ ಒಂದನ್ನು ನೀಡಿದರು. ಆದರೆ ಅಡಿಗಡಿಗೆ ಸೆಲೆಬ್ರಿಟಿ ಆಗಬಯಸುವ ಅತ್ಯುತ್ಸಾಹದಲ್ಲಿ ಆಕೆ ಎಡವಟ್ಟೆಸಗಿದ್ದರು. ಆಕೆ ನೀಡಿದ ಲಿಂಕ್ ರೈತ ಆಂದೋಲನವನ್ನು ಹೇಗೆ ವ್ಯಾಪಕಗೊಳಿಸಬೇಕೆಂದು ಹೇಳುವ ಅಂತಾರಾಷ್ಟ್ರೀಯ ಷಡ್ಯಂತ್ರದ ಕೀಲಿಕೈಯನ್ನು ಜಗತ್ತಿಗೆ ನೀಡಿಬಿಟ್ಟಿತು. ಅಲ್ಲಿದ್ದ ಮಾಹಿತಿಗಳ ಪ್ರಕಾರ ರೈತ ಆಂದೋಲನವನ್ನು ಉಗ್ರಗೊಳಿಸುವ ಸಲುವಾಗಿ ಜನವರಿ 10, 17, 23ರಂದು ಸಂಚುಗಾರರು ಸಭೆ ಸೇರಿ ಕಾರ್ಯಯೋಜನೆ ರೂಪಿಸಿದ್ದರು! ಅದರ ಪ್ರಕಾರ ಜನವರಿ 26ನ್ನು ‘ಗ್ಲೋಬಲ್ ಡೇ ಆಫ್ ಆಕ್ಷನ್’ ಆಗಿ ಆಚರಿಸಬೇಕೆಂದೂ, ದೆಹಲಿಯಲ್ಲಿ ಗೊಂದಲ ಎಬ್ಬಿಸಬೇಕೆಂದೂ ನಿರ್ಣಯಿಸಲಾಗಿತ್ತು! ಅದನ್ನು ಮಾಡಲು ಸಲಹೆ, ಸೂಚನೆ, ಮಾರ್ಗದರ್ಶನ; ಅಗತ್ಯವಾದ ಕಾಪಿ-ಪೇಸ್ಟ್ ಮಾಡಬಹುದಾದ ರೆಡಿಮೇಡ್ ಟ್ವೀಟ್​ಗಳು, ಹ್ಯಾಷ್​ಟ್ಯಾಗ್​ಗಳು ಎಲ್ಲವನ್ನು ಗ್ರೆಟಾ ಒದಗಿಸಿದ ಲಿಂಕ್​ನಲ್ಲಿದ್ದ ಗೂಗಲ್ ಡಾಕ್ಯುಮೆಂಟ್ ಬಟಾಬಯಲು ಮಾಡಿತ್ತು. ಗಲಾಟೆ ಆರಂಭವಾದಾಗ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಲೈವ್ ಆಗಿ ಎಲ್ಲೆಡೆ ಪ್ರಸಾರ ಮಾಡಬೇಕೆಂದೂ ಸಲಹೆಗಳಿದ್ದವು. ಅಂದರೆ ಗಣರಾಜ್ಯೋತ್ಸವದ ದಿನ ದೆಹಲಿಯಲ್ಲಿ ನಡೆದದ್ದೆಲ್ಲವೂ ಪೂರ್ವನಿಯೋಜಿತ! ವಿಶ್ವಸಂಸ್ಥೆ, ಅಮೆರಿಕಾ, ಬ್ರಿಟನ್ ಮುಂತಾದೆಡೆ ಭಾರತದ ವಿರುದ್ಧ ಅಭಿಪ್ರಾಯ ಮೂಡಿಸುವ ಯೋಜನೆಗಳೂ ಆ ದಾಖಲೆಯಲ್ಲಿವೆ. ರೆಡಿಮೇಡ್ ಟ್ವೀಟ್ ಹಾಗೂ ಹೇಳಿಕೆಗಳು ಇಂಗ್ಲಿ್ ಅಲ್ಲದೇ ಫ್ರೆಂಚ್ ಮತ್ತು ಪೋರ್ಚುಗೀಸ್​ನಲ್ಲೂ ಇವೆ!

    ಫೆಬ್ರವರಿ 6ರಂದು ಚಕ್ಕಾ ಜಾಮ್ ಹೆಸರಿನಲ್ಲಿ ಮತ್ತಷ್ಟು ಅರಾಜಕತೆ ಎಬ್ಬಿಸಬೇಕೆಂದೂ, ಅದಕ್ಕಾಗಿ ಮೋದಿ ರೈತರ ಹತ್ಯಾಕಾಂಡಕ್ಕೆ ಯೋಜಿಸಿದ್ದಾರೆ ಎಂಬ ಹ್ಯಾಷ್​ಟ್ಯಾಗ್ ಅನ್ನು ಟ್ರೆಂಡ್ ಮಾಡಿ ಜನರನ್ನು ಕೆರಳಿಸಬೇಕೆಂಬ ಯೋಜನೆಯ ರೂಪರೇಷೆಯೂ ಆ ಡಾಕ್ಯುಮೆಂಟ್​ನಲ್ಲಿದೆ. ಫೆಬ್ರವರಿ 12-23ರ ಅವಧಿಯಲ್ಲೂ ಗಲಾಟೆ ನಡೆಸುವ ಯೋಜನೆಗಳು ಅಲ್ಲಿವೆ. ಸರಿ, ಇವರಿಗೆಲ್ಲಾ ಹಣ ನೀಡುವವರಾರು? ಗ್ರೆಟಾಳ ಎಡವಟ್ಟಿನಿಂದ ಜಗಜ್ಜಾಹೀರಾದ ಷಡ್ಯಂತ್ರದ ಮೂಲ ದಾಖಲೆಯಲ್ಲಿ ಹಲವು ಸಂಘಟನೆಗಳ ಉಲ್ಲೇಖ ಮತ್ತು ವಿವರಗಳಿವೆ. ಯುಗ್ಮಾ ನೆಟ್​ವರ್ಕ್ ಎಂಬ ಉಗ್ರ ಎಡಪಂಥೀಯ ಪರಿಸರವಾದಿ ಸಂಘಟನೆ, ಮಿಯಾ ಕ್ಯಾಂಪಸೀನಾ ಎಂಬ ಸಮಾಜವಾದಿ ಸಂಘಟನೆ, ಪಶ್ಚಿಮದ ಪ್ರಜಾಪ್ರಭುತ್ವಗಳನ್ನು ಹಾಳುಗೆಡವುದನ್ನೇ ಘೊಷಿತ ಉದ್ದೇಶವನ್ನಾಗಿಸಿಕೊಂಡಿರುವ ಎಕ್ಸ್​ಟಿಂಕ್ಷನ್ ರೆಬೆಲಿಯನ್ ಎಂಬ ಉಗ್ರ ಎಡಪಂಥೀಯ ಅರಾಜಕತಾ ಸಂಘಟನೆ ಭಾರತದ ರೈತರ ಪರವಾಗಿ ನಿಂತಿವೆ! ಗ್ರೆಟಾ ಬಯಲು ಮಾಡಿದ ಯೋಜನಾದಾಖಲೆಯನ್ನು ತಯಾರಿಸಿದ್ದು ಆಸ್ಕ್ ಇಂಡಿಯಾ ವೈ.ಕಾಮ್ ಎಂಬ ವೆಬ್​ಸೈಟ್, ಇದನ್ನು ಸೃಷ್ಟಿಸಿದ್ದು ಪೊಯೆಟಿಕ್ ಜಸ್ಟಿಸ್ ಫೌಂಡೇಶನ್ ಎಂಬ ಉಗ್ರ ಎಡಪಂಥೀಯ ಸಂಘಟನೆ, ಅದರ ಸಹಸಂಸ್ಥಾಪಕ ಎಮ್ ಓ ಧಲಿವಾಲ್ ಎಂಬ ಘೊಷಿತ ಉಗ್ರ ಖಲಿಸ್ತಾನಿ ಕಾರ್ಯಕರ್ತ! ಸಾಕೇ?

    ಎಕ್ಸ್​ಟಿಂಕ್ಷನ್ ರೆಬೆಲಿಯನ್​ನ ಹಣದ ಒಂದು ಮೂಲ ಗ್ರೀನ್​ಪೀಸ್ ಪರಿಸರವಾದಿ ಸಂಘಟನೆ! ಹಾಗೆಯೇ ಹ್ಯೂಮನ್ ರೈಟ್ಸ್ ವಾಚ್ ಎಂಬ ಎಡಪಂಥೀಯ ಸಂಘಟನೆಯೂ ಇದರ ಹಿಂದಿದೆ. ಇದಕ್ಕೆ ಓಪನ್ ಸೊಸೈಟಿಯ ಸ್ಥಾಪಕ, ಘೊಷಿತ ಕ್ರಿಶ್ಚಿಯನ್ ಮತಾಂಧ ಜಾರ್ಜ್ ಸೊರೆಸ್ 2010ರಲ್ಲಿ ನೂರು ಮಿಲಿಯನ್ ಡಾಲರ್ ದೇಣಿಗೆ ನೀಡಿದ್ದಾನೆ. ಅಷ್ಟೇ ಅಲ್ಲ, ಇವನು ಮುಂದೆ ಸರ್ವಾಧಿಕಾರಿಗಳಾಗಲಿರುವವರ ಪಟ್ಟಿ ತಯಾರಿಸಿ ಅವರ ವಿರುದ್ಧದ ಹೋರಾಟಗಳನ್ನು ಬೆಂಬಲಿಸಲು ಒಂದು ಬಿಲಿಯನ್ ಡಾಲರ್ ಮುಡಿಪಾಗಿಟ್ಟಿದ್ದಾನೆ. ಅವನ ಭಾವಿ ಸರ್ವಾಧಿಕಾರಿಗಳ ಲಿಸ್ಟ್​ನಲ್ಲಿ ಪ್ರಧಾನಿ ಮೋದಿಯವರ ಹೆಸರೂ ಇದೆ! ಅಂದರೆ ಮೋದಿ ವಿರುದ್ಧ ಹೋರಾಡುವವರಿಗೆ ಸೊರೆಸ್​ನಿಂದ ಹಣ ಸಂದಾಯವಾಗುತ್ತದೆ!

    ಅಂದರೆ ದೆಹಲಿಯ ರೈತ ಹೋರಾಟ ಖಲಿಸ್ತಾನಿಗಳು, ಉಗ್ರ ಎಡಪಂಥೀಯರು, ಪರಿಸರವಾದಿಗಳು, ಕ್ರಿಶ್ಚಿಯನ್ ಮತೀಯವಾದಿಗಳು ಒಟ್ಟಾಗಿ ಸೇರಿ ಹೆಣೆದಿರುವ ಭಾರತ-ವಿರೋಧಿ ಸಂಚು. ಮೋದಿಯವರ ಮುಂದಿರುವ ಸವಾಲು ಅದೆಷ್ಟು ಆಳವಾದದ್ದು, ಕರಾಳವಾದದ್ದು ನೋಡಿ!

    (ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts