More

    ಹೆಬ್ಬೆಟ್ ರಾಮಕ್ಕನ ಸಂತತಿ ಸಾವಿರವಾಗಲಿ!

    ಹೆಬ್ಬೆಟ್ ರಾಮಕ್ಕನ ಸಂತತಿ ಸಾವಿರವಾಗಲಿ!ಈಗ ಐದು ರಾಜ್ಯಗಳ ಚುನಾವಣಾ ಕಣ ರಂಗೇರಿದೆ. ಬಹುತೇಕ ಎಲ್ಲ ಪಕ್ಷಗಳು ಮಹಿಳಾ ಮತದಾರರನ್ನು ಗುರಿಯಾಗಿಸಿಕೊಂಡು ಬಗೆಬಗೆಯ ಆಶ್ವಾಸನೆಗಳನ್ನು ನೀಡುತ್ತಿವೆ. ತಮಿಳುನಾಡಿನ ಎಐಎಡಿಎಂಕೆ ಪಕ್ಷವು ಗೃಹಿಣಿಯರಿಗೆ 1500 ರೂ.ಗಳ ಮಾಸಿಕ ಭತ್ಯೆ ಕೊಡುವುದಾಗಿ ಭರವಸೆಯಿತ್ತಿದೆ. ಇನ್ನು, ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ಪಕ್ಷ, ಕುಟುಂಬದ ಮಹಿಳಾ ಮುಖ್ಯಸ್ಥರಿಗೆ ಮಾಸಿಕ 500-1000 ರೂ.ವರೆಗೆ ನೆರವು ನೀಡುವುದಾಗಿ ಹೇಳಿದೆ. ಅಲ್ಲದೆ, 50 ಮಹಿಳೆಯರಿಗೆ ಟಿಕೆಟ್ ನೀಡಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಮಹಿಳೆಯರಿಗೆ ಶೇಕಡ 33 ಟಿಕೆಟ್ ನೀಡುವುದಾಗಿ ಟಿಎಂಸಿ ಹೇಳಿತ್ತು. ರಾಜಕೀಯ ಪಕ್ಷಗಳು ಹೀಗೆ ಮಹಿಳೆಯರನ್ನು ಆಕರ್ಷಿಸಲು ಯತ್ನಿಸುವುದಕ್ಕೆ ಬಲವಾದ ಕಾರಣವೂ ಇದೆ. ಈಚಿನ ಚುನಾವಣೆಗಳಲ್ಲಿ ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ಮತದಾನ ಮಾಡುತ್ತಿದ್ದಾರೆ. 2019ರಲ್ಲಿ ಬಿಜೆಪಿ ನೇತೃತ್ವದ ಎನ್​ಡಿಎ ಗಳಿಸಿದ ಮತಪ್ರಮಾಣದಲ್ಲಿ ಮಹಿಳೆಯರ ಪ್ರಮಾಣ ಸರಿಸುಮಾರು ಪುರುಷರಷ್ಟೇ ಇದೆ. ಬಡವರ್ಗದವರಿಗೆ ಅಡುಗೆ ಅನಿಲ ಸಿಲಿಂಡರ್ ನೀಡುವ ಯೋಜನೆ (ಉಜ್ವಲಾ) ಬಿಜೆಪಿ ಪರವಾಗಿ ಕೆಲಸ ಮಾಡಿದೆ ಎಂದು ಫಲಿತಾಂಶೋತ್ತರ ವಿಶ್ಲೇಷಣೆಗಳು ಗುರುತಿಸಿವೆ.

    ಆದರೆ ರಾಜಕೀಯದಲ್ಲಿ ಮಹಿಳೆಯರ ಸಕ್ರಿಯ ಸಹಭಾಗಿತ್ವದ ವಿಚಾರ ಬಂದಾಗ, ಹೇಳಿಕೊಳ್ಳುವಂಥ ಚಿತ್ರಣವೇನೂ ಕಂಡುಬರುವುದಿಲ್ಲ. ಜನಸಂಖ್ಯೆಗೆ ಹೋಲಿಸಿದರೆ ಶಾಸನಸಭೆಗಳಲ್ಲಿ ಸ್ತ್ರೀಯರ ಪ್ರಾತಿನಿಧ್ಯ ಕಡಿಮೆಯೇ ಇದೆ. ಆದರೆ ಪಂಚಾಯಿತಿ ವ್ಯವಸ್ಥೆಯಲ್ಲಿ ಹೀಗಿಲ್ಲ. 1993ರ ಸಂವಿಧಾನ ತಿದ್ದುಪಡಿಯಲ್ಲಿ, ಗ್ರಾಮಪಂಚಾಯಿತಿಯಲ್ಲಿ ಶೇ.33 ಸ್ಥಾನವನ್ನು ಮಹಿಳೆಯರಿಗೆ ಮೀಸಲಿಡಲು ಅವಕಾಶ ಕಲ್ಪಿಸಲಾಯಿತು. ಪಂಚಾಯತ್​ರಾಜ್ ವ್ಯವಸ್ಥೆಯಲ್ಲಿ ಈಗ ಸುಮಾರು 13.50 ಲಕ್ಷ ಮಹಿಳಾ ಪ್ರತಿನಿಧಿಗಳಿದ್ದಾರೆ ಎಂಬುದು ಕೇಂದ್ರ ಸರ್ಕಾರದ ಅಂಕಿಅಂಶಗಳಿಂದ ತಿಳಿದುಬರುತ್ತದೆ. ಅಂದರೆ ಒಟ್ಟು ಪ್ರತಿನಿಧಿಗಳಲ್ಲಿ ಸುಮಾರು ಶೇ.46ರಷ್ಟು ಆಗುತ್ತದೆ. ಕರ್ನಾಟಕದಂತಹ ಕೆಲ ರಾಜ್ಯಗಳಲ್ಲಿ ಈ ಪ್ರಮಾಣ ಶೇ.50ಕ್ಕಿಂತ ಅಧಿಕವಿದೆ. ಈಚೆಗೆ ಜರುಗಿದ ಕರ್ನಾಟಕದ ಗ್ರಾಮಪಂಚಾಯಿತಿ ಚುನಾವಣೆಯಲ್ಲಿ ಸುಮಾರು 90 ಸಾವಿರ ಪ್ರತಿನಿಧಿಗಳಲ್ಲಿ ಮಹಿಳೆಯರ ಪ್ರಮಾಣ ಅರ್ಧದಷ್ಟಿದೆ. ಎಲ್ಲ ರಾಜ್ಯಗಳಲ್ಲಿ ಕನಿಷ್ಠ ಶೇ.50 ಮೀಸಲಾತಿ ಕಲ್ಪಿಸುವ ಪ್ರಸ್ತಾಪ ಕೇಂದ್ರ ಸರ್ಕಾರದ ಮುಂದಿದ್ದು, ಇದಕ್ಕೆ ಸಂವಿಧಾನ ತಿದ್ದುಪಡಿ ಆಗಬೇಕಾಗುತ್ತದೆ. ಸಂಸತ್ ಮತ್ತು ಶಾಸನಭೆಗಳಲ್ಲೂ ಮಹಿಳೆಯರಿಗೆ ಶೇ.33 ಮೀಸಲಾತಿ ನೀಡಬೇಕು ಎಂಬ ಪ್ರಸ್ತಾಪ ನಂತರದಲ್ಲಿ ಮುನ್ನೆಲೆಗೆ ಬಂತು. ಈ ಪ್ರಸ್ತಾಪಕ್ಕೆ ಪ್ರಮುಖ ರಾಜಕೀಯ ಪಕ್ಷಗಳ ವಿರೋಧವಿಲ್ಲ. ಈಗಿನದೇ ಸನ್ನಿವೇಶ ಹೇಳುವುದಾದರೆ, ಪ್ರಧಾನಮಂತ್ರಿ ನರೇಂದ್ರ ಮೋದಿ, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಮುಂತಾದವರು ಈ ನಿಲುವಿಗೆ ಸಹಮತ ಹೊಂದಿದ್ದಾರೆ. ಎಚ್.ಡಿ.ದೇವೆಗೌಡರು ಪ್ರಧಾನಿಯಾಗಿದ್ದಾಗ, ಯುನೈಟೆಡ್ ಫ್ರಂಟ್ ಸರ್ಕಾರವಿದ್ದಾಗ, 1996ರ ಸೆ.12ರಂದು ಲೋಕಸಭೆಯಲ್ಲಿ ಈ ಮಸೂದೆ ಮಂಡನೆಯಾಗಿತ್ತು. 2008ರಲ್ಲಿ ಆಗಿನ ಯುಪಿಎ-1 ಸರ್ಕಾರ ಮಸೂದೆಯನ್ನು ಮತ್ತೆ ಮಂಡಿಸಿತು. 2010ರ ಮಾರ್ಚ್ 9ರಂದು ರಾಜ್ಯಸಭೆ ಈ ಮಸೂದೆಯನ್ನು ಅನುಮೋದಿಸಿತು. ಲೋಕಸಭೆಯಲ್ಲಿ ಅಂಗೀಕಾರವಾಗಬೇಕಿದೆ.

    ವಿಶೇಷ ಎಂದರೆ, ಮಹಿಳೆಯರ ರಾಜಕೀಯ ಹಕ್ಕುಗಳ ಕುರಿತು ವಿಶ್ವಸಂಸ್ಥೆ 1952ರಲ್ಲಿಯೇ ಸಮ್ಮೇಳನ ನಡೆಸಿತ್ತು. ನಿರ್ಣಾಯಕ ಸ್ಥಾನಗಳಲ್ಲಿ ಮಹಿಳೆಯರಿಗೆ ಅರ್ಧದಷ್ಟು ಸಮಾನ ಪ್ರಾತಿನಿಧ್ಯ ಇರುವುದು ಅಗತ್ಯ ಎಂದು ಅದು ಪ್ರತಿಪಾದಿಸಿತ್ತು. ನೀತಿನಿರ್ಧಾರ ಕೈಗೊಳ್ಳುವ ಸ್ಥಾನಗಳಲ್ಲಿ ಮಹಿಳೆಯರಿಗೆ ಕನಿಷ್ಠ ಶೇ.30 ಮೀಸಲಾತಿ ಇರಬೇಕು ಎಂದು ಅದೂ ಹೇಳಿತ್ತು.

    ಮಹಿಳಾ ಜನಪ್ರತಿನಿಧಿಗಳ ವಿಷಯದಲ್ಲಿ ಇರುವ ದೊಡ್ಡ ಆಕ್ಷೇಪವೆಂದರೆ, ಇವರು ಹೆಸರಿಗಷ್ಟೆ ಪ್ರತಿನಿಧಿಗಳು. ನಿಜವಾದ ಅಧಿಕಾರಸೂತ್ರ ಆಕೆಯ ಪತಿ ಅಥವಾ ತಂದೆ ಅಥವಾ ಸೋದರರ ಕೈಲಿರುತ್ತದೆ ಎಂಬುದು. ‘ಈಗ ಪರಿಸ್ಥಿತಿ ಸುಧಾರಿಸಿದೆ. ಮಹಿಳಾ ಸಾಕ್ಷರತಾ ಪ್ರಮಾಣವೂ ಹೆಚ್ಚಾಗಿದೆ ಮತ್ತು ರಾಜಕೀಯ ಅರಿವು ಸಹ ಹೆಚ್ಚಿದೆ’ ಎಂದು, ಮಹಿಳಾ ದಿನದ ಅಂಗವಾಗಿ ‘ವಿಜಯವಾಣಿ’ ಏರ್ಪಡಿಸಿದ್ದ ಸಂವಾದದಲ್ಲಿ ಭಾಗಿಯಾಗಿದ್ದ ಹಿರಿಯ ಅಧಿಕಾರಿ ಡಾ.ಬಿ.ಆರ್.ಮಮತಾ, ಕೋಲಾರ ಶಾಸಕಿ ರೂಪಕಲಾ ಮತ್ತು ಚಿತ್ರನಿರ್ದೇಶಕಿ ರೂಪಾ ಅಯ್ಯರ್ ಅಭಿಪ್ರಾಯಪಟ್ಟಿದ್ದರು. 2017ರಲ್ಲಿ ತಮಿಳುನಾಡಿನ ಆರು ಜಿಲ್ಲೆಗಳಲ್ಲಿ ನಡೆದ ‘ಇಂಡಿಯಾಸ್ಪೆಂಡ್’ ಎಂಬ ಅಧ್ಯಯನವು, ಶೇಕಡ 60 ಮಹಿಳಾ ಪ್ರತಿನಿಧಿಗಳು ತಮ್ಮ ಕುಟುಂಬ ಅಥವಾ ಪುರುಷ ಸಹೋದ್ಯೋಗಿಗಳ ಪ್ರಭಾವ ಅಥವಾ ಹಸ್ತಕ್ಷೇಪ ಇಲ್ಲದೆಯೇ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಾರೆ ಎಂದು ಗುರುತಿಸಿತ್ತು.

    ಇಲ್ಲಿ ‘ಹೆಬ್ಬೆಟ್ ರಾಮಕ್ಕ’ ಕನ್ನಡ ಚಲನಚಿತ್ರ ನೆನಪಾಗುತ್ತದೆ. 2018ರಲ್ಲಿ ಸಿದ್ಧವಾದ ಈ ಚಿತ್ರ ಹಲವು ಪ್ರಶಸ್ತಿಗಳನ್ನೂ ತನ್ನದಾಗಿಸಿಕೊಂಡಿದೆ. ಸಿನಿಮಾದ ಕತೆ ಹೀಗಿದೆ: ತನ್ನ ಪಾಡಿಗೆ ತಾನು ಮನೆಗೆಲಸ ಮತ್ತು ಕೃಷಿ ಕೆಲಸ ಮಾಡಿಕೊಂಡಿದ್ದ ರಾಮಕ್ಕ ಅಚಾನಕ್ ಆಗಿ ಜಿಲ್ಲಾ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸುವ ಸನ್ನಿವೇಶ ಸೃಷ್ಟಿಯಾಗುತ್ತದೆ. ರಾಜಕೀಯ ಒಳಸುಳಿಗಳು ಮತ್ತು ಮೇಲಾಟದಿಂದಾಗಿ ಅಂಥ ಸಂದರ್ಭ ಒದಗುತ್ತದೆ. ಹಾಗೆ ಚುನಾವಣೆಗೆ ನಿಲ್ಲಿಸುವಾಗ ಅವಳ ಒಲವುನಿಲುವು ಕೇಳುವ ವ್ಯವಧಾನವೂ ಇಲ್ಲ; ರಾಮಕ್ಕಳ ಪತಿಗೆ ಸಹ ಪತ್ನಿಯನ್ನು ಒಂದು ಮಾತು ಕೇಳಬೇಕು ಅನಿಸುವುದಿಲ್ಲ. ಹೀಗೆ ಅನಿರೀಕ್ಷಿತವಾಗಿ ಅಖಾಡಕ್ಕೆ ಬಂದ ರಾಮಕ್ಕ ಆಯ್ಕೆಯಾಗಿಬಿಡುತ್ತಾಳೆ. ಅಷ್ಟೇ ಅಲ್ಲ, ಪರಿಸ್ಥಿತಿಯ ಕಾರಣದಿಂದಾಗಿ ಜಿಪಂ ಅಧ್ಯಕ್ಷ ಸ್ಥಾನವೂ ಒಲಿದುಬಿಡುತ್ತದೆ. ಆದರೆ, ಅಕ್ಷರವೇ ಬಾರದ ಆಕೆಗೆ ಮೊದಲ ಸಭೆಯಲ್ಲಿ ಮಾತನಾಡುವುದಕ್ಕೇ ತಿಳಿಯುವುದಿಲ್ಲ. ಇದರಿಂದ ಅಪಹಾಸ್ಯಕ್ಕೀಡಾಗಬೇಕಾದ ಸನ್ನಿವೇಶ. ಇಷ್ಟು ಸಾಲದೆಂಬಂತೆ, ಕೆಲವೇ ದಿನಗಳಲ್ಲಿ ಪತಿಯ ‘ಆಡಳಿತ’ ಶುರುವಾಗುತ್ತದೆ. ಕಡತಕ್ಕೆ ಹೆಬ್ಬೆಟ್ಟು ಒತ್ತುವುದು ಮಾತ್ರ ರಾಮಕ್ಕಳ ಕೆಲಸ. ಊರಲ್ಲೆಲ್ಲ ಇದು ಸುದ್ದಿಯಾಗುತ್ತದೆ, ‘ಹೆಬ್ಬೆಟ್ ರಾಮಕ್ಕ’ ಎಂಬ ವ್ಯಂಗ್ಯದ ಬಾಣಗಳು ಚುಚ್ಚುತ್ತವೆ. ರಾಮಕ್ಕನ ಆತ್ಮಾಭಿಮಾನ ಕೆಣಕಿದಂತಾಗುತ್ತದೆ. ಯಾರಿಗೂ ತಿಳಿಯದಂತೆ ಅಕ್ಷರ ಕಲಿತ ಆಕೆ, ಒಂದು ದಿನ ಇದ್ದಕ್ಕಿದ್ದಂತೆ ಜಿಪಂ ಸಭೆಯಲ್ಲಿ ಕಡತ ಓದಿದಾಗ ಎಲ್ಲರಿಗೂ ಅಚ್ಚರಿ. ಓದಲು, ಬರೆಯಲು ಕಲಿತಿದ್ದು ಆಕೆಯ ಜೀವನದಲ್ಲಿ ಟರ್ನಿಂಗ್ ಪಾಯಿಂಟ್. ಅಲ್ಲಿಂದ ಮುಂದೆ ಕಡತ ಓದದೆ ಸಹಿ ಹಾಕುವುದಿಲ್ಲ. ಪತಿರಾಯನ ಆಟಾಟೋಪಕ್ಕೆ ಕಡಿವಾಣ ಬೀಳುತ್ತದೆ. ರಾಮಕ್ಕಳ ಪ್ರಾಮಾಣಿಕತೆ ಯಾವಮಟ್ಟಿಗೆ ಪ್ರಖರವಾಗಿರುತ್ತದೆಂದರೆ, ಪತಿ ವಿರುದ್ಧ ಆರೋಪ ಕೇಳಿಬಂದಾಗ, ವಿಚಾರಣೆಗೆ ಸಮಿತಿ ರಚಿಸಲೂ ಹಿಂದೆಮುಂದೆ ನೋಡುವುದಿಲ್ಲ. ರಾಜಕೀಯ ಒಳಸುಳಿಯಲ್ಲಿ ಅನೇಕ ಪ್ರತಿರೋಧಗಳು, ಟೀಕೆಟಿಪ್ಪಣಿಗಳು ಎದುರಾದರೂ ನ್ಯಾಯದ ಹಾದಿಯಿಂದ ಆಚೀಚೆ ಸರಿಯಲು ಒಪ್ಪದೆ ಮಾದರಿಯಾಗುತ್ತಾಳೆ. ಕೊನೆಗೆ ಗಂಡ ಸಹ ಆಕೆಯ ಹಾದಿಯನ್ನೇ ಒಪು್ಪತ್ತಾನೆ. ರಾಮಕ್ಕ ನಂತರದಲ್ಲಿ ಎಂಎಲ್​ಎ ಚುನಾವಣೆಯಲ್ಲಿ ಗೆದ್ದುಬರುತ್ತಾಳೆ.

    ‘ಹೆಬ್ಬೆಟ್ ರಾಮಕ್ಕ’ ‘ಎಂಎಲ್​ಎ ರಾಮಕ್ಕ’ ನಾಗುವವರೆಗೆ ಸಾಗಿದ ದಾರಿ ಮಾದರಿಯಾಗುವಂಥದು. ಹೆಬ್ಬೆಟ್ ರಾಮಕ್ಕನಾಗಿ ಅನುಭವಿ ನಟಿ ತಾರಾ ಪಾತ್ರಕ್ಕೆ ಜೀವತುಂಬಿದ್ದಾರೆ. ಹಿರಿಯ ನಟ ಕಲಾವಿದ ದೇವರಾಜ್ ಕೂಡ ಪಾತ್ರಕ್ಕೆ ತಕ್ಕಂತೆ ಸಲೀಸಾಗಿ ನಟಿಸಿದ್ದಾರೆ. ಗ್ರಾಮೀಣ ಗಾದೆಗಳನ್ನು ಉದ್ದಕ್ಕೂ ಬಳಸಿದ್ದು ಚಿತ್ರವನ್ನು ಇನ್ನೊಂದು ಸ್ತರಕ್ಕೆ ಒಯ್ದಿದೆ. ಇದು ಮೂರು ವರ್ಷ ಹಿಂದೇ ಬಂದ ಸಿನಿಮಾವಾದರೂ, ಕೆಲ ತಿಂಗಳ ಹಿಂದೆ ಪಂಚಾಯಿತಿಗಳಿಗೆ ಹೊಸಬರು ಆರಿಸಿಹೋದ ಹಿನ್ನೆಲೆಯಲ್ಲಿ ಅವರು ಒಮ್ಮೆ ಚಿತ್ರ ನೋಡಿದರೆ ಒಳಿತು. ಮಹಿಳೆಯರ ಹೆಸರಿನಲ್ಲಿ ಆಡಳಿತ ನಡೆಸುವವರು ಅವರ ಗಂಡನೋ, ತಂದೆಯೋ ಆಗಿರ್ತಾರೆ ಎಂಬೆಲ್ಲ ಟೀಕೆಗಳಿಗೆ ‘ಹೆಬ್ಬೆಟ್ ರಾಮಕ್ಕ’ ಸಮರ್ಥವಾಗಿ ಉತ್ತರ ನೀಡುವುದು ಮಹಿಳೆಯರ ಆತ್ಮವಿಶ್ವಾಸವನ್ನು ಹೆಚ್ಚಿಸಬಲ್ಲ ಸಂದೇಶ ನೀಡುತ್ತದೆ.

    ***

    ಅದೊಂದು ದೊಡ್ಡ ರಾಜ್ಯ. ಜನಸಂಖ್ಯೆಯೂ ಬಹಳವಿತ್ತು. ಆದರೂ ಅಲ್ಲಿನ ಜನ ಖುಷಿಖುಷಿಯಾಗೇ ಇದ್ದರು. ಕಾಲಕಾಲಕ್ಕೆ ಮಳೆಬೆಳೆ ಆಗುತ್ತಿತ್ತು. ಜನರು ಸಂತಸದಿಂದಿರಲು ಅಲ್ಲಿನ ರಾಜನ ಆಡಳಿತ ವೈಖರಿ ಮುಖ್ಯ ಕಾರಣವಾಗಿತ್ತು. ಆ ರಾಜ ಅಂಗವಿಕಲ. ಒಂದು ಕಾಲು ಮತ್ತು ಒಂದು ಕಣ್ಣು ಮಾತ್ರ ಇತ್ತು. ಆದರೆ ಆತನ ಬುದ್ಧಿವಂತಿಕೆ ಮತ್ತು ವಿವೇಚನಾ ಶಕ್ತಿ ಅಪಾರವಾಗಿತ್ತು. ಹೀಗಾಗಿ ಅಂಗವೈಕಲ್ಯ ಎಂಬುದು ಕೊರತೆ ಎನಿಸಿರಲಿಲ್ಲ. ಒಂದು ದಿನ ರಾಜ ಅರಮನೆಯಲ್ಲಿ ಅತ್ತಿಂದಿತ್ತ ತಿರುಗಾಡುತ್ತಿದ್ದ. ಆಗ ಆತನಿಗೆ ಗೋಡೆಗಳ ಮೇಲೆ ಇರುವ ತನ್ನ ಪೂರ್ವಜರ ಚಿತ್ರಪಟಗಳು ಕಂಡವು. ಒಂದು ಕ್ಷಣ ತನ್ನ ವಂಶದ ಕುರಿತಾಗಿ ಹೆಮ್ಮೆಯೆನಿಸಿತು. ಮುಂದೊಂದು ದಿನ ತನ್ನ ಮಕ್ಕಳೂ ಗೋಡೆಯ ಮೇಲೆ ತನ್ನ ಚಿತ್ರ ಕಂಡು ಹೆಮ್ಮೆಪಡಬಹುದು ಎಂಬ ಅನಿಸಿಕೆ ಹಾದುಹೋಯಿತು. ಮರುಕ್ಷಣವೇ, ತಾನು ಅಂಗವಿಕಲ, ಹೀಗೆ ಗೋಡೆಯ ಮೇಲೆ ತನ್ನ ಚಿತ್ರ ಇರಲು ಹೇಗೆ ಸಾಧ್ಯ ಎಂದು ಬೇಸರಗೊಂಡ. ಆದರೂ ಕಲಾವಿದರ ಕೈಲಿ ತನ್ನ ಚಿತ್ರ ರಚಿಸಲು ಹೇಳಬೇಕು, ಹೇಗೆ ಬರುತ್ತದೆ ನೋಡೋಣ ಅಂದುಕೊಂಡು ಹಲವು ಕಲಾವಿದರನ್ನು ಅರಮನೆಗೆ ಕರೆಸಿದ. ರಾಜನ ಮಾತು ಕೇಳಿ ಕಲಾವಿದರಿಗೆ ಅಯೋಮಯ. ರಾಜ ಹೇಗಿರುವನೋ ಹಾಗೆ ಚಿತ್ರ ಬರೆದರೆ ಕೋಪಗೊಂಡಾನು, ಏನಾದರೂ ಶಿಕ್ಷೆ ಕೊಟ್ಟಾನು ಎಂಬ ಭಯ. ಹೀಗಾಗಿ ಯಾರೂ ಮಾತಾಡದೆ ಸುಮ್ಮನೆ ನಿಂತರು. ಆಗ ಒಬ್ಬ ಕಲಾವಿದ ತಾನು ಚಿತ್ರ ರಚಿಸುವುದಾಗಿ ಘೋಷಿಸಿದ. ರಾಜನೂ ಸೇರಿದಂತೆ ಎಲ್ಲರಿಗೂ ಅಚ್ಚರಿ-ಈತ ಹೇಗೆ ಚಿತ್ರ ಬಿಡಿಸಿಯಾನು ಎಂದು. ಕಲಾವಿದರಿಗೋ ತಳಮಳ. ಈ ಆಸಾಮಿ ರಾಜನ ಕೈಲಿ ಶಿಕ್ಷೆಗೆ ಒಳಗಾಗುತ್ತಾನೆ ಎಂಬ ಹೆದರಿಕೆ. ಆದರೆ ಆತ ಮಾತ್ರ ಶಾಂತನಾಗಿದ್ದು, ದೃಢವಾಗಿದ್ದ. ಹಲವು ದಿನಗಳ ಕಾಲ ಶ್ರಮವಹಿಸಿ ರಾಜನ ಚಿತ್ರ ಬಿಡಿಸಿದ. ಎಲ್ಲರಿಗೂ ಕುತೂಹಲ. ಆಸ್ಥಾನದಲ್ಲಿ ಕಿಕ್ಕಿರಿದು ಜನ ಸೇರಿದ್ದರು. ರಾಜನಿಗೂ ತವಕ, ತನ್ನ ಚಿತ್ರ ಹೇಗೆ ಬಂದಿರಬಹುದೆಂದು. ಅಂತೂ ಕೊನೆಗೆ ಕಲಾವಿದ ಚಿತ್ರವನ್ನು ಅನಾವರಣಗೊಳಿಸಿದ. ಅದನ್ನು ಕಂಡವರು ಅಚ್ಚರಿಗೀಡಾದರು. ಆ ಕಲಾವಿದ ಬಹಳ ಜಾಣ. ಒಂದು ಕುದುರೆಯ ಮೇಲೆ ರಾಜನ ಒಂದು ಕಾಲು ಕಾಣುವಂತೆ ಮತ್ತು ಕೈಯಲ್ಲಿ ಬಿಲ್ಲುಹಿಡಿದು ಒಂದು ಕಣ್ಣುಮುಚ್ಚಿ ಗುರಿ ಹಿಡಿದಂತೆ ರಾಜನ ಚಿತ್ರ ರಚಿಸಿದ್ದ. ರಾಜ ಅಂಗವಿಕಲ ಎಂದು ಯಾರಿಗೂ ಸ್ವಲ್ಪವೂ ಅನುಮಾನ ಬರುವಂತಿರಲಿಲ್ಲ. ರಾಜನಿಗೂ ಚಿತ್ರ ಮೆಚ್ಚುಗೆಯಾಯಿತು. ರಾಜ ಆ ಕಲಾವಿದನಿಗೆ ದೊಡ್ಡ ಬಹುಮಾನವನ್ನೇ ನೀಡಿದ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ.

    ಆಡಳಿತವೂ ಅಷ್ಟೇ.. ಅಲ್ಲಿ ಕೆಲವು ವ್ಯತ್ಯಾಸಗಳು, ಏರುಪೇರುಗಳು, ಕುಂದುಕೊರತೆಗಳು ಎಲ್ಲ ಇರುತ್ತವೆ. ಅವು ಕಾಣದಂತೆ ಅಥವಾ ಹೊರಗೆ ಗೊತ್ತಾಗದಂತೆ ಆಡಳಿತ ನಡೆಸುವುದು ಬಹಳ ಮುಖ್ಯ. ಅದಕ್ಕೆ ಜಾಣ ಮಂತ್ರಿಗಳು ಮತ್ತು ಅಧಿಕಾರಿಗಳು ಸಹ ಬೇಕಾಗುತ್ತಾರೆ. ಆಡಳಿತ ನಡೆಸಲು ವಿವೇಚನೆ, ಸಮಯಪ್ರಜ್ಞೆ, ದಾಳ ಉರುಳಿಸುವ ಚಾಕಚಕ್ಯತೆ ಎಲ್ಲವೂ ಬೇಕಾಗುತ್ತವೆ.

    ಕೊನೇ ಮಾತು: ರಾಜಕೀಯ ಮಾತ್ರವಲ್ಲ, ಬೇರೆ ಬೇರೆ ರಂಗಗಳಲ್ಲೂ ಮಹಿಳೆಯರು ಕೂಡ ಯಾಕೆ ಮುಂಚೂಣಿ ಸ್ಥಾನಗಳಲ್ಲಿ ಇರಬೇಕು ಎಂಬುದಕ್ಕೆ ಮನೋವೈಜ್ಞಾನಿಕ ಕಾರಣಗಳನ್ನು ತಜ್ಞರು ನೀಡುತ್ತಾರೆ. ಸ್ತ್ರೀಯರಲ್ಲಿ ಅಂತಃಕರಣ, ಸಂವೇದನೆ, ಮಾತೃಭಾವ ಸಹಜವಾಗಿಯೇ ಇರುತ್ತದೆ. ಹಾಗಾಗಿ ಆಕೆ ಆಡಳಿತ ನಡೆಸುವಾಗ ಈ ಗುಣಗಳು ಪ್ರಕಟವಾಗುತ್ತವೆ. ಇದರಿಂದ ಎಲ್ಲರಿಗೂ ಒಳಿತಾಗುತ್ತದೆ ಎಂಬುದು ಈ ತರ್ಕ. ಇದಕ್ಕೆ ಅಪವಾದಗಳೂ ಇಲ್ಲವೆಂದಲ್ಲ. ಆದರೂ, ಒಂದು ಆಶಾಭಾವ ಇದ್ದೇ ಇರುತ್ತದೆ. ಮಹಿಳೆ ಮಾತ್ರ ಎಂದಲ್ಲ, ಆಡಳಿತಾತ್ಮಕವಾಗಿ ಉನ್ನತ ಸ್ಥಾನದಲ್ಲಿರುವ ಪುರುಷರಲ್ಲೂ ಮಾತೃಭಾವ ಜಾಗೃತವಾದರೆ ಈ ಭುವಿ ನಂದನವನವಾದೀತು!

    (ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts