More

    ಹಿಜಾಬ್ ವಿವಾದ: ಕುತೂಹಲದ ಜತೆಗೆ ಆತಂಕ; ನಾಳೆ ಕೆಲವೆಡೆ ಕಾಲೇಜುಗಳಿಗೆ ರಜೆ, ಇನ್ನು ಕೆಲವೆಡೆ ನಿಷೇಧಾಜ್ಞೆ ಜಾರಿ

    ಬೆಂಗಳೂರು: ಹಿಜಾಬ್​ ಧರಿಸಿ ತರಗತಿಗೆ ಹಾಜರಾಗುವ ಸಂಬಂಧ ಭುಗಿಲೆದ್ದಿರುವ ವಿವಾದದ ಹಿನ್ನೆಲೆಯಲ್ಲಿ ರಜೆ ಘೋಷಿಸಲಾಗಿದ್ದ ಕಾಲೇಜುಗಳು ನಾಳೆ ಮರು ಆರಂಭಗೊಳ್ಳಲಿವೆ. ಮತ್ತೊಂದೆಡೆ ಹಿಜಾಬ್​ ಕುರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದೂಡಲಾಗಿರುವ ವಿಚಾರಣೆ ನಾಳೆ ಹೈಕೋರ್ಟ್​​ನಲ್ಲಿ ನಡೆಯಲಿದೆ.

    ಹೀಗಾಗಿ ನಾಳೆ ಹೈಕೋರ್ಟ್​ನಲ್ಲಿ ಏನಾಗಲಿದೆ ಎಂಬ ಕುತೂಹಲ ಒಂದೆಡೆಯಾದರೆ, ಮತ್ತೊಂದೆಡೆ ನಾಳೆ ಕಾಲೇಜುಗಳು ಮರು ಆರಂಭವಾಗಲಿರುವುದರಿಂದ ಮತ್ತೆ ಹಿಜಾಬ್​-ಕೇಸರಿ ಸಂಘರ್ಷ ಉಂಟಾಗಲಿದೆಯೇ ಎಂಬ ಆತಂಕ ಕೂಡ ಕಾಡುತ್ತಿದೆ.

    ಇದರಿಂದಾಗಿ ರಾಜ್ಯದ ಕೆಲವು ಕಾಲೇಜುಗಳನ್ನು ನಾಳೆ ಮರು ಆರಂಭಿಸಲು ಹಿಂಜರಿಕೆ ಇದ್ದು, ರಜೆ ಘೋಷಿಸಲಾಗಿದೆ. ಇನ್ನು ಕೆಲವು ಕಾಲೇಜುಗಳ ಸುತ್ತ ಮುಂಜಾಗ್ರತೆ ದೃಷ್ಟಿಯಿಂದ ಸೆಕ್ಷನ್ 144 ವಿಧಿಸಲಾಗಿದೆ. ನಾಳೆ ಬೆಳಗಾಗುವಷ್ಟರಲ್ಲಿ ಇನ್ನಷ್ಟು ಕಾಲೇಜುಗಳಲ್ಲಿ ಇಂಥದ್ದೇ ನಿರ್ಧಾರ ಕೈಗೊಂಡರೂ ಅಚ್ಚರಿ ಏನಿಲ್ಲ.

    ಸದ್ಯ ನಾಳಿನ ಪರಿಸ್ಥಿತಿಯ ಆತಂಕ ಹಾಗೂ ಮುಂಜಾಗ್ರತೆಯ ಹಿನ್ನೆಲೆಯಲ್ಲಿ ರಾಮನಗರ ಮತ್ತು ತುಮಕೂರು ಜಿಲ್ಲೆಗಳ ಕಾಲೇಜುಗಳ 100 ಮೀ. ಸುತ್ತಲಿನ ಪ್ರದೇಶದಲ್ಲಿ ಸೆಕ್ಷನ್ 144 ವಿಧಿಸಿ, ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
    ಕಾಲೇಜಿನ ನೂರು ಮೀಟರ್ ಸುತ್ತಲಿನ ಪ್ರದೇಶದಲ್ಲಿ ಐದು ಮಂದಿಗಿಂತ ಹೆಚ್ಚು ಜನ ಸೇರಿದರೆ ಕೇಸ್ ದಾಖಲಿಸಲಾಗುವುದು, ಗುಂಪುಗೂಡಿ ಗಲಾಟೆ ಮಾಡಿದರೆ ಕ್ರಿಮಿನಲ್ ಕೇಸ್ ದಾಖಲು ಮಾಡಲಾಗುವುದು ಎಂದು ರಾಮನಗರ ಜಿಲ್ಲಾಧಿಕಾರಿ ಡಾ.ರಾಕೇಶ್​ ಕುಮಾರ್ ಆದೇಶ ಹೊರಡಿಸಿದ್ದಾರೆ.

    ಇನ್ನು ತುಮಕೂರು ಜಿಲ್ಲೆಯ ಎಲ್ಲ ಕಾಲೇಜುಗಳ 200 ಮೀ. ಸುತ್ತಲಿನ ಪ್ರದೇಶದಲ್ಲಿ ಬೆಳಗ್ಗೆ 6ರಿಂದ 144 ಸೆಕ್ಷನ್ ಜಾರಿಗೊಳಿಸಲಾಗುವುದು. ನಿಷೇಧಾಜ್ಞೆ ಜಾರಿ ಇರುವುದರಿಂದ ಎಲ್ಲ ನಿಯಮಗಳನ್ನು ಪಾಲಿಸಬೇಕು ಎಂಬುದಾಗಿ ತುಮಕೂರು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್ ಆದೇಶಿಸಿದ್ದಾರೆ.

    ಕಾಲೇಜಿನ ಗುರುತಿನ ಚೀಟಿ ಹೊಂದಿರುವ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗೆ ಮಾತ್ರ ಕಾಲೇಜಿಗೆ ಪ್ರವೇಶ. ಕಾಲೇಜು ಸುತ್ತಮುತ್ತ ಇರುವ ಅಂಗಡಿ ತೆರೆಯಲು ಅವಕಾಶವಿದೆ, ಆದರೆ ಅಂಗಡಿ ಸುತ್ತಮುತ್ತ ಜನ ಗುಂಪುಗೂಡುವಂತಿಲ್ಲ‌. ನಿಷೇಧಾಜ್ಞೆ ಸಮಯದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಸುವಂತಿಲ್ಲ. ಯಾವುದೇ ಮಾರಕಾಸ್ತ್ರಗಳು ಹಾಗೂ ಸ್ಫೋಟಕ ವಸ್ತುಗಳನ್ನ ಹಿಡಿದು ಓಡಾಡುವಂತಿಲ್ಲ‌. ಯಾವುದೇ ಸಭೆ, ಬಹಿರಂಗ ಪ್ರಚಾರ ನಡೆಸುವಂತಿಲ್ಲ. ಅದಕ್ಕೂ ಮೀರಿ ನಡೆದರೆ ಕೇಸ್ ದಾಖಲಿಸಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.

    ಅಲ್ಲದೆ ಕೊಡಗು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲೂ ಸೆಕ್ಷನ್​ 144 ವಿಧಿಸಿ, ನಿಷೇಧಾಜ್ಞೆ ಜಾರಿಗೊಳಿಸುವ ಕುರಿತು ಮಾಹಿತಿ ನೀಡಲಾಗಿದ್ದು, ಆ ಮೂಲಕ ವಿದ್ಯಾರ್ಥಿಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸಲಾಗಿದೆ.

    ಇನ್ನು ಹಿಜಾಬ್ ವಿವಾದದಿಂದಾಗಿ ಅತಿ ಹೆಚ್ಚು ಗಲಾಟೆಯಾಗಿದ್ದ ಶಿವಮೊಗ್ಗ ಜಿಲ್ಲೆಯ 3 ಕಾಲೇಜುಗಳಿಗೆ ನಾಳೆ ರಜೆ ಘೋಷಣೆ ಮಾಡಲಾಗಿದೆ. ಇಂದು ಸಂಜೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ‌ ನಡೆದ ಕಾಲೇಜುಗಳ ಪ್ರಾಚಾರ್ಯರ ಸಭೆಯಲ್ಲಿ ಈ ತೀರ್ಮಾನ ತಳೆಯಲಾಗಿದೆ.

    ಶಿವಮೊಗ್ಗ ಬಾಪೂಜಿ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮೀನಾಕ್ಷಿ ಭವನ ಬಳಿಯ ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಸಾಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ರಜೆ ಘೋಷಣೆ ಮಾಡಲಾಗಿದೆ. ಈ ಕಾಲೇಜುಗಳಲ್ಲಿ ಹಿಜಾಬ್ ಸಂಬಂಧಿಸಿದಂತೆ ಭಾರಿ ಗಲಾಟೆ ನಡೆದಿತ್ತು. ನಾಳೆಯಿಂದ ಎಲ್ಲ ಕಾಲೇಜುಗಳು ಆರಂಭಗೊಂಡರೂ ನಾಳೆ ಒಂದು ದಿನ ಈ ಕಾಲೇಜುಗಳಿಗೆ ರಜೆ ನೀಡಲು ತೀರ್ಮಾನಿಸಲಾಗಿದೆ.

    ರೈಲ್ವೆ ಪ್ಲ್ಯಾಟ್​ಫಾರ್ಮ್​ನಲ್ಲಿ ಸಿಲುಕಿದ ಬಾಲಕಿ; ನೆರವಿಗೆ ಧುಮುಕಿ ಜೀವ ಉಳಿಸಿದ ಲೋಕೋಪೈಲಟ್​

    ‘ಇನ್ನೂ ಗ್ಯಾರಂಟೀ..’ ಎನ್ನುತ್ತ ಆ ನೆನಪನ್ನು ಹಂಚಿಕೊಂಡ ರಾಘವೇಂದ್ರ ರಾಜಕುಮಾರ್​

    ಎಂಥ ದುಸ್ಥಿತಿಯಲ್ಲಿದೆ ನೋಡಿ ನಿರ್ದೇಶಕ ಪುಟ್ಟಣ್ಣ ಕಣಗಾಲರ ಮನೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts