More

    ಜಿಲ್ಲಾಧಿಕಾರಿ ಆದೇಶಕ್ಕೆ ಕಿಮ್ಮತ್ತೂ ನೀಡದ ಖಾಸಗಿ ಶಾಲೆಗಳು; ಜಿಟಿಜಿಟಿ ಮಳೆಯಲ್ಲಿಯೆ ನಡೆದವು ತರಗತಿ

    ರಾಣೆಬೆನ್ನೂರ: ನಿರಂತರ ಮಳೆ ಹಿನ್ನೆಲೆಯಲ್ಲಿ ಮಕ್ಕಳ ಹಿತದೃಷ್ಟಿಯಿಂದ ಮುಂಜಾಗೃತ ಕ್ರಮವಾಗಿ ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಗುರುವಾರ ಎಲ್ಲ ಶಾಲೆ-ಪಿಯು ಕಾಲೇಜ್‌ಗಳಿಗೆ ರಜೆ ಘೋಷಿಸಿದ್ದಾರೆ. ಅಲ್ಲದೆ ಜಿಲ್ಲಾಧಿಕಾರಿಯವರ ಸೂಚನೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸ್ವತಃ ಸಿಎಂ ಸಿದ್ದರಾಮಯ್ಯ ಸಹ ಸೂಚಿಸಿದ್ದಾರೆ.
    ಆದರೆ, ರಾಣೆಬೆನ್ನೂರಿನ ಕೆಲ ಖಾಸಗಿಯವರು ಜಿಲ್ಲಾಧಿಕಾರಿ ಆದೇಶಕ್ಕೂ ಕಿಮ್ಮತ್ತೂ ನೀಡದೆ ಗುರುವಾರ ತರಗತಿ ಆರಂಭಿಸಿರುವುದು ಮೂಲಕ ಪಾಲಕರ ಆಕ್ರೋಶಕ್ಕೆ ಕಾರಣವಾಗಿದೆ.
    ನಗರದ ರೋಟರಿ ಪ್ರಾಥಮಿಕ ಹಾಗೂ ಪ್ರೌಢಶಾಲೆ ಮತ್ತು ನ್ಯಾಷನಲ್ ಪಬ್ಲಿಕ್ ಶಾಲೆಯವರು ಜಿಲ್ಲಾಧಿಕಾರಿ ಆದೇಶದ ಹೊರತಾಗಿಯೂ ಬೆಳಗ್ಗೆಯಿಂದ ತರಗತಿ ಆರಂಭಿಸಿದ್ದರು. ವಿಷಯ ತಿಳಿದ ಬಿಇಒ ಎಂ.ಎಚ್. ಪಾಟೀಲ ಮಧ್ಯಾಹ್ನ ಶಾಲೆಗಳಿಗೆ ಭೇಟಿ ನೀಡಿ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ ಬಳಿಕ ಮಕ್ಕಳನ್ನು ಮನೆಗೆ ಕಳುಹಿಸಿದರು.
    ಪಾಲಕರ ಆಕ್ರೋಶ…
    ನಿರಂತರ ಮಳೆಯಿಂದ ಮಕ್ಕಳಿಗೆ ಯಾವುದೇ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಹಾಗೂ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಜಿಲ್ಲಾಧಿಕಾರಿಯವರು ಶಾಲೆ-ಕಾಲೇಜ್‌ಗಳಿಗೆ ರಜೆ ಘೋಷಣೆ ಮಾಡಿರುತ್ತಾರೆ. ಆದರೆ, ಶಾಲಾ ಆಡಳಿತ ಮಂಡಳಿಯವರು ಆದೇಶ ಕೂಡ ಲೆಕ್ಕಿಸದೆ ಮಕ್ಕಳನ್ನು ಶಾಲೆಗೆ ಕಳುಹಿಸಿ ಎಂದು ಹೇಳುತ್ತಿದ್ದಾರೆ.
    ಖಾಸಗಿ ಶಾಲೆಗಳಿಗೆ ನದಿಪಾತ್ರದ ಗ್ರಾಮಗಳ ಮಕ್ಕಳು ಸೇರಿ ಗ್ರಾಮೀಣ ಹಾಗೂ ನಗರದ ಪ್ರದೇಶದಿಂದ ಮಕ್ಕಳು ಬರುತ್ತಾರೆ. ಬಸ್ ಹಾಗೂ ಇತರ ವಾಹನದ ಮೂಲಕ ಮಕ್ಕಳು ಶಾಲೆಗೆ ಬರುವಾಗ ಏನಾದರೂ ಅವಘಡ ಸಂಭವಿಸಿದರೆ ಯಾರು ಜವಾಬ್ದಾರರು ಎಂಬುದು ಪಾಲಕರ ಪ್ರಶ್ನೆಯಾಗಿದೆ. ಆದ್ದರಿಂದ ಜಿಲ್ಲಾಡಳಿತ ಆದೇಶದ ಹೊರತಾಗಿಯೂ ಶಾಲೆ ನಡೆಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂಬುದು ಪಾಲಕರ ಒತ್ತಾಯವಾಗಿದೆ.
    ಆಡಳಿತ ಮಂಡಳಿ ನಿರ್ಣಯ…
    ಜಿಲ್ಲಾಧಿಕಾರಿಯವರು ಶಾಲಾ-ಕಾಲೇಜ್ ರಜೆ ಘೋಷಿಸಿರುವ ಕುರಿತು ಶಾಲಾ ಆಡಳಿತ ಮಂಡಳಿಯವರ ಗಮನಕ್ಕೆ ತಂದರೂ ಅವರು ತಲೆಕೆಡಿಸಿಕೊಳ್ಳುತ್ತಿಲ್ಲ. ನಮ್ಮ ಶಾಲೆ-ಕಾಲೇಜ್‌ನ ಕಟ್ಟಡ ಗಟ್ಟಿಯಾಗಿವೆ. ನಾವು ಜಿಲ್ಲಾಧಿಕಾರಿಗೆ ಹೇಳುತ್ತೇವೆ. ನೀವು ಶಾಲೆ ನಡೆಸಿ ಎಂದು ಶಾಲಾ ಆಡಳಿತ ಮಂಡಳಿಯವರು ಹೇಳುತ್ತಿದ್ದಾರೆ. ಹೀಗಾಗಿ ನಾವು ಅನಿವಾರ್ಯ ಎಂಬಂತೆ ಶಾಲೆ ನಡೆಸಬೇಕಿದೆ ಎಂದು ಖಾಸಗಿ ಶಾಲೆವೊಂದರ ಶಿಕ್ಷಕರ ಮಾಧ್ಯಮದವರ ಎದುರು ಅಳಲು ತೋಡಿಕೊಂಡರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts