More

    ಬಿರು ಬಿಸಿಲಿಗೆ ತಂಪೆರೆದ ಮಳೆ

    ಕಾರವಾರ/ಹಳಿಯಾಳ: ಜಿಲ್ಲೆಯ ವಿವಿಧೆಡೆ ಶುಕ್ರವಾರ ಅಕಾಲಿಕ ಮಳೆಯಾಗಿದ್ದು, ಕಳೆದ ಒಂದು ವಾರದಿಂದ ಇದ್ದ ಭಾರಿ ಉಷ್ಣಾಂಶಕ್ಕೆ ತಂಪೆರೆದಿದೆ.

    ಕಾರವಾರ, ಅಂಕೋಲಾ ಹೊನ್ನಾವರ ಭಾಗದಲ್ಲಿ ರಾತ್ರಿ 8 ಗಂಟೆಯ ಹೊತ್ತಿಗೆ ಭಾರಿ ಸಿಡಿಲಿನೊಂದಿಗೆ ಮಳೆಯಾಗಿದೆ. ಇದರಿಂದ ಕೆಲ ಕಾಲ ವಿದ್ಯುತ್ ವ್ಯತ್ಯಯ ಉಂಟಾಗಿತ್ತು. ಶಿರಸಿಯ ಗ್ರಾಮೀಣ ಭಾಗಗಳಲ್ಲಿ ಸಾಯಂಕಾಲ 5.30 ರಿಂದ ರಾತ್ರಿಯವರೆಗೂ ಮಳೆಯಾಯಿತು. ಸೋಂದಾ ಭಾಗದಲ್ಲಿ ಆಲಿಕಲ್ಲು ಬಿದ್ದಿದೆ. ಜೊಯಿಡಾ, ಯಲ್ಲಾಪುರದಲ್ಲೂ ಸಾಯಂಕಾಲದ ಹೊತ್ತಿಗೆ ತುಂತುರು ಮಳೆಯಾಗಿದೆ.

    ಮಾವಿನ ಬೆಳೆ ಹಾನಿ: ಹಳಿಯಾಳ ಪಟ್ಟಣ ಹಾಗೂ ಗ್ರಾಮಾಂತರ ಭಾಗದಲ್ಲಿ ಭಾರಿ ಮಳೆಯಾಗಿದೆ. ತೇರಗಾಂವ ಜಿಪಂ ವ್ಯಾಪ್ತಿಯ ಯಡೋಗಾ ಬಲೋಗಾ ಗ್ರಾಮದಲ್ಲಿ ಬಿರುಗಾಳಿ ಸಮೇತ ಅಪಾರ ಮಳೆಯಾಗಿದೆ. ಪರಿಣಾಮ ಮಾವಿನ ಮರಗಳು ಬಿದ್ದು, ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಮನೆಯ ಹೆಂಚುಗಳು ಹಾರಿ ಹೋಗಿವೆ. ದನದ ಕೊಟ್ಟಿಗೆಗೆ ಹಾಸಿದ ಮೇಲ್ಛಾವಣಿಗಳು ಕಿತ್ತು ಬಿದ್ದಿವೆ.ಗ್ರಾಮ ಲೆಕ್ಕಾಧಿಕಾರಿ ಮುಕುಂದ ಚಂದ್ರಕಾಂತ ಬಸವಮೂರ್ತಿ ನೇತೃತ್ವದಲ್ಲಿ ಕಂದಾಯ ಇಲಾಖೆಯ ತಂಡವು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ತೋಟಗಾರಿಕೆ ಅಧಿಕಾರಿಗಳು ಮಾವಿನ ಬೆಳೆ ಹಾನಿ ಸಮೀಕ್ಷೆಗೆ ಮುಂದಾಗಿದ್ದಾರೆ.

    ವಾರದಿಂದ ಭಾರಿ ಸೆಕೆ: ಕಳೆದ ಒಂದು ವಾರದಿಂದ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳ ಉಷ್ಣಾಂಶಕ್ಕೆ ಸರಿಸಮನಾಗಿ ಕಾರವಾರದಲ್ಲೂ ಸೆಕೆಯ ಅನುಭವ ಉಂಟಾಗುತ್ತಿದೆ.ಜನ ಮನೆಯೊಳಗೆ ಇರಲಾರೆ ಎಂಬ ಪರಿಸ್ಥಿತಿ ಉಂಟಾಗಿತ್ತು. ಫ್ಯಾನ್ ಹಾಕಿದರೂ ಬರುವ ಬಿಸಿ ಗಾಳಿಯಿಂದ ಜನ ಒದ್ದಾಡುವಂತಾಗಿತ್ತು. ಎಳನೀರು, ಐಸ್ಕ್ರೀಂ, ಲಿಂಬು ಸೋಡಾ ಮುಂತಾದ ತಂಪು ಪಾನೀಯಗಳ ವ್ಯಾಪಾರ ಗಣನೀಯವಾಗಿ ಹೆಚ್ಚಿತ್ತು.

    ಬುಧವಾರ ಸೆಕೆಯ ಪ್ರಮಾಣ ಮಿತಿ ಮೀರಿತ್ತು. ಭಾರತೀಯ ಹವಾಮಾನ ಇಲಾಖೆಯ ಮಾಹಿತಿಯಂತೆ ವಾರದಲ್ಲಿ ಗರಿಷ್ಠ ಉಷ್ಣಾಂಶ 33 ಡಿಗ್ರಿ ಸೆಲ್ಶಿಯಸ್​ನಿಂದ 36 ಡಿಗ್ರಿ ಸೆಲ್ಸಿಯಸ್ ನಡುವೆ ಇದೆ. ಶೇ. 60 ರಿಂದ 92 ರವರೆಗೂ ತೇವಾಂಶ ಸಹ ಇರುವುದರಿಂದ 40 ಡಿಗ್ರಿ ಸೆಲ್ಸಿಯಸ್​ಗೂ ಅಧಿಕ ಉಷ್ಣಾಂಶ ಭಾಸವಾಗುತ್ತಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಬುಧವಾರ ಮಳೆ ಬಿದ್ದು ವಾತಾವರಣ ತಂಪಾದರೂ ಎರಡು ದಿನದಲ್ಲಿ ಸೆಕೆ ಇನ್ನಷ್ಟು ಹೆಚ್ಚುವ ಆತಂಕವಿದೆ.

    ಸಾರ್ವಕಾಲಿಕ ದಾಖಲೆ: ಕಾರವಾರದ ಉಷ್ಣಾಂಶ ವರ್ಷದಿಂದ ವರ್ಷಕ್ಕೆ ನಿಧಾನವಾಗಿ ಏರುತ್ತಿದೆ.ಭಾರತೀಯ ಹವಾಮಾನ ಇಲಾಖೆಯ ಮಾಹಿತಿಯಂತೆ 1981 ರಿಂದ 2010 ರವರೆಗೆ ಮಾರ್ಚ್ ತಿಂಗಳ ಸರಾಸರಿ ಗರಿಷ್ಠ ಉಷ್ಣಾಂಶ 32.7ಡಿಗ್ರಿ ಸೆಲ್ಸಿಯಸ್, ಏಪ್ರಿಲ್ ತಿಂಗಳ ಉಷ್ಣಾಂಶ 33.5 ಡಿಗ್ರಿ ಸೆಲ್ಸಿಯಸ್, ಹಾಗೂ ಮೇ ತಿಂಗಳಲ್ಲಿ 35.5 ಡಿಗ್ರಿ ಸೆಲ್ಸಿಯಸ್ ಇದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಮಾರ್ಚ್ ತಿಂಗಳ ಸರಾಸರಿ ಉಷ್ಣಾಂಶ 33 ಡಿಗ್ರಿ ಸೆಲ್ಸಿಯಸ್​ಗಿಂತ ಕೆಳಗಿಳಿಯುತ್ತಿಲ್ಲ ಎಂಬುದು ಆತಂಕದ ಸಂಗತಿ. ಇನ್ನು ಏಪ್ರೀಲ್ ಮೇ ತಿಂಗಳ ಕತೆಯೇನು ಎಂಬುದು ಜನರ ದಿಗಿಲು.

    ವಾರದ ಗರಿಷ್ಠ ಉಷ್ಣಾಂಶ

    ಮಾ. 20-34.26 ಡಿಗ್ರಿ ಸೆಲ್ಸಿಯಸ್

    ಮಾ. 21 -33.26 ಡಿಗ್ರಿ ಸೆಲ್ಸಿಯಸ್

    ಮಾ. 22 -33.27 ಡಿಗ್ರಿ ಸೆಲ್ಸಿಯಸ್

    ಮಾ. 23- 34.27 ಡಿಗ್ರಿ ಸೆಲ್ಸಿಯಸ್

    ಮಾ. 24- 36.26 ಡಿಗ್ರಿ ಸೆಲ್ಸಿಯಸ್

    ಮಾರ್ಚ್ ತಿಂಗಳ ದಾಖಲೆ

    2016- 37.04 ಡಿಗ್ರಿ ಸೆಲ್ಸಿಯಸ್ (ಮಾ.4)

    2017-36.06 ಡಿಗ್ರಿ ಸೆಲ್ಸಿಯಸ್ (ಮಾ.2)

    2018 -36.06 ಡಿಗ್ರಿ ಸೆಲ್ಸಿಯಸ್ (ಮಾ.1)

    2019-35.08 ಡಿಗ್ರಿ ಸೆಲ್ಸಿಯಸ್ (ಮಾ.6)

    2020-35.08 ಡಿಗ್ರಿ ಸೆಲ್ಸಿಯಸ್ (ಮಾ.19)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts