ಚಿಕ್ಕಮಗಳೂರು: ಜಿಲ್ಲೆಯ ವಿವಿಧೆಡೆ ಶನಿವಾರ ಸಂಜೆ ಒಂದು ತಾಸಿಗೂ ಹೆಚ್ಚು ಕಾಲ ಗುಡುಗು ಸಹಿತ ಧಾರಾಕಾರ ಮಳೆ ಸುರಿಯಿತು. ಹಲವೆಡೆ ಮರಗಳು ಬಿದ್ದಿವೆ. ಕೆಲವು ಕಡೆ ಮನೆ, ಶಾಲೆಗಳ ಛಾವಣಿಗಳು ಹಾರಿಹೋಗಿವೆ. ನಗರದ ತಗ್ಗು ಪ್ರದೇಶ ಹಾಗೂ ರಸ್ತೆಗಳಲ್ಲಿ ನೀರು ಉಕ್ಕಿ ಹರಿಯಿತಲ್ಲದೆ ಜನರು ಓಡಾಡಲು ಸಮಸ್ಯೆ ಅನುಭವಿಸಬೇಕಾಯಿತು.
ಬೆಳಗ್ಗಿನಿಂದಲೇ ಮೋಡ ಕವಿದ ವಾತಾವರಣವಿತ್ತು. ಸಂಜೆ 5.30ರ ಸುಮಾರಿಗೆ ಮಳೆ ಸುರಿಯತೊಡಗಿತು. ನಗರ ಹೊರವಲಯದ ಗೃಹಮಂಡಳಿ ಬಡಾವಣೆ, ಉಪ್ಪಳ್ಳಿ, ರಾಮನಹಳ್ಳಿ, ಹಾಲೇನಹಳ್ಳಿ, ಕೈಮರ, ಮಲ್ಲೇನಹಳ್ಳಿ, ದಾಸರಹಳ್ಳಿ, ಕಲ್ಲೆದೇವರಪುರ, ತಿಪ್ಪನಹಳ್ಳಿ, ಮುಳ್ಳಯ್ಯನಗಿರಿ ಸುತ್ತಮುತ್ತ ಉತ್ತಮ ಮಳೆಯಾಗಿದೆ. ಬಯಲು ಭಾಗದಲ್ಲಿ ಲಕ್ಯಾ ಹಾಗೂ ಉದ್ದೇಬೋರನಹಳ್ಳಿ ಭಾಗದಲ್ಲಿ ಮಳೆ ಧಾರಾಕಾರವಾಗಿ ಬಂದಿದೆ. ಕಬ್ಬಿನಹಳ್ಳಿ, ಹಾನ್ಬಾಳ್, ಹೊಸಪುರದಲ್ಲಿ ಮಳೆಯಾಗಿದೆ.