More

    ತೇಜಸ್ವಿಯಿಂದ ಕಾಫಿ ಮುಕ್ತ ಮಾರುಕಟ್ಟೆಗೆ

    ಮೂಡಿಗೆರೆ: ಕಾಫಿ ಬೆಳೆಯನ್ನು ಈ ಹಿಂದೆ ಕಾಫಿ ಮಂಡಳಿಗೆ ಮಾರಟ ಮಾಡಬೇಕಾಗಿತ್ತು. ಅದನ್ನು ಮುಕ್ತ ಮಾರುಕಟ್ಟೆ ಮಾಡಲು ತಯಾರಿ ನಡೆಸಿದ್ದು ಹಿರಿಯ ಸಾಹಿತಿ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಎಂದು ಸಮ್ಮೇಳನಾಧ್ಯಕ್ಷ ಹಳೆಕೋಟೆ ರಮೇಶ್ ನೆನಪಿಸಿಕೊಂಡರು.
    19ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರೊಂದಿಗೆ ಮುಕ್ತ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಫಿ ಮುಕ್ತ ಮಾರುಕಟ್ಟೆಯಾಗುವ ಮೊದಲು ಕಾಫಿ ಮಂಡಳಿಯ ಕಚೇರಿಗೆ ಮಾರಾಟ ಮಾಡಿ ಅಲ್ಲಿ ನಿಗದಿ ಪಡಿಸಿದ ಬೆಲೆ ಪಡೆಯಲು ಕಾಯಬೇಕಾಗಿತ್ತು. ಈ ಸಮಸ್ಯೆಯಿಂದ ಬೆಳೆಗಾರರು ಹೊರಬರಲು ಹಲವು ವರ್ಷದಿಂದಲೂ ಮುಕ್ತ ಮಾರುಕಟ್ಟೆ ಕೂಗು ಬೆಳೆಗಾರರ ವಲಯದಿಂದ ಕೇಳಿ ಬರುತ್ತಿತ್ತು. ಮುಕ್ತ ಮಾರುಕಟ್ಟೆಯಾದ ಬಳಿಕ ಕಾಫಿ ಮತ್ತು ಕಾಳುಮೆಣಸಿನ ಬೆಳೆಯಲ್ಲಿ ಬೆಳಗಾರರಿಗೆ ನಷ್ಟವಾಗಿಲ್ಲ. ಕಾಫಿ ಮತ್ತು ಕಾಳು ಮೆಣಸು ವಾಣಿಜ್ಯ ಬೆಳೆಯಾಗಿದ್ದು ಇದಕ್ಕೆ ಸಮರ್ಪಕ ಬೆಲೆ ಸಿಗುತ್ತಿದೆ. ಆದರೆ ಮಲೆನಾಡಿನಲ್ಲಿ ಬೆಳೆಯುವ ಇತರ ಬೆಳೆಗಳಾದ ಬಾಳೆ, ಭತ್ತ ಮತ್ತಿತರೆ ಬೆಳೆಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಮಧ್ಯವರ್ತಿಗಳ ಹಾವಳಿಯಿಂದ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ. ಸರ್ಕಾರ ಭತ್ತ, ಬಾಳೆ ಮತ್ತಿತರೆ ಬೆಳೆಗೆ ಬೆಂಬಲ ಬೆಲೆ ನಿಗದಿಪಡಿಸಬೇಕು ಎಂದು ಒತ್ತಾಯಿಸಿದರು.
    ಇಂದಿನ ಯುವಕರು ಕೃಷಿ ಚಟುವಟಿಕೆಯಿಂದ ದೂರವಿದ್ದಾರೆ ವಿದ್ಯಾವಂತ ಯುವಕರು ಗ್ರಾಮವನ್ನು ತೊರೆದು ನಗರದತ್ತ ವಲಸೆ ಹೋಗುತ್ತಿರುವುದು ಸರಿಯಲ್ಲ. ರೈತರ ಬೆಳೆಗೆ ಮಾರುಕಟ್ಟೆಯಲ್ಲಿ ಸಮರ್ಪಕ ಬೆಲೆ ಸಿಗದ ಕಾರಣ ಯುವಕರು ಕೃಷಿಯಿಂದ ದೂರವಾಗಿದ್ದಾರೆ. ಕೃಷಿ ಕ್ಷೇತ್ರ ಯಾರಿಗೂ ಶಾಪವಾಗಿಲ್ಲ. ಕೃಷಿ ಚಟುವಟಿಕೆ ರೈತರು ಮತ್ತು ಕಾರ್ಮಿಕರಿಗೆ ವರವಾಗಿದೆ ಎಂಬುದನ್ನು ತಿಳಿದುಕೊಂಡು ಯುವಕರು ಕೃಷಿಯತ್ತ ಆಕರ್ಷಿತರಾಗಬೇಕಾಗಿದೆ. ಕೃಷಿಯನ್ನು ನಂಬಿದವರಿಗೆ ಎಲ್ಲೂ ತೊಂದರೆ ಉಂಟಾಗಿಲ್ಲ. ಕಾಡಾನೆ, ಇತರೆ ಕಾಡುಪ್ರಾಣಿ ಹಾವಳಿ, ಅತಿವೃಷ್ಟಿ, ಬರ ಪರಿಸ್ಥಿತಿ, ಕಾರ್ಮಿಕರ ಸಮಸ್ಯೆ ಇವೆಲ್ಲವೂ ಕೃಷಿ ಕ್ಷೇತ್ರಕ್ಕೆ ಅಡಚಣೆಗಳಾಗಿವೆ. ಇದರಿಂದ ಕೃಷಿ ಕ್ಷೇತ್ರ ಬಡವಾಗಿದೆ ಎಂದು ತಿಳಿಸಿದರು.
    ಗೌಡಹಳ್ಳಿ ಪ್ರಸನ್ನ, ಭಾಗ್ಯ ಲಕ್ಷ್ಮಣ್, ಡಾ.ಸಂಪತ್ ಬೆಟ್ಟಗೆರೆ, ನಂದೀಶ್ ಬಂಕೇನಹಳ್ಳಿ, ಆಗುಂಬೆ ಗಣೇಶ್ ಹೆಗಡೆ, ಡಿ.ಎಂ.ಮಂಜುನಾಥ ಸ್ವಾಮಿ, ಸುಂದರ ಬಂಗೇರ, ಹರಿಪ್ರಸಾದ್, ಪ್ರಕಾಶ್, ವೇಣಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts