More

    ತೆಂಗು ಬೆಳೆಗಾರ ಹಿತಕಾಯಲು ಕಲ್ಪರಸ: ಭಾಕಿಸಂನಿಂದ ಜಪ್ತಿಯಲ್ಲಿ ಸಂಸ್ಕರಣಾ ಘಟಕ

    ಉಡುಪಿ: ತೆಂಗು ಬೆಳೆಗಾರರ ಹಿತಕಾಯಲು ತೆಂಗಿನ ಉತ್ಪನ್ನಗಳ ಮೌಲ್ಯವರ್ಧನೆಗಾಗಿ ಭಾರತೀಯ ಕಿಸಾನ್ ಸಂಘದ ವತಿಯಿಂದ ಕಾಸರಗೋಡು ಸಿ.ಪಿ.ಸಿ.ಆರ್.ಐ.ನಿಂದ ಕಲ್ಪರಸ ತಂತ್ರಜ್ಞಾನ ನೆರವಿನೊಂದಿಗೆ ‘ಉಡುಪಿ ಕಲ್ಪರಸ ಕೊಕೊನಟ್ ಆ್ಯಂಡ್ ಆಲ್ ಸ್ಪೈಸಸ್(ಉಕಾಸ) ಪ್ರೊಡ್ಯೂಸರ್ ಕಂಪನಿ ಲಿಮಿಟೆಡ್ ಎಂಬ ರೈತ ಉತ್ಪಾದಕ ಸಂಸ್ಥೆಯನ್ನು ಪ್ರಾರಂಭಿಸಲಾಗಿದ್ದು, ಏಪ್ರಿಲ್ ಮೊದಲ ವಾರದಲ್ಲಿ ಕಲ್ಪರಸ ಪಾನೀಯ ಮಾರುಕಟ್ಟೆಗೆ ಬಿಡುಗಡೆ ನಿರೀಕ್ಷಿಸಲಾಗಿದೆ.

    ಜಿಲ್ಲಾ ಪಂಚಾಯಿತಿ ತೋಟಗಾರಿಕಾ ಇಲಾಖೆಯ ಶಿಫಾರಸ್ಸಿನೊಂದಿಗೆ ಕಲ್ಪರಸ ಸಂಗ್ರಹಣೆ ಮತ್ತು ಸಂಸ್ಕರಣೆಗೆ ಸಂಬಂಧಿಸಿದ ಘಟಕ ಸ್ಥಾಪಿಸಲು ಅಬಕಾರಿ ಇಲಾಖೆಯಿಂದ ಪರವಾನಗಿ ಪಡೆಯಲಾಗಿದೆ ಎಂದು ಭಾಕಿಸಂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಉಡುಪ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಜಿಲ್ಲೆಯಲ್ಲಿ 1028 ರೈತರನ್ನು ಶೇರುದಾರರನ್ನಾಗಿಸಿದ್ದು, ಐದು ವರ್ಷದಲ್ಲಿ ಐದು ಸಾವಿರ ರೈತ ಕುಟುಂಬಗಳನ್ನು ತಲುಪುವ ಗುರಿ ಹೊಂದಲಾಗಿದೆ. ಪ್ರತೀ ರೈತರ 8 ಆರೋಗ್ಯಯುತ ತೆಂಗಿನ ಮರಗಳಿಂದ ಕಲ್ಪರಸ ಸಂಗ್ರಹಿಸಲು ತೀರ್ಮಾನಿಸಲಾಗಿದೆ. ಪ್ರತಿ ಮರವನ್ನು ಎರಡು ಅಥವಾ ಮೂರು ಬಾರಿ ಹತ್ತಿ ಹೊಂಬಾಳೆಯನ್ನು ಕತ್ತರಿಸಿ, ಐಸ್ ಬಾಕ್ಸ್ ಇಟ್ಟು ಕಲ್ಪರಸ ಸಂಗ್ರಹಿಸಲು ಅನುಕೂಲವಾಗುವಂತೆ ಈಗಾಗಲೇ ಉಕಾಸ 14 ಕಲ್ಪರಸ ತಂತ್ರಜ್ಞರಿಗೆ 45 ದಿನಗಳ ತರಬೇತಿ ನೀಡಲಾಗಿದೆ. ಕುಂದಾಪುರದ ಜಪ್ತಿಯಲ್ಲಿ ಸಂಸ್ಕರಣಾ ಘಟಕ ಕಾರ್ಯಾರಂಭಮಾಡಲಿದ್ದು, ಪ್ರಾರಂಭಿಕವಾಗಿ ಜಪ್ತಿ ಹಾಗೂ ಕುಂದಾಪುರದಲ್ಲಿ ಮಾರಾಟ ಮಳಿಗೆ ತೆರೆಯಲು ಕಂಪನಿ ತೀರ್ಮಾನಿಸಿದೆ ಎಂದು ತಿಳಿಸಿದರು.

    ಪ್ರತಿ ಮರದಿಂದ ಸರಾಸರಿ 2 ರಿಂದ 3 ಲೀಟರ್ ಕಲ್ಪರಸ ಸಂಗ್ರಹಿಸಲು ಸಾಧ್ಯ. ಐಸ್ ಬಾಕ್ಸ್ ಬಗ್ಗೆ ಠೇವಣಿ, ತೆಂಗಿನ ಮರ ಹತ್ತಲು ಅಗತ್ಯ ವ್ಯವಸ್ಥೆ, ಪ್ರತಿನಿತ್ಯೆ ಸಂಗ್ರಹಣೆಗೆ ಅಗತ್ಯ ಸಾಮಗ್ರಿಗಳ ವೆಚ್ಚ ರೈತರು ಭರಿಸಬೇಕಿದೆ. ಸಂಗ್ರಹವಾದ ಪ್ರತಿ ಲೀಟರ್ ಕಲ್ಪರಸಕ್ಕೆ 20 ರೂ. ರೈತರಿಗೆ ನೀಡಲಾಗುವುದು. 8 ಮರದಿಂದ ವಾರ್ಷಿಕ ಒಂದು ಲಕ್ಷ ರೂ. ಹೆಚ್ಚಿನ ಆದಾಯ ಗಳಿಸಲು ಸಾಧ್ಯ. ಸ್ವತಃ ರೈತರೇ ತರಬೇತಿ ಪಡೆದು ಟ್ಯಾಪಿಂಗ್ ಮಾಡಲು ತಯಾರಿದ್ದಲ್ಲಿ ಪ್ರತೀ ಲೀಟರ್‌ಗೆ 45 ರೂ. ನೀಡಲಾಗುವುದು. ಇದರ ಆಧಾರದಲ್ಲಿ ವಾರ್ಷಿಕ ಸುಮಾರು 2.5 ಲಕ್ಷ ರೂಪಾಯಿ ಸಂಪಾದನೆಗೆ ಅವಕಾಶವಿದೆ ಎಂದರು.

    ಅಮಲು ಪಾನೀಯವಲ್ಲ: ಕಲ್ಪರಸ ಅಮಲು ಪಾನೀಯವಲ್ಲ. ತೆಂಗಿನ ಮರದ ಇನ್ನೂ ಅರಳದ ಹೊಂಬಾಳೆಯಿಂದ ಇಳಿಸಲಾಗುವ ಸಿಹಿಯಾದ ಸಸ್ಯ ರಸವಾಗಿದ್ದು, ಇದರಲ್ಲಿ ನೈಸರ್ಗಿಕ ಕಾರ್ಬೊಹೈಡ್ರೇಟ್‌ಗಳು, ಖನಿಜಾಂಶಗಳು ಹಾಗೂ ವಿಟಮಿನ್ಸ್‌ಗಳು ಹೇರಳವಾಗಿವೆ. ವೈಜ್ಞಾನಿಕ ಸಂಶೋಧನೆಗಳ ಆಧಾರದಲ್ಲಿ, ಇದರಲ್ಲಿರುವ ಅಂಶಗಳಿಂದಾಗಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts