More

    20ಕ್ಕೂ ಹೆಚ್ಚು ಕೂಲಿ ಕಾರ್ಮಿಕರು ಬೆಂಗಳೂರಿನಿಂದ ವಿಶಾಖಪಟ್ಟಣಂಗೆ ಕಾಲ್ನಡಿಗೆ, ಒಡಿಶಾಗೆ ಸೈಕಲ್ ಸವಾರಿ

    ಕೋಲಾರ: ತಮ್ಮ ಊರುಗಳಿಗೆ ತೆರಳಲು ವಾಹನ ಸೌಕರ್ಯವಿಲ್ಲದೆ 20ಕ್ಕೂ ಹೆಚ್ಚು ಕೂಲಿ ಕಾರ್ಮಿಕರು ಬೆಂಗಳೂರಿನಿಂದ ಆಂಧ್ರಪ್ರದೇಶದ ವಿಶಾಖಪಟ್ಟಣಂಗೆ ಕಾಲ್ನಡಿಗೆಯಲ್ಲಿ ಸಾಗುತ್ತಿರುವುದು ಬೆಳಕಿಗೆ ಬಂದಿದೆ.

    ವಲಸಿಗ ಕಾರ್ಮಿಕರು ತಮ್ಮ ರಾಜ್ಯಗಳಿಗೆ ವಾಪಸಾಗಲು ಸರ್ಕಾರ ಅನುಮತಿ ನೀಡಿದ ಬಳಿಕ ವಿವಿಧ ರಾಜ್ಯಗಳ ವಲಸಿಗರು ರೈಲಿನಲ್ಲಿ ಪ್ರಯಾಣಿಸಲು ಟಿಕೆಟ್ ಸಿಗದೆ ನಡೆದುಕೊಂಡು ಹೋಗುತ್ತಿದ್ದಾರೆ.

    ಮಂಗಳವಾರ ಬೆಳಗ್ಗೆ ಬೆಂಗಳೂರಿನಿಂದ ಹೊರಟ 20 ಯುವಕರು ಕೋಲಾರ-ಬೆಂಗಳೂರು ಹೆದ್ದಾರಿಯ ರಾಮಸಂದ್ರ ಗೇಟ್ ಬಳಿಯ ಚೆಕ್‌ಪೋಸ್ಟ್ ದಾಟಿ ಹೇಗೆ ನಗರಕ್ಕೆ ಪ್ರವೇಶಿಸಿದರು ಎಂಬುದು ಅನುಮಾನಕ್ಕೆ ಎಡೆ ಮಾಡಿದೆ.

    ಒಂದು ವೇಳೆ ವೈಜಾಕ್‌ಗೆ ಹೋಗಲು ಹಣದ ಸಮಸ್ಯೆ ಇದ್ದರೆ ಅಥವಾ ವಾಹನದ ವ್ಯವಸ್ಥೆ ಬೇಕಿದ್ದಲ್ಲಿ ರೈಲು ನಿಲ್ದಾಣ ಇಲ್ಲವೇ ಪೊಲೀಸರ ಬಳಿ ತಿಳಿಸಿದ್ದರೆ ಏನಾದರೂ ವ್ಯವಸ್ಥೆ ಮಾಡುತ್ತಿದ್ದರು. ಯಾರಿಗೂ ತಿಳಿಸದೆ ಬೆಂಗಳೂರಿನಿಂದ ಕಳ್ಳದಾರಿಯಲ್ಲಿ ಗಡಿ ದಾಟಿರುವುದು ಸರಿಯಲ್ಲ. ಒಂದು ವೇಳೆ ಗಡಿಯಲ್ಲಿ ಕಾಣಿಸಿಕೊಂಡ ಯುವಕರನ್ನು ಪ್ರಶ್ನಿಸದೆ ಬಿಟ್ಟಿದ್ದರೆ ಅದೂ ಅಪರಾಧವಾಗುತ್ತದೆ ಎಂದು ಯುವಕರು ಕಾಲ್ನಡಿಗೆಯಲ್ಲಿ ಹಿಂಡು ಹಿಂಡಾಗಿ ಹೋಗುತ್ತಿರುವುದನ್ನು ಗಮನಿಸಿರುವ ಸಾರ್ವಜನಿಕರು ಫೋಟೋ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

    ಕೋಲಾರ ದಾಟಿ ಮುಳಬಾಗಿಲು ಗಡಿಯ ನಂಗಲಿ ಚೆಕ್‌ಪೋಸ್ಟ್ ಮೂಲಕ ಇಲ್ಲವೇ ವಾಮ ಮಾರ್ಗದಲ್ಲಿ ಈ ಯುವಕರು ಆಂಧ್ರಕ್ಕೆ ಪ್ರವೇಶಿಸುವ ಮುನ್ನ ಪತ್ತೆ ಮಾಡಿ ಆರೋಗ್ಯ ಸಮಸ್ಯೆ ಇಲ್ಲದಿದ್ದಲ್ಲಿ ತವರೂರಿಗೆ ಕಳುಹಿಸಿಕೊಡಲು ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸದಿದ್ದರೆ ಈಗಾಗಲೆ ಕರೊನಾ ಭೀತಿಯಿಂದ ನಲುಗಿರುವ ಜಿಲ್ಲೆಯ ಜನ ಇನ್ನಷ್ಟು ತೊಂದರೆ ಅನುಭವಿಸಬೇಕಾಗಬಹುದೆಂದು ಆತಂಕ ವ್ಯಕ್ತಪಡಿಸಿದ್ದಾರೆ.

    ಸೈಕಲ್ ಪಂಕ್ಚರ್: ಬೆಂಗಳೂರಿನಿಂದ ಒಡಿಶಾಗೆ ಸೈಕಲ್‌ನಲ್ಲಿ ತೆರಳುತ್ತಿರುವ 8ಕ್ಕೂ ಹೆಚ್ಚು ವಲಸಿಗರು ಸಹದ್ಯೋಗಿಯೊಬ್ಬರ ಸೈಕಲ್ ಪಂಕ್ಚರ್ ಆದ್ದರಿಂದ ಪಂಕ್ಚರ್ ಅಂಗಡಿ ಸಿಗದೆ ತಾವೇ ದುರಸ್ತಿಪಡಿಸಿ ಪ್ರಯಾಣ ಮುಂದುವರಿಸಿದ್ದಾರೆ. ಈ ತಂಡ ಸಹ ಗಡಿ ದಾಟಿ ಬಂದಿದ್ದು ಹೇಗೆ ಎಂಬ ಪ್ರಶ್ನೆ ಉದ್ಭವಿಸಿದೆ.

     

    ವಲಸಿಗರಿಗೆ ರಾಜ್ಯ ಸರ್ಕಾರದಿಂದಲೇ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಹೀಗಿದ್ದರೂ ಕೆಲವರು ಕಾಲ್ನಡಿಗೆ ಮತ್ತು ಸೈಕಲ್ ಮೇಲೆ ಪ್ರಯಾಣಿಸುತ್ತಿರುವ ವಿಷಯ ಆಘಾತವನ್ನುಂಟುಮಾಡಿದೆ. ವಲಸಿಗರು ಚೆಕ್‌ಪೋಸ್ಟ್‌ಗಳಲ್ಲಿ ಕಾಣಿಸಿಕೊಂಡರೆ ಕಡ್ಡಾಯವಾಗಿ ತಪಾಸಣೆ ಮಾಡಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ. ಆಂಧ್ರದ ವಿಶಾಖಪಟ್ಟಣಂ ಮತ್ತು ಒಡಿಶಾಗೆ ತೆರಳಿರುವ ಪ್ರಯಾಣಿಕರ ಮಾಹಿತಿ ಪಡೆಯಲು ಸಂಬಂಧಪಟ್ಟವರಿಗೆ ಸೂಚಿಸುವೆ.
    ಶೋಭಿತಾ, ತಹಸೀಲ್ದಾರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts