More

    ಸಂಕಷ್ಟಕ್ಕೆ ಸಿಲುಕಿದ ಕೋಸ್ಟಲ್‌ವುಡ್

    ಪಿ.ಬಿ.ಹರೀಶ್ ರೈ, ಮಂಗಳೂರು

    ಥಿಯೇಟರ್ ಕೊರತೆಯಿಂದ ಸಿನಿಮಾ ಬಿಡುಗಡೆಗೆ ಸಮಸ್ಯೆ ಎದುರಿಸುತ್ತಿದ್ದ ತುಳು ಚಿತ್ರರಂಗ ಈ ವರ್ಷ ಮತ್ತೆ ಲಾಕ್‌ಡೌನ್ ಸಂಕಷ್ಟಕ್ಕೆ ಸಿಲುಕಿದೆ. ಸುವರ್ಣ ಮಹೋತ್ಸವ ವರ್ಷಾಚರಣೆ ಸಂಭ್ರಮಕ್ಕೆ ಅಣಿಯಾಗಿದ್ದ ಕೋಸ್ಟಲ್‌ವುಡ್ ಕಳೆಗುಂದಿದೆ.

    ಬಿಡುಗಡೆಗೆ ಕಾದಿದ್ದ ಹಾಗೂ ಶೂಟಿಂಗ್ ಅರ್ಧದಲ್ಲಿ ನಿಲ್ಲಿಸಿದ ಸಿನಿಮಾಗಳ ನಿರ್ಮಾಪಕರು ಮುಂದೇನು ಎನ್ನುವ ಚಿಂತೆಯಲ್ಲಿದ್ದಾರೆ. ಲಾಕ್‌ಡೌನ್ ಅವಧಿ ಮುಗಿದ ಬಳಿಕವೂ ಜನ ಥಿಯೇಟರ್‌ಗಳಿಗೆ ಬರಲು ಹಿಂದೇಟು ಹಾಕಬಹುದು ಎನ್ನುವ ಆತಂಕ ಸಿನಿಮಾ ವಲಯದಲ್ಲಿದೆ.

    1971ರಲ್ಲಿ ಎನ್ನ ತಂಗಡಿ ಸಿನಿಮಾ ಬಿಡುಗಡೆ ಮೂಲಕ ಆರಂಭಗೊಂಡ ತುಳು ಸಿನಿಮಾ ರಂಗ ಏಳುಬೀಳಿನ ಹಾದಿಯಲ್ಲಿ ಸಾಗಿಬಂದಿತ್ತು. ಆದರೆ ಇತ್ತೀಚಿನ ಕೆಲವು ವರ್ಷಗಳಲ್ಲಿ ಉತ್ತಮ ಬೆಳವಣಿಗೆ ಕಂಡು 2018ರಲ್ಲಿ ದಾಖಲೆಯ 15 ಸಿನಿಮಾ ಹಾಗೂ 2019ರಲ್ಲಿ 10 ಸಿನಿಮಾ ಬಿಡುಗಡೆಯಾಗಿತ್ತು.

    ಕಳೆದ ವರ್ಷ ತೆರೆ ಕಂಡದ್ದು 3 ಸಿನಿಮಾ!: ಕಳೆದ ವರ್ಷ ಲಾಕ್‌ಡೌನ್ ಹೊಡೆತಕ್ಕೆ ತುಳು ಚಿತ್ರರಂಗ ತತ್ತರಿಸಿತ್ತು. ಬಿಡುಗಡೆಯಾದದ್ದು ಕೇವಲ ಮೂರು ಸಿನಿಮಾ ಮಾತ್ರ. 2021 ಚಿತ್ರರಂಗದ ಸುರ್ವಣ ಮಹೋತ್ಸವ ವರ್ಷ. ಈ ವರ್ಷದ ಆರಂಭದಲ್ಲಿ ಗಮ್ಜಾಲ್, ಪೆಪ್ಪೆರೆರೆ ಪೆರೆರೆರೆ ಮತ್ತು ಇಂಗ್ಲೀಷ್ ಚಿತ್ರಗಳು ಬಿಡುಗಡೆಗೊಂಡು ಕೊಂಚ ಯಶಸ್ಸು ಕಂಡಿದ್ದವು. ತುಳು ಚಿತ್ರರಂಗ ಕೂಡ ಕೊಂಚ ಚೇತರಿಸುವ ಲಕ್ಷಣವೂ ಗೋಚರಿಸಿತ್ತು. ಆದರೆ ಮತ್ತೆ ಲಾಕ್‌ಡೌನ್ ಕಾರಣದಿಂದ ಕೋಸ್ಟಲ್‌ವುಡ್ ಸ್ತಬ್ದವಾಗಿದೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಈ ವರ್ಷ ಯಾವುದೇ ಸಿನಿಮಾ ಬಿಡುಗಡೆಯಾಗುವ ಸಾಧ್ಯತೆ ಇಲ್ಲ. ಒಂದೊಮ್ಮೆ ಬಿಡುಗಡೆ ಮಾಡಿದರೂ ನಷ್ಟ ಅನುಭವಿಸಬೇಕಾಗಬಹುದು ಎನ್ನುವ ಅಭಿಪ್ರಾಯ ನಿರ್ಮಾಪಕರ ವಲಯದಲ್ಲಿದೆ.

    ರಂಗಭೂಮಿಗೂ ಹೊಡೆತ: ದ.ಕ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಯಲ್ಲಿ 15ಕ್ಕೂ ಅಧಿಕ ತುಳು ನಾಟಕ ತಂಡಗಳಿವೆ. ಸಾಮಾನ್ಯವಾಗಿ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಬ್ರಹ್ಮಕಲಶೋತ್ಸವ, ವಾರ್ಷಿಕೋತ್ಸವ ಹೀಗೆ ವಿವಿಧ ಸಮಾರಂಭಗಳಿಗಾಗಿ ಬಹುತೇಕ ಎಲ್ಲ ನಾಟಕ ತಂಡಗಳ ಪ್ರದರ್ಶನ ಬುಕ್ ಆಗಿತ್ತು. ಈಗ ಲಾಕ್‌ಡೌನ್‌ನಿಂದ ನಿಗದಿಯಾಗಿದ್ದ ನಾಟಕಗಳು ರದ್ದುಗೊಂಡಿವೆ. ರಂಗಭೂಮಿ ಕಲಾವಿದರು ಸಂಕಷ್ಟದಲ್ಲಿದ್ದಾರೆ.

    ತುಳು ಚಿತ್ರ ನಿರ್ಮಿಸಿ ಹೆಚ್ಚಿನವರು ನಷ್ಟ ಅನುಭವಿಸಿದ್ದಾರೆ. ಸದ್ಯ ತುಳು ಚಿತ್ರರಂಗದ ಭವಿಷ್ಯವೇ ಡೋಲಾಯಮಾನವಾಗಿದೆ. ಚೇತರಿಕೆಗೆ ಸಾಕಷ್ಟು ಸಮಯವೇ ಬೇಕಾಗಬಹುದು. ನಾಟಕ ತಂಡಗಳು ಹಾಗಲ್ಲ. ಈಗ ಪ್ರದರ್ಶನ ಇಲ್ಲದಿದ್ದರೂ, ಕರೊನಾ ಪರಿಸ್ಥಿತಿ ಸುಧಾರಣೆಯಾದ ಬಳಿಕ ಚೇತರಿಸಿಕೊಳ್ಳಬಹುದು. ತುಳುನಾಡಿನಲ್ಲಿ ಬ್ರಹ್ಮಕಲಶೋತ್ಸವ ಸಹಿತ ಧಾರ್ಮಿಕ, ಸಾಮಾಜಿಕ ಉತ್ಸವಗಳು ನಿರಂತರ ನಡೆಯುತ್ತದೆ. ಹಾಗಾಗಿ ನಾಟಕ ತಂಡಗಳಿಗೆ ಬೇಡಿಕೆ ಕಡಿಮೆಯಾಗುವುದಿಲ್ಲ.

    ವಿಜಯಕುಮಾರ್ ಕೊಡಿಯಾಲ್‌ಬೈಲ್
    ನಿರ್ದೇಶಕರು

    ಈಗಿನ ಪರಿಸ್ಥಿತಿ ಮುಂದುವರಿದರೆ ತುಳು ಸಿನಿಮಾಕ್ಕೆ ಬಂಡವಾಳ ಹಾಕಲು ನಿರ್ಮಾಪಕರು ಹಿಂದೇಟು ಹಾಕಬಹುದು. ಕೆಲಸ ಇಲ್ಲದ ಕಾರಣ ತುಳು ಸಿನಿಮಾ ಕಲಾವಿದರು ಸಹಿತ ಹಲವರು ಸಮಸ್ಯೆ ಎದುರಿಸುತ್ತಿದ್ದಾರೆ. ನಮ್ಮ ತಂಡದ ಮೂಲಕ ಸಂಕಷ್ಟದಲ್ಲಿ ಇರುವವರಿಗೆ ದಿನಸಿ ಸಾಮಗ್ರಗಳ ಕಿಟ್ ನೀಡುತ್ತಿದ್ದೇವೆ. ನೂರಕ್ಕೂ ಅಧಿಕ ಸಿನಿಮಾ ಕಲಾವಿದರನ್ನು ಗುರುತಿಸಿ ನೆರವು ಒದಗಿಸಿದ್ದೇವೆ.

    ರೂಪೇಶ್
    ತುಳುಚಿತ್ರ ನಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts