More

    ಕರಾವಳಿಯಲ್ಲಿ 6 ಬಲಿ

    ಮಂಗಳೂರು: ಕರಾವಳಿಯಲ್ಲಿ ಭಾನುವಾರ ಹಲವು ಕಾಯಿಲೆಗಳಿಂದ ಬಳಲುತ್ತಿದ್ದ ಆರು ಜನರು ಕರೊನಾ ಸೋಂಕಿಗೆ ಬಲಿಯಾಗಿದ್ದಾರೆ.
    ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಐವರು, ಉಡುಪಿ ಮಣಿಪಾಲ ಆಸ್ಪತ್ರೆಯಲ್ಲಿ ದಾವಣಗೆರೆ ಮೂಲದ ವೃದ್ಧರೊಬ್ಬರು ಮೃತಪಟ್ಟಿದ್ದಾರೆ. ದ.ಕ. ಜಿಲ್ಲೆಯಲ್ಲಿ 196, ಉಡುಪಿ ಜಿಲ್ಲೆಯಲ್ಲಿ 14 ಮಂದಿಯಲ್ಲಿ ಕರೊನಾ ಸೋಂಕು ಕಾಣಿಸಿಕೊಂಡಿದೆ.
    ಬೆಳ್ತಂಗಡಿಯ ಪಿಲಿಚಾಮುಂಡಿಕಲ್ಲು ನಿವಾಸಿ 60 ವರ್ಷದ ವೃದ್ಧ ಡಯಾಬಿಟಿಸ್ ಹಾಗೂ ಹೈಪರ್‌ಟೆನ್ಶನ್‌ನಿಂದ ಬಳಲುತ್ತಿದ್ದು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೂ, ಜೀವ ಉಳಿಸಲಾಗಲಿಲ್ಲ. ಪುತ್ತೂರಿನ ಮೂಲಡ್ಕ ನಿವಾಸಿ 50 ವರ್ಷದ ಗಂಡಸು ಡಯಾಬಿಟಿಸ್‌ನಿಂದ ಬಳಲುತ್ತಿದ್ದರು. ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಶನಿವಾರ ರಾತ್ರಿ ಮೃತರಾಗಿದ್ದಾರೆ. ಮಂಗಳೂರಿನ ಉರ್ವಾ ಸ್ಟೋರ್‌ನ 72 ವರ್ಷದ ವೃದ್ಧ ಡಯಾಬಿಟಿಸ್ ಇದ್ದವರು ಶನಿವಾರ ಮೃತಪಟ್ಟಿದ್ದಾರೆ. ಅವರಿಗೆ ಕರೊನಾ ದೃಢಪಟ್ಟಿದೆ. ಮಂಗಳೂರಿನ ಬಳ್ಳಾಲ್ಭಾಗ್ ನಿವಾಸಿ 58 ವರ್ಷದ ವೃದ್ಧೆ ಡಯಾಬಿಟಿಸ್ ಹಾಗೂ ಹೃದ್ರೋಗದಿಂದ ನರಳುತ್ತಿದ್ದವರು ಶುಕ್ರವಾರ ಮೃತಪಟ್ಟಿದ್ದು ಕರೊನಾ ದೃಢಪಟ್ಟಿದೆ. ತೀವ್ರ ಉಸಿರಾಟದ ತೊಂದರೆಯಲ್ಲಿದ್ದ 55 ವರ್ಷ ವಯಸ್ಸಿನ ಗಂಡಸು ಭಾನುವಾರ ಮೃತಪಟ್ಟಿದ್ದು, ಅವರಲ್ಲಿಯೂ ಕರೊನಾ ದೃಢಪಟ್ಟಿದೆ. ಇವರಲ್ಲಿ ಮೂವರು ಕೋವಿಡ್ ಆಸ್ಪತ್ರೆಯಲ್ಲಿ, ಒಬ್ಬರು ದೇರಳಕಟ್ಟೆಯ ಖಾಸಗಿ ಆಸ್ಪತ್ರೆ ಹಾಗೂ ಬೆಳ್ತಂಗಡಿಯ ವೃದ್ಧ ಮನೆಯಲ್ಲಿ ನಿಧನರಾಗಿದ್ದಾರೆ. ಮೃತರ ಸಂಖ್ಯೆ ಜಿಲ್ಲೆಯಲ್ಲಿ 46ಕ್ಕೆ ಏರಿಕೆಯಾಗಿದೆ.

    ಒಟ್ಟು 196 ಪ್ರಕರಣಗಳಲ್ಲಿ ಐಎಲ್‌ಐ(ಇನ್‌ಫ್ಲುಯೆಂಜಾ ಲೈಕ್ ಇಲ್‌ನೆಸ್) ಇದ್ದ 91 ಮಂದಿಯಲ್ಲಿ ಪಾಸಿಟಿವ್ ಬಂದಿದೆ. ಪ್ರಾಥಮಿಕ ಸಂಪರ್ಕದಿಂದ 20 ಮಂದಿಗೆ, ತೀವ್ರ ಉಸಿರಾಟ ತೊಂದರೆಯಿರುವ 16 ಮಂದಿಗೆ ಸೋಂಕು ತಗಲಿದೆ. 10 ಮಂದಿ ಅಂತಾರಾಷ್ಟ್ರೀಯ ಪ್ರಯಾಣಿಕರು ಪ್ರಸವ ಪೂರ್ವ ಸರ್ಜರಿ ಟೆಸ್ಟ್‌ನಲ್ಲಿ ಇಬ್ಬರಿಗೆ ಸೋಂಕು ತಗಲಿರುವ ವರದಿ ಬಂದಿದೆ.

    94 ಮಂದಿ ಬಿಡುಗಡೆ: ಜಿಲ್ಲೆಯಲ್ಲಿ ಒಟ್ಟು ಕೋವಿಡ್ ಸಂಖ್ಯೆ 2230 ತಲಪಿದ್ದು ಒಂದೇ ದಿನ 94 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 1308 ಸಕ್ರಿಯ ಪ್ರಕರಣಗಳಿವೆ. ಇದುವರೆಗೆ ಒಟ್ಟು 876 ಮಂದಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ.

    ಮನಪಾ ಆಯುಕ್ತರಿಗೆ ಧೃಢ
    ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರಿಗೂ ಕರೊನಾ ಬಾಧಿಸಿದೆ.
    ಎರಡು ದಿನಗಳಿಂದ ಅವರಿಗೆ ಜ್ವರ ಕಾಣಿಸಿಕೊಂಡಿದ್ದು ಗಂಟಲ ದ್ರವ ಪರೀಕ್ಷೆ ಮಾಡಿಸಿದ್ದರು. ಅವರಿಗೆ ಕರೊನಾ ಪಾಸಿಟಿವ್ ದೃಢಪಟ್ಟಿದೆ. ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯ ತೃಪ್ತಿಕರ ಎಂದು ಮೂಲಗಳು ತಿಳಿಸಿವೆ.

    ಇಬ್ಬರು ಪತ್ರಕರ್ತರಿಗೆ ಪಾಸಿಟಿವ್: ರಾಜ್ಯಮಟ್ಟದ ಚಾನೆಲ್‌ಗಳ ಇಬ್ಬರು ಕ್ಯಾಮರಾಮನ್‌ಗಳಿಗೂ ಕರೊನಾ ಪಾಸಿಟಿವ್ ದೃಢಪಟ್ಟಿದೆ. ಇಬ್ಬರ ಆರೋಗ್ಯವೂ ಸಮಾಧಾನಕರವಾಗಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಕಾಸರಗೋಡಿನ 56 ಮಂದಿಗೆ ಪಾಸಿಟಿವ್
    ಕಾಸರಗೋಡು: ಜಿಲ್ಲೆಯಲ್ಲಿ ಭಾನುವಾರ 56 ಮಂದಿ ಕರೊನಾ ಸೋಂಕಿಗೊಳಗಾಗಿದ್ದಾರೆ. ಕೇರಳದಲ್ಲಿ 435 ಮಂದಿಯಲ್ಲಿ ಕೋವಿಡ್-19 ಬಾಧೆ ಕಾಣಿಸಿಕೊಂಡಿದೆ. ಇವರಲ್ಲಿ 128 ಮಂದಿ ವಿದೇಶದಿಂದ, 27 ಮಂದಿ ಇತರ ರಾಜ್ಯಗಳಿಂದ ಆಗಮಿಸಿದ್ದರೆ, 206 ಮಂದಿಗೆ ಸಂಪರ್ಕದಿಂದ ಸೋಂಕು ತಗುಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts