More

    ಕರಾವಳಿ ಆರ್ಥಿಕತೆಗೆ 4000 ಕೋಟಿ ರೂ. ಹೊಡೆತ

    ಮಂಗಳೂರು: ಕರೊನಾ ಮಹಾಮಾರಿಗೆ ಕರಾವಳಿಯ ಆರ್ಥಿಕ ಶಕ್ತಿ ಕುಸಿದು ಬಿದ್ದಿದೆ. ದ.ಕ. ಹಾಗೂ ಉಡುಪಿ ಜಿಲ್ಲೆಯ ಕಿರು, ಸಣ್ಣ, ಮಧ್ಯಮ ಹಾಗೂ ಬೃಹತ್ ಉದ್ಯಮ, ಕೃಷಿ, ಮೀನುಗಾರಿಕೆ ಆತಂಕದ ದಿನಗಳನ್ನು ಎದುರಿಸುತ್ತಿದ್ದು, ಈವರೆಗಿನ ಲಾಕ್‌ಡೌನ್‌ನಿಂದ ಕರಾವಳಿ ಅರ್ಥಿಕತೆಗೆ ಸುಮಾರು 4000 ಕೋಟಿ ರೂ.ಯಷ್ಟು ಹೊಡೆತ ಬಿದ್ದಿದೆ ಎಂದು ಅಂದಾಜಿಸಲಾಗಿದೆ.

    ಧಾರ್ಮಿಕ ಪ್ರವಾಸೋದ್ಯಮ, ಹೋಟೆಲ್, ಮೀನುಗಾರಿಕೆ, ಕೃಷಿ ಜೊತೆಯಲ್ಲಿ 28 ಸಾವಿರದಷ್ಟಿರುವ ಸಣ್ಣ ಉದ್ಯಮಗಳು ಇಲ್ಲಿನ ಆರ್ಥಿಕತೆಯ ಬೆನ್ನೆಲುಬು. ಮಧ್ಯಮ ಹಾಗೂ ಬೃಹತ್ ಕೈಗಾರಿಕೆಗಳು ಬೆರಳಣಿಕೆಯಲ್ಲಿದ್ದರೂ, ಇಲ್ಲಿನ ಆರ್ಥಿಕಾಭಿವೃದ್ದಿಯಲ್ಲಿ ಮಹತ್ತರ ಪಾತ್ರ ವಹಿಸಿವೆ. ಈಗ ಅವೆಲ್ಲವೂ ಸ್ತಬ್ಧ. ಕೈಗಾರಿಕಾ ವಲಯವೊಂದರಲ್ಲೇ ಸುಮಾರು 3000 ಕೋಟಿ ರೂ. ನಷ್ಟ ಉಂಟಾಗಿದೆ ಎನ್ನುತ್ತಾರೆ ಹಿರಿಯ ಉದ್ಯಮಿಗಳು.
    ಪ್ರವಾಸಿಗರು ಇಲ್ಲದೆ ಹೋಟೆಲ್ ಉದ್ಯಮವೂ ಸೇರಿದಂತೆ ಪೂರಕ ಉದ್ಯಮಗಳು ಸಂಪೂರ್ಣ ನಷ್ಟದ ಹಾದಿಯಲ್ಲಿವೆ. ಶುಭ ಸಮಾರಂಭಗಳು ನಡೆಯದ ಕಾರಣ ಸೀಸನಲ್ ವ್ಯಾಪಾರಿಗಳು ಕಂಗಾಲಾಗಿದ್ದಾರೆ. ಅಲ್ಪಸ್ವಲ್ಪ ಚೇತರಿಕೆ ಹಂತಕ್ಕೆ ಬಂದಿದ್ದ ರಿಯಲ್ ಎಸ್ಟೇಟ್ ವಲಯ ಸಂಪೂರ್ಣ ಸ್ಥಗಿತ. ಹೋಟೆಲ್, ಲಾಡ್ಜಿಂಗ್, ಬಾರ್ ಮತ್ತು ರೆಸ್ಟೋರೆಂಟ್‌ಗಳು ಮುಚ್ಚಿರುವುದು ಮತ್ತೊಂದು ಹೊಡೆತ. ಸಾಮಾನ್ಯವಾಗಿ ಏಪ್ರಿಲ್, ಮೇ ತಿಂಗಳು ಮದುವೆ ಸಮಾರಂಭಗಳ ರಶ್. ಎಲ್ಲ ಲಾಡ್ಜ್‌ಗಳೂ ಭರ್ತಿಯಾಗಿರುತ್ತಿದ್ದವು. ಬಟ್ಟೆ, ಚಿನ್ನಂಗಡಿಗಳೂ ತುಂಬಿರುತ್ತಿದ್ದವು. ಈಗ ಎಲ್ಲೂ ಸದ್ದೇ ಇಲ್ಲ.

    ಪ್ರವಾಸೋದ್ಯಮ ಮತ್ತು ಹೋಟೆಲ್ ವಲಯಕ್ಕೆ ಲಾಕ್‌ಡೌನ್ ಅವಧಿಯಲ್ಲಿ 350 ಕೋಟಿ ರೂ. ಅಂದಾಜು ನಷ್ಟ ಸಂಭವಿಸಿದೆ ಎಂದು ಅಭಿಪ್ರಾಯಪಡುತ್ತಾರೆ ಹೋಟೆಲ್ ಮಾಲೀಕರು.
    ಕರಾವಳಿಯಲ್ಲಿ ಅಡಕೆ, ತೆಂಗು, ಬಾಳೆ, ಕೊಕ್ಕೊ, ಕಾಳು ಮೆಣಸು ಪ್ರಮುಖ ವಾಣಿಜ್ಯ ಬೆಳೆ. ಕೃಷಿ ಚಟುವಟಿಕೆಗಳಿಗೂ ಬಲವಾದ ಹೊಡೆತ ಬಿದ್ದಿದ್ದು, ಬೆಳೆದ ಬೆಳೆಗಳೂ ಮಾರುಕಟ್ಟೆಗೆ ತಲುಪುತ್ತಿಲ್ಲ. ಲಾಕ್‌ಡೌನ್ ಅವಧಿಯಲ್ಲಿ ಸುಮಾರು 400 ಕೋಟಿ ರೂ. ನಷ್ಟ ಸಂಭವಿಸಬಹುದು ಎಂದು ಕೃಷಿ ತಜ್ಞರು ಅಂದಾಜಿಸಿದ್ದಾರೆ.

    ಮೀನುಗಾರಿಕೆ 150 ಕೋಟಿ ರೂ. ನಷ್ಟ
    ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು 21 ಮೀನುಗಾರಿಕಾ ಗ್ರಾಮಗಳಿದ್ದು, 54 ಸಾವಿರ ಮೀನುಗಾರರು ವಾಸಿಸುತ್ತಿದ್ದಾರೆ. ಈ ಪೈಕಿ 28 ಸಾವಿರ ಮಂದಿ ವೃತ್ತಿ ನಿರತರು. 3 ಸಾವಿರಕ್ಕೂ ಮಿಕ್ಕಿ ಬೋಟ್‌ಗಳಿವೆ. ಈ ಬಾರಿ ಚಂಡಮಾರುತದ ಪ್ರಭಾವದಿಂದ ಸಾವಿರಾರು ಕೋಟಿ ರೂ. ನಷ್ಟ ಸಂಭವಿಸಿದೆ. ಪ್ರಸ್ತುತ ಲಾಕ್‌ಡೌನ್‌ನಿಂದ ದಿನಕ್ಕೆ 2 ಕೋಟಿ ರೂ. ನಷ್ಟ ಉಂಟಾಗುತ್ತಿದೆ ಎಂದು ಮೀನುಗಾರ ಮುಖಂಡ ಮೋಹನ್ ಬೆಂಗ್ರೆ ತಿಳಿಸಿದ್ದಾರೆ. ಮಲ್ಪೆ ಬಂದರಿನಲ್ಲಿ 2 ಸಾವಿರ ಬೋಟ್‌ಗಳಿದ್ದು, ದಿನಕ್ಕೆ 5ರಿಂದ 7 ಕೋಟಿ ರೂಪಾಯಿವರೆಗೆ ವಹಿವಾಟು ನಡೆಯುತ್ತದೆ. ಒಟ್ಟಾರೆ ಮೀನುಗಾರಿಕೆ ವಲಯ ಮತ್ತು ಪೂರಕ ಉದ್ಯಮ ಕ್ಷೇತ್ರ ಸೇರಿ 150 ಕೋಟಿ ರೂ. ಅಂದಾಜು ನಷ್ಟ ಅನುಭವಿಸಿದೆ ಎಂದು ಮೀನುಗಾರ ಮುಖಂಡರು ಅಭಿಪ್ರಾಯಪಟ್ಟಿದ್ದಾರೆ.

    ಸಾರಿಗೆ ವಲಯಕ್ಕೂ ಆತಂಕದ ಸ್ಥಿತಿ
    ಬಸ್ ಹಾಗೂ ಲಾರಿ ಸಂಚಾರ ಸ್ಥಗಿತವಾಗಿರುವ ಕಾರಣ ಸಾರಿಗೆ ವಲಯ ಕೋಟ್ಯಂತರ ರೂ. ನಷ್ಟಕ್ಕೊಳಗಾಗಿದೆ. ಸುಮಾರು ಕೋಟಿಯಷ್ಟು ರಫ್ತು ಮಾಡುವ ಗೋಡಂಬಿ ವಲಯಕ್ಕೂ ದೊಡ್ಡ ಸವಾಲು ಎದುರಾಗಿದೆ. ಬೃಹತ್ ಉದ್ಯಮಗಳಾದ ಎಂಆರ್‌ಪಿಎಲ್ ಉತ್ಪಾದನೆ ಶೇ.50ರಷ್ಟು ಕುಸಿದಿದೆ. ಎನ್‌ಎಂಪಿಟಿ, ಎಂಸಿಎಫ್, ಯುಪಿಸಿಎಲ್ ಚಟುವಟಿಕೆಗಳೂ ಬಹುತೇಕ ಸ್ಥಗಿತವಾಗಿವೆ. ಕರೊನಾ ಆತಂಕ ತಿಳಿಯಾದರೆ, ವಿಶ್ವ ಮಾರುಕಟ್ಟೆಯನ್ನು ಆಧರಿಸಿ ಕೈಗಾರಿಕಾ ವಲಯ ಸ್ವಲ್ಪ ಸಮಯದಲ್ಲೇ ಚೇತರಿಸಿಕೊಳ್ಳಬಹುದು. ಪ್ರವಾಸೋದ್ಯಮ ಹಾಗೂ ಪೂರಕ ವಲಯಗಳಿಗೆ ಮಾತ್ರ ಒಂದಷ್ಟು ಸಮಯ ಬೇಕಾದೀತು. ಆದರೆ ಲಾಕ್‌ಡೌನ್ ಅವಧಿ ವಿಸ್ತರಣೆಯಾದರೆ ಎಲ್ಲ ವಲಯದ ಪರಿಸ್ಥಿತಿ ಮತ್ತಷ್ಟು ಬಿಗಾಡಿಯಿಸುವ ಸಾಧ್ಯತೆಯಿದೆ.

    ಕರಾವಳಿಯ ಉದ್ಯಮಗಳು
    ದ.ಕ. ಜಿಲ್ಲೆಯಲ್ಲಿ 17,883 ಕಿರು ಮತ್ತು ಸಣ್ಣ ಕೈಗಾರಿಕೆ, 13 ಮಧ್ಯಮ ಕೈಗಾರಿಕೆ, 22 ಬೃಹತ್ ಕೈಗಾರಿಕೆಗಳಿವೆ. ಸುಮಾರು 1.26 ಲಕ್ಷ ಕಾರ್ಮಿಕರಿದ್ದಾರೆ. ಉಡುಪಿಯಲ್ಲಿ 10 ಸಾವಿರ ಕಿರು ಮತ್ತು ಸಣ್ಣ ಕೈಗಾರಿಕೆಗಳಿವೆ. ಯುಪಿಸಿಎಲ್, ಫಿಶ್ ಫ್ಯಾಕ್ಟರಿ, ಮುದ್ರಣ ಉದ್ಯಮ ಸೇರಿ ಆರೇಳು ಮಧ್ಯಮ ಕೈಗಾರಿಕೆ, ಬೃಹತ್ ಕೈಗಾರಿಕೆಗಳಿವೆ. ಸುಮಾರು 1 ಲಕ್ಷದಷ್ಟು ಕೆೆಲಸಗಾರರಿದ್ದಾರೆ.

    ಉದ್ಯಮಿಗಳು ಕೋಟ್ಯಂತರ ರೂ. ಸಾಲ ಪಡೆದು ಬಂಡವಾಳ ಹೂಡಿದ್ದಾರೆ. ಲಾಕ್‌ಡೌನ್‌ನಲ್ಲೂ ಬಡ್ಡಿ ರಿಯಾಯಿತಿ ಇಲ್ಲ. ಕರೊನಾ ಜಾಗತಿಕ ಮಟ್ಟದಲ್ಲೂ ಕಾಡುತ್ತಿರುವುದು ಕೈಗಾರಿಕಾ ವಲಯಕ್ಕಿರುವ ಮತ್ತೊಂದು ಸವಾಲು. ಜಾಗತಿಕ ಮಟ್ಟದಲ್ಲಿ ಕರೊನಾ ಸಂಪೂರ್ಣ ನಿರ್ನಾಮವಾದರೆ ಮಾತ್ರ ಕೈಗಾರಿಕಾ ವಲಯ ಚೇತರಿಸಿಕೊಳ್ಳಲು ಸಾಧ್ಯ.
    ಪ್ರಕಾಶ್ ಕಲ್ಬಾವಿ
    ಅಧ್ಯಕ್ಷ, ಭಾರತೀಯ ಉದ್ಯಮಸಂಸ್ಥೆಗಳ ಒಕ್ಕೂಟ(ಸಿಐಐ) ಮಂಗಳೂರು ಘಟಕ

    ಬೀಚ್ ಪ್ರವಾಸೋದ್ಯಮ ಸಹಿತ ಎಲ್ಲ ರೀತಿ ಪ್ರವಾಸೋದ್ಯಮಕ್ಕೆ ಬಲವಾದ ಹೊಡೆತ ಉಂಟಾಗಿದೆ. ಈ ಬಾರಿ ಚಂಡಮಾರುತ ಕಾರಣ ಮಂಗಳೂರಿನ ಬೀಚ್‌ಗಳಿಗೆ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿತ್ತು. ರಜಾದಿನಗಳಲ್ಲಿ ಪ್ರವಾಸೋದ್ಯಮ ಚೇತರಿಸಿಕೊಳ್ಳಬಹುದೆಂದು ನಿರೀಕ್ಷಿಸಲಾಗಿತ್ತು. ಈಗ ಕರೊನಾ ಲಾಕ್‌ಡೌನ್‌ನಿಂದ ಉದ್ಯಮ ಕಂಗಾಲಾಗಿದೆ.
    ಯತೀಶ್ ಬೈಕಂಪಾಡಿ
    ಸಿಇಒ, ಪಣಂಬೂರು ಬೀಚ್ ಅಭಿವೃದ್ಧ್ದಿ ಯೋಜನೆ

    ಹೋಟೆಲ್ ಉದ್ಯಮ ಸಂಪೂರ್ಣ ಮುಳುಗಿದೆ. ಜಿಲ್ಲೆಯ ಎಲ್ಲ ಸ್ವರೂಪದ ಹೋಟೆಲ್ ಮಾಲೀಕರ ಆದಾಯ ಶೂನ್ಯವಾಗಿದ್ದು, ನೌಕರರಿಗೆ ವೇತನ, ವಿದ್ಯುತ್ ಬಿಲ್, ನಿರ್ವಹಣೆ ವೆಚ್ಚ, ಬಾಡಿಗೆ, ಬ್ಯಾಂಕುಗಳ ಸಾಲದ ಕಂತಿನ ಬಡ್ಡಿ ಸೇರಿದಂತೆ ಲಕ್ಷ್ಷಾಂತರ ರೂ. ವ್ಯಯಿಸಬೇಕಿದೆ.
    ತಲ್ಲೂರು ಶಿವರಾಮ ಶೆಟ್ಟಿ
    ಅಧ್ಯಕ್ಷರು, ಜಿಲ್ಲಾ ಹೋಟೆಲ್ ಮಾಲೀಕರ ಸಂಘ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts