More

    ಕೊಬ್ಬರಿ ವರ್ತಕರಿಗೆ ವಂಚಿಸಿದ್ದ ನಾಲ್ವರ ಸೆರೆ ; ಆರಕ್ಷಕರ ಕಾರ್ಯಕ್ಕೆ ಎಸ್ಪಿ ವಂಶಿಕೃಷ್ಣ ಮೆಚ್ಚುಗೆ ;  ಗುಜರಾತ್‌ಗೆ ತೆರಳಿ ಆರೋಪಿಗಳನ್ನು ಬಂಧಿಸಿದ ಚಿ.ನಾ.ಹಳ್ಳಿ ಪೊಲೀಸರು

    ತುಮಕೂರು: ತಿಪಟೂರು, ಚಿಕ್ಕನಾಯಕನಹಳ್ಳಿ, ತುರುವೇಕೆರೆಯ ವಿವಿಧ ವರ್ತಕರಿಂದ ಕೊಬ್ಬರಿ ಖರೀದಿ ಮಾಡಿ ವಂಚಿಸಿದ್ದಲ್ಲದೇ ಗುಜರಾತ್‌ನಲ್ಲಿ ತಲೆ ಮರೆಸಿಕೊಂಡಿದ್ದ ಆರೋಪಿಗಳನ್ನು ಬಂಧಿಸಿ, 24 ಲಕ್ಷ ರೂ. ವಶಪಡಿಸಿಕೊಳ್ಳುವಲ್ಲಿ ಚಿಕ್ಕನಾಯಕನಹಳ್ಳಿ
    ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

    ಗುಜರಾತ್‌ನ ಜಬ್ರರಾಮ್ ಪಂಚರಾಮ್ ಪ್ರಜಾಪತಿ (34), ರಾಜು ಎಂ. ಸಿಂಗ್ (39), ಮಹೇಂದ್ರ ಬಾಯ್ ಸಿಂಗ್(48), ಭವನೇಶ್ ಶರ್ಮ ಮೌಂಟ್(30) ಬಂಧಿತರು.

    ಜಗದಾಂಬ ಮತ್ತು ಗಾಂಧಿ ಟ್ರೇಡಿಂಗ್ ಹೆಸರಿನಲ್ಲಿ ಮೂರು ಜನ ಸಹೋದರರು ಕೊಬ್ಬರಿ ಹಾಗೂ ತೆಂಗಿನ ಕಾಯಿ ಪೌಡರ್ ಖರೀದಿಸಿ ಕರೊನಾ ನೆಪಹೇಳಿಕೊಂಡು ವ್ಯಾಪಾರಿಗಳಿಗೆ ವಂಚಿಸಿದ್ದರು. ಈ ಬಗ್ಗೆ ಹಂದನಕೆರೆ ಹೋಬಳಿ ನಡುವನಹಳ್ಳಿಯ ಅಂಕಿತ್ ಟ್ರೇಡರ್ಸ್‌ ಮಾಲೀಕ ವಿವೇಕಾನಂದಸ್ವಾಮಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಗುಜರಾತ್‌ಗೆ ತೆರಳಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
    ಪೊಲೀಸರು ಹೊರ ರಾಜ್ಯಗಳಿಗೂ ಹೋಗಿ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸುವ ಮೂಲಕ ಕೊಬ್ಬರಿ ಬೆಳೆಗಾರರು ಹಾಗೂ ವರ್ತಕರಿಗೆ ಸುಗಮ ವ್ಯಾಪಾರ ವಹಿವಾಟಿನ ಭರವಸೆ ಮೂಡಿಸಿದ್ದಾರೆ.

    ಚಿಕ್ಕನಾಯಕನಹಳ್ಳಿ ಸಿಪಿಐ ಎಸ್.ಎಂ.ವೀಣಾ, ಹುಳಿಯಾರು ಠಾಣೆ ಪಿಎಸ್‌ಐ ಕೆ.ಟಿ.ರಮೇಶ್, ಚಿ.ನಾ.ಹಳ್ಳಿ ಪಿಎಸ್‌ಐ ಎಸ್.ಹರೀಶ್, ಎಎಸ್‌ಐ ಕೆ.ರವೀಂದ್ರ, ಸಿಬ್ಬಂದಿ ಅನಿಲ್ ಕುಮಾರ್, ಮಹಮ್ಮದ್ ಮಕ್ತಿಯಾರ್, ನರಸಿಂಹಮೂರ್ತಿ, ಮಧುಸೂಧನ್, ಕೆ.ವಿ.ಚೇತನ್, ಬಿ.ರವೀಶ್, ಎಂ.ಕೆ.ಲೋಹಿತಾ ಮತ್ತಿತರರು ಆರೋಪಿಗಳ ಪತ್ತೆಗೆ ಶ್ರಮಿಸಿದ್ದರು.

    ಸರಗಳ್ಳರನ್ನು ಹಿಂಬಾಲಿಸಿ ಬಂಧಿಸಿದ ಪಿಎಸ್‌ಐ ರಮೇಶ್ : ಹುಳಿಯಾರು, ಚಿಕ್ಕನಾಯಕನಹಳ್ಳಿ, ತಿಪಟೂರು, ತುರುವೇಕೆರೆ ಮತ್ತು ತುಮಕೂರು ಮತ್ತಿತರರ ಕಡೆಗಳಲ್ಲಿ ಒಂಟಿ ಮಹಿಳೆಯರನ್ನು ಗುರಿಯಾಗಿಸಿಕೊಂಡು ಮಾಂಗಲ್ಯ ಸರ ಕಳವು ಮಾಡುತ್ತಿದ್ದ ಖದೀಮರು ಹುಳಿಯಾರು ಪೊಲೀಸ್ ಠಾಣೆ ಪಿಎಸ್‌ಐ ಕೆ.ಟಿ.ರಮೇಶ್ ಕೈಗೆ ಶುಕ್ರವಾರ ಸಿಕ್ಕಿಬಿದ್ದಿದ್ದಾರೆ. ಬಂಧಿತನಿಂದ 369ಗ್ರಾಂ ತೂಕದ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸುತ್ತಿದ್ದ ಬೈಕ್ ವಶಪಡಿಸಿಕೊಳ್ಳಲಾಗಿದೆ. ಹಾಸನ ಜಿಲ್ಲೆ ಹೊಳೆನರಸೀಪುರದ ಆಲಿಬಾಬ(50), ತಿಪಟೂರಿನ ಸಂಜೀವ್ ನಗರದ ಸಿರಾಜ್ ಅಲಿ (37) ಬಂಧಿತರು.

    ಗ್ರಾಮೀಣ ಭಾಗದಲ್ಲಿ ಹೊಲ, ತೋಟಗಳಿಗೆ ತೆರಳುವ ಒಂಟಿ ಮಹಿಳೆಯರನ್ನು ವಿಳಾಸ ಕೇಳುವ ನೆಪದಲ್ಲಿ ನಿಲ್ಲಿಸಿ ಸರ ಕಿತ್ತುಕೊಂಡು ಪರಾರಿಯಾಗುತ್ತಿದ್ದರು ಎಂಬುದು ತನಿಖೆಯಲ್ಲಿ ಬಯಲಾಗಿದೆ. 2020ರ ಡಿ.21ರಂದು ಹುಳಿಯಾರು ಹೋಬಳಿ ಬೆಳವಾಡಿ ಬಳಿ ತೋಟದಿಂದ ಬರುತ್ತಿದ್ದ ಮಹಿಳೆಯಿಂದ ಇಬ್ಬರು ಅಪರಿಚಿತರು ಬೈಕ್‌ನಲ್ಲಿ ಬಂದು ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದರು. ಈ ಬಗ್ಗೆ ಕೇಸ್ ದಾಖಲಿಸಿಕೊಂಡು ವಿಚಾರಣೆ ಆರಂಭಿಸಿದ್ದ ಪಿಎಸ್‌ಐ ರಮೇಶ್ ಅವರು ಗಸ್ತು ನಡೆಸುವ ಸಮಯದಲ್ಲಿ ಅನುಮಾನಗೊಂಡು ವಿಚಾರಣೆ ನಡೆಸಿದಾಗ ತಪ್ಪಿಸಿಕೊಂಡು ಓಡಿಹೋಗಲು ಪ್ರಯತ್ನಿಸಿದ್ದಾರೆ. ಕೂಡಲೇ ಬೆನ್ನಟ್ಟಿ ಹಿಡಿಯಲಾಗಿದೆ. ಹುಳಿಯಾರು ಠಾಣೆ ವ್ಯಾಪ್ತಿಯಲ್ಲಿ 2, ಚಿ.ನಾ.ಹಳ್ಳಿ 1, ತಿಪಟೂರು 2, ತುರುವೇಕೆರೆ 1 ಮತ್ತು ತುಮಕೂರಿನ ಹೊಸಬಡಾವಣೆ ವ್ಯಾಪ್ತಿಯಲ್ಲಿ 2 ಒಟ್ಟು 8 ಪ್ರಕರಣಗಳಲ್ಲಿ ಭಾಗಿಯಾಗಿರುವುದಾಗಿ ಬಾಯ್ಬಿಟ್ಟಿದ್ದಾರೆ.

    ಅನುಮಾನಾಸ್ಪದವಾಗಿ ಓಡಾಡುತ್ತಿರುವಾಗಲೇ ಸಿಕ್ಕ ಕಳ್ಳ: ಹೆಬ್ಬೂರು, ತುಮಕೂರು ಗ್ರಾಮಾಂತರ, ಕೋರಾ ಹಾಗೂ ಕೊರಟಗೆರೆ ಮತ್ತಿತರರ ಠಾಣೆಗಳ ವ್ಯಾಪ್ತಿಯಲ್ಲಿ ಮನೆ ಕಳವು ಪ್ರಕರಣಗಳಲ್ಲಿ ಬಂಧನವಾಗಿ ಇತ್ತೀಚೆಗಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದ ತುಮಕೂರು ಬೆಳಗುಂಬ ರಸ್ತೆ ಜ್ಯೋತಿಪುರದ ಜಿ.ರಘು(28) ಮತ್ತೆ ಕಳವು ಮುಂದುವರಿಸಿ ಶುಕ್ರವಾರ ಪೊಲೀಸರ ಅತಿಥಿಯಾಗಿದ್ದಾನೆ. ಇರಕಸಂದ್ರ ಕಾಲನಿ ಸಿದ್ದಾಪುರ ಚಾಮುಂಡಿಗುಡ್ಡದ ಬಳಿ ಇರುವ ಎಸ್‌ಎಲ್‌ಎನ್ ಪಬ್ಲಿಕ್ ಶಾಲೆ ಮುಂಭಾಗ ರಸ್ತೆ ಬದಿಯಲ್ಲಿ ಅನುಮಾನಾಸ್ಪದವಾಗಿ ಓಡಾಡುವಾಗ ಪೊಲೀಸರ ಕೈಗೆ ಸಿಕ್ಕಿಬಿದ್ದ ರಘು ವಿಚಾರಣೆಗೆ ಒಳಪಡಿಸಿದಾಗ ಜೈಲಿನಿಂದ ಹೊರಬಂದ ನಂತರ ಕೋರಾ ಠಾಣೆ ವ್ಯಾಪ್ತಿಯಲ್ಲಿ 1, ದೊಡ್ಡಬಳ್ಳಾಪುರ ತಾಲೂಕು ದೊಡ್ಡಬೆಳವಂಗಲ ವ್ಯಾಪ್ತಿಯಲ್ಲಿ 4 ಕಳವು ಪ್ರಕರಣಗಳಲ್ಲಿ ಭಾಗಿಯಾಗಿರುವುದಾಗಿ ಬಾಯ್ಬಿಟ್ಟಿದ್ದಾನೆ. 5 ಪ್ರಕರಣಗಳಿಂದ 14 ಲಕ್ಷ ರೂ.ಬೆಲೆ ಬಾಳುವ 350 ಗ್ರಾಂ ಚಿನ್ನದ ಆಭರಣ ವಶಪಡಿಸಿಕೊಳ್ಳಲಾಗಿದೆ. ಕೋಳಾಲ ಠಾಣೆ ಪಿಎಸ್‌ಐ ನವೀನ್‌ಕುಮಾರ್ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts