More

    ಮಂಗಳೂರಲ್ಲಿ ಸಿಎನ್‌ಜಿ ಬಂಕ್ ರೆಡಿ, 5 ಸ್ಟೇಷನ್‌ಗಳು ವಿತರಣೆಗೆ ಸಿದ್ಧ

    – ವೇಣುವಿನೋದ್ ಕೆ.ಎಸ್.ಮಂಗಳೂರು
    ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೊದಲ ಬಾರಿಗೆ ಸಂಕುಚಿತ ನೈಸರ್ಗಿಕ ಅನಿಲ (ಸಿಎನ್‌ಜಿ) ವಿತರಣೆ ಸ್ಟೇಷನ್‌ಗಳು ಕಾರ್ಯಾರಂಭಕ್ಕೆ ಸಿದ್ಧಗೊಂಡಿವೆ.
    ಒಟ್ಟು 7 ಸಿಎನ್‌ಜಿ ಸ್ಟೇಷನ್‌ಗಳನ್ನು ಮಂಗಳೂರು ಪರಿಸರದಲ್ಲಿ ಅಂತಿಮಗೊಳಿಸಿದ್ದು, ಅವುಗಳಲ್ಲಿ ಐದು ಕೇಂದ್ರಗಳಿಗೆ ಕೇಂದ್ರ ಪೆಟ್ರೋಲಿಯಂ ಸಚಿವಾಲಯದ ‘ಸ್ಟಾಂಪಿಂಗ್’ ದೊರೆತಿದೆ. ಎರಡು ಮಾತ್ರ ಬಾಕಿ ಇದ್ದು, ಕೆಲದಿನಗಳಲ್ಲೇ ಅವುಗಳಿಗೂ ಅಧಿಕೃತ ಮುದ್ರೆ ಸಿಗುವ ನಿರೀಕ್ಷೆ ಇದೆ.
    ಐದು ಸ್ಟೇಷನ್‌ಗಳಲ್ಲಿ ಸಿಎನ್‌ಜಿ ವಿತರಣೆಯನ್ನು ಮುಂದಿನ ವಾರವೇ ಪ್ರಾರಂಭಿಸಲು ಭಾರತೀಯ ಅನಿಲ ಪ್ರಾಧಿಕಾರ (ಗೈಲ್) ಗ್ಯಾಸ್ ಅಧಿಕಾರಿಗಳು ಸಿದ್ಧತೆಯಲ್ಲಿದ್ದಾರೆ. ಮುಂದಿನ ವಾರ ಸಾಂಕೇತಿಕವಾಗಿ ಇಂಡಿಯನ್ ಆಯಿಲ್, ಎಚ್‌ಪಿಸಿಎಲ್ ಬಂಕ್‌ಗಳಲ್ಲಿ ಸಿಎನ್‌ಜಿ ಸ್ಟೇಷನ್ ಉದ್ಘಾಟಿಸಲಾಗುವುದು. ಸುರತ್ಕಲ್ ಸಮೀಪದ ಹೊಸಬೆಟ್ಟು ಹಾಗೂ ಹಳೆಯಂಗಡಿಯಲ್ಲಿನ ಸ್ಟೇಷನ್‌ಗಳಿಗೆ ಅನುಮೋದನೆ ಸಿಕ್ಕಿದ ನಂತರ ಅಲ್ಲೂ ಪ್ರಾರಂಭಿಸಲಾಗುವುದು ಎಂದು ಗೈಲ್ ಗ್ಯಾಸ್ ಮೂಲಗಳು ತಿಳಿಸಿವೆ.

    ಯೋಜಿತ ಎಲ್ಲ 7 ಸ್ಟೇಷನ್‌ಗಳಲ್ಲೂ ಸಿಎನ್‌ಜಿ ಟ್ಯಾಂಕ್, ವಿತರಣಾ ವ್ಯವಸ್ಥೆ, ಪಂಪ್ ಇತ್ಯಾದಿ ಅಳವಡಿಕೆ ಪೂರ್ಣಗೊಂಡು ಟೆಸ್ಟಿಂಗ್ ಕೂಡ ನಡೆಸಲಾಗಿದೆ. 5 ಸ್ಟೇಷನ್‌ಗೆ ಪೆಟ್ರೋಲಿಯಂ ಸಚಿವಾಲಯದ ಸ್ಟಾಂಪಿಂಗ್ ಪ್ರಕ್ರಿಯೆ ಕೂಡ ಆಗಿದೆ.

    ಪೈಪ್‌ಲೈನ್ ವಿಳಂಬ: ಪ್ರಸ್ತುತ ಎಂಸಿಎಫ್‌ವರೆಗೆ ಸಿಎನ್‌ಜಿ ಅನಿಲ ತಲುಪಿದ್ದರೂ ಅಲ್ಲಿಂದ ನಗರದೊಳಗೆ ಹಾಗೂ ಸಿಎನ್‌ಜಿ ಸ್ಟೇಷನ್‌ಗಳನ್ನು ಸಂಪರ್ಕಿಸುವ ಪೈಪ್‌ಜಾಲ ಹಾಕುವ ಕೆಲಸ ಇನ್ನೂ ವೇಗ ಪಡೆದಿಲ್ಲ. ಹಾಗಾಗಿ ಸದ್ಯದ ಮಟ್ಟಿಗೆ ಬೆಂಗಳೂರಿನಿಂದ ಟ್ಯಾಂಕರ್‌ನಲ್ಲಿ ಸಿಎನ್‌ಜಿ ತಂದು ಸ್ಟೇಷನ್‌ಗಳಲ್ಲಿ ಶೇಖರಿಸಲಾಗುವುದು. ಅಲ್ಲಿಂದ ಸಿಎನ್‌ಜಿ ವಾಹನಗಳಿಗೆ ಫಿಲ್ಲಿಂಗ್ ಮಾಡಬಹುದು.

    ಸಿಎನ್‌ಜಿ ಕನ್ವರ್ಶನ್ ಕಿಟ್: ಸದ್ಯ ಜಿಲ್ಲೆಯಲ್ಲಿ ಸಿಎನ್‌ಜಿ ಹೊಂದಿರುವ ವಾಹನಗಳಿಲ್ಲ. ಮುಂದೆ ಜನರು ತಮ್ಮ ವಾಹನಗಳನ್ನು ಸಿಎನ್‌ಜಿಗೆ ಪರಿವರ್ತಿಸುವುದಕ್ಕೆ ಸಹಾಯವಾಗುವಂತೆ ಏಜೆನ್ಸಿಯೊಂದನ್ನು ಗೈಲ್ ಗ್ಯಾಸ್ ಸಂಸ್ಥೆ ಶೀಘ್ರವೇ ಪ್ರಾರಂಭಿಸಲಿದೆ. ಈ ಏಜೆನ್ಸಿಗೆ ತೆರಳಿ ಜನರು ತಮ್ಮ ಪೆಟ್ರೋಲ್/ಡೀಸೆಲ್ ಕಾರುಗಳಿಗೆ ಈ ಕಿಟ್ ಅಳವಡಿಸಿಕೊಂಡರೆ ಸಿಎನ್‌ಜಿ ಮತ್ತು ಪೆಟ್ರೋಲ್ ಎರಡನ್ನೂ ಬಳಸಬಹುದಾಗಿದೆ. ಈಗಾಗಲೇ ಮಾರುತಿ, ಹುಂಡೈ ಮತ್ತಿತರ ಪ್ರಮುಖ ಕಾರು ಕಂಪನಿಗಳು ಸಿಎನ್‌ಜಿ ಕಾರುಗಳನ್ನು ಹೊರತರುತ್ತಿವೆ.
    ಬಸ್‌ಗಳಿಗೂ ಸಿಎನ್‌ಜಿ ಕಿಟ್ ಅಳವಡಿಸುವ ಮೂಲಕ ಪರಿಸರ ಸ್ನೇಹಿ ಇಂಧನ ಬಳಸಿದಂತಾಗಲಿದೆ. ಇನ್ನೊಂದೆಡೆ ಡೀಸೆಲ್ ಈಗಾಗಲೇ ತುಟ್ಟಿಯಾಗಿದ್ದು ಅದಕ್ಕೆ ಪರ್ಯಾಯವಾಗಿ ಸಿಎನ್‌ಜಿ ಬಳಸುವ ಬಗ್ಗೆ ಬಸ್ ಮಾಲೀಕರೂ ಚಿಂತನೆ ನಡೆಸುತ್ತಿದ್ದಾರೆ.

    ಸ್ಟೇಷನ್‌ಗಳು ಎಲ್ಲೆಲ್ಲಿ?: ರೈ ಸರ್ವಿಸ್ ಸ್ಟೇಷನ್ ಹೊಸಬೆಟ್ಟು, ಅನುರಾಗ್ ಹಳೆಯಂಗಡಿ, ಶ್ರೀ ಬಾಲಾಜಿ ಮೂಲ್ಕಿ, ಡೆಲ್ಟಾ ಕೂಳೂರು, ಮಂಗಳೂರು ಸರ್ವಿಸ್ ಸ್ಟೇಷನ್ ಕಾವೂರು, ಎಂ.ಎಸ್.ಪೈ ಅಡ್ಯಾರ್ ಹಾಗೂ ನೇತ್ರಾವತಿ ಅಡ್ಯಾರ್.

    ಹಿರಿಯ ಅಧಿಕಾರಿಗಳ ಸಂಪರ್ಕದಲ್ಲಿದ್ದೇವೆ, ಎಲ್ಲವೂ ಸರಿಯಾದರೆ ಮುಂದಿನ ವಾರದಲ್ಲೇ ದಿನ ನಿಗದಿ ಪಡಿಸಿ ಗ್ಯಾಸ್ ಸ್ಟೇಷನ್ ಪ್ರಾರಂಭಿಸಲಾಗುವುದು. ನಮ್ಮ ಗ್ಯಾಸ್ ವಿತರಣಾ ಜಾಲ ಸುಸೂತ್ರವಾದ ನಂತರ ಸಿಎನ್‌ಜಿ ಇಂಧನವನ್ನು ಬಳಸುವಂತೆ ದೊಡ್ಡ ಮಟ್ಟದ ಅಭಿಯಾನ ಕೈಗೊಳ್ಳಲಾಗುವುದು.
    – ವಿಲೀನ್ ಝುಂಕೆ, ಮಹಾಪ್ರಬಂಧಕ, ಗೈಲ್ ಗ್ಯಾಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts