

ಬೆಂಗಳೂರು: ಏಳನೇ ವೇತನ ಆಯೋಗ ಯಾವಾಗ ಜಾರಿಯಾಗುತ್ತದೆ ಎಂದು ರಾಜ್ಯ ಸರ್ಕಾರಿ ನೌಕರರು ಕಾದು ಕುಳಿತಿದ್ದು, ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಆಡಿರುವ ಮಾತು ನೌಕರರ ಮುಖದಲ್ಲಿ ಸಂತಸ ಉಂಟುಮಾಡಲಿದೆ. ಏಕೆಂದರೆ, 7ನೇ ವೇತನ ಆಯೋಗ ಜಾರಿಗೊಳಿಸುವ ಬಗ್ಗೆ ಸಿಎಂ ಸಿದ್ದು ಪ್ರಮುಖ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ವಿಧಾನ ಮಂಡಲದ ಅಧಿವೇಶನದಲ್ಲಿ ಬಜೆಟ್ ಮೇಲಿನ ಚರ್ಚೆ ನಡೆಯುತ್ತಿದ್ದು, ವಿಧಾನ ಪರಿಷತ್ನಲ್ಲಿ ಬಿಜೆಪಿಯ ಡಾ. ವೈ.ಎ. ನಾರಾಯಣಸ್ವಾಮಿ ಅವರು ವೇತನ ಆಯೋಗದ ಬಗ್ಗೆ ಕೇಳಿದ ಪ್ರಶ್ನೆಗೆ ಸಿಎಂ ಸಿದ್ದರಾಮಯ್ಯ ಅವರು ಉತ್ತರ ನೀಡಿದ್ದಾರೆ.
ಪ್ರಸ್ತುತ ರಾಜ್ಯ ಸರ್ಕಾರಿ ನೌಕರರಿಗೆ ಎಷ್ಟನೇ ವೇತನ ಆಯೋಗವನ್ನು ನೀಡಲಾಗಿದೆ? ಯಾವಾಗ ನೀಡಲಾಗಿದೆ? ಎಂಬ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ಪ್ರಸ್ತುತ 6ನೇ ವೇತನ ಆಯೋಗ ಶಿಫಾರಸ್ಸು ಜಾರಿಯಲ್ಲಿದೆ. ಇದು ಬಂದು 6 ವರ್ಷ ಆಯಿತು. 7ನೇ ವೇತನ ಆಯೋಗದ ಮಧ್ಯಂತರ ವರದಿ ಕೊಟ್ಟಿದೆ ಎಂದು ಹೇಳಿದರು
ಎಷ್ಟು ವರ್ಷಗಳಿಗೊಮ್ಮೆ ವೇತನ ಆಯೋಗವನ್ನು ರಚಿಸಲಾಗುವುದು? ರಾಜ್ಯ ಮತ್ತು ಕೇಂದ್ರ ಸರ್ಕಾರಿ ನೌಕರರ ನಡುವೆ ವೇತನ ತಾರತಮ್ಯ ಇರುವುದು ಸರ್ಕಾರದ ಗಮನಕ್ಕ ಬಂದಿದೆಯೇ? ಬಂದಿದ್ದಲ್ಲಿ ಎಷ್ಟು ಪ್ರಮಾಣದಲ್ಲಿ ತಾರತಮ್ಯ ಇದೆ? ಕೇಂದ್ರ ಸರ್ಕಾರದ ಸರಿಸಮನಾದ ವೇತನ ರಾಜ್ಯ ನೌಕರರಿಗೆ ಕೊಡಲು ಸಾಧ್ಯವೆ ಎಂಬ ನಾರಾಯಣಸ್ವಾಮಿ ಅವರ ಪ್ರಶ್ನೆಗೆ ಉತ್ತರಿಸಿದ ಸಿಎಂ ಸಿದ್ದು, ನಾರಾಯಣಸ್ವಾಮಿ ಅವರು ನಾವು ಕೊಟ್ಟ ಉತ್ತರ ಅದ್ಭುತ ಎಂದು ಹೇಳಿದ್ದಾರೆ. ಆದರೆ ಕೆಲವು ಉಪ ಪ್ರಶ್ನೆ ಕೇಳಿದ್ದಾರೆ. ನಿಮ್ಮ ಪ್ರಶ್ನೆಗಳು ಕೂಡ ಅತ್ಯದ್ಭುತವಾಗಿದೆ. 7ನೇ ಆಯೋಗದವರು ನಮಗೆ ಸಮಯ ಬೇಕು ಎಂದು ಕೇಳಿದ್ದಾರೆ. 6 ತಿಂಗಳು ಸಮಯ ಕೊಡಲಾಗಿದೆ. ಸದ್ಯಕ್ಕೆ ಮಧ್ಯಂತರ ವರದಿಯಂತೆ ಜಾರಿ ಮಾಡಿದ್ದೇವೆ. ಅವರು ಪೂರ್ಣ ವರದಿ ಕೊಟ್ಟಾಗ ನಮ್ಮ ಆರ್ಥಿಕ ಪರಿಸ್ಥಿತಿ ನೋಡಿಕೊಂಡು 7ನೇ ಆಯೋಗವನ್ನು ಜಾರಿ ಮಾಡುತ್ತೇವೆ ಎಂದು ಹೇಳಿದರು.
ಕೇಂದ್ರದವರು 10 ವರ್ಷಕ್ಕೊಮ್ಮೆ ಆಯೋಗವನ್ನು ರಚನೆ ಮಾಡುತ್ತಾರೆ. ನಾವು 5 ವರ್ಷಕ್ಕೆ ಒಮ್ಮೆ ಮಾಡುತ್ತೇವೆ. 2022ನೇ ಇಸವಿಯಲ್ಲೇ ಆಯೋಗವನ್ನು ಮಾಡಲಾಗಿದೆ. ಹಿಂದೆ ಪೇ ಕಮಿಟಿ ಶಿಫಾರಸ್ಸು ಕೊಡ್ತಿದ್ರು, ಅದರಂತೆ ಸಂಬಳ ಭತ್ಯೆ, ಕೊಡುತ್ತಿದ್ದರು. ಒಂದು ಬಾರಿ 6,7,8 ವರ್ಷವೂ ಆಗಿದೆ. ಈ ಬಾರಿ 5 ವರ್ಷಕ್ಕೆ ಆಯೋಗ ಮಾಡಲಾಗಿದೆ. ಪೂರ್ಣ ವರದಿ ಬಂದ ಮೇಲೆ ಆಯೋಗದ ಶಿಫಾರಸ್ಸಿನ ಮೇಲೆ ನಾವು ಕ್ರಮ ಕೈಗೊಳ್ಳುತ್ತೇವೆ ಎಂದು ಉತ್ತರಿಸಿದರು. (ದಿಗ್ವಿಜಯ ನ್ಯೂಸ್)