More

    ಗ್ಯಾರಂಟಿ ಭಾರದ ನಡುವೆ ಜನಪ್ರಿಯ ಬಜೆಟ್? ಜನಸಾಮಾನ್ಯರಿಂದ ಭರಪೂರ ನಿರೀಕ್ಷೆ

    ಶಿವಾನಂದ ತಗಡೂರು, ಬೆಂಗಳೂರು:
    ದಾಖಲೆಯ ಅವಧಿಗೆ 13 ಬಾರಿ ಬಜೆಟ್ ಮಂಡನೆ ಮಾಡಿದ ಹೆಗ್ಗಳಿಕೆ ಸಿದ್ದರಾಮಯ್ಯ ಅವರದ್ದು. ಮುಖ್ಯಮಂತ್ರಿಯಾಗಿ 2ನೇ ಬಾರಿಗೆ ಅಧಿಕಾರ ವಹಿಸಿಕೊಂಡ ಬಳಿಕ 14ನೇ ಬಜೆಟ್ ಮಂಡನೆ ಮಾಡಲು ಸಿದ್ಧತೆ ನಡೆಸುತ್ತಿರುವ ಸಿದ್ದರಾಮಯ್ಯ ಅವರತ್ತ ನಾಡು ಮತ್ತೆ ಆಸೆಗಣ್ಣಿನಿಂದ ನೋಡುತ್ತಿದೆ. ಈಗಾಗಲೇ ಗ್ಯಾರಂಟಿ ಯೋಜನೆಗಳನ್ನು ನೀಡಿದ್ದರೂ, ಜನ ಸಾಮಾನ್ಯರ ಬೇಡಿಕೆಗಳ ಪಟ್ಟಿ ಮಾತ್ರ ಬೆಳೆಯುತ್ತಲೇ ಇದೆ.
    ಕೃಷಿ, ಕೈಗಾರಿಕೆ, ಮೂಲಸೌಲಭ್ಯ ಸೇರಿದಂತೆ ರೈತರು, ಕಾರ್ಮಿಕರು, ಮಹಿಳೆಯರು, ಮೀನುಗಾರರು, ನೇಕಾರರನ್ನೊಳಗೊಂಡಂತೆ ನಾನಾ ವರ್ಗದ ಜನರ ಆಶೋತ್ತರಗಳಿಗೆ ಬಜೆಟ್‌ನಲ್ಲಿ ಸ್ಪಂಧನೆ ಕೊಡಬೇಕು ಎನ್ನುವ ನಿಟ್ಟಿನಲ್ಲಿ ಪ್ರಯತ್ನಗಳನ್ನು ನಡೆಸಿರುವ ಸಿಎಂಗೆ ಹಲವು ಸವಾಲುಗಳಿವೆ.
    ಗ್ಯಾರಂಟಿಗಳನ್ನು ಅನುಷ್ಠಾನಕ್ಕೆ ತಂದ ಹಿನ್ನೆಲೆಯಲ್ಲಿ ರಾಜ್ಯದ ಬೊಕ್ಕಸಕ್ಕೆ ದೊಡ್ಡ ಹೊರೆ ಬಿದ್ದಿದ್ದು, ಅಭಿವೃದ್ಧಿ ಕಾಮಗಾರಿಗಳ ವೇಗ ಕಡಿಮೆಯಾಗಿದೆ. ವಿರೋಧ ಪಕ್ಷದ ಶಾಸಕರುಗಳಿರಲಿ, ಆಡಳಿತ ಪಕ್ಷದ ಶಾಸಕರುಗಳೇ ಅನುದಾನಕ್ಕಾಗಿ ಬಹಿರಂಗವಾಗಿ ಆಗ್ರಹಿಸುತ್ತಿರುವುದು ವಾಸ್ತವತೆಗೆ ಹಿಡಿದ ಕನ್ನಡಿ.
    ಅರ್ಥಿಕ ನಿಪುಣರಾದ ಸಿದ್ದರಾಮಯ್ಯ ಅವರಿಗೆ ಈ ಬಾರಿ ಮೊದಲು ಜನರಿಗೆ ಚುನಾವಣೆಯಲ್ಲಿ ಕೊಟ್ಟ ಮಾತನ್ನು ಉಳಿಸಿಕೊಳ್ಳುವುದು ಸವಾಲಾಗಿತ್ತು. ಆ ಕಾರಣಕ್ಕಾಗಿಯೇ ಶಾಸಕರ ಬೇಡಿಕೆಗಳಿಗೆ ಬ್ರೇಕ್ ಹಾಕಿ, ಗ್ಯಾರಂಟಿಗಳನ್ನು ಅನುಷ್ಠಾನಕ್ಕೆ ತರುವ ಮೂಲಕ ನುಡಿದಂತೆ ನಡೆದ ಸರ್ಕಾರ ಎನ್ನುವ ಮಾತನ್ನು ಉಳಿಸಿಕೊಂಡು ಸಾರ್ವಜನಿಕ ವಿಶ್ವಾಸರ್ಹತೆಯನ್ನು ಕಾಪಿಟ್ಟುಕೊಂಡಿದ್ದಾರೆ.
    ಈ ವಿಶ್ವಾಸರ್ಹತೆಯೇ ಲೋಕಸಭೆ ಚುನಾವಣೆಯಲ್ಲಿ ಭಾರಿ ಬೆಲೆ ಬಾಳಬಹುದು ಎನ್ನುವುದು ಸಿದ್ದರಾಮಯ್ಯಗೆ ಖಚಿತವಾಗಿ ಗೊತ್ತಿದೆ. ಹಾಗಾಗಿಯೇ ಈ ಬಾರಿ ಏನೇ ಟೀಕೆ ಟಿಪ್ಪಣಿ ಬಂದರೂ, ಚುನಾವಣಾ ಮುನ್ನೋಟವನ್ನು ಇಟ್ಟುಕೊಂಡು ಜನಪ್ರಿಯ ಬಜೆಟ್ ಮಂಡನೆ ಮಾಡಲು ಕಸರತ್ತು ನಡೆಸಿದ್ದಾರೆ.
    ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕೂಡ ಕೇಂದ್ರದಿಂದ ಗ್ಯಾರಂಟಿ ಯೋಜನೆಗಳನ್ನು ನೀಡುವ ಮೂಲಕ ರಾಜ್ಯಸರ್ಕಾರಕ್ಕೆ ಟಾಂಗ್ ನೀಡುವ ಪ್ರಯತ್ನ ಮಾಡುತ್ತಿದೆ. ಈ ಸವಾಲಿನ ವಿರುದ್ದವೂ ಈಜಲು ಸಿದ್ದರಾಮಯ್ಯ ತಾಲೀಮು ನಡೆಸಿದ್ದಾರೆ. ಕೇಂದ್ರದ ಕಿಸಾನ್ ಸಮ್ಮಾನ್ ಯೋಜನೆ ಸೇರಿದಂತೆ ಹಲವು ಜನಪರ ಯೋಜನೆಗಳನ್ನು ಜಾರಿಗೆ ತಂದಿರುವ ಮಾದರಿಯಲ್ಲಿ ರಾಜ್ಯದಲ್ಲಿಯೂ ಯೋಜನೆಗಳನ್ನು ಜಾರಿಗೆ ತರಬೇಕು ಎನ್ನುವ ಪ್ರಯತ್ನವೂ ನಡೆದಿದೆ.
    ಅನ್ನ ಭಾಗ್ಯ ಯೋಜನೆಯಿಂದ ಹಿಡಿದು, ಹಲವು ಭಾಗ್ಯಗಳ ಯೋಜನೆಗಳ ಹೊಳೆಯನ್ನೆ ಹರಿಸಿದ್ದ ಸಿದ್ದರಾಮಯ್ಯಗೆ ಈ ಬಜೆಟ್ ಮಂಡನೆ ನಿಜಕ್ಕೂ ಸವಾಲಿನ ಸಂಗತಿ. ಒಂದು ಕಡೆಯಲ್ಲಿ ಜನಪರ ಯೋಜನೆಗಳನ್ನು ನೀಡಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚು ಸ್ಥಾನಗಳನ್ನು ಗಳಿಸಿಕೊಡಬೇಕು. ಮತ್ತೊಂದು ಕಡೆಯಲ್ಲಿ ಸರ್ಕಾರದ ಬೊಕ್ಕಸದ ಪರಿಸ್ಥಿತಿಯನ್ನು ಸರಿದೂಗಿಸಿಕೊಳ್ಳಬೇಕಾದ ಅನಿವಾರ್ಯತೆಯಲ್ಲಿ ಸಿಎಂ ಸಿಲುಕಿದ್ದಾರೆ. ಅವರ ಬಜೆಟ್ ಸರ್ಕಸ್ ಎಲ್ಲರ ಕುತೂಹಲ ಕೆರಳಿಸಿರುವುದಂತೂ ದಿಟ.
    ಯಡಿಯೂರಪ್ಪ ಸರ್ಕಾರದಲ್ಲಿ ಹಾಲು ಉತ್ಪಾದಕರಿಗೆ ಪ್ರೋತ್ಸಾಹಧನ, ಸೈಕಲ್ ಭಾಗ್ಯ, ಭಾಗ್ಯಲಕ್ಷ್ಮಿ ಯೋಜನೆ ಜನಪ್ರಿಯ ಯೋಜನೆಗಳಾಗಿದ್ದವು. ಎನ್‌ಡಿಆರ್‌ಎ್ ನಿಯಮಾವಳಿಗಳನ್ನು ಮೀರಿ ರೈತರಿಗೆ ಬೆಳೆ ಪರಿಹಾರ, ಮನೆ ಹಾನಿ ಪರಿಹಾರ ದುಪಟ್ಟು ಮಾಡಿದ್ದು ಇತಿಹಾಸ. ನೆರೆ ಹಾವಳಿ ಸಂದರ್ಭದಲ್ಲಿ ತೆಗೆದುಕೊಂಡ ಈ ತೀರ್ಮಾನದಿಂದ ಜನರ ಬದುಕು ಕಟ್ಟಿಕೊಡಲು ಸಾಧ್ಯವಾಗಿತ್ತು. ಕೇಂದ್ರ ಸರ್ಕಾರಕ್ಕೆ ಸಡ್ಡು ಹೊಡೆದು, ಇದೇ ಮಾದರಿಯ ಯೋಜನೆಯನ್ನು ಜಾರಿಗೆ ತರಬೇಕು ಎನ್ನುವ ತುಡಿತ ಮುಖ್ಯಮಂತ್ರಿಗಳಲ್ಲಿದೆ.
    ರೈತಾಪಿ ಸಮುದಾಯವೇ ದೊಡ್ಡ ಪ್ರಮಾಣದಲ್ಲಿರುವ ಕಾರಣ, ಅವರನ್ನು ತಲುಪುವ ಮತ್ತು ಪ್ರತಿಯೊಬ್ಬರಿಗೂ ಅನುಕೂಲ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಒಂದಷ್ಟು ಚರ್ಚೆಗಳಾಗಿವೆ. ಹೊಸ ಯೋಜನೆಗಳನ್ನು ೋಷಣೆ ಮಾಡಲು ಗ್ಯಾರಂಟಿ ಯೋಜನೆಗಳ ಭಾರವೇ ಹೆಚ್ಚಾಗಿರುವುದು ದೊಡ್ಡ ಸಮಸ್ಯೆಯಾಗಿದೆ.

    ಸಾಲ ಮನ್ನಾ ನಿರೀಕ್ಷೆ
    ಈ ಬಾರಿ ಮಳೆ ಕೈಕೊಟ್ಟಿದ್ದರಿಂದ ನಾಡಿನ ರೈತಾಪಿ ಜನರು ಬರದ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಕುಡಿಯುವ ನೀರಿಗೂ ತಾತ್ವರದ ಸ್ಥಿತಿ ಇದೆ. ಜನ ಜಾನುವಾರುಗಳ ಪರಿಸ್ಥಿತಿಯಂತೂ ಹೇಳತೀರದು. ಬರ ಸ್ಥಿತಿಯನ್ನು ನಿಭಾಯಿಸಲು ಸರ್ಕಾರ ಕ್ರಮ ಕೈಗೊಂಡಿದ್ದರೂ, ಅದು ಪೂರ್ಣ ಪ್ರಮಾಣದ ಪರಿಹಾರವಾಗಲಾರದು. ಬರ ಇರುವ ಕಾರಣಕ್ಕಾಗಿ ಈ ಬಾರಿ ರೈತರ ಸಾಲವನ್ನು ಸಂಪೂರ್ಣ ಒಮ್ಮೆ ಮನ್ನಾ ಮಾಡಲಿ ಎನ್ನುವುದು ರೈತ ಸಮುದಾಯದ ನಿರೀಕ್ಷೆ. ಹಿಂದಿನ ಅವಧಿ ಸರ್ಕಾರದಲ್ಲಿ 50 ಸಾವಿರ ರೂ ಸಾಲ ಮನ್ನಾ ಮಾಡಿದ್ದ ಸಿದ್ದರಾಮಯ್ಯ ಈ ಬಾರಿ ಸಾಲ ಮನ್ನಾ ಮಾಡಲು ಮುಂದಾಗುವರೇ? ನೋಡಬೇಕು.

    ಕೊಬ್ಬರಿ ಬೆಂಬಲ ಬೆಲೆ
    ಕೊಬ್ಬರಿ ಬೆಲೆ ಪಾತಾಳದಾಳಕ್ಕೆ ಇಳಿದಿದೆ. ಕ್ವಿಂಟಾಲ್ ಕೊಬ್ಬರಿಯನ್ನು 17 ರಿಂದ 18 ಸಾವಿರ ರೂಗಳಿಗೆ ಮಾರಾಟ ಮಾಡಿದ್ದ ಬೆಳಗಾರರು 7 ರಿಂದ 8 ಸಾವಿರಕ್ಕೆ ಮಾರಾಟ ಮಾಡಬೇಕಾದ ಅನಿವಾರ್ಯತೆಯಲ್ಲಿದ್ದಾರೆ. ನಾವು ಅಧಿಕಾರಕ್ಕೆ ಬಂದರೆ ಕೊಬ್ಬರಿ ಬೆಂಬಲ ಬೆಲೆಯನ್ನು 15 ಸಾವಿರಕ್ಕೆ ಏರಿಸುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ೋಷಿಸಿದ್ದರು. ರಾಜ್ಯ ಸರ್ಕಾರ ಕ್ವಿಂಟಾಲ್‌ಗೆ 1500 ರೂ ಬೆಂಬಲ ಬೆಲೆ ಏರಿಕೆ ಮಾಡಿದ್ದರಿಂದ 13500 ರೂಗೆ ತಲುಪಿದೆ. ಇನ್ನೂ 1500 ರೂ ಏರಿಕೆ ಮಾಡಿ ಸರ್ಕಾರ ಮಾತು ಉಳಿಸಿಕೊಳ್ಳಬೇಕು ಎನ್ನುವುದು ಬೆಳೆಗಾರರ ಆಗ್ರಹ.

    ಸಬ್ಸಿಡಿ ಹೆಚ್ಚಳ ಬೇಡಿಕೆ
    ರಾಜ್ಯ ಸರ್ಕಾರವೇ ಪ್ರತಿ ರೈತರಿಗೆ 5 ಲಕ್ಷ ರೂ ವಿಮೆ ಮಾಡಿಸಿ ರೈತ ವಿಮಾ ಯೋಜನೆ ಜಾರಿಗೆ ಬರಬೇಕು. ಬೆಂಬಲ ಬೆಲೆಯಲ್ಲಿ ಖರೀದಿ ಮಾಡುವ ಕೇಂದ್ರಗಳು ಪ್ರತಿ ಹೋಬಳಿಯಲ್ಲಿಯೂ ಪ್ರಾರಂಭಿಸಬೇಕು. ಕೃಷಿ ಯಂತ್ರೋಪಕರಣ ಮತ್ತು ರಸಗೊಬ್ಬರದ ಸಬ್ಸಿಡಿ ಹೆಚ್ಚಳ ಮಾಡಬೇಕು ಎನ್ನುವುದು ರೈತರ ಬಹು ವರ್ಷಗಳ ಬೇಡಿಕೆ. ಸಣ್ಣ, ಅತಿಸಣ್ಣ ಮತ್ತು ಮಧ್ಯಮ ರೈತರಿಗೆ ಅನುಕೂಲವಾಗುವಂತೆ ಯೋಜನೆಗಳನ್ನು ರೂಪಿಸಬೇಕು. ಬರ ಪರಿಹಾರ ಮೊತ್ತವನ್ನು ಎಕರೆಗೆ ಕನಿಷ್ಠ 10 ಸಾವಿರ ರೂ ಮಾಡಬೇಕು. ಶೂನ್ಯ ಬಡ್ಡಿ ದರದ ಸಾಲ ಎಲ್ಲರಿಗೂ ಲಭ್ಯವಾಗುವಂತೆ ಮಾಡಬೇಕು ಎನ್ನುವುದು ರೈತರ ಹಕ್ಕೋತ್ತಾಯ.

    ರೈತ ಆವರ್ತ ನಿಧಿಗೆ
    1 ಸಾವಿರ ಕೋಟಿ ಕೊಡಿ

    ರೈತ ಆವರ್ತ ನಿಧಿಗೆ ಕನಿಷ್ಠ 1 ಸಾವಿರ ರೂ ಮೀಸಲಿಡಬೇಕು. ಬೆಳೆಯ ಬೆಲೆ ಕುಸಿದ ಸಂದರ್ಭದಲ್ಲಿ ಮಾರುಕಟ್ಟೆ ಪ್ರವೇಶ ಮಾಡಿ ಸರ್ಕಾರವೇ ಕೊಳ್ಳುವ ಪ್ರಕ್ರಿಯೆ ಪ್ರಾರಂಭಿಸುವ ನಿಟ್ಟಿನಲ್ಲಿ ಇರುವ ನಿಯಮಾವಳಿಗಳ ಕಟ್ಟು ಪಾಡುಗಳನ್ನು ಸಡಿಲಿಸಿ, ಸರಳೀಕರಣವಾದ ನಿಯಮಾವಳಿ ರೂಪಿಸಲು ಕ್ರಮ ಕೈಗೊಳ್ಳಬೇಕು.

    ಕಬ್ಬು ಬೆಳೆಗಾರರು
    ಕಬ್ಬು ಬೆಳೆಗಾರರ ಬೇಡಿಕೆಗಳನ್ನು ಆದ್ಯತೆ ಮೇಲೆ ಈಡೇರಿಸಬೇಕು. ಎ್ಆರ್‌ಪಿ ಆಧಾರದಲ್ಲಿ ದರ ನಿಗದಿ ಬದಲು, ರೈತನ ಹೊಲದಲ್ಲಿಯೇ ದರ ನಿಗಧಿ ಆಗುವ ವ್ಯವಸ್ಥೆ ಬರಬೇಕು. ಕಾರ್ಖಾನೆಗಳು ಕಾಲಮಿತಿಯೊಳಗಾಗಿ ರೈತರಿಗೆ ಹಣ ನೀಡುವ ವ್ಯವಸ್ಥೆ ಆಗಬೇಕು.

    ದಾಖಲಾತಿಗಳನ್ನು ಸರಿಪಡಿಸಿ
    ರೈತರು ತಮ್ಮ ಜಮೀನಿನ ದಾಖಲಾತಿಗಳನ್ನು ಸರಿಪಡಿಸಿಕೊಳ್ಳುವುದಕ್ಕೆ ಹಗಲಿರಳು ಸರ್ಕಸ್ ಮಾಡಬೇಕಿದೆ. ಅದಕ್ಕಾಗಿ ನಾಡ ಕಚೇರಿ, ತಹಸೀಲ್ದಾರ್ ಕಚೇರಿಗಳಿಗೆ ಎಡ ತಾಕುವುದು, ಪಹಣಿ, ಪೋಡಿ, ದುರಸ್ತ್ ಮಾಡಿಸಿಕೊಳ್ಳಲು ಹರಸಾಹಸ ಮಾಡುವುದು ಇನ್ನೂ ತಪ್ಪಿಲ್ಲ. ಮನೆ ಬಾಗಿಲಗೇ ಸರ್ಕಾರ, ಮನೆ ಬಾಗಿಲಿಗೆ ದಾಖಲಾತಿಗಳು ಎಂದು ಸರ್ಕಾರ ೋಷಣೆ ಮಾಡುತ್ತಾ ಪ್ರಚಾರ ಪಡೆದಿದ್ದರೂ ಏನೂ ಪ್ರಯೋಜನವಾಗಿಲ್ಲ. ಇದಕ್ಕಾಗಿ ಸರಿಯಾದ ಕಾರ್ಯಕ್ರಮ ರೂಪಿಸಬೇಕು.

    ಸೂರು ಹೊಂದುವ ಕನಸು
    ಗ್ರಾಮೀಣ ಮತ್ತು ನಗರ ಭಾಗದ ಜನರಿಗೆ ತಲೆ ಮೇಲೊಂದು ಸೂರು ಹೊಂದುವ ದಶಕಗಳ ಕನಸು ಇನ್ನೂ ಪೂರ್ಣ ಪ್ರಮಾಣದಲ್ಲಿ ಈಡೇರಿಲ್ಲ. ಮಧ್ಯಮ ಮತ್ತು ಶ್ರಮಿಕ ಜನರು, ಕೂಲಿ ಕಾರ್ಮಿಕರು ನಗರದಲ್ಲಿ ಸೂರು ಕಾಣುವುದು ಇನ್ನು ಕನಸಾಗಿಯೇ ಉಳಿದಿದೆ. ಅದಕ್ಕಾಗಿ ವಿಶೇಷ ವಸತಿ ಯೋಜನೆಗಳನ್ನು ರೂಪಿಸಿ, ಪ್ರತಿಯೊಬ್ಬರಿಗೂ ಸೂರು ಕಲ್ಪಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಅದಕ್ಕಾಗಿ ಮನೆಗಳ ನಿರ್ಮಾಣ ಸಂಖ್ಯೆಯನ್ನು ದುಪ್ಪಟ್ಟು ಹೆಚ್ಚಳ ಮಾಡಿ ಅದಕ್ಕೆ ಅನುದಾನ ಒದಗಿಸಬೇಕು.

    ಹಾಲು ಉತ್ಪಾದಕರಿಗೆ ಪ್ರೋತ್ಸಾಹ
    ಯಡಿಯೂರಪ್ಪ ಮತ್ತು ಸಿದ್ದರಾಮಯ್ಯ ಸರ್ಕಾರದಲ್ಲಿ ಹೈನುಗಾರರಿಗೆ ಉತ್ತೇಜನ ನೀಡಿದ ಮಾದರಿಯಲ್ಲಿ ಹಾಲಿನ ಪ್ರೋತ್ಸಾಹ ಧನ ಹೆಚ್ಚಳ ಮಾಡಿರುವುದು ವಿಶೇಷ. ಈ ಬಾರಿ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್‌ಗೆ 10 ರೂ ಪ್ರೋತ್ಸಾಹ ಧನ ನೀಡಬೇಕು. ಹೈನುಗಾರಿಕೆ ಅವಲಂಬಿಸುವ ರೈತಾಪಿ ಜನರಿಗೆ ಅನುಕೂಲ ಕಲ್ಪಿಸಲು ಕೆಲ ಸಬ್ಸಿಡಿ ಯೋಜನೆಯನ್ನು ಜಾರಿಗೆ ತರಬೇಕು.

    ಚಿತ್ರನಗರಿ ಕನಸು
    ಚಿತ್ರನಗರಿ ಆಗಬೇಕು ಎನ್ನುವುದು ದಶಕಗಳ ಕನಸು ಇನ್ನೂ ಈಡೇರಿಲ್ಲ. ಈ ವರ್ಷವಾದರೂ ಬಜೆಟ್‌ನಲ್ಲಿ ಅದಕ್ಕೆ ಅನುದಾನ ಸಿಗುವ ನಿರೀಕ್ಷೆಯಲ್ಲಿ ಇಡೀ ಚಿತ್ರೋದ್ಯಮವಿದೆ.
    ಕಿರು ತೆರೆ ಸೇರಿದಂತೆ ಚಿತ್ರೋದ್ಯಮವನ್ನು ಆದ್ಯತೆಯಾಗಿಟ್ಟುಕೊಂಡು ಜನತಾ ಚಿತ್ರ ಮಂದಿರ ಕಲ್ಪನೆಯಲ್ಲಿ ಯೋಜನೆಯನ್ನು ಪ್ರಕಟಿಸಬೇಕು. ಕನ್ನಡ ಚಿತ್ರಗಳ ಸಬ್ಸಿಡಿ ಹೆಚ್ಚಳ, ಪ್ರಶಸ್ತಿ ಹಣ ದುಪ್ಪಟ್ಟು ಮಾಡಬೇಕು. ಕನ್ನಡ ಚಿತ್ರಗಳಿಗೆ ಕೆಎಸ್‌ಜಿಎಸ್ಟಿ ವಿನಾಯಿತಿ ಕೊಡಬೇಕು ಎನ್ನುವ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದೆ.

    ಕೈಗಾರಿಕೆಗಳ ನಿರೀಕ್ಷೆ
    ದೇಶ ವಿದೇಶದ ಜನರು ಬೆಂಗಳೂರಿನತ್ತ ಬರುತ್ತಾರೆ. ಅಷ್ಟರ ಮಟ್ಟಿಗೆ ರಾಜ್ಯ ಐಟಿ, ಬಿಟಿ ಮತ್ತು ಕೈಗಾರಿಕೆಯಲ್ಲಿ ಗಮನ ಸೆಳೆದಿದೆ. ಆದರೆ, ಕೈಗಾರಿಕೆಗಳಿಗೆ ಮೂಲ ಸೌಕರ್ಯ ಕಲ್ಪಿಸಿಕೊಡಲು ಸರ್ಕಾರ ಹೆಚ್ಚಿನ ಅನುದಾನ ನೀಡುತ್ತಿಲ್ಲ ಎನ್ನುವುದು ದೂರು. ಈ ಬಾರಿಯಾದರೂ ಹೆಚ್ಚು ಅನುದಾನ ಸಿಗಬಹುದು ಎನ್ನುವ ನಿರೀಕ್ಷೆ ಕೈಗಾರಿಕೋದ್ಯಮದ್ದು. ವಿದ್ಯುತ್‌ನ್ನು ರಿಯಾಯಿತಿ ದರದಲ್ಲಿ ಸರಬರಾಜು ಮಾಡಿ ಪ್ರೋತ್ಸಾಹ ಕೊಡಬೇಕು ಎನ್ನುವ ಆಗ್ರಹವೂ ಇದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts