More

    ಕಾಂಗ್ರೆಸ್‍ನಲ್ಲಿ ಸಿಎಂ ಸ್ಥಾನಕ್ಕಾಗಿ ಸಂಗೀತ ಕುರ್ಚಿ ಶುರುವಾಗಿದೆ ಎಂದ ನಳಿನ್​ ಕುಮಾರ್ ಕಟೀಲ್​

    ಚಿಕ್ಕಮಗಳೂರು: ‘ಪ್ರಾಯ ಆಗುತ್ತಿದೆ. ಹುಡುಗಿ ಹುಡುಕಲಿಲ್ಲ. ಇನ್ನೂ ಎಂಗೇಜ್‍ಮೆಂಟ್ ಆಗಿಲ್ಲ. ಆದರೆ ಮಗುವಿಗೆ ನಾಮಕರಣ ಮಾಡುವ ಪ್ರಯತ್ನ ಕಾಂಗ್ರೆಸ್‍ನಲ್ಲಿ ನಡೆದಿದೆ. ಈಗಲೇ ಅಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಸಂಗೀತ ಕುರ್ಚಿ ಶುರುವಾಗಿದೆ. ಕುರ್ಚಿಗೆ ಟವೆಲ್ ಹಾಕಲು ಶುರು ಮಾಡಿದ್ದಾರೆ…’ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಗುರುವಾರ ಸುದ್ದಿಗಾರರ ಜತೆ ಮಾತನಾಡುವ ವೇಳೆ ಕಾಂಗ್ರೆಸ್ ಬಗ್ಗೆ ಲೇವಡಿ ಮಾಡಿದ್ದು ಹೀಗೆ.

    ಚುನಾವಣೆಗೆ ಇನ್ನೂ ಮೂರೂವರೆ ವರ್ಷವಿದೆ. ಈಗಲೇ ಜಗಳ ಆರಂಭಿಸಿದವರು ಇನ್ನು ಅಧಿಕಾರಕ್ಕೇರುವ ದಿನ ಹತ್ತಿರ ಬಂದಾಗ ಇವರ ಪರಿಸ್ಥಿತಿ ಹೇಗಿರಬಹುದು. ಕಾಂಗ್ರೆಸ್‍ನಲ್ಲಿ ಎಲ್ಲರೂ ಬೇಲ್‍ನಲ್ಲಿದ್ದಾರೆ. ಅದು ಮುಗಿದ ನಂತರ ಏನಾಗುತ್ತದೆ ಎನ್ನುವುದು ಗೊತ್ತಿಲ್ಲ. ಜನರು ಕಾಂಗ್ರೆಸ್‍ನ ಈ ಎಲ್ಲ ಬೆಳವಣಿಗೆಗಳಿಂದ ಬೇಸತ್ತಿದ್ದಾರೆ. ಇದೀಗ ಉಪ ಚುನಾವಣೆಯಲ್ಲಿ ಸಹ ಬಿಜೆಪಿ ಪರ ಒಲವು ವ್ಯಕ್ತವಾಗಿದೆ ಎಂದು ಹೇಳಿದರು.

    ಬರ, ನೆರೆ ಪರಿಸ್ಥಿತಿ ಹಾಗೂ ಕರೊನಾ ಸಂಕಷ್ಟದ ಸಮಯದಲ್ಲಿ ಯಡಿಯೂರಪ್ಪ ನೇತೃತ್ವದ ಸರ್ಕಾರ ತಂಡವಾಗಿ ಕಾರ್ಯ ನಿರ್ವಹಿಸಿದ್ದನ್ನು ಜನರು ಮೆಚ್ಚಿಕೊಂಡಿದ್ದಾರೆ. ಸಿದ್ದರಾಮಯ್ಯ, ಕುಮಾರಸ್ವಾಮಿ ಸರ್ಕಾರ ಇದ್ದಾಗಲೂ ನೆರೆ ಬಂದಿದೆ. ನಮ್ಮ ಸರ್ಕಾರ ಎನ್‍ಡಿಆರ್‍ಎಫ್ ಗೈಡ್ ಲೈನ್ ಪ್ರಕಾರ ಮನೆ ಕಳೆದುಕೊಂಡವರಿಗೆ ತಕ್ಷಣ ಒಂದು ಲಕ್ಷ ರೂ. ಒದಗಿಸಿದೆ. ಕೆಲವೆಡೆ ಹಣ ಪಡೆದು ಮನೆ ನಿರ್ಮಾಣ ಕಾರ್ಯಾರಂಭ ಮಾಡದ ಹಿನ್ನೆಲೆಯಲ್ಲಿ ಎರಡನೇ ಕಂತು ಬಿಡುಗಡೆಯಾಗಿಲ್ಲ. ಇನ್ನು ಕೆಲವೆಡೆ ಜಮೀನಿನ ಸಮಸ್ಯೆ ಎದುರಾಗಿದ್ದು, ಕ್ರಮಬದ್ಧವಾಗಿರುವ ಪ್ರಕರಣಗಳಲ್ಲಿ ಯಾವುದೇ ಸಮಸ್ಯೆ ಆಗಿಲ್ಲ ಎಂದರು.

    ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದ ಜತೆ ನಾವಿದ್ದೇವೆ ಎಂದು ಈಗಾಗಲೇ ಹೇಳಿದ್ದಾರೆ. ನೆರೆ ಸಂತ್ರಸ್ತರಿಗೆ ಯಾರು ಎಷ್ಟು ಸ್ಪಂದಿಸಿದರು ಎನ್ನುವುದು ಸಿಎಂ ಆಗಿದ್ದ ಸಿದ್ದರಾಮಯ್ಯ ಅಂಥವರಿಗೆ ಗೊತ್ತಿರಬೇಕು. ಸುಳ್ಳು ಹೇಳಿ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡಬಾರದು ಎಂದರು.

    ರಾಜ್ಯದ ನೆರೆ ಸಂತ್ರಸ್ತರಿಗೆ ಕೇಂದ್ರ ಸರ್ಕಾರ ಸ್ಪಂದಿಸಿಲ್ಲ ಎನ್ನುವ ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯಿಸಿದ  ಅವರು, ಕಾಂಗ್ರೆಸ್ ಸರ್ಕಾರವೇ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ನೆರೆ ಬಂದ ಸಂದರ್ಭದಲ್ಲಿ ಇದೇ ಸಿದ್ದರಾಮಯ್ಯ ಅವರ ಪಕ್ಷದ ಪ್ರಭಾವಿ ಮುಖಂಡರ ಜತೆ ಕೇಂದ್ರ ಸಚಿವರಾಗಿದ್ದ ಚಿದಂಬರಂ ಅವರನ್ನು ಭೇಟಿ ಮಾಡಿದ್ದರು. ಆಗ ಚಿದಂಬರಂ ನಿಮಿಷ ಕಾಲವೂ ಉಳಿಯದೆ ಹೊರಟು ಹೋಗಿದ್ದರು. ಸಿದ್ದರಾಮಯ್ಯ ಅವರಿಗೆ ಅಂದು ಅವರನ್ನು ಪ್ರಶ್ನೆ ಮಾಡುವ ಧಮ್ ಇರಲಿಲ್ಲವೇಕೆ ಎಂದು ಪ್ರಶ್ನಿಸಿದರು.

    ಯಡಿಯೂರಪ್ಪ ಸರ್ಕಾರದ ಸಾಧನೆ ಬಗ್ಗೆ ಜನರಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅಲ್ಲಿ ಪಕ್ಷ ಹೊಸ ಮುಖಕ್ಕೆ ಆದ್ಯತೆ ಕೊಟ್ಟಿದೆ. ಈ ಬಾರಿ 15 ರಿಂದ 20 ಸಾವಿರ ಮತಗಳ ಅಂತರದಿಂದ ಪಕ್ಷ ಗೆಲುವು ಸಾಧಿಸಲಿದೆ. ಆರ್ ಆರ್ ನಗರ ವಿಧಾನ ಸಭಾ ಕ್ಷೇತ್ರದಲ್ಲಿ 50 ಸಾವಿರ ಮತಗಳ ಅಂತರದಿಂದ ನಮ್ಮ ಅಭ್ಯರ್ಥಿ ಮುನಿರತ್ನ ಗೆಲುವು ಸಾಧಿಸಲಿದ್ದಾರೆ ಎಂದರು.  

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts