More

    ಮಳೆ ಹಾನಿ ತಡೆಗೆ ಕಟ್ಟಪ್ಪಣೆ| ಅಧಿಕಾರಿಗಳಿಗೆ ಸಿಎಂ ಸೂಚನೆ; ಡಿಸಿ, ಸಿಇಒ ಜತೆ ವಿಡಿಯೋ ಸಂವಾದ

    ಬೆಂಗಳೂರು: ಮಳೆ ಹಾನಿ ತಡೆಗಟ್ಟಲು ಸರ್ಕಾರ ದೃಢ ಹೆಜ್ಜೆ ಇಟ್ಟಿದೆ. ಹಾವೇರಿ ಜಿಲ್ಲೆಗೆ ಭೇಟಿ ನೀಡಿ ಪ್ರಗತಿ ಪರಿಶೀಲಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿ ಹಾಗೂ ಸಿಇಒಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ತಾಕೀತು ಮಾಡಿದ್ದಾರೆ.

    ಹಿಂದಿನ ಪ್ರವಾಹದ ಅನುಭವದಿಂದ ಕಾರ್ಯ ನಿರ್ವಹಿಸಿದರೆ ಜೀವಹಾನಿ ತಪ್ಪಿಸಬಹುದು. ಪದೇಪದೇ ಪ್ರವಾಹವಾಗುವ ಸ್ಥಳಗಳಲ್ಲಿ ಜನರನ್ನು ಬಲವಂತವಾಗಿ ಸ್ಥಳಾಂತರ ಮಾಡಿ. ನೆರೆಪೀಡಿತ ಸ್ಥಳಗಳಿಗೆ ಜನರು ಹೋಗದಂತೆ ತಡೆಗಟ್ಟಿ ಎಂದು ಸೂಚಿಸಿದರು. ತುರ್ತು ಪರಿಸ್ಥಿತಿ ನಿಭಾಯಿಸಲು ಪೊಲೀಸ್, ಕಂದಾಯ, ನೀರಾವರಿ, ಗ್ರಾಮೀಣಾಭಿವೃದ್ಧಿ ಇಲಾಖೆಗಳ ನಡುವೆ ಸಮನ್ವಯ ಅಗತ್ಯ ಎಂದು ತಿಳಿಸಿದರು. ಉಡುಪಿ ಜಿಲ್ಲೆಯಲ್ಲಿ ಒಂಭತ್ತು ಜೀವಹಾನಿಯಾಗಿದೆ. ಜ.1 ರಿಂದ ಜು.25 ರವರೆಗೆ 64 ಜನ ಮರಣಹೊಂದಿದ್ದಾರೆ. ಇದನ್ನು ತಪ್ಪಿಸಬೇಕು ಎಂದು ಹೇಳಿದರು. ಆದ್ಯತೆಯ ಮೇರೆಗೆ ಶಿಥಿಲಗೊಂಡ ಆಸ್ಪತ್ರೆ, ಶಾಲೆ ಹಾಗೂ ಅಂಗನವಾಡಿ ಕಟ್ಟಡಗಳನ್ನು ದುರಸ್ತಿ ಮಾಡಿಸಬೇಕು. ಇಲ್ಲವೇ ಸ್ಥಳಾಂತರ ಮಾಡಿಸಬೇಕು. ಅನಾಹುತವಾದರೆ ಅಧಿಕಾರಿಗಳನ್ನು ನೇರ ಹೊಣೆಯಾಗಿಸಲಾಗುವುದು ಎಂದು ಸಿಎಂ ಎಚ್ಚರಿಕೆ ನೀಡಿದರು.

    ಅನುದಾನದ ಕೊರತೆ ಇಲ್ಲ: ಜಿಲ್ಲಾಧಿಕಾರಿಗಳಿಗೆ ಅನುದಾನ ಲಭ್ಯವಿದೆ. ಎಸ್​ಡಿಆರ್​ಎಫ್​ನಡಿ ಅನುದಾನವೂ ಇದೆ. ಹೆಚ್ಚಿನ ಅನುದಾನ ಅಗತ್ಯವಿದ್ದರೆ ಪ್ರಸ್ತಾವನೆ ಕಳಿಸಲು ಸೂಚಿಸಿದರು.

    ಹೊಸ ಕೆಲಸಗಳಿಗೆ ನಿರ್ಬಂಧವಿಲ್ಲ: ಎಸ್​ಡಿಆರ್​ಎಫ್ ಹಾಗೂ ಎನ್​ಡಿಆರ್​ಎಫ್ ಅನ್ವಯ ಕೈಗೊಂಡಿರುವ ಕೆಲಸಕ್ಕೆ ಹಣ ಪಾವತಿಸಲು ಯಾವುದೇ ನಿರ್ಬಂಧವಿಲ್ಲ. ಹೊಸ ಕಾಮಗಾರಿಗಳನ್ನು ಅಗತ್ಯಕ್ಕೆ ಅನುಗುಣವಾಗಿ ಕೂಡಲೇ ತೆಗೆದುಕೊಳ್ಳಲು ನಿರ್ಬಂಧವಿಲ್ಲ ಎಂದು ಸಿಎಂ ತಿಳಿಸಿದರು.

    ವಿಜಯಪುರ, ಬಾಗಲಕೋಟೆ, ಬೆಳಗಾವಿ ಜಿಲ್ಲೆಗಳಲ್ಲಿ ಕೃಷ್ಣಾ ನದಿಯ ನೀರಿನ ಮಟ್ಟ ಹೆಚ್ಚಾದರೆ ಜನವಸತಿ ಪ್ರದೇಶಗಳಿಗೆ ಜಲಾವೃತಗೊಳ್ಳುತ್ತವೆ. ಕಲಬುರಗಿ ಜಿಲ್ಲಾಧಿಕಾರಿಗಳು ಮಹಾರಾಷ್ಟ್ರ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿರಬೇಕು. ಉಜ್ಜನಿ ಜಲಾಶಯದಿಂದ ನೀರು ಹರಿಸುವ ಮುನ್ನ ಎಚ್ಚರಿಕೆ ವಹಿಸಿ. ಕಲಬುರಗಿ, ವಿಜಯಪುರ ಜಿಲ್ಲಾಧಿಕಾರಿಗಳು ಸಂಪರ್ಕದಲ್ಲಿರಬೇಕೆಂದು ಸೂಚಿಸಿದರು.

    ಭೂಕುಸಿತ ತಡೆಗಟ್ಟಲು ಕ್ರಮ ವಹಿಸಿ: ಕೊಡಗು, ದಕ್ಷಿಣ ಕನ್ನಡ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಭೂಕುಸಿತ ತಡೆಗಟ್ಟಲು ಕ್ರಮ ವಹಿಸಬೇಕು. ವಾರ್ ರೂಂಗಳನ್ನು ತೆರೆಯಬೇಕು. ಪ್ರವಾಹ ಬರುವ ಮುನ್ನ ತಗ್ಗು ಪ್ರದೇಶಗಳಲ್ಲಿನ ಜನರ ಕುರಿತು ಎಚ್ಚರಿಕೆ ವಹಿಸಬೇಕು ಎಂದರು.

    ಬಲವಂತ ಸಾಲ ವಸೂಲಿ ಇಲ್ಲ: ಪ್ರವಾಹದಂತಹ ಸಂಕಷ್ಟದ ಸಂದರ್ಭದಲ್ಲಿ ರೈತರಿಂದ ಬಲವಂತವಾಗಿ ಸಾಲ ವಸೂಲು ಮಾಡಬಾರದು. ಖಾಸಗಿ ಲೇವಾದೇವಿದಾರರ ಮೇಲೂ ಕ್ರಮ ತೆಗೆದುಕೊಳ್ಳಲು ಪೊಲೀಸ್ ಇಲಾಖೆಗೆ ಸಿದ್ದರಾಮಯ್ಯ ನಿರ್ದೇಶನ ನೀಡಿದರು.

    ಸೂಚನೆ: ಜಿಲ್ಲೆಯ ಎಲ್ಲ ಆಗು-ಹೋಗುಗಳ ಮೇಲೆ ಜಿಲ್ಲಾ ಉಸ್ತುವಾರಿ ಸಚಿವರು ನಿಗಾ ವಹಿಸಬೇಕು. ಜಿಲ್ಲಾಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಜಿಲ್ಲಾ ಕೇಂದ್ರಗಳಲ್ಲಿಯೇ ಉಳಿಯಬೇಕು ಎಂದು ಸೂಚಿಸಿದರು. ಕಡಲು ಕೊರೆತ ತಡೆಯಲು ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ. ಸೇತುವೆ ಸಂಪರ್ಕ ಕಡಿತಗೊಂಡಲ್ಲಿ ಪರ್ಯಾಯ ರಸ್ತೆ ಕಲ್ಪಿಸಬೇಕು ಎಂದು ಹೇಳಿದರು. ಬೆಳಗಾವಿ ಜಿಲ್ಲೆಯಲ್ಲಿ 12 ಸೇತುವೆಗಳ ಸಂಪರ್ಕ ಕಡಿತಗೊಂಡಿದೆ. ಪ್ರತಿವರ್ಷದ ವಿದ್ಯಮಾನಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಪರ್ಯಾಯ ರಸ್ತೆ ನಿರ್ವಣಕ್ಕೆ ಕಡಿಮೆ ಜನರಿರುವ ಗ್ರಾಮಗಳನ್ನು ಸ್ಥಳಾಂತರ ಮಾಡಬೇಕು ಎಂದು ಸಲಹೆ ನೀಡಿದರು.

    ಮುಖ್ಯಾಂಶಗಳು

    • ಪ್ರಸ್ತುತ ರಾಜ್ಯದಲ್ಲಿ 313 ಮಿ.ಮೀ. ಮಳೆ ಆಗಿದೆ. ಇದು ವಾಡಿಕೆ ಮಳೆಗಿಂತ ಶೇ.37 ರಷ್ಟು ಹೆಚ್ಚು.
    • ಜೂನ್ 1 ರಿಂದ ಈವರೆಗೆ ನಾಲ್ಕು ಜಿಲ್ಲೆಗಳಲ್ಲಿ ಅಧಿಕ ಮಳೆಯಾಗಿದ್ದು, 21 ಜಿಲ್ಲೆಗಳಲ್ಲಿ ವಾಡಿಕೆ ಮಳೆಯಾಗಿದೆ. 6 ಜಿಲ್ಲೆಗಳಲ್ಲಿ ಮಳೆ ಕೊರತೆ ಇದೆ.
    • ಎಲ್ಲ ಜಲಾಶಯಗಳು ಭರ್ತಿಯಾಗುತ್ತಿವೆ. ಒಂದು ವಾರದಲ್ಲಿ ಒಟ್ಟು ಒಳಹರಿವು 227 ಟಿಎಂಸಿ.
    • ಜೂ.1 ರಿಂದ ಈವರೆಗೆ ಒಟ್ಟು 38 ಮಾನವ ಜೀವಹಾನಿ ಆಗಿದೆ. 35 ಜನರು ಗಾಯಗೊಂಡಿದ್ದಾರೆ.
    • 57 ಮನೆಗಳು ಸಂಪೂರ್ಣವಾಗಿ, 208 ಮನೆಗಳು ತೀವ್ರ ಹಾಗೂ 2682 ಮನೆಗಳಿಗೆ ಭಾಗಶಃ ಹಾನಿಯಾಗಿದೆ.
    • ಮಳೆಯಿಂದಾಗಿ 105 ಜಾನುವಾರುಗಳು ಮೃತಪಟ್ಟಿವೆ.
    • 541.39 ಹೆಕ್ಟೇರ್ ಪ್ರದೇಶದಲ್ಲಿನ ಬೆಳೆ ಜಲಾವೃತಗೊಂಡಿದೆ.
    • 407 ಕಿ.ಮೀ. ರಾಜ್ಯ ಹೆದ್ದಾರಿ, 425 ಕಿ.ಮೀ. ಜಿಲ್ಲಾ ಹೆದ್ದಾರಿ, 1277 ಕಿ.ಮೀ. ಗ್ರಾಮೀಣ ರಸ್ತೆಗಳು ಸೇರಿ ಒಟ್ಟು 2109 ಕಿ.ಮೀ. ರಸ್ತೆ ಹಾನಿಯಾಗಿದೆ.
    • 189 ಸೇತುವೆ, 889 ಶಾಲಾ ಕೊಠಡಿ, 8 ಪ್ರಾಥಮಿಕ ಕೇಂದ್ರಗಳು, 269 ಅಂಗನವಾಡಿ ಕೇಂದ್ರಗಳಿಗೆ ಹಾನಿಯಾಗಿದೆ.
    • 11,995 ವಿದ್ಯುತ್ ಕಂಬಗಳು, 894 ಟ್ರಾನ್ಸ್​ಫಾರ್ಮರ್ ಗಳು ಹಾನಿಯಾಗಿದ್ದು, 215 ಕಿ.ಮೀ. ಉದ್ದದ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
    • ಜೂನ್​ನಲ್ಲಿ ಮಳೆ ಕೊರತೆಯಾದ್ದರಿಂದ ಈ ವರೆಗೆ ಶೇ. 53 ರಷ್ಟು ಬಿತ್ತನೆಯಾಗಿದೆ.
    • ರಾಜ್ಯದಲ್ಲಿ 156 ಲಕ್ಷ ಟನ್ ಮೇವು ದಾಸ್ತಾನು ಇದ್ದು, ಮುಂದಿನ 29 ವಾರಗಳಲ್ಲಿ ಸಾಕಾಗುವಷ್ಟಿದೆ.

    ಸಂವಾದದಲ್ಲಿ ಪಾಲ್ಗೊಂಡವರು: ಡಿ.ಕೆ.ಶಿವಕುಮಾರ್, ಸಚಿವರಾದ ಜಿ.ಪರಮೇಶ್ವರ್, ಚಲುವರಾಯಸ್ವಾಮಿ, ಕೃಷ್ಣ ಬೈರೇಗೌಡ, ಎಂ.ಸಿ. ಸುಧಾಕರ್, ಲಕ್ಷ್ಮಿ ಹೆಬ್ಬಾಳ್ಕರ್, ಪ್ರಿಯಾಂಕ್ ಖರ್ಗೆ,ಈಶ್ವರ್ ಖಂಡ್ರೆ, ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts