More

    ಕಲ್ಯಾಣಕ್ಕೆ 500 ಕೋಟಿ ರೂ. ಮೀಸಲು: ಅಸಂಖ್ಯ ಪ್ರಮಥರ ಗಣಮೇಳ ಸಮಾರೋಪದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಭರವಸೆ

    ಬೆಂಗಳೂರು: ಕಲ್ಯಾಣ ಕರ್ನಾಟಕದ ಅಭಿವೃದ್ಧಿಗಾಗಿ ಈ ವರ್ಷದ ಬಜೆಟ್​ನಲ್ಲಿ 500 ಕೋಟಿ ರೂ. ಮೀಸಲಿಡಲಿದ್ದೇನೆ. ರೈತರೇ ನನಗೆ ಮೊದಲ ಆದ್ಯತೆ. ಇವರ ಅಭಿವೃದ್ಧಿಗೂ ಹೆಚ್ಚಿನ ಅನುದಾನ ನೀಡಲಿದ್ದೇನೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

    ಚಿತ್ರದುರ್ಗದ ಶ್ರೀ ಜಗದ್ಗುರು ಮರುಘಾರಾಜೇಂದ್ರ ಬೃಹನ್ಮಠ, ವಿವಿಧ ಧಾರ್ವಿುಕ ಕೇಂದ್ರಗಳ ಸಹಯೋಗದಲ್ಲಿ ತುಮಕೂರು ರಸ್ತೆಯ ನಂದಿಗ್ರೌಂಡ್ಸ್​ನಲ್ಲಿ ಹಮ್ಮಿಕೊಂಡಿದ್ದ ‘ಅಸಂಖ್ಯ ಪ್ರಮಥರ ಗಣಮೇಳ- ಸರ್ವ ಶರಣರ ಸಮ್ಮೇಳನ ಸಮಾರೋಪ ಸಮಾರಂಭ’ದಲ್ಲಿ ಮಾತನಾಡಿದ ಅವರು, ಬಸವ ಕಲ್ಯಾಣ ಜಿಲ್ಲೆಗಳು ಹೆಚ್ಚು ಅಭಿವೃದ್ಧಿಗೆ ಒಳಪಡಬೇಕಾಗಿರುವುದರಿಂದ ಬಜೆಟ್​ನಲ್ಲಿ 500 ಕೋಟಿ ರೂ. ಮೀಸಲಿಡಲಿದ್ದೇನೆ. ಇದರಲ್ಲಿ ಈ ವರ್ಷ ನೂರು ಕೋಟಿ ರೂ.ವೆಚ್ಚ ಮಾಡಿ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಿದ್ದೇನೆ ಎಂದು ಭರವಸೆ ನೀಡಿದರು. ಈ ಹಿಂದೆ ಬಸವಣ್ಣ ಈ ರೀತಿ ಗಣಮೇಳ ಮಾಡಿ ಶಾಂತಿ, ಸೌರ್ಹದತೆ ಕಾಪಾಡಿಕೊಳ್ಳಲು ಜನರಿಗೆ ಕರೆ ನೀಡಿದ್ದರು. ಇಂದು ಇದೇ ರೀತಿಯಲ್ಲಿ ಗಣಮೇಳ ಮಾಡಲಾಗಿದೆ. ಸಾವಿರಾರು ಭಕ್ತರು ಇದರಲ್ಲಿ ಭಾಗವಹಿಸಿ ಬಸವಣ್ಣನ ತತ್ವಗಳ ಪರಿಪಾಲನೆಗೆ ಮುಂದಾಗಿರುವುದು ಖುಷಿಯ ವಿಚಾರ. ಧರ್ಮ ಬೇರೆ ಆದರೂ ಶಾಂತಿ, ಸಹಬಾಳ್ವೆ ಒಂದೇ ಆಗಿರುತ್ತದೆ. ಅಂದಿನ ಧರ್ಮದ ಪರಿಕಲ್ಪನೆ ಇಂದಿಗೂ ಪ್ರಸ್ತುತವಾಗಿದೆ ಎಂದರು.

    ನಿರ್ಣಯಗಳೇನು?

    ಸಮಾರೋಪ ಸಮಾರಂಭದಲ್ಲಿ ಏಳು ನಿರ್ಣಯ ಗಳನ್ನು ಅರುಣ್ ಸೋಮಣ್ಣ ಅವರು ಮಂಡಿಸಿದರು.

    1. ಸಮಾಜಕ್ಕೆ ಸೇವೆ ಸಲ್ಲಿಸಿದ ಸ್ವಾಮೀಜಿಗಳ ಸ್ಮಾರಕ ಗಳನ್ನು ಸಂರಕ್ಷಿಸಲು ಸರ್ಕಾರ ಮುಂದಾಗಬೇಕು.

    2. ಪಠ್ಯಪುಸ್ತಕದಲ್ಲಿ ಶಿವಶರಣರ ಬಗ್ಗೆ ಮುದ್ರಣ ಮಾಡಿ ಶರಣ ಸಾಹಿತ್ಯ, ಬಸವ ಸಾಹಿತ್ಯ ಪ್ರಚಾರ ಮಾಡಬೇಕು.

    3. ಕಲಬುರಗಿ ವಿವಿಗೆ ಡಾ.ಬಿ.ಆರ್.ಅಂಬೇಡ್ಕರ್ ಹೆಸರು ಮತ್ತು ಧಾರವಾಡ ವಿವಿಗೆ ವಿಶ್ವಗುರು ಬಸವಣ್ಣನ ಹೆಸರನ್ನು ನಾಮಕರಣ ಮಾಡಬೇಕು.

    4. ಕೇಂದ್ರ ಸರ್ಕಾರ ಹುದ್ದೆಗಳ ಭರ್ತಿಯಲ್ಲಿ ಕನ್ನಡಿಗರಿಗೆ ಹೆಚ್ಚಿನ ಉದ್ಯೋಗ ಕಲ್ಪಿಸಬೇಕು.

    5. ಬಸವ ಕಲ್ಯಾಣ ಅಭಿವೃದ್ಧಿಗೆ ಸರ್ಕಾರ ಮುಂದಾಗಬೇಕು.

    6. ಮುರುಘಾಮಠದಲ್ಲಿ ನಿರ್ವಣವಾಗುತ್ತಿರುವ ಬಸವ ಪುತ್ಥಳಿಗೆ ಹೆಚ್ಚಿನ ಅನುದಾನ ನೀಡಬೇಕು.

    7. ಮಠದ ಡಾ.ಶಿವಮೂರ್ತಿ ಮುರುಘಾ ಶರಣರಿಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ನೀಡಬೇಕು.

    ಅಸಮಾನತೆ, ಶೋಷಣೆ ಜೀವಂತವಾಗಿರುವ ಕುರಿತು ನಾವೆಲ್ಲ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಬಸವಣ್ಣನ ಲಿಂಗಾಯತ ಧರ್ಮ ಶ್ರೇಷ್ಠವಾಗಿದ್ದು, ಇದು ಮಾನವ ಧರ್ಮವಾಗಬೇಕು.

    | ಗೋವಿಂದ ಕಾರಜೋಳ ಉಪ ಮುಖ್ಯಮಂತ್ರಿ

    50 ಸಾವಿರ ಭಕ್ತರು ಭಾಗಿ

    ಸಮ್ಮೇಳನನದಲ್ಲಿ 1500ಕ್ಕೂ ಅಧಿಕ ಮಠಾಧೀಶರು, 50 ಸಾವಿರಕ್ಕೂ ಅಧಿಕ ಭಕ್ತರು, ರಾಜ್ಯದ ಹಲವು ಹಾಲಿ, ಮಾಜಿ ಮಂತ್ರಿಗಳು ಹಾಜರಿದ್ದರು. ಭಕ್ತರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು.

    ಸಮಾನತೆ ಸಂದೇಶ ಸಾರಲು ಸಮ್ಮೇಳನ ಆಯೋಜಿಸಲಾಗಿದೆ. ಸಮಾಜದ ಅಂಧಕಾರ ತೊಲಗಿಸಿ ಸಮಾನತೆ ಬೆಳೆಸುವುದು ವೇದಿಕೆ ಉದ್ದೇಶವಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪನವರು ಜಾತಿ ಧರ್ಮಗಳನ್ನ ನೋಡದೆ ಎಲ್ಲ ವರ್ಗಕ್ಕೂ ಹಣ ನೀಡಿದ್ದಾರೆ. ಅದು ಹೀಗೆಯೇ ಮುಂದುವರಿಯಲಿದೆ.

    ಬಿ.ವೈ. ವಿಜಯೇಂದ್ರ ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ

    ಪುತ್ಥಳಿಗೆ ಅನುದಾನ

    ಚಿತ್ರದುರ್ಗದ ಮುರುಘ ರಾಜೇಂದ್ರ ಬೃಹನ್ಮಠದ ಹಿಂಭಾಗದಲ್ಲಿ 380 ಅಡಿ ಎತ್ತರ ಬಸವ ಪುತ್ಥಳಿ ನಿರ್ಮಾಣ ಮಾಡಲಾಗುತ್ತಿದ್ದು, ಇದಕ್ಕೆ ಅಗತ್ಯ ಅನುದಾನ ಕೇಳಿದ್ದಾರೆ. ಇದಕ್ಕೂ ಅನುದಾನ ನೀಡುತ್ತೇನೆ. ಮುರುಘಾ ಶರಣರಿಗೆ ‘ಕರ್ನಾಟಕ ರತ್ನ ಪ್ರಶಸ್ತಿ’ ನೀಡಬೇಕೆಂಬ ಬೇಡಿಕೆಯನ್ನು ಪರಿಶೀಲಿಸುತ್ತೇನೆ ಎಂದು ಸಿಎಂ ಭರವಸೆ ನೀಡಿದರು.

    ಸಮಾಜ ಕೆಣಕಿದ್ದರ ಪರಿಣಾಮ

    ಬಸವೇಶ್ವರರ ತತ್ವ ಸಾರುವ ಕೆಲಸವನ್ನು ಮುರುಘಾಶ್ರೀಗಳು ಮುಂದುವರೆಸುತ್ತಿದ್ದಾರೆ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ರಾಜ್ಯಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಆದರೆ ವೀರಶೈವ ಲಿಂಗಾಯತ ಸಮಾಜವನ್ನು ಕೆಣಕಿದ್ದರಿಂದ ಅವರಿಗೆ ಹಿನ್ನಡೆ ಯಾಯಿತು ಎಂದು ವಿ.ಸೋಮಣ್ಣ ಅಭಿಪ್ರಾಯಪಟ್ಟರು.

    ಮುರುಘಾ ಶರಣರಿಂದ ಚಾಲನೆ

    ಮುರುಘಾ ಮಠದ ಡಾ.ಶಿವಮೂರ್ತಿ ಮುರುಘಾ ಶರಣರು ಬಸವೇಶ್ವರ ಧ್ವಜಾರೋಹಣ ಮಾಡುವ ಮೂಲಕ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಎಲ್ಲ ಸ್ವಾಮೀಜಿಗಳು ಸೇರಿಕೊಂಡರೆ ಗಣ. ಈ ಗಣಕ್ಕೆ ಭಕ್ತರು ಕೂಡಿದರೆ ಅಮರಗಣವಾಗಲಿದೆ. ಆಧುನಿಕ ಜಗತ್ತು ಆಪತ್ತು ಹಾಗೂ ಅವಸರ ಜಗತ್ತಾಗಿದೆ. ಇದಕ್ಕೆ ಪರಿಹಾರವಾಗಿ ಆಧ್ಯಾತ್ಮಿಕ ಯಾನ ಆರಂಭಿಸಿದ್ದೇವೆ. ಈ ಯಾನಕ್ಕೆ ಒಳಗಾಗದಿದ್ದರೆ ಅವಾಂತರ ಅನಾಹುತಗಳು, ಅವ್ಯವಸ್ಥೆಗಳು, ಅಶಾಂತಿ ಎದುರಿಸಬೇಕಾಗುತ್ತದೆ ಎಂದರು. ಬಸವಾದಿ ಶರಣರು ಶಿವಯೋಗ, ಧ್ಯಾನ ಪರಿಕಲ್ಪನೆಯನ್ನು ಜಗತ್ತಿಗೆ ನೀಡಿದ್ದಾರೆ. ನಿತ್ಯ ನಿಯಮಿತ ಧ್ಯಾನ ಮಾಡುವವರ ವರ್ತನೆ ಸಮತೋಲನದ ಸ್ಥಿತಿಯಲ್ಲಿರುತ್ತದೆ. ಇಂದ್ರಿಯ ಮತ್ತು ಬುದ್ಧಿಯ ನಡುವೆ ಸಮತೋಲನ ಸಾಧ್ಯವಾಗುತ್ತದೆ. ಸಮತೋಲನ ಸಾಧಿಸುವುದೇ ನಿಜವಾದ ಸಿದ್ಧಿಯಾಗಿದೆ. ನಾವೆಲ್ಲರೂ ಧ್ಯಾನ ಪರಂಪರೆ ಮುಂದುವರಿಸಬೇಕು ಎಂದು ಆಶೀರ್ವಚನ ನೀಡಿದರು.

    ಅಂತರ್ಜಾತಿ ಮದುವೆಗಳು ಆಗದೇ ಜಾತಿ ವ್ಯವಸ್ಥೆ ಹೋಗೋಕೆ ಸಾಧ್ಯವಿಲ್ಲ. ಹಾಗಾಗಿ ಅಂತರ್ಜಾತಿ ವಿವಾಹಕ್ಕೆ ಸಮಾಜದ ಸಮ್ಮತಿ ಮುಖ್ಯವಾಗಿದೆ.

    | ಸಿದ್ದರಾಮಯ್ಯ ಮಾಜಿ ಸಿಎಂ

    ಇಷ್ಟಲಿಂಗಪೂಜೆ ದಾಖಲೆ

    ಮುರುಘಾ ಶ್ರೀಗಳ ನೇತೃತ್ವದಲ್ಲಿ ಸುಮಾರು 25 ಸಾವಿರ ಭಕ್ತರಿಂದ ಸಾಮೂಹಿಕ ಲಿಂಗಪೂಜೆ ನೆರವೇರಿಸಲಾಯಿತು. ಈ ವೇಳೆ ಹಿಂದೂ, ಮುಸ್ಲಿಂ, ಕ್ರೖೆಸ್ತ ಧರ್ಮಗುರುಗಳು, 1500ಕ್ಕೂ ಹೆಚ್ಚು ಮಠಾಧೀಶರು ಭಾಗಿಯಾಗಿದ್ದು ವಿಶೇಷವಾಗಿತ್ತು. ಈ ಪೂಜೆಯು ಇಂಡಿಯಾ ಬುಕ್ ಆಫ್ ರೆಕಾರ್ಡ್​ನಲ್ಲಿ ದಾಖಲಾಯಿತು.

    ವೈಚಾರಿಕ ಕ್ರಾಂತಿಯನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜದಲ್ಲಿ ಪಸರಿಸಲು ಮುರಘಾಶ್ರೀಗಳು ಶ್ರಮಿಸುತ್ತಿರುವುದು ಶ್ಲಾಘನೀಯ. ನಾವೆಲ್ಲ ವಚನ ಸಾಹಿತ್ಯ ಬೆಳೆಸಲು ಮುಂದಾಗಬೇಕು.

    | ಶ್ರೀ ಶ್ರೀ ರವಿಶಂಕರ್ ಗುರೂಜಿ ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕರು

    ಮನುಷ್ಯ ಮನುಷ್ಯನಾಗಿ ಬದುಕುವ ಕಲೆ ಕಲಿಸಿಕೊಟ್ಟವರು ಬಸವಣ್ಣ. ಅವರ ಬೆಳಕಿನಲ್ಲಿ ನಡೆದರೆ ಬದುಕು ಸಾರ್ಥಕವಾಗಲಿದೆ.

    |ಶ್ರೀ ಸಿದ್ಧಲಿಂಗ ಸ್ವಾಮೀಜಿ ಸಿದ್ಧಗಂಗಾ ಮಠ, ತುಮಕೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts