More

    ಬದಲಾಗದಿದ್ರೆ ಬದಲಿಸ್ತೀವಿ!; ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿ ಬೊಮ್ಮಾಯಿ ಖಡಕ್ ಎಚ್ಚರಿಕೆ

    ಬೆಂಗಳೂರು: ನಾಯಕತ್ವ ಗುಣವಿಲ್ಲದ ಯಾಂತ್ರಿಕ ಕಾರ್ಯಶೈಲಿ ಬದಲಿಸಿಕೊಂಡು ಕೆಲಸ ಮಾಡಬೇಕು. ಇಲ್ಲದಿದ್ದರೆ ಬದಲಾಯಿಸಿ ಬೇರೆಯವರನ್ನು ತಂದು ಕೆಲಸ ಮಾಡಿಸಿಕೊಳ್ಳುವುದು ಗೊತ್ತಿದೆ ಎಂದು ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಖಡಕ್ ಎಚ್ಚರಿಕೆ ನೀಡಿದರು.

    ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ಸೋಮವಾರ ಕರೆದಿದ್ದ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳ ಸಭೆಯಲ್ಲಿ ಪ್ರವಾಹ ಪರಿಹಾರ, ಮುನ್ನೆಚ್ಚರಿಕೆ ಕ್ರಮ, ಬಜೆಟ್ ಅನುಷ್ಠಾನದ ಪ್ರಗತಿ ಪರಿಶೀಲಿಸಿ ಕೆಲ ಜಿಲ್ಲೆಗಳು ಹಿಂದೆ ಬಿದ್ದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.

    ಪ್ರವಾಹ ಸಂತ್ರಸ್ತರಿಗೆ ಅಸಮರ್ಪಕ ಪರಿಹಾರ ವಿತರಣೆ, ಜಾನುವಾರುಗಳ ಚರ್ಮಗಂಟು ರೋಗ ತಡೆ ಲಸಿಕೆ ವಿತರಣೆ ವಿಳಂಬ, ಕೆರೆ ಒತ್ತುವರಿ ತೆರವು, ಅಭಿವೃದ್ಧಿ ಶ್ರೇಯಾಂಕದಲ್ಲಿ ಹಿನ್ನಡೆ ಇವು ಪುನರಾವರ್ತನೆಯಾಗಿದ್ದು, ಈ ಲೋಪಗಳಿಗೆ ನೀವೇ ಹೊಣೆಗಾರರು ಎಂದು ಗರಂ ಆಗಿ ಹೇಳಿದರು. ಕಾರ್ಯ ಚಟುವಟಿಕೆ ಕುಂಠಿತಕ್ಕೆ ಕಾರಣ ತಿಳಿದುಕೊಂಡರೆ ಸುಲಭ ಪರಿಹಾರ ಸಾಧ್ಯವಿದೆ. ಜಿಲ್ಲಾಹಂತಕ್ಕೆ ಅಸಾಧ್ಯ ಎಂದಾದರೆ ತಕ್ಷಣ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಬಗೆಹರಿಸಿಕೊಳ್ಳಬೇಕು ಎಂದರು.

    ಚುರುಕುಮುಟ್ಟಿಸಲು ತಾಕೀತು: ಜಿಲ್ಲಾಧಿಕಾರಿ ಕಚೇರಿಯಲ್ಲಿ ಕುಳಿತುಕೊಳ್ಳದೆ ತಹಸೀಲ್ದಾರ್ ಕಚೇರಿಗಳು, ಸ್ಥಳಕ್ಕೆ ದಿಢೀರ್ ಭೇಟಿ ನೀಡಿ ಆಡಳಿತಕ್ಕೆ ಚುರುಕು ಮುಟ್ಟಿಸಬೇಕು. ಬಜೆಟ್ ಕಾರ್ಯಕ್ರಮಗಳ ತ್ವರಿತ ಅನುಷ್ಠಾನಕ್ಕೆ ಪೂರಕವಾಗಿ ಆದೇಶಗಳಾಗಿದ್ದು, ತಳಹಂತದಲ್ಲಿ ಅವುಗಳ ಅನುಷ್ಠಾನಕ್ಕೆ ಕ್ರಮವಹಿಸಿ ವರ್ಷಾಂತ್ಯದೊಳಗೆ ಗುರಿ ತಲುಪಬೇಕು ಎಂದು ಬೊಮ್ಮಾಯಿ ಸೂಚಿಸಿದರು. ಡಿಸಿಗಳು ಕ್ರಿಯಾಶೀಲರಾಗಿ ಹೆಚ್ಚಿನ ಆಸಕ್ತಿವಹಿಸಿ ಕೆಲಸ ಮಾಡಿದರೆ ಯೋಜನೆಗಳ ಉದ್ದೇಶ ಈಡೇರಲಿದ್ದು, ಸರ್ಕಾರದ ಬಗ್ಗೆ ವಿಶ್ವಾಸ ಮೂಡುತ್ತದೆ. ಜನಪರ ಕೆಲಸ ಮಾಡುವುದಕ್ಕೆ ಹಿಂಜರಿಕೆ ಸಲ್ಲದು ಎಂದರು.

    ಸಚಿವರಾದ ವಿ.ಸೋಮಣ್ಣ, ಆರ್.ಅಶೋಕ್, ಮಾಧುಸ್ವಾಮಿ, ಸಿ.ಸಿ.ಪಾಟೀಲ್, ಬೈರತಿ ಬಸವರಾಜ, ಸಿಎಸ್ ವಂದಿತಾ ಶರ್ಮ, ಯೋಜನಾ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಇದ್ದರು.

    ಡಿಸಿಗಳಿಗೆ ವಿಶೇಷ ಕಾರ್ಯಾಗಾರ: ಕಂದಾಯ ಇಲಾಖೆ ಉಪ್ರಕಮಗಳು, ಕ್ರಾಂತಿಕಾರಿ ಬದಲಾವಣೆಗಳನ್ನು ತಿಳಿಸಿಕೊಡುವ ಜತೆಗೆ ಕಾರ್ಯದಕ್ಷತೆ ಸುಧಾರಿಸಲೆಂದು ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳಿಗೆ ವಿಶೇಷ ಕಾರ್ಯಾಗಾರ ಏರ್ಪಡಿಸಲು ನಿರ್ಧರಿಸಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು. ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳ ಜತೆಗೆ ನಡೆದ ಸಭೆ ಬಳಿಕ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಮೈಸೂರಿನ ಸುತ್ತೂರು ಮಠದಲ್ಲಿ ಒಂದೂವರೆ ದಿನ ಕಾರ್ಯಾಗಾರ ನಡೆಸಲು ಉದ್ದೇಶಿಸಿದ್ದು, ಇಷ್ಟರಲ್ಲೇ ದಿನಾಂಕ ಅಂತಿಮಗೊಳಿಸಲಾಗುವುದು ಎಂದರು.

    ಮೀಸಲಾತಿ ಹೆಚ್ಚಳ ಇಚ್ಛಾಶಕ್ತಿ ಪ್ರತೀಕ: ಮೀಸಲಾತಿ ಹೆಚ್ಚಳದ ಬೇಡಿಕೆ 50 ವರ್ಷದಿಂದ ಇತ್ತು. ಹಲವಾರು ಸರ್ಕಾರ ಬಂದಿದ್ದರೂ, ವಿವಿಧ ಕಾರಣಗಳಿಂದಾಗಿ ಈ ನಿರ್ಣಯ ತೆಗೆದುಕೊಳ್ಳಲು ಸಾಧ್ಯವಾಗಿರಲಿಲ್ಲ. ಆದರೂ ನಮ್ಮ ಸರ್ಕಾರದ ಇಚ್ಛಾಶಕ್ತಿಯಿಂದ ಎಸ್​ಸಿ-ಎಸ್​ಟಿ ಮೀಸಲಾತಿ ಹೆಚ್ಚಳದ ಐತಿಹಾಸಿಕ ನಿರ್ಣಯ ತೆಗೆದುಕೊಂಡು ಸಾಮಾಜಿಕ ನ್ಯಾಯ ಒದಗಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಕಾರ್ಕಳ ವಿಧಾನಸಭಾ ಕ್ಷೇತ್ರದ ಎಸ್ಸಿ-ಎಸ್ಟಿ ಸಮುದಾಯದ ಮುಖಂಡರು ಭೇಟಿಯಾದ ಸಂದರ್ಭ ಅವರು ಮಾತನಾಡಿದರು. ಹಿಂದುಳಿದ ವರ್ಗದ ಸಮುದಾಯಗಳಿಗೂ ನ್ಯಾಯ ಒದಗಿಸುವ ಕೆಲಸವನ್ನು ಪ್ರಾಮಾಣಿಕತೆಯಿಂದ ಮಾಡಲಾಗುವುದು ಎಂದರು. ಸಚಿವರಾದ ವಿ. ಸುನೀಲ್ ಕುಮಾರ್, ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಇದ್ದರು.

    ಬಿಜೆಪಿ ಜನಸಂಕಲ್ಪ ಯಾತ್ರೆಗೆ ಸಜ್ಜು

    ಬೀದರ್: ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಎರಡನೇ ಹಂತದ ಜನಸಂಕಲ್ಪ ಯಾತ್ರೆಗೆ ಮಂಗಳವಾರ ಗಡಿ ಜಿಲ್ಲೆಯಿಂದ ಚಾಲನೆ ನೀಡುತ್ತಿದೆ. ಔರಾದ್​ನ ಅಮರೇಶ್ವರ ಕಾಲೇಜು ಪಕ್ಕದಲ್ಲಿನ ಮೈದಾನ ಹಾಗೂ ಹುಮನಾಬಾದ್​ನ ಥೇರ್ ಮೈದಾನದಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗಿದೆ.

    ಡಿಸಿಗಳಿಗೆ ಟಾಸ್ಕ್

    • ಮನೆಹಾನಿ ಮಾಹಿತಿ ದಾಖಲಿಸಲು ಅ.30ರವರೆಗೆ ಗಡುವು ವಿಸ್ತರಣೆ. ತ್ವರಿತವಾಗಿ ಮಾಹಿತಿ ದಾಖಲಿಸಬೇಕು
    • ಜಿಲ್ಲಾ ತುರ್ತು ನಿರ್ವಹಣಾ ಕೇಂದ್ರ ಸ್ಥಾಪನೆಗೆ ತಲಾ ಒಂದು ಕೋಟಿ ರೂ. ಬಿಡುಗಡೆ. ಮುಂದಿನ 1 ತಿಂಗಳೊಳಗೆ ಕೇಂದ್ರ ಕಾರ್ಯಾರಂಭಕ್ಕೆ ಸಿದ್ಧತೆ
    • ಪ್ರವಾಹ ಪರಿಸ್ಥಿತಿ ಇನ್ನೂ ಮುಂದುವರಿಯುವ ಸಾಧ್ಯತೆ. ವಿಪತ್ತು ನಿರ್ವಹಣೆಗೆ ಸನ್ನದ್ಧ ಸ್ಥಿತಿ, ಸ್ಥಳೀಯರ ಸಹಕಾರ ಪಡೆದು ಪರಿಹಾರ ಕ್ರಮ
    • ಭೂಮಿ ಯೋಜನೆಯಡಿ ಖಾತೆ ವರ್ಗಾವಣೆ ನೋಟಿಸ್ ಅವಧಿ 30-15 ದಿನಗಳಿಗೆ ಇಳಿಕೆ
    • ತಹಸೀಲ್ದಾರ್, ಉಪವಿಭಾಗಾಧಿಕಾರಿ, ಡಿಸಿಗಳ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳ ತ್ವರಿತ ವಿಲೇವಾರಿಗೆ ಸಮಾನಾಂತರ ವೃಂದದ ಅಧಿಕಾರಿಗಳಿಗೆ ಅಧಿಕಾರ ಪ್ರತ್ಯಾಯೋಜನೆ
    • ಆಯುಷ್ಮಾನ್ ಭಾರತ್ ಕಾರ್ಡ್ ವಿತರಣೆಗೆ ಪ್ರತಿ ದಿನದ ಗುರಿ ಸಾಧಿಸಲೇಬೇಕು. ಆರೋಗ್ಯ ಖಾತೆಗೆ ಲಿಂಕ್ ಮಾಡುವುದು ಕಡ್ಡಾಯ
    • ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆಯಡಿ 305 ನಗರ ಸ್ಥಳೀಯ ಸಂಸ್ಥೆಗಳಿಗೆ 3,885 ಕೋಟಿ ರೂ. ಮಂಜೂರು. ಟೆಂಡರ್ ಪ್ರಕ್ರಿಯೆ, ಕಾಮಗಾರಿ ಪೂರ್ಣಗೊಳಿಸಲು ಮಾರ್ಚ್ 15ರ ಗಡುವು
    • ವಸತಿ ಯೋಜನೆಗಳಡಿ ಡಿಸೆಂಬರ್ ಅಂತ್ಯದೊಳಗೆ 5 ಲಕ್ಷ ಮನೆ ನಿರ್ವಣ, ನಗರ ವಸತಿ ಯೋಜನೆಯಡಿ ಮಾರ್ಚ್ ಅಂತ್ಯ ದೊಳಗೆ ಒಂದು ಲಕ್ಷ ಮನೆ ನಿರ್ವಿುಸಬೇಕು.
    • ಪರಿಶಿಷ್ಟ ಜಾತಿ, ಪಂಗಡದವರ ಮೇಲಿನ ದೌರ್ಜನ್ಯ ತಡೆಯಡಿ ದಾಖಲಾದ ಕೊಲೆ ಪ್ರಕರಣಗಳಲ್ಲಿ ಮೃತರ ಕುಟುಂಬದ ಅವಲಂಬಿತರಿಗೆ ಸರ್ಕಾರಿ ನೌಕರಿ ನೀಡುವ ಪ್ರಕರಣಗಳ ತ್ವರಿತ ವಿಲೇವಾರಿ
    • ನಗರಕ್ಕೆ ಹೊಂದಿಕೊಂಡ ಜಾಗ ಗುರುತಿಸಿ, ಮಾಜಿ ಸೈನಿಕರಿಗೆ ನಿವೇಶನಗಳ ಹಂಚಿಕೆಗೆ ಕ್ರಮ
    • ಪಿಎಂ ಕಿಸಾನ್ ಇ-ಕೆವೈಸಿ ಶೇ.69 ಸಾಧನೆ ಆಗಿದೆ. ಗ್ರಾಮೀಣ ಪ್ರದೇಶದಲ್ಲಿ ಆಂದೋಲನ ಮಾದರಿಯಲ್ಲಿ ಪೂರ್ಣಗೊಳಿಸಬೇಕು
    • ಬೆಳೆ ವಿಮೆಯಲ್ಲಿ ಪ್ರೀಮಿಯಂ ಮೊತ್ತಕ್ಕಿಂತ ಕಡಿಮೆ ಬೆಳೆವಿಮೆ ಪರಿಹಾರ ಮೊತ್ತ ವಿತರಣೆಯು ಕಳವಳಕಾರಿಯಾಗಿದೆ. ರೈತರಿಗೆ ಪೂರಕ ಕ್ರಮ ಕುರಿತು ಕೇಂದ್ರ ಸರ್ಕಾರ ಕಾರ್ಯಾಗಾರ ನಡೆಸಲಿದ್ದು, ನಂತರ ರಾಜ್ಯಮಟ್ಟದಲ್ಲಿ ಕಾರ್ಯಾಗಾರ ನಡೆಸಬೇಕು.
    • ಪಿ.ಎಂ. ಸ್ವನಿಧಿ ಯೋಜನೆಯಡಿ ಬೀದಿ ಬದಿ ವ್ಯಾಪಾರಿಗಳಿಗೆ ಸಾಲ ಸೌಲಭ್ಯ ವಿತರಿಸಲು ಕೇಂದ್ರ ಸರ್ಕಾರ ಗುರಿ ಹೆಚ್ಚಿಸಿದ್ದು, ಇನ್ನಷ್ಟು ಅರ್ಜಿಗಳನ್ನು ಆಹ್ವಾನಿಸಲು ಕ್ರಮವಹಿಸಬೇಕು.

    ಕಾಲಿಗೆ ಬಿದ್ದು ಕೇಳ್ತೀನಿ, ಇದೊಂದು ಸಲ ದಯವಿಟ್ಟು ಕ್ಷಮಿಸಿ!; ಅಪ್ಪು ಅಭಿಮಾನಿಗಳ ಅಬ್ಬರಕ್ಕೆ ತತ್ತರಿಸಿದ ಕಿಡಿಗೇಡಿ

    ‘ಕಾಂತಾರ’ಕ್ಕೆ ಕರಾವಳಿ ಬೆಡಗಿಯರ ಮೆಚ್ಚುಗೆ: ಅನುಷ್ಕಾ ಶೆಟ್ಟಿ ಬಳಿಕ ಇದೀಗ ಶಿಲ್ಪಾ ಶೆಟ್ಟಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts