More

    ಗಡಿ ಬಂದ್ ಮಾಡಿ ಹೋರಾಟ ಆರಂಭಿಸಿ

    ಹಾವೇರಿ: ನೀವು ನಮ್ಮ ಹೋರಾಟ ಬೆಂಬಲಿಸಲು ದೆಹಲಿಗೆ ಬರುವ ಅವಶ್ಯಕತೆಯಿಲ್ಲ. ದೆಹಲಿಯ ನಾಲ್ಕು ಗಡಿಗಳನ್ನು ಬಂದ್ ಮಾಡಿರುವ ಮಾದರಿಯಲ್ಲಿ ಬೆಂಗಳೂರಿನ ನಾಲ್ಕು ಗಡಿಗಳನ್ನು ಬಂದ್ ಮಾಡಿ ಹೋರಾಟ ಆರಂಭಿಸಿ ಎಂದು ಭಾರತೀಯ ಕಿಸಾನ್ ಯೂನಿಯನ್ ಕಾರ್ಯದರ್ಶಿ ಯುದ್ಧವೀರ್​ಸಿಂಗ್ ಹೇಳಿದರು.

    ನಗರದ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ರೈತ ಮಹಾಪಂಚಾಯತ್ ಸಮಾವೇಶಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

    ಸರ್ಕಾರ ರೈತ ವಿರೋಧಿಯಾಗಿರುವ ಮೂರು ಕಾನೂನುಗಳನ್ನು ಜಾರಿಗೆ ತರುವ ಮೂಲಕ ದೇಶದ ಕೃಷಿ ವ್ಯವಸ್ಥೆಯನ್ನೇ ಹಾಳು ಮಾಡಲು ಹೊರಟಿದೆ. ರಾಷ್ಟ್ರದಲ್ಲಿ ಈ ವಿಚಾರಕ್ಕಾಗಿ ದೊಡ್ಡ ಯುದ್ಧ ಆರಂಭಗೊಂಡಿದೆ. ಈ ಯುದ್ಧ ಕೇವಲ ಉತ್ತರಕ್ಕೆ ಸೀಮಿತವಾಗಿದೇ ದಕ್ಷಿಣಕ್ಕೂ ಪಸರಿಸುತ್ತಿದೆ. ಸರ್ಕಾರ ಜಾರಿಗೊಳಿಸುವ ಹೊಸ ಕಾನೂನುಗಳ ಬುನಾದಿಯೇ ತಪ್ಪಾಗಿದೆ. ಈ ಕರಾಳ ಶಾಸನವನ್ನು ಕರೊನಾ ಮಹಾಮಾರಿಯಿಂದ ದೇಶ ಸ್ತಬ್ಧವಾಗಿರುವ ಸಮಯದಲ್ಲಿ ಜಾರಿಗೆ ತಂದಿದ್ದು ಯಾಕೆ ? ಇದು ಬಂಡವಾಳಶಾಹಿಗಳ ಪರವಾದ ಸರ್ಕಾರ. ಹೀಗಾಗಿ ಲೋಕಸಭೆ, ರಾಜ್ಯಸಭೆಯಲ್ಲಿ ಸಮರ್ಪಕ ಚರ್ಚೆ ನಡೆಯದೇ ಕಾನೂನು ಜಾರಿಗೆ ತರಲು ಮುಂದಾಗಿದೆ ಎಂದರು.

    2012ರಲ್ಲಿ ಕೇಂದ್ರದ ಮಾಜಿ ಸಚಿವೆ ದಿ. ಸುಷ್ಮಾ ಸ್ವರಾಜ್ ಅವರು ಎಪಿಎಂಸಿ ತಿದ್ದುಪಡಿ ಕಾನೂನನ್ನು ಬಲವಾಗಿ ವಿರೋಧಿಸಿದ್ದರು. ಮಾಜಿ ಸಚಿವ ಅರುಣ ಜೇಟ್ಲಿ ಅವರು ಗುತ್ತಿಗೆ ಕೃಷಿ ಪದ್ಧತಿಯಿಂದ ಕೃಷಿ ಕ್ಷೇತ್ರ ಹಾಳಾಗಲು ಕಾರಣವಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದರು. ಕಳೆದ ಮೂರು ತಿಂಗಳಿನಿಂದ ದೆಹಲಿಯಲ್ಲಿ ವಿರೋಧಿಸಿ ರೈತರು ಹೋರಾಟ ನಡೆಸುತ್ತಿದ್ದಾರೆ. ಈ ಮಧ್ಯೆ 12 ಬಾರಿ ಮಾತುಕತೆಗೆ ಸಂಘಟನೆಯವರನ್ನು ಕರೆದಿದ್ದಾರೆ. ಆದರೆ, ಕೇಂದ್ರ ಸರ್ಕಾರ ತನ್ನ ಮೊಂಡುತನವನ್ನು ಬಿಡುತ್ತಿಲ್ಲ. ಅಂಬಾನಿ, ಆದಾನಿ ಅಂತಹ ಬಂಡವಾಳಶಾಹಿಗಳು ಕೃಷಿ ಕ್ಷೇತ್ರಕ್ಕೆ ಲಗ್ಗೆ ಇಡಲು ಮುಂದಾಗಿದ್ದಾರೆ. ಭವಿಷ್ಯದ ದಿನಗಳಲ್ಲಿ ಪಾನ್​ಕಾರ್ಡ್ ಹೊಂದಿದವರೆಲ್ಲ ವ್ಯಾಪಾರಿಗಳಾಗಿ ರೈತರಿಗೆ ಮೋಸ ಮಾಡುವ ಸಾಧ್ಯತೆಯಿದೆ ಎಂದರು.

    ಭಾರತೀಯ ಕಿಸಾನ್ ಯೂನಿಯನ್ ವಕ್ತಾರ ರಾಕೇಶ್ ಟಿಕಾಯತ್ ಮಾತನಾಡಿ, ಬಂಡವಾಳಶಾಹಿಗಳು ಹಲವು ಕ್ಷೇತ್ರಗಳನ್ನು ಈಗಾಗಲೇ ಹಿಡಿತಕ್ಕೆ ತೆಗೆದುಕೊಂಡು, ಈಗ ಕೃಷಿ ಕ್ಷೇತ್ರವನ್ನು ಕಪಿಮುಷ್ಠಿಗೆ ತೆಗೆದುಕೊಳ್ಳಲು ಹೊರಟಿದ್ದಾರೆ. ಅವರಿಗೆ ನೆರವಾಗಲೆಂದೇ ಕೇಂದ್ರ ಸರ್ಕಾರ ಕೃಷಿ ಕಾನೂನುಗಳನ್ನು ಜಾರಿಗೆ ತಂದಿದೆ. ಯುವಕರು ಈಗಲೇ ಜಾಗ್ರತರಾಗಬೇಕು ಎಂದರು.

    ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ ಮಾತನಾಡಿ, ರಾಜ್ಯದಲ್ಲಿ 13 ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಸಿಗದೇ 3,500 ಕೋಟಿ ರೂ.ಗಳಷ್ಟು ನಷ್ಟವಾಗಿದೆ. ಪ್ರತಿವರ್ಷ 1 ಲಕ್ಷ ಕೋಟಿ ರೂ.ಗಳಷ್ಟು ಬೆಲೆ ವ್ಯತ್ಯಾಸಗಳಿಂದ ರೈತರಿಗೆ ನಷ್ಟ ಆಗುತ್ತದೆ. ಇದು ರೈತರ ಆದಾಯ ನಷ್ಟವಲ್ಲವೇ. ಇದನ್ನು ತುಂಬಿಕೊಡುವವರು ಯಾರು. ತಕ್ಷಣ ರೈತರೊಂದಿಗೆ ರ್ಚಚಿಸಿ ಮೂರು ಕಾಯ್ದೆಗಳನ್ನು ಹಿಂಪಡೆಯಿರಿ ಎಂದರು.

    ಕೇಂದ್ರ ಮಾಜಿ ಸಚಿವ ಬಾಬಾಗೌಡ ಪಾಟೀಲ ಮಾತನಾಡಿ, ರೈತ ಕುಲಕ್ಕೆ ಧಕ್ಕೆ ಬಂದರೆ ರೈತ ಸೈನಿಕನಾಗುತ್ತಾನೆ. ಮನೆಯಲ್ಲಿ ಹೈನುಗಾರಿಕೆ ಮಾಡಿ ಮಕ್ಕಳಿಗೆ ಹಾಲುಣಿಸಿ ದೊಡ್ಡವರನ್ನಾಗಿ ಮಾಡಿ ಹರಸುವ ತಾಯಿಯೇ ಭಾರತ ಮಾತೆ ಎಂಬುದನ್ನು ಅರಿಯಬೇಕು. ಆಡಳಿತ ನಡೆಸುವವನ ನಕಲಿ ಮಾತು, ವೇಷಧಾರಿಗಳ ವೇಷ, ಮಾತಿನ ಮೋಡಿ ಮುಂದಿನ ದಿನಗಳಲ್ಲಿ ನಡೆಯುವುದಿಲ್ಲ. ಅಧಿಕಾರಕ್ಕೆ ಯಾರಿಂದ ಬಂದಿದ್ದೀರಿ ಎಂಬುದನ್ನು ಅರಿಯಬೇಕು ಎಂದರು.

    ರೈತ ಮುಖಂಡರಾದ ನಂದಿನಿ ಜಯರಾಮ, ಚುಕ್ಕಿ ನಂಜುಂಡಸ್ವಾಮಿ ಮಾತನಾಡಿದರು. ಜಿಲ್ಲೆಯ ರೈತ ಮುಖಂಡ ಹಿರೇಕೆರೂರಿನ ಸಿದ್ದನಗೌಡ ಪಾಟೀಲ ಸಮಾವೇಶದ ಅಧ್ಯಕ್ಷತೆ ವಹಿಸಿದ್ದರು. ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

    ಮಾಲತೇಶ ಪೂಜಾರ ಸ್ವಾಗತಿಸಿದರು. ಜಿಲ್ಲಾ ರೈತ ಸಂಘದ ಅಧ್ಯಕ್ಷ ರಾಮಣ್ಣ ಕೆಂಚಳ್ಳೇರ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಲ್ಲಿಕಾರ್ಜುನ ಬಳ್ಳಾರಿ ನಿರೂಪಿಸಿದರು.

    ಬಾಕ್ಸ್…

    ರೈತ ಮಹಾ ಪಂಚಾಯತ್​ದ ಹಕ್ಕೊತ್ತಾಯಗಳು

    ಕೃಷಿ ಮಸೂದೆಗಳನ್ನು ಹಿಂಪಡೆದು ರೈತ ಬೆಳೆದ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಖರೀದಿಸಲು ಭದ್ರ ಕಾನೂನು ರಚನೆಯಾಗಬೇಕು. ಪ್ರಮುಖವಾಗಿ ಭೂ ಸುಧಾರಣೆ ಕಾಯ್ದೆ ತಿದ್ದುಪಡಿ, ಎಪಿಎಂಸಿ ಕಾಯ್ದೆ ತಿದ್ದುಪಡಿ, ವಿದ್ಯುತ್ ಖಾಸಗೀಕರಣ ತಿದ್ದುಪಡಿ, ಗುತ್ತಿಗೆ ಕೃಷಿ ಭೂಮಿ ಕಾಯ್ದೆ ತಿದ್ದುಪಡಿ, ಅಗತ್ಯ ವಸ್ತುಗಳ ಕಾಯ್ದೆಗೆ ತಿದ್ದುಪಡಿ, ಮೆಕ್ಕೆಜೋಳ, ಭತ್ತ, ಹತ್ತಿ ಖರೀದಿ ಕೇಂದ್ರ ತೆರೆಯುವುದು, ಪೆಟ್ರೋಲ್, ಡೀಸೆಲ್ ಹಾಗೂ ಗ್ಯಾಸ್ ಸಿಲಿಂಡರ್ ಬೆಲೆ ನಿಯಂತ್ರಿಸುವುದು ಸೇರಿ ವಿವಿಧ ಬೇಡಿಕೆ ಈಡೇರಿಸಬೇಕು. ಜಿಲ್ಲೆಯಲ್ಲಿ ಹತ್ತಿ, ಮೆಕ್ಕೆಜೋಳ, ಭತ್ತ ಖರೀದಿಗೆ ಬೆಂಬಲ ಬೆಲೆಯ ಕೇಂದ್ರ ತೆರೆಯದ ಕಾರಣ ರೈತರು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿ ಆತ್ಮಹತ್ಯೆಯಂತಹ ದಾರಿ ಹಿಡಿದಿದ್ದಾರೆ. ಆದ್ದರಿಂದ ಆದಷ್ಟು ಬೇಗ ಸರ್ಕಾರ ಖರೀದಿ ಕೇಂದ್ರ ತೆರೆಯಬೇಕು. ಹಾವೇರಿ ಜಿಲ್ಲೆಗೆ ಪ್ರತ್ಯೇಕ ಡಿಸಿಸಿ ಬ್ಯಾಂಕ್ ಹಾಗೂ ಹಾಲು ಒಕ್ಕೂಟ ಸ್ಥಾಪಿಸಬೇಕು.

    ಕೋಟ್

    ರೈತರಿಗೆ ಸೂಕ್ತ ಬೆಂಬಲ ಬೆಲೆ ಕೊಡಿಸುವ ಕಾನೂನು ಜಾರಿಗೆ ತರುವ ಅಗತ್ಯತೆ ಇದೆ. ನಿಮ್ಮ ಸಾಲ ಮನ್ನಾ ರೈತರಿಗೆ ಅಗತ್ಯತೆಯಿಲ್ಲ. ಗುತ್ತಿಗೆ ಕೃಷಿ ಪದ್ಧತಿ, ಅಗತ್ಯ ವಸ್ತುಗಳ ನಿಯಂತ್ರಣ ಕಾನೂನು ಇವುಗಳೆಲ್ಲ ರೈತರಿಗೆ ಮಾರಕವಾಗಿವೆ. ರೈತ ಹೋರಾಟ ಕುರಿತಾಗಿ ಕೆಲವು ಸ್ವಾಮೀಜಿಗಳು ಬೆಂಬಲ ಸೂಚಿಸಿದ್ದಾರೆ. ಆದರೆ ಇನ್ನುಳಿದ ಸ್ವಾಮೀಜಿಗಳು ಮೌನ ವಹಿಸಿರುವುದು ರೈತರ ಸಂಶಯಕ್ಕೆ ಕಾರಣವಾಗಿದೆ. ಮುಂದಿನ ದಿನಗಳಲ್ಲಿ ಮಠಗಳು, ಮಠಾಧೀಶರು ಯಾರ ಪರ ಎಂಬುದರ ಬಗ್ಗೆ ರೈತರು ಚಿಂತನೆ ಮಾಡಬೇಕಾಗುತ್ತದೆ.

    | ಕೆ.ಟಿ. ಗಂಗಾಧರ, ರೈತ ಮುಖಂಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts