More

    ಕ್ಲಾಕ್ ಟವರ್‌ಗೆ ಉದ್ಘಾಟನೆ ಭಾಗ್ಯವಿಲ್ಲ, ಕಾಮಗಾರಿ ಪೂರ್ಣಗೊಂಡು ಎರಡು ವರ್ಷ

    ಹರೀಶ್ ಮೋಟುಕಾನ ಮಂಗಳೂರು

    ಮಂಗಳೂರು ನಗರಕ್ಕೆ ಕಲಶಪ್ರಾಯದಂತಿರುವ ಹಂಪನಕಟ್ಟೆ ಬಳಿ ಸ್ಮಾರ್ಟ್ ಕ್ಲಾಕ್ ಟವರ್ ಕಾಮಗಾರಿ ಪೂರ್ಣಗೊಂಡು ಎರಡು ವರ್ಷ ಕಳೆದರೂ ಉದ್ಘಾಟನೆಗೆ ಮಾತ್ರ ಇನ್ನೂ ಮುಹೂರ್ತ ಕೂಡಿ ಬಂದಿಲ್ಲ. ಸುಗಮ ವಾಹನ ಸಂಚಾರದ ನಿಟ್ಟಿನಲ್ಲಿ ಈ ಭಾಗದಲ್ಲಿ ಸಣ್ಣ ರೀತಿಯ ಟ್ರಾಫಿಕ್ ಐಲ್ಯಾಂಡ್ ನಿರ್ಮಾಣ ಮಾಡಲು ಸ್ಮಾರ್ಟ್‌ಸಿಟಿ ತೀರ್ಮಾನಿಸಿದ್ದು, ಕಾಮಗಾರಿ ಪೂರ್ಣಗೊಂಡ ಬಳಿಕವಷ್ಟೇ ಉದ್ಘಾಟನೆ ನೆರವೇರುವ ಸಾಧ್ಯತೆ ಇದೆ.

    ಹಂಪನಕಟ್ಟೆ ಪ್ರದೇಶದಲ್ಲಿ ಸಾಮಾನ್ಯವಾಗಿ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ಕ್ಲಾಕ್ ಟವರ್ ಬಳಿಯಿಂದ ಒಂದು ಬದಿ ರಸ್ತೆ ಎ.ಬಿ. ಶೆಟ್ಟಿ ವೃತ್ತ ಕಡೆಗೆ ಹೋದರೆ ಮತ್ತೊಂದು ರಸ್ತೆ ಲೇಡಿಗೋಷನ್ ಕಡೆಯಿಂದ ಬರುತ್ತದೆ. ಇದೇ ಭಾಗದಲ್ಲಿ ಸೆಂಟ್ರಲ್ ಮಾರುಕಟ್ಟೆ, ವೆನ್ಲಾಕ್ ಆಸ್ಪತ್ರೆ, ಲೇಡಿಗೋಷನ್ ಆಸ್ಪತ್ರೆ, ಮಿನಿ ವಿಧಾನಸೌಧ ಸೇರಿದಂತೆ ಹಲವು ಸ್ಥಳಗಳಿವೆ. ಇದೇ ಕಾರಣಕ್ಕೆ ವಾಹನ ದಟ್ಟಣೆಯೂ ಹೆಚ್ಚಾಗುತ್ತಿದೆ. ಈ ಭಾಗದಲ್ಲಿ ಏಕಮುಖ ಸಂಚಾರ ಇರುವ ಕಾರಣ, ವಾಹನಗಳು ವ್ಯವಸ್ಥಿತ ತಿರುವು ಪಡೆಯಲು ಅನುಕೂಲವಾಗುವ ನಿಟ್ಟಿನಲ್ಲಿ ಪುರಭವನ ಮತ್ತು ಕ್ಲಾಕ್ ಟವರ್ ನಡುವಣ ಒಂದು ಸಣ್ಣ ರೀತಿಯ ಐಲ್ಯಾಂಡ್ ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ.

    ಉದ್ಘಾಟನೆ ಮತ್ತಷ್ಟು ವಿಳಂಬ: ಮಂಗಳೂರಿನ ಹೆಗ್ಗುರುತಾದ ಕ್ಲಾಕ್ ಟವರ್ ಕಾಮಗಾರಿ ಪೂರ್ಣಗೊಂಡು ಎರಡು ವರ್ಷ ಕಳೆದಿದೆ. ಗೋಪುರದ ನಾಲ್ಕೂ ದಿಕ್ಕಿಗೂ ಗಡಿಯಾರವನ್ನು ಅಳವಡಿಸಲಾಗಿದೆ. ಗೋಪುರದ ಸುತ್ತಲೂ ಕಟ್ಟೆ ನಿರ್ಮಾಣ ಕೂಡ ಪೂರ್ಣಗೊಂಡಿದ್ದು, ರಾತ್ರಿ ವೇಳೆ ಆಕರ್ಷಣೀಯವಾಗಿ ಕಾಣಲೆಂದು ಲೈಟ್ ವ್ಯವಸ್ಥೆ ಮಾಡಲಾಗಿದೆ. ಆದರೂ, ಕ್ಲಾಕ್ ಟವರ್ ಉದ್ಘಾಟನೆಗೆ ಮಾತ್ರ ಜನಪ್ರತಿನಿಧಿಗಳು ಆಸಕ್ತಿ ತೋರುತ್ತಿಲ್ಲ. ಇದೀಗ ಈ ಭಾಗದಲ್ಲಿ ಮತ್ತೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು, ಉದ್ಘಾಟನೆ ಮತ್ತಷ್ಟು ವಿಳಂಬಗೊಳ್ಳುವ ಸಾಧ್ಯತೆ ಇದೆ.

    ನಗರದಲ್ಲಿ ಸಮಯ ಸೂಚಕವಾಗಿ ಹಲವು ವರ್ಷಗಳ ಹಿಂದೆ ಹಂಪನಕಟ್ಟೆಯಲ್ಲಿ ಕ್ಲಾಕ್ ಟವರ್ ನಿರ್ಮಾಣ ಮಾಡಲಾಗಿತ್ತು. ಮಂಗಳೂರು ನಗರದಲ್ಲಿ ವಾಹನ ಸಂಚಾರಕ್ಕೆ ಯಾವುದೇ ತೊಂದರೆ ಉಂಟಾಗಬಾರದು ಎಂಬ ಉದ್ದೇಶದಿಂದ 1994ರಲ್ಲಿ ಟವರ್ ಕೆಡಹಲಾಗಿತ್ತು. ಬಳಿಕ ಇದೇ ಜಾಗದಲ್ಲಿ ಹಿಂದಿನ ಕ್ಲಾಕ್ ಟವರ್‌ನ ನೆನಪಿಗಾಗಿ ಹೊಸದಾಗಿ ನಿರ್ಮಿಸಲು ಪಾಲಿಕೆ ಮೇಯರ್ ಆಗಿದ್ದ ಕವಿತಾ ಸನಿಲ್ ನಿರ್ಧರಿಸಿ 2018ರಲ್ಲಿ ಕಾಮಗಾರಿ ಆರಂಭಿಸಲಾಗಿತ್ತು. ಬಳಿಕ ಈ ಯೋಜನೆಯನ್ನು ಸ್ಮಾರ್ಟ್‌ಸಿಟಿ ಯೋಜನೆಯಡಿಯಲ್ಲಿ ಕಾಮಗಾರಿ ಮುಂದುವರಿಸಲಾಗಿತ್ತು.

    ಟ್ರಾಫಿಕ್ ಐಲ್ಯಾಂಡ್ ನಿರ್ಮಾಣ: ನಗರದಲ್ಲಿ ವೃತ್ತಗಳ ಬದಲು ಟ್ರಾಫಿಕ್ ಐಲ್ಯಾಂಡ್ ನಿರ್ಮಾಣಕ್ಕೆ ಒಲವು ತೋರಲಾಗುತ್ತಿದೆ. ಸುಗಮ ವಾಹನ ಸಂಚಾರಕ್ಕೆ ಅನುಕೂಲವಾಗುವಂತೆ ದ್ವೀಪಗಳ ಮಾದರಿಯನ್ನು ನಿರ್ಮಾಣ ಮಾಡಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತದೆ. ಇದರಿಂದಾಗಿ ಲೇನ್‌ಗಳಲ್ಲಿ ವಾಹನಗಳು ವ್ಯವಸ್ಥಿತವಾಗಿ ಸಂಚರಿಸಲು ಸಹಾಯವಾಗುತ್ತದೆ. ಇದಕ್ಕೆ ವೃತ್ತದಷ್ಟು ಸ್ಥಳಾವಕಾಶ ಇರದ ಕಾರಣ ಸರಾಗವಾಗಿ ವಾಹನಗಳು ತಿರುವು ಪಡೆದುಕೊಳ್ಳಲು ಅನುಕೂಲ ವಾಗುತ್ತದೆ. ನಗರಕ್ಕೆ ಹೊಸ ಸ್ವರೂಪದ ಟ್ರಾಫಿಕ್ ಐಲ್ಯಾಂಡ್‌ನಲ್ಲಿ ಹಚ್ಚ ಹಸುರು ಕಂಗೊಳಿಸುವಂತೆ ಲಾನ್, ಬೀದಿ ದೀಪ ಸಹಿತ ಸ್ಮಾರ್ಟ್‌ಪೋಲ್ ವ್ಯವಸ್ಥೆಗಳನ್ನು ಅಳವಡಿಸಲಾಗುತ್ತದೆ. ಆದರೆ, ಕ್ಲಾಕ್‌ಟವರ್ ಬಳಿ ಈ ರೀತಿಯ ಸಣ್ಣ ರೀತಿಯ ಐಲ್ಯಾಂಡ್ ನಿರ್ಮಾಣಕ್ಕೆ ಯೋಚಿಸಲಾಗಿದೆ.

    ಕ್ಲಾಕ್ ಟವರ್ ಕಾಮಗಾರಿ ಪೂರ್ಣಗೊಂಡಿದೆ. ಅದರ ಸಮೀಪದಲ್ಲಿ ರಸ್ತೆ, ಅಂಡರ್‌ಪಾಸ್ ಕಾಮಗಾರಿಗಳು ನಡೆಯುತ್ತಿದೆ. ಸುಗಮ ವಾಹನ ಸಂಚಾರದ ಉದ್ದೇಶದಿಂದ ಕ್ಲಾಕ್ ಟವರ್ ಬಳಿ ಸಣ್ಣ ರೀತಿಯ ಐಲ್ಯಾಂಡ್ ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ. ಎಲ್ಲ ಕಾಮಗಾರಿಗಳು ಪೂರ್ಣಗೊಂಡ ಬಳಿಕವಷ್ಟೇ ಎಲ್ಲವೂ ಒಂದೇ ಬಾರಿಗೆ ಉದ್ಘಾಟನೆ ನಡೆಯಲಿದೆ.

    ಅರುಣ್ ಪ್ರಭಾ, ಸ್ಮಾರ್ಟ್‌ಸಿಟಿ ಜನರಲ್ ಮ್ಯಾನೇಜರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts