More

    ರಸ್ತೆಗೆ ಹಾಕಿದ್ದ ಮಣ್ಣು ತೆರವು

    ಕೆ.ಆರ್.ಪೇಟೆ: ಕರೊನಾ ಭೀತಿಯಿಂದ ತಾಲೂಕಿನ ಕಲ್ಲಹಳ್ಳಿಯ ಪ್ರಸಿದ್ಧ ಭೂವರಾಹಸ್ವಾಮಿಯ ದೇವಸ್ಥಾನದ ಸಂಪರ್ಕ ರಸ್ತೆಗೆ ಅಪರಿಚಿತರು ಅಡ್ಡಲಾಗಿ ಹಾಕಿದ್ದ ಮಣ್ಣನ್ನು ತಹಸೀಲ್ದಾರ್ ಎಂ.ಶಿವಮೂರ್ತಿ ನೇತೃತ್ವದಲ್ಲಿ ಗುರುವಾರ ತೆರವುಗೊಳಿಸಲಾಯಿತು.

    ದೇವಸ್ಥಾನ ಆಡಳಿತ ಮಂಡಳಿ ಮನವಿ ಮಾಡಿದ್ದರಿಂದ ತಹಸೀಲ್ದಾರ್, ಗ್ರಾಮಾಂತರ ಪೊಲೀಸ್ ಠಾಣೆ ಎಸ್‌ಐ ಡಿ.ಲಕ್ಷ್ಮಣ್, ಗಂಜಿಗೆರೆ ಪಿಡಿಒ ರವಿಕುಮಾರ್ ರಸ್ತೆಯನ್ನು ತೆರವುಗೊಳಿಸಿ ದೇವರ ದರ್ಶನಕ್ಕೆ ಬರುವ ಭಕ್ತರ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು. ಬಳಿಕ ತಹಸೀಲ್ದಾರ್ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.

    ತಹಸೀಲ್ದಾರ್ ಮಾತನಾಡಿ, ರಸ್ತೆಗೆ ಮಣ್ಣು ಸುರಿದು ವಾಹನಗಳ ಸಂಚಾರವನ್ನು ಯಾರೂ ತಡೆ ಮಾಡಬಾರದು. ಕರೊನಾ ಸೋಂಕಿನ ಭೀತಿ ಇದ್ದರೆ ತಾಲೂಕು ಆಡಳಿತವನ್ನು ಸಂಪರ್ಕಿಸಿ, ಸಮಸ್ಯೆ ಬಗೆಹರಿಸಿಕೊಳ್ಳಬೇಕು. ಮತ್ತೆ ಮರುಕಳಿಸಿದರೆ, ಪ್ರಕರಣ ದಾಖಲಿಸಿ ರಸ್ತೆ ಮುಚ್ಚಿದ್ದವರ ಪತ್ತೆ ಮಾಡಿ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದರು.

    ರಾಜ್ಯದ ಎಲ್ಲ ದೇವಸ್ಥಾನಗಳ ದೇವರ ದರ್ಶನಕ್ಕೆ ಸರ್ಕಾರ ಅನುಮತಿ ನೀಡಿದ್ದರಿಂದ ಭೂವರಹನಾಥಸ್ವಾಮಿ ದೇವಸ್ಥಾನಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ರಾಜ್ಯಾದ್ಯಂತ ಆಗಮಿಸುತ್ತಿದ್ದರು. ಅವರಲ್ಲಿ ಯಾರಿಗಾದರೂ ಕರೊನಾ ಸೋಂಕಿದ್ದರೆ ಸ್ಥಳೀಯರಿಗೆ ತಗಲುತ್ತದೆ ಎಂಬ ಆತಂಕದಿಂದ ಕಲ್ಲಹಳ್ಳಿಯ ಹೊರವಲಯದ ರಸ್ತೆಗೆ ಅಪರಿಚಿತರು ಮಣ್ಣು ಹಾಕಿ ವಾಹನ ಸಂಚಾರವನ್ನು ಸ್ಥಗಿತಗೊಳಿಸಿದ್ದರು.

    ಸ್ಥಳೀಯರೇ ರಸ್ತೆಗೆ ಮಣ್ಣು ಹಾಕಿದ್ದಾರೆ ಎನ್ನಲಾಗುತ್ತಿದೆ. ಅವರ ಪತ್ತೆಗಾಗಿ ತಹಸೀಲ್ದಾರ್ ಪ್ರಯತ್ನಿಸಿದ್ದರು ಪತ್ತೆ ಆಗಲಿಲ್ಲ. ಸುತ್ತಮುತ್ತಲಿನ ಜಮೀನಿನ ಮಾಲೀಕರನ್ನು ವಿಚಾರಿಸಿದರೂ ನಮಗೆ ಗೊತ್ತಿಲ್ಲ ಎಂದಿದ್ದಾರೆ.

    ರಾಜಸ್ವನಿರೀಕ್ಷಕ ರಾಜಮೂರ್ತಿ, ಕರವೇ ತಾಲೂಕು ಅಧ್ಯಕ್ಷ ವೇಣು, ಉಪಾಧ್ಯಕ್ಷ ಶ್ರೀನಿಧಿ ಶ್ರೀನಿವಾಸ್, ದೇವಸ್ಥಾನದ ವ್ಯವಸ್ಥಾಪಕ ಟ್ರಸ್ಟಿ ನಾಗೇಶ್‌ರಾವ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts