More

    ನಗರ ಆಯ್ಕೆ ಪ್ರಕ್ರಿಯೆ ನೀರಸ

    ಹರೀಶ್ ಮೋಟುಕಾನ ಮಂಗಳೂರು
    ಮಂಗಳೂರು ನಗರವನ್ನು ದೇಶದಲ್ಲೇ ಅತ್ಯುತ್ತಮ ನಗರವನ್ನಾಗಿ ಆಯ್ಕೆ ಮಾಡಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದ್ದು, ಈ ಆನ್‌ಲೈನ್ ಸರ್ವೇಗೆ ನೀರಸ ಸ್ಪಂದನೆ ವ್ಯಕ್ತವಾಗಿದೆ. ರಾಜ್ಯದಲ್ಲಿ ಮಂಗಳೂರು 5ನೇ ಸ್ಥಾನದಲ್ಲಿದೆ. ಸರ್ವೇಯಲ್ಲಿ ಪಾಲ್ಗೊಳ್ಳಲು ಇನ್ನೂ 19 ದಿನಗಳ ಕಾಲಾವಕಾಶವಿದೆ.

    ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಸುಲಲಿತ ಜೀವನ ಸೂಚ್ಯಂಕ ಘೋಷಣೆಗೆ ನ.9ರಿಂದ ಡಿ.23ರ ತನಕ ಅಭಿಯಾನ ಆರಂಭಿಸಿದೆ. ಮಂಗಳೂರು ಸ್ಮಾರ್ಟ್‌ಸಿಟಿಯೂ ಈ ಸ್ಪರ್ಧೆಗೆ ಇಳಿದಿದ್ದು, 24 ದಿನಗಳ ಅವಧಿಯಲ್ಲಿ ಶನಿವಾರದ ತನಕ 1150 ಮಂದಿಯಷ್ಟೇ ಸರ್ವೇಯಲ್ಲಿ ಪಾಲ್ಗೊಂಡಿದ್ದಾರೆ. ಅಧಿಕಾರಿಗಳ ಗುರಿ ಪ್ರಕಾರ ಇಷ್ಟು ದಿನಗಳಲ್ಲಿ ಕನಿಷ್ಠ 5 ಸಾವಿರ ಮಂದಿಯಾದರೂ ಸ್ಪಂದನೆ ನೀಡಬೇಕಿತ್ತು. ಈ ಅಭಿಯಾನ ರಾಜ್ಯದ ಇತರ ಜಿಲ್ಲೆಗಳಾದ ಶಿವಮೊಗ್ಗ(1573), ಬೆಳಗಾವಿ(1903), ತುಮಕೂರು(676), ದಾವಣಗೆರೆ(1567), ಕಲಬುರಗಿ(235), ವಿಜಯಪುರ(266), ಮೈಸೂರು(348), ಬೆಂಗಳೂರು(19555),ಹುಬ್ಬಳ್ಳಿ-ಧಾರವಾಡದಲ್ಲಿಯೂ(559)ನಡೆಯುತ್ತಿದೆ. ಸರ್ವೇಯಲ್ಲಿ ಬೆಂಗಳೂರು ಮೊದಲ ಸ್ಥಾನದಲ್ಲಿದ್ದರೆ, ಕಲಬುರಗಿ ಕೊನೇ ಸ್ಥಾನದಲ್ಲಿದೆ. ಬೆಳಗಾಗಿ 2ನೇ, ಶಿವಮೊಗ್ಗ 3ನೇ ಹಾಗೂ ದಾವಣಗೆರೆ 4ನೇ ಸ್ಥಾನದಲ್ಲಿವೆ. ನಗರದ ಗುಣಮಟ್ಟದ ಆಧಾರದಲ್ಲಿ ಕೇಂದ್ರ ಸರ್ಕಾರ ಉತ್ತಮ ನಗರ ಎಂಬ ಪ್ರಶಸ್ತಿ ನೀಡುತ್ತದೆ.

    ಮಂಗಳೂರು ಸ್ಮಾರ್ಟ್‌ಸಿಟಿಯು ಸುಲಲಿತ ಜೀವನ ಸೂಚ್ಯಂಕ ಅಭಿಯಾನದ ಜತೆ ಈಗಾಗಲೇ ಮತ್ತೆರಡು ಅಭಿಯಾನದಲ್ಲಿ ಸ್ಪರ್ಧಿಸುತ್ತಿದೆ. ಮುಖ್ಯವಾಗಿ ನಗರದಲ್ಲಿರುವ ಸಾರಿಗೆ ವ್ಯವಸ್ಥೆಯನ್ನು ಮತ್ತಷ್ಟು ಜನಪ್ರಿಯಗೊಳಿಸಲು ಕೇಂದ್ರ ಸರ್ಕಾರದಿಂದ ಸ್ಮಾರ್ಟ್‌ಸಿಟಿ ನಗರಗಳಿಗೆ ಆಯೋಜಿಸಿರುವ ‘ಟ್ರಾನ್ಸ್‌ಪೋರ್ಟ್4ಆಲ್’ ಅಭಿಯಾನ ನಡೆಯುತ್ತಿದೆ. ಅದೇ ರೀತಿ, ನಗರದ ಮಾದರಿ ಬೀದಿಗಳಾಗಿ ನಿರ್ಮಾಣ ಮಾಡುವ ನಿಟ್ಟಿನಲ್ಲಿ ‘ಸ್ಟ್ರೀಟ್’ ಅಭಿಯಾನವನ್ನೂ ನಡೆಸುತ್ತಿದೆ.

    ಕಳೆದ ವರ್ಷ ಪಡೆದ ಅಂಕವೆಷ್ಟು?: ಮಂಗಳೂರು ಮಹಾನಗರ ಪಾಲಿಕೆ ಕಳೆದ ವರ್ಷ ಸುಲಲಿತ ಜೀವನ ಸೂಚ್ಯಂಕದಲ್ಲಿ 53.59 ಅಂಕದೊಂದಿಗೆ 20ನೇ ಸ್ಥಾನ ಪಡೆದುಕೊಂಡಿತ್ತು. ಜೀವನ ಗುಣಮಟ್ಟದಲ್ಲಿ 54.78 ಅಂಕ, ಆರ್ಥಿಕ ಸಾಮರ್ಥ್ಯದಲ್ಲಿ 11.96. ಸುಸ್ಥಿರತೆ 50.31, ಸಾರ್ವಜನಿಕ ಸಹಭಾಗಿತ್ವದಲ್ಲಿ 76.40 ಅಂಕ ಪಡೆದುಕೊಂಡಿತ್ತು. ಪೌರಾಡಳಿತ ಕಾರ್ಯದಕ್ಷತೆ ಸೂಚ್ಯಂಕದಲ್ಲಿ 38.16 ಅಂಕದೊಂದಿಗೆ 42ನೇ ಸ್ಥಾನ, ಸೇವೆಯಲ್ಲಿ 52.61 ಅಂಕ, ಹಣಕಾಸು ವಿಭಾಗದಲ್ಲಿ 56.58, ತಾಂತ್ರಿಕತೆ 18.70, ಯೋಜನೆಯಲ್ಲಿ 15.67 ಮತ್ತು ಆಡಳಿತದಲ್ಲಿ 31.04 ಅಂಕ ಪಡೆದುಕೊಂಡಿತ್ತು.

    ಭಾಗವಹಿಸುವುದು ಹೇಗೆ?: ನ.9ರಂದು ಆರಂಭಗೊಂಡ ಸಾರ್ವಜನಿಕರ ಆನ್‌ಲೈನ್ ಸರ್ವೇ ಡಿ.23ರ ತನಕ ನಡೆಯಲಿದೆ. ಸಾರ್ವಜನಿಕರು ಛಿಟ್ಝ2022.ಟ್ಟಜ ವೆಬ್‌ಸೈಟ್ ಅಥವಾ ಕ್ಯೂ ಆರ್ ಕೋಡ್ ಉಪಯೋಗಿಸಿ ಸರ್ವೇಯಲ್ಲಿ ಭಾಗವಹಿಸಬಹುದು. ಕ್ಲಿಕ್ ಮಾಡಿದ ಕೂಡಲೇ ಸರ್ವೇ ಪುಟ ತೆರೆಯುತ್ತದೆ. ಅಲ್ಲಿ, ಭಾಷೆ, ಹೆಸರು, ಉದ್ಯೋಗ, ರಾಜ್ಯ, ನಗರ ಸೇರಿದಂತೆ ಮೊದಲ ಪುಟ ಭರ್ತಿ ಮಾಡಬೇಕು. ಮುಂದಿನ ಪುಟದಲ್ಲಿ ನಗರ ಕೇಂದ್ರಿತ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಇವುಗಳಿಗೆ ಆಯ್ಕೆಯನ್ನು ಕ್ಲಿಕ್ ಮಾಡಿ ತಮ್ಮ ಅಭಿಪ್ರಾಯ ಮಂಡಿಸಬಹುದಾಗಿದೆ.

    ಸುಲಲಿತ ಜೀವನ ಸೂಚ್ಯಂಕದಲ್ಲಿ ಮಂಗಳೂರು ನಗರವೂ ಸ್ಪರ್ಧಿಸುತ್ತಿದೆ. ಸಾರ್ವಜನಿಕರ ಸಹಭಾಗಿತ್ವ ಅಗತ್ಯ. ಸಾರ್ವಜನಿಕರು ಲಿಂಕ್ ತೆರೆಯುವ ಮೂಲಕ ತಮ್ಮ ಅಭಿಪ್ರಾಯಗಳನ್ನು ದಾಖಲಿಸಲು ಅವಕಾಶವಿದೆ. ಸುಮಾರು 10 ಸಾವಿರ ಮಂದಿ ಸಾರ್ವಜನಿಕ ರಾದರೂ ಸ್ಪರ್ಧಿಸಬೇಕು ಎಂಬ ಗುರಿ ಹೊಂದಿದ್ದೇವೆ.
    – ಅರುಣ್ ಪ್ರಭ, ಸ್ಮಾರ್ಟ್‌ಸಿಟಿ ಜನರಲ್ ಮ್ಯಾನೇಜರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts