More

    ಸೀ-ರಿವರ್ ಲಿಂಕ್ ಬ್ರಿಡ್ಜ್ ಮರೀಚಿಕೆ, ಪಾದಚಾರಿ ತೂಗುಸೇತುವೆ ಯೋಜನೆ ಕೈಬಿಟ್ಟ ಸ್ಮಾರ್ಟ್‌ಸಿಟಿ

    ಶ್ರವಣ್‌ಕುಮಾರ್ ನಾಳ ಮಂಗಳೂರು

    ಮಂಗಳೂರು ನಗರದಲ್ಲಿ ಪ್ರವಾಸೋದ್ಯಮ ಉತ್ತೇಜನಕ್ಕೆ ಪೂರಕವಾಗಿ ಸುಲ್ತಾನ್ ಬತ್ತೇರಿಯಿಂದ ತಣ್ಣೀರುಬಾವಿ ಸಂಪರ್ಕಿಸುವ ಪೆಡೆಸ್ಟ್ರಿಯನ್ ಸೀ-ರಿವರ್ ಲಿಂಕ್ ಬ್ರಿಡ್ಜ್ ಯೋಜನೆಯನ್ನು ಸ್ಮಾರ್ಟ್‌ಸಿಟಿ ಅಧಿಕೃತವಾಗಿ ಕೈಬಿಟ್ಟಿದೆ.

    ಸುಲ್ತಾನ್ ಬತ್ತೇರಿಯಿಂದ ತಣ್ಣೀರುಬಾವಿ ಮಧ್ಯೆ ಇರುವ ಫಲ್ಗುಣಿ ನದಿಗೆ ಸ್ಮಾರ್ಟ್‌ಸಿಟಿ ಯೋಜನೆ ಮೂಲಕ 40.31 ಕೋಟಿ ರೂ ವೆಚ್ಚದಲ್ಲಿ ಪೆಡೆಸ್ಟ್ರಿಯನ್ ಸೀ-ರಿವರ್ ಲಿಂಕ್ ಬ್ರಿಡ್ಜ್ ನಿರ್ಮಿಸುವ ಯೋಜನೆಯಿತ್ತು. ಇದೊಂದು ಪಾದಚಾರಿ ತೂಗುಸೇತುವೆ ಯೋಜನೆಯಾಗಿದ್ದು, ಇದು ತಣ್ಣೀರುಬಾವಿ ಬೀಚ್‌ಗೆ ಪ್ರಯಾಣದ ದೂರವನ್ನು ಕಡಿಮೆ ಮಾಡಬಲ್ಲ ಸಂಪರ್ಕವಾಗಿದೆ. ಆದರೆ ಪಾದಚಾರಿ ತೂಗು ಸೇತುವೆಗೆ ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗಿದ್ದರಿಂದ ಸ್ಮಾರ್ಟ್ ಸಿಟಿ ಈ ಯೋಜನೆಯನ್ನು ಅಧಿಕೃತವಾಗಿ ಕೈಬಿಟ್ಟಿದೆ.

    ಪ್ರವಾಸೋದ್ಯಮಕ್ಕೆ ಪೂರಕ

    ಸುಲ್ತಾನ್‌ಬತ್ತೇರಿಯಿಂದ ತಣ್ಣೀರುಬಾವಿ ಪಾದಚಾರಿ ತೂಗುಸೇತುವೆ ಯೋಜನೆ ಪ್ರವಾಸೋದ್ಯಮಕ್ಕೆ ಪೂರಕ ಯೋಜನೆಯಾಗಿದ್ದರೂ ಸ್ಥಳೀಯರಿಗೆ ಇದರಿಂದ ಪ್ರಯೋಜನವಿಲ್ಲ ಎಂಬುವುದು ಆರೋಪ. ಪಾದಚಾರಿ ತೂಗುಸೇತುವೆ ನಿರ್ಮಾಣದಿಂದ ಈಗ ಇದ್ದ ಫೆರಿ ಬೋಟ್ ವ್ಯವಸ್ಥೆ ಸ್ಥಗಿತಗೊಳ್ಳುವ ಸಾಧ್ಯತೆಯಿದ್ದು, ಸುಲ್ತಾನ್‌ಬತ್ತೇರಿ- ತಣ್ಣೀರುಬಾವಿ ವೇಗದ ಸಂಚಾರಕ್ಕೆ ತೊಡಕಾಗಬಹುದು. ಸುಲ್ತಾನ್ ಬತ್ತೇರಿಯಿಂದ ತಣ್ಣೀರು ಬಾವಿಗೆ ಸಂಚರಿಸಲು ಫೆರಿ ಬೋಟ್ ಅಥವಾ ಕೂಳೂರು ಬ್ರಿಜ್ ರಸ್ತೆ ಮೂಲಕ ಸಾಧ್ಯವಿದ್ದು, ಸ್ಮಾರ್ಟ್‌ಸಿಟಿ ಮೂಲಕ ಫಲ್ಗುಣಿ ನದಿಗೆ ಸಂಚಾರಿ ಸೇತುವೆ ನಿರ್ಮಿಸಿ ಎಂಬುವುದು ಸಾರ್ವಜನಿಕರ ಆಗ್ರಹ.

    ——–

    ಸ್ಟೀಲ್ ಆ್ಯಂಡ್ ಸ್ಟೀಲ್ ಕೇಬಲ್

    ಸುಲ್ತಾನ್‌ಬತ್ತೇರಿಯಿಂದ ತಣ್ಣೀರುಬಾವಿ ಸಂಪರ್ಕಸುವ ಪ್ರಸ್ತಾವಿತ ಪೆಡೆಸ್ಟ್ರಿಯನ್ ಸೀ-ರಿವರ್ ಲಿಂಕ್ ಬ್ರಿಡ್ಜ್ ಉದ್ದ 260 ಮೀ ಮತ್ತು ಅಗಲ 3 ಮೀ ಆಗಿರುತ್ತದೆ. ಹೈಫ್ಲಡ್ ಲೆವೆಲ್ ಮೇಲಿರುವ ಸೇತುವೆಯ ಎತ್ತರ 15 ಮೀ. ಆಗಿದ್ದು, ಎರಡೂ ದಡಗಳಿಂದ ರ‌್ಯಾಂಪ್ ಮೂಲಕ ಸೇತುವೆಗೆ ಸಂಪರ್ಕ ಕಲ್ಪಿಸಲಾಗಿದೆ. ಇದು 2 ಲಿಫ್ಟ್‌ಗಳನ್ನು ಹೊಂದಿದ್ದು, ಸೇತುವೆಯನ್ನು 2 ಸ್ಟೀಲ್ ಟವರ್‌ಗಳೊಂದಿಗೆ ಆರ್‌ಸಿಸಿ ಫೌಂಡೇಶನ್‌ನಿಂದ ನಿರ್ಮಿಸಲಾಗುತ್ತದೆ. ಈ ಸೇತುವೆಯನ್ನು ಬೃಹತ್ ಸ್ಟೀಲ್ ಆ್ಯಂಡ್ ಸ್ಟೀಲ್ ಕೇಬಲ್‌ಗಳಲ್ಲಿ ನಿರ್ಮಿಸುವ ಯೋಜನೆ ರೂಪಿಸಲಾಗಿತ್ತು.

    ——-

    ರೋಡ್ ಬ್ರಿಡ್ಜ್‌ಗೆ ಪ್ರಸ್ತಾವನೆ

    ತೂಗುಸೇತುವೆ ಯೋಜನೆ ಕೈಬಿಟ್ಟ ಸ್ಮಾರ್ಟ್‌ಸಿಟಿಯಿಂದ ಸುಮಾರು 40 ಕೋಟಿ ರೂ ವೆಚ್ಚದಲ್ಲಿ ಸೀ-ರಿವರ್ ರೋಡ್ ಬ್ರಿಡ್ಜ್‌ಗೆ ಪ್ರಸ್ತಾವನೆ ಸಿದ್ಧಗೊಂಡಿದೆ. ಈ ಯೋಜನೆ ಕಾರ್ಯಗತಗೊಳ್ಳಲು ಸಿಆರ್‌ಜಡ್ ಅನುಮತಿ ಅಗತ್ಯವಿದೆ. ಕೆಲವು ಅಗತ್ಯ ಬದಲಾವಣೆಯನ್ನು ಸಿಆರ್‌ಜಡ್ ಬಯಸಿದ್ದಲ್ಲಿ ಸೀ-ರಿವರ್ ರೋಡ್ ಬ್ರಿಡ್ಜ್ ಯೋಜನಾ ವೆಚ್ಚ ಹೆಚ್ಚಾಗುವ ಸಾಧ್ಯತೆ ಇದೆ. ಈ ಯೋಜನೆ ಕಾರ್ಯಗತವಾದರೆ ಸುಲ್ತಾನ್ ಬತ್ತೇರಿಯಿಂದ ತಣ್ಣೀರುಬಾವಿಗೆ ಫಲ್ಗುಣಿ ನದಿ ಮೂಲಕ ವಾಹನಗಳಲ್ಲಿ ಸುಲಭವಾಗಿ ಸಂಚರಿಸಬಹುದು.

    ——–

    ಸಾರ್ವಜನಿಕರ ವಿರೋಧವಿದ್ದುದರಿಂದ ಸುಲ್ತಾನ್‌ಬತ್ತೇರಿಯಿಂದ ತಣ್ಣೀರು ಬಾವಿ ಸಂಪರ್ಕಿಸುವ ಪಾದಚಾರಿ ತೂಗುಸೇತುವೆ ಯೋಜನೆ ಕೈಬಿಡಲಾಗಿದೆ. ಈ ಯೋಜನೆಯ ಬದಲು ಸೀ-ರಿವರ್ ರೋಡ್ ಬ್ರಿಡ್ಜ್‌ಗೆ ಪ್ರಸ್ತಾವನೆ ಸಿದ್ಧಗೊಂಡಿದೆ. ಸಿಆರ್‌ಜಡ್ ಅನುಮತಿ ಸಿಕ್ಕ ಕೂಡಲೇ ಟೆಂಡರ್ ಕರೆಯಲಾಗುವುದು.

    ಅರುಣ್ ಪ್ರಭ ಕೆ.ಎಸ್, ಪ್ರಧಾನ ವ್ಯವಸ್ಥಾಪಕ ಸ್ಮಾರ್ಟ್‌ಸಿಟಿ ಮಂಗಳೂರು

    ——

    ಪಾದಚಾರಿ ತೂಗುಸೇತುವೆ ಬದಲಾಗಿ ಅದೇ ವೆಚ್ಚದಲ್ಲಿ ಸೀ-ರಿವರ್ ರೋಡ್ ಬ್ರಿಡ್ಜ್ ಯೋಜನೆ ಕೈಗೊಳ್ಳುವಂತೆ ಸಾರ್ವಜನಿಕರಿಂದ ಬೇಡಿಕೆ ಬಂದಿದೆ. ಈ ಹಿನ್ನೆಲೆಯಲ್ಲಿ ತೂಗು ಸೇತುವೆ ಕೈ ಬಿಡಲಾಗಿದೆ. ಸದ್ಯ ಸಿಆರ್‌ಜಡ್ ಅನುಮತಿಗಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುಮತಿ ಸಿಕ್ಕ ತಕ್ಷಣ ಕಾಮಗಾರಿ ಆರಂಭಗೊಳ್ಳಲಿದೆ.

    ವೇದವ್ಯಾಸ ಕಾಮತ್ ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts