More

    ಸ್ಮಾರ್ಟ್‌ಸಿಟಿ ಇ-ಶೌಚಗೃಹ ಬಂದ್!

    ಬೆಳಗಾವಿ: ಸ್ಮಾರ್ಟ್‌ಸಿಟಿ ಯೋಜನೆಯಡಿ ನಗರದ ವಿವಿಧೆಡೆ ನಿರ್ಮಿಸಿದ್ದ ಇ-ಶೌಚಗೃಹಗಳು ಮೂರು ವರ್ಷಗಳಿಂದ ಬಾಗಿಲು ಮುಚ್ಚಿವೆ. ನಗರದಲ್ಲಿದ್ದ ಹಲವು ಸಾರ್ವಜನಿಕ ಶೌಚಗೃಹಗಳು ನಿರ್ವಹಣೆ ಕೊರತೆಯಿಂದ ಬಳಲುತ್ತಿದ್ದವು. ಇದರಿಂದಾಗಿ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿತ್ತು. ಅದಕ್ಕೆ ಪರಿಹಾರ ಒದಗಿಸಲು 2018ರಲ್ಲಿ ಸ್ಮಾರ್ಟ್‌ಸಿಟಿ ಯೋಜನೆಯಡಿ ಇಲ್ಲಿನ ಧರ್ಮವೀರ ಸಂಭಾಜಿ ವೃತ್ತ, ಎರಡನೇ ರೈಲ್ವೆ ಗೇಟ್ ಬಳಿ ಕಾಂಗ್ರೆಸ್ ರಸ್ತೆಯಲ್ಲಿ 6 ಇ-ಟಾಯ್ಲೆಟ್ ನಿರ್ಮಿಸಲಾಗಿತ್ತು. ಅದಕ್ಕೆ ಒಟ್ಟಾರೆಯಾಗಿ 45 ಲಕ್ಷ ರೂ. ವೆಚ್ಚವಾಗಿತ್ತು. ಅತ್ಯಾಧುನಿಕ ತಂತ್ರಜ್ಞಾನ ಬಳಸಿ ನಿರ್ಮಿಸಿದ ಈ ಶೌಚಗೃಹ ಪರಿಸರ ಸ್ನೇಹಿಯಾಗಿವೆ.

    ಪ್ರವೇಶದ್ವಾರದಲ್ಲಿ 1 ರೂ.ನಾಣ್ಯ ಹಾಕಿದರೆ ಮೂತ್ರ ವಿಸರ್ಜನೆಗೆ ಮತ್ತು 5 ರೂ. ನಾಣ್ಯ ಹಾಕಿದರೆ ಶೌಚಕ್ಕೆ ಬಳಸಬಹುದು. ಜನನಿಬಿಡ ಪ್ರದೇಶದಲ್ಲೇ ನಿರ್ಮಿಸಿದ್ದರಿಂದ ಜನರಿಗೂ ಅನುಕೂಲವಾಗಿತ್ತು. ಆದರೆ, ಈ ಶೌಚಗೃಹಗಳು ಮುಚ್ಚಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

    ಪಾಲಿಕೆಗೆ ಹಸ್ತಾಂತರ: ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ ನಿರ್ಮಿಸಿದ್ದ ಇ-ಟಾಯ್ಲೆಟ್‌ಗಳು ಅಗತ್ಯ ಸೌಕರ್ಯ ಹೊಂದಿವೆ. ನಿರ್ವಹಣೆಗಾಗಿ 2019ರ ಡಿಸೆಂಬರ್‌ನಲ್ಲೇ ಮಹಾನಗರ ಪಾಲಿಕೆಗೆ ಹಸ್ತಾಂತರಿಸಿದ್ದೇವೆ ಎಂದು ಸ್ಮಾರ್ಟ್‌ಸಿಟಿ ಯೋಜನೆ ಅಧಿಕಾರಿಗಳು ಹೇಳುತ್ತಾರೆ. ಆದರೆ, ಪಾಲಿಕೆ ಅಧಿಕಾರಿಗಳ ಬಳಿ ಈ ಬಗ್ಗೆ ನಿಖರವಾದ ಮಾಹಿತಿ ಇಲ್ಲ. ಮಹಾನಗರ ಪಾಲಿಕೆ ಹಾಗೂ ಸ್ಮಾರ್ಟ್‌ಸಿಟಿ ಯೋಜನೆ ಅಧಿಕಾರಿಗಳಲ್ಲಿನ ಸಮನ್ವಯ ಕೊರತೆಯಿಂದಾಗಿ ಈ ಶೌಚಗೃಹಗಳು ಹಾಳಾಗಿವೆ. ಸರ್ಕಾರಿ ಅನುದಾನ ಅಪವ್ಯಯವಾಗುತ್ತಿದೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿಬರುತ್ತಿದೆ.

    ಧರ್ಮವೀರ ಸಂಭಾಜಿ ವೃತ್ತ ಸದಾ ಜನದಟ್ಟಣೆಯಿಂದ ಕೂಡಿರುತ್ತದೆ. ದಕ್ಷಿಣ ಕ್ಷೇತ್ರದ ವಿವಿಧ ಬಡಾವಣೆಗಳು, ಪೀರನವಾಡಿ, ಮಚ್ಛೆ, ಖಾನಾಪುರಕ್ಕೆ ಹೋಗುವ ನೂರಾರು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಇಲ್ಲಿ ಬಸ್‌ಗಾಗಿ ಕಾಯುತ್ತ ನಿಲ್ಲುತ್ತಾರೆ. ಆದರೆ, ಇ-ಟಾಯ್ಲೆಟ್ ತೆರೆಯದ್ದರಿಂದ ಸಮಸ್ಯೆಯಾಗಿದೆ. ಮಹಿಳೆಯರ ಕಷ್ಟವಂತೂ ಹೇಳತೀರದಂತಿದೆ.

    ಮಾರುಕಟ್ಟೆ ಪ್ರದೇಶದಲ್ಲಿ ಸಾರ್ವಜನಿಕ ಶೌಚಗೃಹಗಳ ಕೊರತೆ ಹೆಚ್ಚಿದೆ. ಇದರಿಂದಾಗಿ ಸ್ಥಳೀಯರು ಮತ್ತು ವ್ಯಾಪಾರಸ್ಥರು ಪರದಾಡುವಂತಾಗಿದೆ. ಅಂತಹ ಕಡೆಗಳಲ್ಲಿ ಸಾರ್ವಜನಿಕ ಶೌಚಗೃಹ ಮತ್ತು ಇ-ಟಾಯ್ಲೆಟ್ ಆದ್ಯತೆ ಮೇರೆಗೆ ನಿರ್ಮಿಸಬೇಕು.
    | ವೀರೇಂದ್ರ ಕಮಡೊಳ್ಳಿ, ಸ್ಥಳೀಯ ನಾಗರಿಕ

    ಇ-ಟಾಯ್ಲೆಟ್‌ಗಳನ್ನು ನಿರ್ಮಿಸಿರುವ ಸ್ಥಳಕ್ಕೆ ಹೋಗಿ ಸ್ಥಿತಿ-ಗತಿ ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚಿಸುತ್ತೇನೆ. ಈ ಶೌಚಗೃಹಗಳು ಹಾಳಾಗಿದ್ದರೆ ಸರಿಪಡಿಸಿ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಲು ಕ್ರಮ ಕೈಗೊಳ್ಳುತ್ತೇವೆ.
    | ರುದ್ರೇಶ ಘಾಳಿ, ಆಯುಕ್ತ ಮಹಾನಗರ ಪಾಲಿಕೆ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts