More

    ಸಭೆಗೆ ಜಿಲ್ಲಾಧಿಕಾರಿ ಕರೆಸಲು ಆಗ್ರಹ; ನಗರಸಭೆ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಸದಸ್ಯರ ಆಕ್ರೋಶ

    ರಾಣೆಬೆನ್ನೂರ: ನಗರಸಭೆಗೆ ಜಿಲ್ಲಾಧಿಕಾರಿಯವರು ಅಧ್ಯಕ್ಷರಾಗಿ ನೇಮಕಗೊಂಡ ದಿನದಿಂದ ಈವರೆಗೂ ಬಂದಿಲ್ಲ. ಸದಸ್ಯರ ಹಾಗೂ ನಗರದ ಜನತೆಯ ಸಮಸ್ಯೆ ಆಲಿಸಿಲ್ಲ. ಸದ್ಯ ಬರಗಾಲವಿದೆ. ನೀರಿನ ಸಮಸ್ಯೆ ಬಗೆಹರಿಸಬೇಕಿದೆ. ಆದ್ದರಿಂದ ಬಜೆಟ್ ಪೂರ್ವಭಾವಿ ಸಭೆಗೆ ಜಿಲ್ಲಾಧಿಕಾರಿ ಬರಲೇಬೇಕು. ಇಲ್ಲವಾದರೆ ಸಭೆ ಮುಂದೂಡಿ ಎಂದು ನಗರಸಭೆ ಸದಸ್ಯರು ಆಗ್ರಹಿಸಿದರು.
    ಇಲ್ಲಿಯ ನಗರಸಭೆ ಸಭಾಭವನದಲ್ಲಿ ಬುಧವಾರ ಏರ್ಪಡಿಸಿದ್ದ 2023-24ನೇ ಸಾಲಿನ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಈ ವಿಚಾರ ಪ್ರಸ್ತಾಪಿಸಿದ ಎಲ್ಲ ಸದಸ್ಯರು ಜಿಲ್ಲಾಧಿಕಾರಿ ಅವರನ್ನು ಕರೆಸುವಂತೆ ಆಯುಕ್ತರ ಎದುರು ಪಟ್ಟುಹಿಡಿದರು.
    ಸಭೆ ಆರಂಭದಲ್ಲಿ ಸದಸ್ಯ ಮಲ್ಲಣ್ಣ ಅಂಗಡಿ ಮಾತನಾಡಿ, ಸಭೆಯಲ್ಲಿ ಏನಾದರೂ ಸಮಸ್ಯೆ ಬಗ್ಗೆ ಹೇಳಿಕೊಂಡರೆ ಅಥವಾ ಬಾಕಿ ದಿನದಲ್ಲೂ ಸಮಸ್ಯೆ ಕುರಿತು ಚರ್ಚಿಸಲು ಬಂದರೆ ಜಿಲ್ಲಾಧಿಕಾರಿಯವರನ್ನು ಕೇಳಬೇಕು ಎನ್ನುತ್ತಿದ್ದೀರಿ. ಆದ್ದರಿಂದ ನಮಗೆ ಸ್ಪಷ್ಟೀಕರಣ ಬೇಕಿದೆ. ಸಭೆಗೆ ಜಿಲ್ಲಾಧಿಕಾರಿಯವರನ್ನು ಕರೆಯಿಸಿ ನಂತರ ಸಭೆ ಮುಂದುವರಿಸಿ ಎಂದು ಆಗ್ರಹಿಸಿದರು.
    ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತ ನಿಂಗಪ್ಪ ಕುಮ್ಮಣ್ಣನವರ, ಸಭೆ ನಡೆಸಲು ಜಿಲ್ಲಾಧಿಕಾರಿಯವರು ನಮಗೆ ಅಧಿಕಾರ ಕೊಟ್ಟಿದ್ದಾರೆ. ಬಜೆಟ್ ಪೂರ್ವಭಾವಿ ಸಭೆಗೆ ಅವರು ಬರಲ್ಲ. ಬಜೆಟ್ ಮಂಡನೆ ದಿನದಂದು ಅವರೇ ಬರಲಿದ್ದಾರೆ ಎಂದರು.
    ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಸದಸ್ಯ ನೂರವುಲ್ಲಾ ಖಾಜಿ, 12ನೇ ವಾರ್ಡ್‌ನಲ್ಲಿ ನಯಾಪೈಸೆ ಕೆಲಸ ಆಗಿಲ್ಲ. ನಗರದಲ್ಲಿ ದೊಡ್ಡ ದೊಡ್ಡ ದುರಂತ ಸಂಭವಿಸಿದರೂ ಜಿಲ್ಲಾಧಿಕಾರಿ ಬಂದಿಲ್ಲ. ಹಾವೇರಿ ನಗರಸಭೆಗೆ ಬರುವ ಜಿಲ್ಲಾಧಿಕಾರಿ ರಾಣೆಬೆನ್ನೂರಗೆ ಯಾಕೆ ಬರಲ್ಲ ಎಂದು ಪ್ರಶ್ನಿಸಿದರು.
    ಮತ್ತೊಬ್ಬ ಸದಸ್ಯ ಸಿದ್ದಪ್ಪ ಬಾಗಲರ ಮಾತನಾಡಿ, ಸದಸ್ಯರಿಗೆ ನೀವು ಏನು ಗೌರವ ಕೊಟ್ಟಿದ್ದಿರಿ. ಯಾವ ಕೆಲಸ ಮಾಡಿದ್ದೀರಿ. ನಿಮ್ಮ ಜತೆ ನಿತ್ಯವೂ ಸಭೆ ಮಾಡುತ್ತೇವೆ. ಆದರೆ, ಯಾವ ಕೆಲಸ ಆಗುತ್ತಿಲ್ಲ. ಆದ್ದರಿಂದ ಡಿಸಿ ಕರೆಯಿಸಿ ನಂತರ ಸಭೆ ಮಾಡಿ ಎಂದರು.
    ಇದಕ್ಕೆ ಧ್ವನಿಗೂಡಿಸಿದ ಸದಸ್ಯ ರಮೇಶ ಕರಡೆಣ್ಣನವರ, ಏನು ಕೇಳಿದರೂ ಇಂಜಿನಿಯರ್‌ನ ಕೇಳಬೇಕು ಅಂತಾ ಗುಡಿಸಲುಮನೆ ಅವರ ಕಡೆ ಬೊಟ್ಟು ಮಾಡುತ್ತಿದ್ದೀರಿ. ನಗರಸಭೆ ಅಧಿಕಾರಿಗಳದ್ದೋ, ಸಾರ್ವಜನಕರದ್ದೋ ಗೊತ್ತಾಗುತ್ತಿಲ್ಲ. ಆದ್ದರಿಂದ ಡಿಸಿ ಕರೆಯಿಸಿ ನಾವು ಸಮಸ್ಯೆ ಹೇಳಿಕೊಳ್ಳಬೇಕು ಎಂದು ಆಗ್ರಹಿಸಿದರು.
    ಇದರಿಂದಾಗಿ ಪೂರ್ವಭಾವಿ ಸಭೆಯಲ್ಲಿ ಅರ್ಧ ಗಂಟೆಗೂ ಅಧಿಕ ಕಾಲ ಗೊಂದಲದ ವಾತಾವರಣ ಸೃಷ್ಠಿಯಾಗಿ ಬಜೆಟ್ ಬಗ್ಗೆ ಸಲಹೆ, ಸೂಚನೆ ಕೊಡಲು ಬಂದಿದ್ದ ಸಾರ್ವಜನಿಕರು ಸುಮ್ಮನೆ ಕುಳಿತುಕೊಳ್ಳುವಂತಾಯಿತು.
    ನಂತರ ಸದಸ್ಯ ಪುಟ್ಟಪ್ಪ ಮರಿಯಮ್ಮನವರ ಮಾತನಾಡಿ, ಇದು ಬಜೆಟ್ ಪೂರ್ವಭಾವಿ ಸಭೆಯಾಗಿದೆ. ಆದ್ದರಿಂದ ಸಾರ್ವಜನಿಕರಿಗೆ ಸಮಸ್ಯೆ ಹೇಳಿಕೊಳ್ಳಲು ಅವಕಾಶ ಮಾಡಿಕೊಡಿ. ನಂತರದ ಸಭೆಯಲ್ಲಿ ಡಿಸಿ ಕರೆಸಲು ಬರುತ್ತದೆ ಎಂದು ಮನವಿ ಮಾಡಿದರು. ಇದಕ್ಕೆ ಒಪ್ಪಿದ ಸದಸ್ಯರು ಸಾರ್ವಜನಿಕರಿಗೆ, ಸಲಹೆ ಸೂಚನೆ ನೀಡಲು ಅವಕಾಶ ಮಾಡಿಕೊಟ್ಟರು.
    ಬಜೆಟ್‌ನಲ್ಲಿ ಬೇಡಿಕೆಯಿಟ್ಟ ಜನತೆ…
    ರಾಜ ಕಾಲುವೆಯಲ್ಲಿ ಗಿಡಗಳು ಬೆಳೆದಿವೆ. ಅವುಗಳನ್ನು ದುರಸ್ತಿ ಪಡಿಸಿದರೆ ಮಳೆಗಾಲದಲ್ಲಿ ನೀರು ಸರಾಗವಾಗಿ ಹರಿದು ರಸ್ತೆ ಮೇಲೆ ನೀರು ಹರಿಯವುದನ್ನು ತಡೆಯಲು ಸಾಧ್ಯವಾಗಲಿದೆ. ಬಸ್ ನಿಲ್ದಾಣ ಅಗಲೀಕರಣ ಮಾಡಬೇಕು. ಸಾರ್ವಜನಿಕರ ಬಳಕೆಗೆ ತಹಸೀಲ್ದಾರ್ ಕಚೇರಿ ಸೇರಿ ವಿವಿಧ ಸ್ಥಳದಲ್ಲಿ ಶೌಚಗೃಹ ನಿರ್ಮಿಸಬೇಕು.
    ಭದ್ರತಾ ದೃಷ್ಟಿಯಿಂದ ಪ್ರಮುಖ ಸ್ಥಳದಲ್ಲಿ ಸಿಸಿ ಕ್ಯಾಮರಾ ಅಳವಡಿಸಬೇಕು. ರೈಲ್ವೆ ನಿಲ್ದಾಣದಿಂದ ಮುಖ್ಯ ಬಸ್ ನಿಲ್ದಾಣದವರೆಗೆ ಎರಡು ಸ್ಥಳೀಯ ಬಸ್ ನಿಲ್ದಾಣ ಮಾಡಬೇಕು. ಅಲ್ಲಲ್ಲಿ ಶೌಚಗೃಹದ ವ್ಯವಸ್ಥೆ ಮಾಡಬೇಕು. ಮುನ್ಸಿಪಲ್ ಮೈದಾನ ಅಭಿವೃದ್ಧಿ ಪಡಿಸಬೇಕು. ಪಾರ್ಕ್‌ಗಳನ್ನು ಅಭಿವೃದ್ಧಿ ಪಡಿಸಬೇಕು ಎಂಬುದು ವಿವಿಧ ಬೇಡಿಕೆಗಳನ್ನು ಸಾರ್ವಜನಿಕರು ಆಯುಕ್ತರ ಮುಂದಿಟ್ಟರು.
    ಕಳೆದ ವರ್ಷದ ಬಜೆಟ್‌ನಲ್ಲಿ ಸಾರ್ವಜನಿಕರ ಹಿತಾಸಕ್ತಿಗೆ ಸಂಬಂಧಿಸಿದಂತೆ ಹಲವಾರು ಕ್ರಮಗಳನ್ನು ಕೈಗೊಳ್ಳುವುದಾಗಿ ತಿಳಿಸಲಾಗಿತ್ತು. ಆದರೆ ಬಜೆಟ್‌ನಲ್ಲಿ ಯಾವುದೇ ಸಲಹೆಗಳು ಜಾರಿಗೆ ಬಂದಿಲ್ಲ ಎಂದು ಕೆಲವರು ಆರೋಪಿಸಿದರು.
    ನಗರದ ವಿವಿಧ ಸಂಘ-ಸಂಸ್ಥೆಗಳ ಮುಖಂಡರು, ಕಾರ್ಯಕರ್ತರು, ಸಾರ್ವಜನಿಕರು ಸಭೆಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts