More

    ಇನ್ಕುೃಬೇಶನ್ ಸೆಂಟರ್‌ಗೆ ನಿರ್ಮಲಾ ಮೆಚ್ಚುಗೆ

    – ಭರತ್ ಶೆಟ್ಟಿಗಾರ್ ಮಂಗಳೂರು
    ಮಂಗಳೂರಿನ ಮಲ್ಲಿಕಟ್ಟೆಯ ಮಹಾನಗರ ಪಾಲಿಕೆ ಉಪಕಚೇರಿ ಕಟ್ಟಡದಲ್ಲಿರುವ, ರಾಜ್ಯದಲ್ಲೇ ಪ್ರಥಮ ಎಂದು ಹೆಗ್ಗಳಿಕೆ ಪಡೆದಿರುವ ಇನ್ಕುೃಬೇಶನ್ ಸೆಂಟರ್ (ಉದ್ಯಮಶೀಲತೆ ಅವಕಾಶ ಮತ್ತು ಕಲಿಕಾ ಕೇಂದ್ರ) ಎರಡು ವರ್ಷ ಪೂರ್ಣಗೊಳಿಸಿ ಮೂರನೇ ವರ್ಷಕ್ಕೆ ಕಾಲಿರಿಸಿದ್ದು, ಹಲವು ಐಟಿ ಕಂಪನಿಗಳು ಉಗಮವಾಗಿ ಸ್ವಂತ ನೆಲೆ ಪಡೆದುಕೊಂಡಿವೆ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಕಳೆದ ಅವಧಿಯ (ವಾಣಿಜ್ಯ ಮತ್ತು ಕೈಗಾರಿಕೆ/ರಕ್ಷಣಾ ಸಚಿವೆಯಾಗಿದ್ದಾಗ) ಸಂಸದರ ನಿಧಿ (ಎಂಪಿ ಲ್ಯಾಡ್ಸ್)ಯ 1.50 ಕೋಟಿ ರೂ. ವೆಚ್ಚದಲ್ಲಿ ಕೇಂದ್ರ ಸ್ಥಾಪನೆಯಾಗಿದೆ. ಸೀತಾರಾಮನ್ ಅವರೇ ಮಂಗಳೂರಿಗೆ ಬಂದು ಸ್ಥಳ ಪರಿಶೀಲಿಸಿ ಕೇಂದ್ರ ಯಾವ ರೀತಿ ಇರಬೇಕು ಎಂದು ಸಲಹೆ ಸೂಚನೆ ನೀಡಿದ್ದರು. 2017ರ ಡಿಸೆಂಬರ್ 29ರಂದು ಅವರೇ ಕೇಂದ್ರವನ್ನು ಉದ್ಘಾಟಿಸಿದ್ದರು. ಶಿಕ್ಷಣ ಕ್ಷೇತ್ರದಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿರುವ ಮಂಗಳೂರಿನಲ್ಲಿ ಇಂತಹ ಕೇಂದ್ರವೊಂದನ್ನು ಆರಂಭಿಸಬೇಕು ಎನ್ನುವುದು ಸೀತಾರಾಮನ್ ಉದ್ದೇಶವಾಗಿತ್ತು. ಪ್ರಸ್ತುತ ಕೇಂದ್ರ ಕಾರ್ಯಾರಂಭವಾಗಿ ಎರಡು ವರ್ಷ ಪೂರ್ಣಗೊಂಡು ಯಶಸ್ವಿಯಾಗಿ ಮೂರನೇ ವರ್ಷಕ್ಕೆ ಪದಾರ್ಪಣೆ ಮಾಡಿದೆ. ಐಟಿ ಉದ್ದಿಮೆ ಆರಂಭಿಸುವವರ ಪಾಲಿಗೆ ಕೇಂದ್ರ ಆಶಾಕಿರಣವಾಗಿದ್ದು, ಕೇಂದ್ರ ಯಶಸ್ವಿಯಾಗಿ ಮುನ್ನಡೆಯುತ್ತಿರುವುದಕ್ಕೆ ಸ್ವತಃ ಸಚಿವೆ ನಿರ್ಮಲಾ ಸೀತಾರಾಮನ್ ಸಂತಸ ವ್ಯಕ್ತಪಡಿಸಿರುವುದಾಗಿ ಅವರ ಕಚೇರಿ ಅಧಿಕೃತ ಟಿಟ್ವರ್‌ನಲ್ಲಿ ಟ್ವೀಟ್ ಮಾಡಲಾಗಿದೆ. ಮುಂದಿನ ಹಂತವಾಗಿ ಇತರ ರಾಜ್ಯ ಹಾಗೂ ಹೊರ ರಾಜ್ಯದ ಆಯ್ದ ಜಿಲ್ಲೆಗಳಲ್ಲಿ ಇಂತಹ ಕೇಂದ್ರ ಆರಂಭಿಸುವ ಚಿಂತನೆ ನಡೆಸಿದ್ದಾರೆ.

    17 ಕಂಪನಿಗಳು ಕಾರ್ಯ ನಿರ್ವಹಣೆ: ಇನ್ಕುೃಬೇಶನ್ ಸೆಂಟರ್‌ನಲ್ಲಿ 70 ಸೀಟ್‌ಗಳಿದ್ದು, ಪ್ರಸ್ತುತ 17 ಕಂಪನಿಗಳು ಕೆಲಸ ನಿರ್ವಹಿಸುತ್ತಿವೆ. ಈಗಾಗಲೇ 5ಕ್ಕೂ ಅಧಿಕ ಕಂಪನಿಗಳು ಇಲ್ಲಿಂದ ಹೊರಗೆ ಹೋಗಿ ಸ್ವಂತವಾಗಿ ಉದ್ದಿಮೆ ನಿರ್ವಹಿಸುತ್ತಿವೆ. ಸಂಸ್ಥೆ ಆರಂಭಿಸುವವರು ಎಷ್ಟು ಸೀಟ್‌ಗಳ ಅಗತ್ಯವಿದೆಯೋ ಅಷ್ಟು ಸೀಟ್ ಪಡೆದುಕೊಳ್ಳಬಹುದು. ಪ್ರತಿ ಸಂಸ್ಥೆಗೆ ಎರಡು ವರ್ಷ ಕೇಂದ್ರದಲ್ಲಿದ್ದು ಕಾರ್ಯನಿರ್ವಹಿಸಲು ಅವಕಾಶವಿದೆ. ಅದಕ್ಕಾಗಿ ಪ್ರತಿ ಸೀಟಿಗೆ ನಿಗದಿ ಪಡಿಸಿದ ಕನಿಷ್ಠ ದರವನ್ನು ಪಾವತಿಸಬೇಕು. ಸ್ವಂತ ಕಚೇರಿ ತೆರೆದು ಉದ್ದಿಮೆ ಆರಂಭಿಸಿದರೆ ತಗಲುವ ವೆಚ್ಚಕ್ಕೆ ಹೋಲಿಸಿದರೆ ಇಲ್ಲಿ ಪಾವತಿಸುವ ಮೊತ್ತ ಅತೀ ಕಡಿಮೆ.

     ಹೇಗಿದೆ ಕೇಂದ್ರ?: ಮಲ್ಲಿಕಟ್ಟೆಯ ಮಹಾನಗರ ಪಾಲಿಕೆ ಕಟ್ಟಡದ ಎರಡನೇ ಅಂತಸ್ಥಿನಲ್ಲಿ ಸುಸಜ್ಜಿತ ಇನ್ಕುೃಬೇಶನ್ ಸೆಂಟರ್ ನಿರ್ಮಿಸಲಾಗಿದೆ. 6 ಸಾವಿರ ಚದರ ಅಡಿ ವಿಸ್ತೀರ್ಣ ಹೊಂದಿದ್ದು, ವಿಶಾಲವಾದ ಹಾಲ್, ಕಾನ್ಫರೆನ್ಸ್ ಹಾಲ್, 4 ಕ್ಯಾಬಿನ್‌ಗಳು, ಜನರೇಟರ್ ಸಹಿತ 24 ಗಂಟೆಗೆ ವಿದ್ಯುತ್, ಇನರ್ವಟರ್, ಹೈಸ್ಪೀಡ್ ಅನ್‌ಲಿಮಿಟೆಡ್ ಇಂಟರ್‌ನೆಟ್, ಸಿಸಿ ಟಿವಿ ಕ್ಯಾಮರಾ, ಎಸಿ, ಸಣ್ಣ ಕಿಚನ್ ಇದೆ. ರೆಫ್ರಿಜರೇಟರ್, ಮೈಕ್ರೋವೇವ್ ಒವನ್ ಸೌಲಭ್ಯವಿದೆ. ಐಟಿ ಸಂಸ್ಥೆಯೊಂದರಲ್ಲಿ ಯಾವ ರೀತಿಯ ವ್ಯವಸ್ಥೆ ಇದೆಯೋ ಅವೆಲ್ಲವನ್ನೂ ಐಟಿ ಸ್ಟಾರ್ಟ್ ಅಪ್‌ಗಳಿಗೂ ಇನ್ಕುೃಬೇಶನ್ ಸೆಂಟರ್‌ನಲ್ಲಿ ಒದಗಿಸಲಾಗಿದೆ. ಇವೆಲ್ಲವನ್ನು ಉಪಯೋಗಿಸಿ ಸ್ವಂತ ಉದ್ದಿಮೆ ಮಾಡುವಲ್ಲಿ ಯಶಸ್ವಿಯಾಗಬೇಕು ಎನ್ನುವುದು ಕೇಂದ್ರದ ಉದ್ದೇಶವಾಗಿದೆ.

    ವಿಸ್ತರಣೆ ಉದ್ದೇಶ: ಪ್ರಸ್ತುತ ಐಟಿ ಉದ್ದಿಮೆಗೆ ಮಾತ್ರ ಸೀಮಿತವಾಗಿರುವ ಕೇಂದ್ರವನ್ನು ಐಟಿಯೇತರ ಕ್ಷೇತ್ರಕ್ಕೂ ವಿಸ್ತರಿಸುವ ಗುರಿ ಹೊಂದಲಾಗಿದೆ. ಮ್ಯಾನುಫ್ಯಾಕ್ಚರ್, ಟ್ರೇಡಿಂಗ್, ಮಾರ್ಕೆಟಿಂಗ್ ಕ್ಷೇತ್ರದಲ್ಲಿ ಉದ್ದಿಮೆ ಆರಂಭಿಸುವರಿಗೆ ಅವಕಾಶ ನೀಡುವುದು ಉದ್ದೇಶ. ಆದರೆ ಅದಿನ್ನೂ ಆರಂಭಿಕ ಹಂತದಲ್ಲಿದೆ ಎನ್ನುತ್ತಾರೆ ಇನ್ಕುೃಬೇಶನ್ಸ್ ಸೆಂಟರ್ ಆಪರೇಷನ್ಸ್ ಮ್ಯಾನೇಜರ್ ಪ್ರದೀಪ್ ರಾಜ್.

    2017ರ ಡಿಸೆಂಬರ್ 29ರಂದು ಆರಂಭಗೊಂಡು ಜ.1ರಿಂದ ಕೇಂದ್ರ ಕಾರ್ಯಾರಂಭ ನಡೆಸುತ್ತಿದೆ. ಕೇಂದ್ರ ಸೊಸೈಟಿ ಆ್ಯಕ್ಟ್‌ಗೆ ಪ್ರಕಾರ ಕೇಂದ್ರ ನೋಂದಣಿಯಾಗಿದ್ದು, ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ಕೆಲಸ ನಡೆಯುತ್ತಿದೆ. ಎಡಿಸಿ, ಪಾಲಿಕೆ ಆಯುಕ್ತರು, ಜಿಪಂ ಸಿಇಒ, ಜಿಲ್ಲಾ ಕೈಗಾರಿಕಾ ಕೇಂದ್ರ ಜಂಟಿ ನಿರ್ದೇಶಕರು, ಕೆಸಿಸಿಐ ಅಧ್ಯಕ್ಷ-ಕಾರ್ಯದರ್ಶಿ ಮೊದಲಾದವರು ಸದಸ್ಯರು. ಕೇಂದ್ರ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವುದಕ್ಕೆ ಸಚಿವೆ ನಿರ್ಮಲಾ ಸೀತಾರಾಮನ್ ಮೆಚ್ಚುಗೆ ವ್ಯಕ್ತಪಡಿಸಿದ್ದು, ಬೇರೆ ಜಿಲ್ಲೆಗಳಲ್ಲಿಯೂ ಇದೇ ರೀತಿಯ ಕೇಂದ್ರವನ್ನು ಆರಂಭಿಸಲು ಉದ್ದೇಶಿಸಿದ್ದಾರೆ.
    – ಪ್ರದೀಪ್ ರಾಜ್, ಆಪರೇಷನ್ಸ್ ಮ್ಯಾನೇಜರ್, ಇನ್ಕುೃಬೇಶನ್ಸ್ ಸೆಂಟರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts