More

    ಪೈಪ್‌ಲೈನ್ ಸೋರಿಕೆ ನಿಲ್ಲಿಸುವ ಭರವಸೆ ಮರೆತ ನಗರಾಯುಕ್ತ!

    ತಿಪಟೂರು: ಯುಜಿಡಿ 2ನೇ ಹಂತದ ಕಾಮಗಾರಿಯಿಂದಾಗಿ ಇಡೀ ನಗರದ ರಸ್ತೆಗಳು ಹಾಳಾಗಿ ಧೂಳುಮಯವಾಗಿರುವುದು ನಾಗರಿಕರನ್ನು ಹೈರಾಣಾಗಿಸಿದೆ. ಅಲ್ಲದೇ ರಸ್ತೆಯನ್ನೂ ಸುಸ್ಥಿತಿಯಲ್ಲಿಡಲಾಗದ ನಗರಸಭೆ ಸಾರ್ವಜನಿಕರ ಜೀವದೊಂದಿಗೆ ಚೆಲ್ಲಾಟವಾಡುತ್ತಿದೆ.

    ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಬೈಪಾಸ್ ರಸ್ತೆ ತಿರುವಿನಲ್ಲಿ ಪೈಪ್‌ಲೈನ್ ಸೋರಿಕೆಯಿಂದ ನಿರ್ಮಾಣಗೊಂಡಿರುವ ಹೊಂಡ 2 ವರ್ಷಗಳಾದರೂ ದುರಸ್ತಿ ಕಂಡಿಲ್ಲ. ಇದೇ ರಸ್ತೆಯಲ್ಲಿ ಸಾಗಿದರೆ ಎಪಿಎಂಸಿ ತರಕಾರಿ ಮಾರುಕಟ್ಟೆ ತಲುಪುವ ಮಧ್ಯೆ ಗುಂಡಿಗಳು ನಿರ್ಮಾಣವಾಗಿದ್ದು, ವಾಹನ ಸವಾರರು ಬಿದ್ದು ಆಸ್ಪತ್ರೆ ಸೇರುವುದು ಸಾಮಾನ್ಯವಾಗಿಬಿಟ್ಟಿದೆ. ಕಳೆದ ವರ್ಷ ಮಾರ್ಚ್‌ನಲ್ಲಿ ನಗರಸಭೆಗೆ ಚುನಾವಣೆ ನಡೆದಿದ್ದರೂ, ಅಧ್ಯಕ್ಷರ ಆಯ್ಕೆ ಮೀಸಲಾತಿ ಗೊಂದಲ ನ್ಯಾಯಾಲಯದಲ್ಲಿರುವ ಕಾರಣ ಕೌನ್ಸಿಲ್ ಬಾಡಿ ರಚನೆಯಾಗಿಲ್ಲ. ಹೀಗಾಗಿ ಅಧಿಕಾರಿಗಳ ಕಾರ್ಯವೈಖರಿ ಪ್ರಶ್ನಿಸುವವರು ಇಲ್ಲವಾಗಿದ್ದು, ಅವರ ನಿರ್ಣಯವೇ ಅಂತಿಮ ಎಂಬಂತಾಗಿದೆ. ಸದ್ಯ ನಗರಸಭೆ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ನಗರದ ನಾಗರಿಕರ ಹಿತಾಸಕ್ತಿ ಕಾಪಾಡಬೇಕಾಗಿದೆ.

    ಕರ್ತವ್ಯ ಪ್ರಜ್ಞೆಮರೆತ ನಗರಾಯುಕ್ತರು: ನೀರಿನ ಸೋರಿಕೆಯಿಂದ ನಿರ್ಮಾಣವಾಗಿರುವ ಹೊಂಡ ಮುಚ್ಚಿಸುವ ಕಾಳಜಿಯಿಂದ ಡಿ.10ರಂದು ವಿಜಯವಾಣಿ ವರದಿ ಪ್ರಕಟಿಸಿದಾಗ ಎಚ್ಚೆತ್ತ ನಗರಾಯುಕ್ತ ಮಹಮ್ಮದ್ ನಯೀಮ್ ಮೊಹಿನ್, ವಾರದೊಳಗೆ ಪೈಪ್‌ಲೈನ್ ಸೋರಿಕೆ ನಿಲ್ಲಿಸುವ ಭರವಸೆ ನೀಡಿದ್ದನ್ನು ಮರೆತಂತಿದೆ. ಇದೇ ರೀತಿ 10 ಲಕ್ಷ ರೂ. ವೆಚ್ಚದಲ್ಲಿ 13ನೇ ಹಣಕಾಸು ಅನುದಾನದಲ್ಲಿ ನಿರ್ಮಿಸಲಾಗಿರುವ ನಗರದ ಏಕೈಕ ಮಕ್ಕಳ ಉದ್ಯಾನವನ ಪ್ರೇಮಿಗಳ ತಾಣವಾಗಿದೆ. ಮಕ್ಕಳ ಆಟಿಕೆ ಸಾಮಗ್ರಿಗಳು ನೆಲ ಕಚ್ಚಿವೆ. ದಿನದ 24 ತಾಸು ಉದ್ಯಾನವನ ತೆರೆದಿರುತ್ತೆ ಎಂದು ಆಯುಕ್ತರ ಗಮನಕ್ಕೆ ತಂದಾಗ, ಮೊದಲು ಉದ್ಯಾನವನ ಎಲ್ಲಿದೆ ಎಂದು ಪ್ರಶ್ನಿಸಿದ್ದರು, ನಾಳೆಯೇ ಸ್ಥಳ ಪರಿಶೀಲಿಸಿ, ಅನೈತಿಕ ಚಟುವಟಿಕೆಗಳಿಗೆ ನಿರ್ಬಂಧಿಸಿ ಉದ್ಯಾನವನ ಕಾಪಾಡಲಾಗುವುದು ಎಂದು ನೀಡಿದ್ದ ಭರವಸೆಯನ್ನೂ ಈಡೇರಿಸಿಲ್ಲ.

    ನಗರದ ರಸ್ತೆಯಲ್ಲಿ ಸಂಭವಿಸುತ್ತಿರುವ ನಿತ್ಯ ಅಪಫಾತಗಳ ಬಗ್ಗೆ ಶಾಸಕರಿಗೂ ಅರಿವಿದೆ. ನಗರಸಭೆಯ ಅಧಿಕಾರಿಗಳನ್ನು ಪ್ರಶ್ನಿಸುವ ಅಧಿಕಾರ ಶಾಸಕರಿಗಿದೆ. ಅವರು ಮನಸು ಮಾಡಿ, ಅಧಿಕಾರಿಗಳನ್ನು ಎಚ್ಚರಿಸುವ ಪ್ರಯತ್ನ ಮಾಡಬೇಕು.
    ಕುಮಾರಸ್ವಾಮಿ ಹಳೇಪಾಳ್ಯ ತಿಪಟೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts