More

    ಮಾರಕ ಕಾಯ್ದೆಗಳ ವಾಪಸ್‌ಗೆ ಸಿಐಟಿಯು ಪ್ರತಿಭಟನೆ

    ತುಮಕೂರು: ರೈತ, ಕಾರ್ಮಿಕ ಮತ್ತು ಜನಸಾಮಾನ್ಯರಿಗೆ ಮಾರಕವಾದ ತಿದ್ದುಪಡಿ ಮಸೂದೆಗಳು, ಸುಗ್ರೀವಾಜ್ಞೆಗಳನ್ನು ವಾಪಸ್ ಪಡೆಯಬೇಕೆಂದು ಆಗ್ರಹಿಸಿ ಸಿಐಟಿಯು ನೇತೃತ್ವದಲ್ಲಿ ನೂರಾರು ಕಾರ್ಮಿಕರು ಜಿಲ್ಲಾಧಿಕಾರಿ ಕಚೇರಿ ಮುಂದೆ ಗುರುವಾರ ಪ್ರತಿಭಟನೆ ನಡೆಸಿದರು.

    ಅಂಗನವಾಡಿ, ಆಶಾ, ಮುನ್ಸಿಪಲ್, ಪಂಚಾಯಿತಿ, ಕೆಎಸ್‌ಆರ್‌ಟಿಸಿ ನೌಕರರು, ಕಟ್ಟಡ, ಹಮಾಲಿ, ಆಟೋ, ರೈತರು ಸರ್ಕಾರದ ನೀತಿಗಳ ವಿರುದ್ಧ ಘೋಷಣೆ ಕೂಗಿ, ಬೇಡಿಕೆ ಈಡೇರಿಸುವಂತೆ ಆಗ್ರಹಿಸಿದರು.

    ಸರ್ಕಾರದ ತಪ್ಪು ನೀತಿಗಳಿಂದ ಸಮಾಜದ ದುಡಿಯುವ ವರ್ಗ ಸಂಕಷ್ಟಕ್ಕೀಡಾಗಿದ್ದು, ಕಾರ್ಮಿಕರಿಗೆ ಪರಿಹಾರ, ಕರೊನಾ ಸೇನಾನಿಗಳಿಗೆ ಪಿಪಿಇ ಕಿಟ್ ಇತರ ಸೌಲಭ್ಯ ನೀಡುವಂತೆ ಸಿಐಟಿಯು ಉಪಾಧ್ಯಕ್ಷ ಬಿ.ಉಮೇಶ್ ಒತ್ತಾಯಿಸಿದರು.

    ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್ ಮಾತನಾಡಿ, ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಅಂಗೀಕರಿಸಿರುವ ಕಾರ್ಮಿಕ ಸಂಹಿತೆಗಳಿಂದ ಕಾರ್ಮಿಕರ ಪ್ರತಿಭಟನೆಯ ಹಕ್ಕನ್ನೇ ಕಿತ್ತುಕೊಂಡಂತೆ ಆಗಿದೆ. ಮುಂದೆ ಪ್ರತಿಭಟನೆ ನಡೆಸಬೇಕಾದರೆ 60 ದಿನಗಳ ಮುಂಚೆ ನೋಟಿಸ್ ಕೊಡಬೇಕು. ಅನ್ಯಾಯ ಕೇಳದಂತಹ ಪರಿಸ್ಥಿತಿ ನಿರ್ಮಾಣವಾಗಲಿದೆ, ಪ್ರತಿಭಟನೆ ನಡೆಸಿದರೆ ಮೂರು ತಿಂಗಳು ಜೈಲು, 10 ರಿಂದ 1 ಲಕ್ಷ ರೂಪಾಯಿ ದಂಡ ವಿಧಿಸಲು ಅವಕಾಶ ನೀಡಿದೆ ಎಂದರು.

    ಅಂಗನವಾಡಿ, ಗ್ರಾಪಂ ನೌಕರರಿಗೆ ಕನಿಷ್ಠ ಕೂಲಿ ನೀಡಬೇಕೆಂಬ ಆದೇಶ ಇದೆ. ಇದನ್ನು ಉಲ್ಲಂಘಿಸಿದ ಅಧಿಕಾರಿಗಳನ್ನು ಜೈಲಿಗೆ ಹಾಕಬೇಕು. ಹಾಗೆಯೇ ಕನಿಷ್ಠ ಸಂಬಳ ನೀಡದ ಕಾರ್ಖಾನೆ ಮಾಲೀಕರನ್ನು ಜೈಲಿಗೆ ಕಳುಹಿಸಬೇಕು, ನಿಯಮ ಉಲ್ಲಂಘಿಸಿದ ಅಧಿಕಾರಿಗಳು ಮತ್ತು ಮಾಲೀಕರನ್ನು ಏಕೆ ಜೈಲಿಗೆ ಹಾಕಿಲ್ಲ ಎಂದು ಪ್ರಶ್ನಿಸಿದರು.

    ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ಕುಮಾರ್, ಅಸಂಘಟಿತ ಕಾರ್ಮಿಕರ ಬೇಡಿಕೆಗಳ ಸಂಬಂಧ ಜಂಟಿ ಸಭೆ ಕರೆಯುವುದಾಗಿ ಭರವಸೆ ನೀಡಿದರು. ಅಂಗನವಾಡಿ, ಕೆಎಸ್‌ಆರ್‌ಟಿಸಿ ನೌಕರರ ಸಮಸ್ಯೆಗಳನ್ನು ಆಲಿಸುವುದಾಗಿ ಹೇಳಿದರು.
    ಸಿಐಟಿಯು ಜಿಲ್ಲಾ ಖಜಾಂಚಿ ಎ.ಲೋಕೇಶ್, ಕಾರ್ಯದರ್ಶಿ ರಂಗಧಾಮಯ್ಯ, ತಾಲೂಕು ಅಧ್ಯಕ್ಷ ಷಣ್ಮುಖಪ್ಪ, ಪಟ್ಟಣ ವ್ಯಾಪಾರ ಸಮಿತಿಯ ವಸೀಂ ಅಕ್ರಂ, ಅಂಗನವಾಡಿ ನೌಕರರ ಸಂಘದ ಕೊರಟಗೆರೆ ಅಧ್ಯಕ್ಷೆ ವನಜಾ, ತುಮಕೂರಿನ ಗೌರಮ್ಮ, ಕಟ್ಟಡ ಕಾರ್ಮಿಕರ ಸಂಘದ ಗೋವಿಂದರಾಜು, ಪ್ರಧಾನ ಕಾರ್ಯದರ್ಶಿ ಗಂಗಾಧರ್, ಕರ್ನ್ ಲಿಬರರ್ಸ್‌ನ ದಿಲೀಪ್, ಟಿಮೆಕ್ ಇಂಡಿಯಾದ ನರಸಿಂಹಮೂರ್ತಿ, ತ್ರಿವೇಣಿ ಏರೋನಾಟಿಕ್ಸ್‌ನ ಲಿಂಗೇಶ್, ುಟ್‌ಪಾತ್ ವ್ಯಾಪಾರಿಗಳ ಸಂಘದ ಸದಸ್ಯರು ಇದ್ದರು.

    ಹಲವು ತಿಂಗಳಿಂದ ಕೆಎಸ್‌ಆರ್‌ಟಿಸಿ ನೌಕರರಿಗೆ ಸಂಬಳ ಬಂದಿಲ್ಲ, ಅಸಂಘಟಿತರಾದ ಬೀದಿಬದಿ ವ್ಯಾಪಾರಿಗಳು, ಕಟ್ಟಡ, ಹಮಾಲರು ಆಟೋ ಹೀಗೆ ಯಾವ ವಲಯದ ಕಾರ್ಮಿಕರಿಗೂ ಪರಿಹಾರ ಸಿಕ್ಕಿಲ್ಲ, ಕೆಲಸದ ಅವಧಿ ಹೆಚ್ಚಿಸಲಾಗುತ್ತಿದೆ. ಕಾರ್ಮಿಕರಿಗೆ ಕಿರುಕುಳ ನೀಡುವ ಯತ್ನಗಳು ನಡೆಯುತ್ತಲೇ ಇವೆ, ವಿದ್ಯುತ್, ರೈಲ್ವೆ, ಬಿಎಸ್‌ಎನ್‌ಎಲ್, ಎಲ್‌ಐಸಿ, ಖಾಸಗೀಕರಣ ಮಾಡುವ ಹುನ್ನಾರ ನಡೆಯುತ್ತಿದೆ. ಇಂತಹ ನೀತಿಗಳ ವಿರುದ್ಧ ಪ್ರತಿಯೊಬ್ಬರೂ ಧ್ವನಿ ಎತ್ತಬೇಕು.
    ಸೈಯದ್ ಮುಜೀಬ್ ಸಿಐಟಿಯು ಜಿಲ್ಲಾಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts