More

    ಕರೊನಾ ಸೋಂಕು ತಡೆಗೆ ನಾಗರಿಕರ ಬೆಂಬಲ

    ವಿಜಯವಾಣಿ ಸುದ್ದಿಜಾಲ ಹಿರೇಕೆರೂರ

    ಕೊರೊನಾ ಸೋಂಕು ಹರಡುವುದನ್ನು ತಡೆಯಲು ಕೇಂದ್ರ ಸರ್ಕಾರ ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದು, ಇದಕ್ಕೆ ಸಾರ್ವಜನಿಕರಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ ಎಂದು ಸಂಸದ ಶಿವಕುಮಾರ ಉದಾಸಿ ಹೇಳಿದರು.

    ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಕರೊನಾ ಲಾಕ್​ಡೌನ್ ಸಂದರ್ಭದಲ್ಲಿ ಕೈಗೊಂಡ ಕಾರ್ಯಯೋಜನೆ ಕುರಿತು ಸೋಮವಾರ ಏರ್ಪಡಿಸಿದ್ದ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

    ಕರೊನಾ ಸರಪಳಿ ಮುರಿಯಲು ಲಾಕ್​ಡೌನ್ ಜಾರಿಗೊಳಿಸಿ, ಅದರ ಭಾಗವಾಗಿ ಕರೊನಾ ಸೇನಾನಿಗಳಲ್ಲಿ ಧೈರ್ಯ ತುಂಬಲು ಚಪ್ಪಾಳೆ ತಟ್ಟು ವುದು, ದೀಪ ಹಚ್ಚುವ ಕರೆಗೆ ದೇಶದ ನಾಗರಿಕರಿಂದ ಉತ್ತಮ ಬೆಂಬಲ ವ್ಯಕ್ತವಾಗಿದೆ. ಅಧಿಕಾರಿಗಳು ಸಾರ್ವಜನಿಕರಲ್ಲಿ ಹಾಗೂ ರೈತರಲ್ಲಿ ಧೈರ್ಯ ತುಂಬುವ ಕಾರ್ಯ ಮಾಡಬೇಕು ಎಂದರು.

    ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಮಾರುಕಟ್ಟೆ ನಿರ್ಮಾಣ ಮಾಡಬೇಕು ಹಾಗೂ ನಿರುದ್ಯೋಗ ಸಮಸ್ಯೆ ಉಂಟಾಗದಂತೆ ನರೇಗಾ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸ್ಥಾಪಿಸಿರುವ ಪಿಎಂ ಕರೊನಾ ಪರಿಹಾರ ನಿಧಿ ಖಾತೆಗೆ ಒಂದು ವಾರದಲ್ಲಿ 6,500 ಕೋಟಿ ರೂ. ಹರಿದು ಬಂದಿದೆ. ಜನ ಧನ ಖಾತೆಗಳಿಗೆ ತಲಾ 500 ರೂ., ಉಜ್ವಲ ಯೋಜನೆಯಡಿ ಉಚಿತ ಅಡುಗೆ ಅನಿಲ ವಿತರಣೆ, ಕಾರ್ವಿುಕರಿಗೆ ಧನ ಸಹಾಯ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಈಗಾಗಲೇ ಶೇ. 92ರಷ್ಟು ಕುಟುಂಬಗಳಿಗೆ ಪಡಿತರ ವಿತರಿಸಲಾಗಿದೆ. ಉದ್ಯೋಗ ಖಾತ್ರಿ ಯೋಜನೆ ಯಡಿ 30 ಸಾವಿರ ಮಾನವ ದಿನಗಳನ್ನು ಸೃಷ್ಟಿಸಲಾ ಗಿದೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಯಡಿ ರೈತರ ಖಾತೆಗಳಿಗೆ ಜಮೆ ಆಗುವ ಮೊತ್ತವನ್ನು ಯಾವುದೇ ಕಾರಣಕ್ಕೂ ಅವರ ಸಾಲದ ಬಾಕಿಗೆ ಕಡಿತ ಮಾಡದಂತೆ ಬ್ಯಾಂಕ್​ಗಳಿಗೆ ನಿರ್ದೇಶನ ನೀಡಲಾಗಿದೆ. ಹೊರ ರಾಜ್ಯಗಳಲ್ಲಿರುವ ಜಿಲ್ಲೆಯ ವಲಸೆ ಕಾರ್ವಿುಕರನ್ನು ಜಿಲ್ಲೆಗೆ ಕರೆತರಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.

    ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ. ಬಣಕಾರ, ತಾ.ಪಂ. ಅಧ್ಯಕ್ಷ ರಾಜು ಬಣಕಾರ, ಪ.ಪಂ. ಸದಸ್ಯರಾದ ಮಹೇಂದ್ರ ಬಡಳ್ಳಿ, ಕಂಠಾಧರ ಅಂಗಡಿ, ತಹಸೀಲ್ದಾರ್ ರಿಯಾಜುದ್ದಿನ್ ಬಾಗವಾನ್, ತಾ.ಪಂ. ಇಒ ಶ್ರೀನಿವಾಸ ಎಚ್.ಜಿ., ಸಿಪಿಐ ಮಂಜುನಾಥ ಪಂಡಿತ್, ಪ.ಪಂ. ಮುಖ್ಯಾಧಿಕಾರಿ ರಾಜಾರಾಮ ಪವಾರ, ಕೆಎಂಎಫ್ ನಿರ್ದೇಶಕ ಹನುಂತಗೌಡ ಭರಮಣ್ಣನವರ, ಷಣ್ಮುಖ ಮಳಿಮಠ, ದೊಡ್ಡಗೌಡ ಪಾಟೀಲ, ಜಿ.ಪಿ. ಪ್ರಕಾಶ, ಆರ್.ಎನ್. ಗಂಗೋಳ, ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts